HSRP Number Plate: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಅವಧಿ ಮತ್ತಷ್ಟು ವಿಸ್ತರಣೆ, ಇಂದು ಸಾರಿಗೆ ಸಚಿವರ ಸಭೆಯಲ್ಲಿ ತೀರ್ಮಾನ
Feb 12, 2024 10:50 AM IST
ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ.
- ಕರ್ನಾಟಕದಲ್ಲಿ ಮೂರು ತಿಂಗಳಿನಿಂದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ. ಫೆಬ್ರವರಿ 17ರ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯಿದೆ.
ಬೆಂಗಳೂರು: ಕರ್ನಾಟಕದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್(HSRP Number Plate) ಅಳವಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಇಲಾಖೆಯು ದಿನಾಂಕವನ್ನು ವಿಸ್ತರಿಸುವ ಸಾಧ್ಯತೆಯಿದೆ. ಈವರೆಗೂ ಹೊರಡಿಸಿರುವ ಅಧಿಸೂಚನೆ ಪ್ರಕಾರ ಫೆಬ್ರವರಿ 17ರವರೆಗೆ ನೋಂದಣಿಗೆ ಅವಕಾಶವಿದೆ. ಸರ್ವರ್ ಸಮಸ್ಯೆ ಸೇರಿದಂತೆ ಹಲವು ಕಾರಣದಿಂದ ನಂಬರ್ ಪ್ಲೇಟ್ ಅಳವಳಿಕೆ ದಿನಾಂಕವನ್ನು ವಿಸ್ತರಣೆ ಮಾಡಲು ಸಾರಿಗೆ ಇಲಾಖೆ ಚಿಂತಿಸಿದೆ.
ಕರ್ನಾಟಕದ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ಸಭೆ ಕರೆಯಲಾಗಿದೆ. ಹಿರಿಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಕನಿಷ್ಠ 3 ತಿಂಗಳ ಮಟ್ಟಿಗೆ ಮುಂದೆ ಹಾಕಬಹುದು ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ವಿಸ್ತರಣೆ ಏಕೆ
1 ಏಪ್ರಿಲ್ 2019 ಕ್ಕಿಂತ ಮುನ್ನ ನೋಂದಣಿಯಾದ ವಾಹನಗಳಿಗೆ 90 ದಿನಗಳಲ್ಲಿ ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಕಳೆದ ವರ್ಷ ನವೆಂಬರ್ 17 ವರೆಗೂ ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಈ ನಡುವೆ ಕೋರ್ಟ್‌ನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನಂಬರ್ ಪ್ಲೇಟ್ ವಿಸ್ತರಣೆ ಗಡುವು ವಿಸ್ತರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿತ್ತು. ಹೈ ಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಇಲಾಖೆ 90 ದಿನಗಳಿಗೆ ಅಂದರೆ ಫೆ 17ವರೆಗೂ ಅವಧಿ ವಿಸ್ತರಣೆ ಮಾಡಿತ್ತು. ಈ ಕುರಿತು ಅಂತಿಮ ತೀರ್ಪು ಇನ್ನೂ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳ ಪೀಠದ ಮುಂದೆ ಬಾಕಿಯಿದೆ. ಆದರೆ ನಂಬರ್ ಪ್ಲೇಟ್ ಅಳವಡಿಕೆಗೆ ತಡೆಯಾಗಲಿ, ಬೇರೆ ರೀತಿಯ ಸೂಚನೆ ಇಲ್ಲ. ಈ ಕಾರಣದಿಂದ ಪ್ರಕ್ರಿಯೆ ನಡೆಯುತ್ತಿದೆ.
ಆದರೆ ಹಲವಾರು ಕಡೆಗಳಲ್ಲಿ ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಹಲವಾರು ವಾಹನ ಮಾಲೀಕರು ದೂರು ಕೂಡ ನೀಡಿದ್ಧಾರೆ. ಇದನ್ನು ಪರಿಗಣಿಸಿ ಮತ್ತೆ ಅವಧಿ ವಿಸ್ತರಣೆಗೆ ಸಚಿವರು ಸಭೆ ಕರೆದಿದ್ದು, ಅಲ್ಲಿ ತೀರ್ಮಾನವಾಗಲಿದೆ ಎಂದು ಹಿರಿಯ ಅಧಿಕಾರಿ ವಿವರಿಸುತ್ತಾರೆ.
14 ಲಕ್ಷ ನೋಂದಣಿ
ಈವರೆಗೂ ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ಪಿ ಪ್ಲೇಟ್ ಬದಲಿಸಲು ಕೋರಿ 14 ಲಕ್ಷ ವಾಹನ ಮಾಲೀಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈವರೆಗೂ ನೊಂದಣಿಯಾಗಿರುವ ಬಹುತೇಕ ವಾಹನಗಳ ನೋಂದಣಿ ಫೆಬ್ರವರಿ ಇಲ್ಲವೇ ಮಾರ್ಚ್ ಒಳಗೆ ಮುಗಿಯಲಿದೆ. ಆದರೂ ಇಡೀ ರಾಜ್ಯದಲ್ಲಿ ಅಂದಾಜು 2 ಕೋಟಿ ವಾಹನಗಳಿರುವ ಮಾಹಿತಿ ಇದೆ. ವಾಹನಗಳ ಪ್ರಮಾಣ ನೋಡಿದರೆ ನಂಬರ್ ಪ್ಲೇಟ್‌ಗೆ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ ಕಡಿಮೆಯೇ. ಸುಪ್ರೀಂಕೋರ್ಟ್ ಸೂಚನೆ ಹಾಗೂ ಭದ್ರತೆ ಕಾರಣದಿಂದ ಇದನ್ನು ಕಡ್ಡಾಯಗೊಳಿಸಿದ್ದು, ಹಂತ ಹಂತವಾಗಿ ತೀವ್ರಗೊಳಿಸುತ್ತೇವೆ ಎನ್ನುವುದು ಅಧಿಕಾರಿಗಳ ವಿವರಣೆ.
ಏನಿದು ಹೊಸ ಮಾದರಿ ಪ್ಲೇಟ್
ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್ ಪ್ಲೇಟ್ ಅಳವಡಿಸಲಾಗುತ್ತಿದೆ. ಇದನ್ನೇ ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ನೋಂದಣಿಗೊಂಡಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಹೆಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮುಂದೆ ದಂಡವನ್ನೂ ಪಾವತಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳಿಗೆ ಇದು ಅಡ್ಡಿಯಾಗಲಿದೆ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಇದರಿಂದ ಕಡ್ಡಾಯವಾಗಿ ಎಲ್ಲರೂ ಮಾಡಿಸಿಕೊಳ್ಳಲೇಬೇಕು ಎನ್ನುವುದು ಅಧಿಕಾರಿಗಳು ನೀಡುತ್ತಿರುವ ಸ್ಪಷ್ಟನೆ.
ವಿಭಾಗ