logo
ಕನ್ನಡ ಸುದ್ದಿ  /  ಕರ್ನಾಟಕ  /  Gruha Lakshmi Updates:ನಿಮಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲವೇ, ವಿಶೇಷ ಶಿಬಿರದಲ್ಲಿ ದಾಖಲೆ ಸಲ್ಲಿಸಿ: ಇಂದಿನಿಂದ 3 ದಿನ ಗ್ರಾಪಂಗಳಲ್ಲಿಶಿಬಿರ

Gruha Lakshmi Updates:ನಿಮಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲವೇ, ವಿಶೇಷ ಶಿಬಿರದಲ್ಲಿ ದಾಖಲೆ ಸಲ್ಲಿಸಿ: ಇಂದಿನಿಂದ 3 ದಿನ ಗ್ರಾಪಂಗಳಲ್ಲಿಶಿಬಿರ

Umesha Bhatta P H HT Kannada

Dec 27, 2023 12:18 PM IST

google News

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಗೊಂದಲ ಸರಿಪಡಿಸಲು ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

    • Gruha Lakshmi camps ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಆರ್ಥಿಕ ನೆರವು ಪಡೆಯದವರಿಗೆ ನೆರವಾಗಲು ಗ್ರಾಪಂ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ಬುಧವಾರದಿಂದ ಮೂರು ದಿನ ಆಯೋಜಿಸಲಾಗಿದೆ.
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಗೊಂದಲ ಸರಿಪಡಿಸಲು ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಗೊಂದಲ ಸರಿಪಡಿಸಲು ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು: ಆರು ತಿಂಗಳ ಹಿಂದೆಯೇ ಕರ್ನಾಟಕದಲ್ಲಿ ಆರಂಭಗೊಂಡಿರುವ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಈವರೆಗೂ ಬಂದಿಲ್ಲವೇ, ಸರಿಪಡಿಸಲು ಹೋದಾಗ ಸಹಕಾರ ದೊರೆತಿಲ್ಲವೇ?

ಆತಂಕ ಬೇಡ. ತಾಂತ್ರಿಕ ಹಾಗೂ ವೈಯಕ್ತಿಕ ಸಮಸ್ಯೆಯಿಂದಾಗಿ ಈವರೆಗೂ ಗೃಹಲಕ್ಷ್ಮಿ ಯೋಜನೆಯಡಿ ಆರ್ಥಿಕ ನೆರವು ಪಡೆಯದವರಿಗೆ ಸಹಾಯಕವಾಗಲೆಂದೇ ಕರ್ನಾಟಕ ಸರ್ಕಾರವು ಡಿ.27 ರಿಂದ ಸತತ ಮೂರು ದಿನಗಳ ಕಾಲ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ.

ಕರ್ನಾಟಕದ ಪ್ರತಿಯೊಂದು ಗ್ರಾಮಪಂಚಾಯಿತಿಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಸಿಬ್ಬಂದಿಗಳು ಹಾಜರಿದ್ದು, ಅಹವಾಲುಗಳನ್ನು ಆಲಿಸಲಿದ್ದಾರೆ. ಸಮಸ್ಯೆಯಾಗಿರುವುದು ಎಲ್ಲಿ., ಸರಿಪಡಿಸಿಕೊಳ್ಳಲು ಏನು ಮಾಡಬೇಕು ಎನ್ನುವ ಸೂಕ್ತ ಮಾರ್ಗದರ್ಶನವನ್ನೂ ಮಾಡಲಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ರೂಪಿಸಿರುವ ಗೃಹಲಕ್ಷ್ಮಿ ಯೋಜನೆಯ ಕುರಿತಾಗಿ ಕೆಲವು ಫಲಾನುಭವಿಗಳಿಗೆ ಆಗುತ್ತಿರುವ ತೊಂದರೆ ಸರಿ ಮಾಡಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಈ ವಿಶೇಷ ಶಿಬಿರ ಆಯೋಜನೆಗೊಂಡಿದೆ.

ಈವರೆಗೂ ಒಂದು ಕೋಟಿಗೂ ಅಧಿಕ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಆರ್ಥಿಕ ನೆರವು ಸಿಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 2.5 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡದೇ ಇರುವುದು ಮತ್ತು ಸುಮಾರು 70,000 ನಿಷ್ಕ್ರಿಯ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿರುವುದು ಕಂಡು ಬಂದಿದೆ. ಈ ಫಲಾನುಭವಿಗಳು ಹೊಸ ಬ್ಯಾಂಕ್ ಖಾತೆ ತೆರೆಯಲು ಇಚ್ಚಿಸುತ್ತಿದ್ದಾರೆ. ಹಾಗೆಯೇ, ಬಹಳಷ್ಟು ಫಲಾನುಭವಿಗಳು ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು ಅಗತ್ಯವಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಮೊದಲ ಬಾರಿಗೆ ವಿಶೇಷ ಶಿಬಿರ ನಡೆಸಲಾಗುತ್ತಿದೆ.

ಏನೇನು ಸಮಸ್ಯೆ

ಗೃಹ ಲಕ್ಷ್ಮಿ ಯೋಜನೆಯಡಿ ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದ ತೊಂದರೆ, ಇ-ಕೆವೈಸಿ ಅಪ್ಡೆಟ್, ಹೊಸ ಬ್ಯಾಂಕ್ ಖಾತೆ ಆರಂಭ ಸೇರಿದಂತೆ ಹಲವು ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಈ ತೊಂದರೆಗಳನ್ನು ಪರಿಹರಿಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಜಮಾವಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಈ ಶಿಬಿರ ಸಹಕಾರಿಯಾಗಲಿದೆ.

ಯಾರು ಹಾಜರಿರುವರು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಿರುವ ಈ ಶಿಬಿರಗಳಲ್ಲಿ ಬಾಪೂಜಿ ಸೇವಾ ಕೇಂದ್ರದ ಗಣಕಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು ಮತ್ತು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ (ಇ.ಡಿ.ಸಿ) ತಂಡಗಳು ಭಾಗವಹಿಸಲಿವೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್‍ಗಳ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಶಿಬಿರದಲ್ಲಿಯೇ ಪರಿಹರಿಸಲಾಗುವುದು, ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಗೃಹಲಕ್ಷ್ಮಿ ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಏನು ದಾಖಲೆ ಬೇಕು

ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳು ತಮ್ಮ ಹಾಗೂ ಪತಿಯ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್‍ಬುಕ್ ದಾಖಲೆಗಳೊಂದಿಗೆ ಶಿಬಿರಕ್ಕೆ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

==========

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ