Bangalore News: ಹೆಬ್ಬಾಳ ಮೇಲ್ಸೇತುವೆಗೆ ಹೊಸ ಟ್ರ್ಯಾಕ್ ಅಳವಡಿಕೆ; ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶ; ಉಳಿದ ವಾಹನಗಳು ಹೇಗೆ ಸಾಗಬೇಕು?
Apr 17, 2024 11:26 PM IST
ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ
ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿರುವ ಮಾರ್ಗದ ವಿವರ ಹೀಗಿದೆ.
ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೆಬ್ಬಾಳ ಮೇಲ್ಸೇತುವೆಯ ಕಾಮಗಾರಿಯನ್ನು ಪ್ರಾರಂಭಿಸಿದ್ದು ಈ ಮಾರ್ಗದಲ್ಲಿ ಏಪ್ರಿಲ್ 17ರಿಂದ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.ಹೆಬ್ಬಾಳ ಮತ್ತು ಕೆ.ಆರ್.ಪುರ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಆದ್ದರಿಂದ, ಕೆ.ಆರ್.ಪುರ ಲೂಪ್ ಸೇತುವೆ ಮೇಲೆ ವಾಹನ ಸಂಚಾರವನ್ನು ಸುಮಾರು ಆರು ತಿಂಗಳ ನಿಷೇಧಿಸಲಾಗಿದೆ.ಕೆ.ಆರ್.ಪುರ, ನಾಗಾವರ ಕಡೆಯಿಂದ ಆಗಮಿಸಿ ಮೇಖ್ರಿ ವೃತ್ತದ ಕಡೆಗೆ ಸಾಗುವ ಅಪ್ ರ್‍ಯಾಂಪ್ ಮೇಲೆ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಹೊರವರ್ತುಲ ರಸ್ತೆಯ ನಾಗವಾರ ಕಡೆಯಿಂದ ಮೇಖ್ರಿ ವೃತ್ತದ ಮೂಲಕ ಬರುತ್ತಿದ್ದ ವಾಹನಗಳು, ಹೆಬ್ಬಾಳ ವೃತ್ತದ ಮೇಲ್ಸೇತುವೆ ಕೆಳಗಿನಿಂದ ಬಲಕ್ಕೆ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್ ಬಳಿ ಯೂಟರ್ನ್ ಪಡೆದು ಸರ್ವೀಸ್ ರಸ್ತೆಯಿಂದ ಹೆಬ್ಬಾಳ ಮೇಲ್ಸೇತುವೆ ರ್‍ಯಾಂಪ್ ಮೂಲಕ ಬೆಂಗಳೂರನ್ನು ಪ್ರವೇಶಿಸಬಹುದು.
ಕೆ.ಆರ್.ಪುರ ಮತ್ತು ನಾಗಾವಾರ ಕಡೆಯಿಂದ ನಗರದ ಕಡೆಗೆ ಸಾಗುವ ವಾಹನಗಳು, ಐಒಸಿ–ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗಾವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರವನ್ನು ಪ್ರವೇಶಿಸಬಹುದು. ಹೆಗಡೆನಗರ- ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿಕೆವಿಕೆ-ಜಕ್ಕೂರು ರಸ್ತೆ ಮೂಲಕ ನಗರದತ್ತ ಸಾಗಬಹುದಾಗಿದೆ.
ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಮೇಲ್ಸೇತುವೆ ಕೆಳಗಡೆಯಿಂದ ನೇರವಾಗಿ ಬಿಇಎಲ್ ವೃತ್ತವನ್ನು ತಲುಪಿ ಎಡಕ್ಕೆ ತಿರುವು ಪಡೆದು ಸದಾಶಿವನಗರ ಜಂಕ್ಷನ್ ನಲ್ಲಿ ಬಲತಿರುವು ಪಡೆದು ಐಐಎಸ್ ಸಿ ಮೂಲಕ ಚಲಿಸಬಹುದು. ಕೆ.ಆರ್. ಪುರ, ಹೆಣ್ಣೂರು, ಎಚ್‌ಆರ್‌ಬಿಆರ್ ಲೇಔಟ್, ಕೆ.ಜಿ. ಹಳ್ಳಿ, ಬಾಣಸವಾಡಿ ಕಡೆಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೋಗುವ ವಾಹನಗಳು ಹೆಣ್ಣೂರು–ಬಾಗಲೂರು ರಸ್ತೆಯನ್ನು ಬಳಸಿಕೊಂಡು ವಿಮಾನ ನಿಲ್ದಾಣಕ್ಕೆ ತೆರಳಬಹುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ವರದಿ, ಎಚ್. ಮಾರುತಿ, ಬೆಂಗಳೂರು
ವಿಭಾಗ