logo
ಕನ್ನಡ ಸುದ್ದಿ  /  ಕರ್ನಾಟಕ  /  Vande Bharat: ಬರಲಿವೆ ವಂದೇ ಭಾರತ್‌ ಸ್ಲೀಪರ್‌ ರೈಲುಗಳು, ಬೆಂಗಳೂರಲ್ಲೇ ಉತ್ಪಾದನೆ ಶುರು, ಯಾವಾಗಿನಿಂದ ಸಂಚಾರ ಶುರು ಆಗಬಹುದು

Vande Bharat: ಬರಲಿವೆ ವಂದೇ ಭಾರತ್‌ ಸ್ಲೀಪರ್‌ ರೈಲುಗಳು, ಬೆಂಗಳೂರಲ್ಲೇ ಉತ್ಪಾದನೆ ಶುರು, ಯಾವಾಗಿನಿಂದ ಸಂಚಾರ ಶುರು ಆಗಬಹುದು

Umesha Bhatta P H HT Kannada

Feb 04, 2024 07:32 PM IST

google News

ಚೆನ್ನೈ ಹಾಗೂ ಬೆಂಗಳೂರಿನಲ್ಲಿ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲುಗಳ ಉತ್ಪಾದನೆ ಶುರುವಾಗಿದೆ.

    • ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಪ್ರಾಯೋಗಿಕ ಸಂಚಾರಕ್ಕೆ ಭಾರತೀಯ ರೈಲ್ವೆ ಸಿದ್ದತೆ ಮಾಡಿಕೊಳ್ಳುತ್ತಿದೆ.ಮುಂದಿನ ವರ್ಷಾಂತ್ಯಕ್ಕೆ ಭಾರತದಲ್ಲಿ ವಂದೇ ಭಾರತ್‌ ರಾತ್ರಿ ರೈಲುಗಳೂ ಸಂಚರಿಸಬಹುದು.
ಚೆನ್ನೈ ಹಾಗೂ ಬೆಂಗಳೂರಿನಲ್ಲಿ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲುಗಳ ಉತ್ಪಾದನೆ ಶುರುವಾಗಿದೆ.
ಚೆನ್ನೈ ಹಾಗೂ ಬೆಂಗಳೂರಿನಲ್ಲಿ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲುಗಳ ಉತ್ಪಾದನೆ ಶುರುವಾಗಿದೆ.

ಬೆಂಗಳೂರು: ಐದು ವರ್ಷದಿಂದ ಭಾರತದ ರೈಲು ಓಟದ ಓಘಕ್ಕೆ ಹೊಸ ದಿಕ್ಕು ನೀಡಿರುವ ವಂದೇ ಭಾರತ್‌ ರೈಲಿನಲ್ಲಿ ಇನ್ನು ಕುಳಿತು ಮಾತ್ರವಲ್ಲ. ಮಲಗಿಕೊಂಡು ಕೂಡು ಹೋಗಬಹುದು. ಭಾರತೀಯ ರೈಲ್ವೆ ಈಗಾಗಲೇ ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ಓಡಿಸುವ ಸಿದ್ದತೆಯನ್ನು ಆರಂಭಿಸಿದೆ. ಬೆಂಗಳೂರಿನಲ್ಲಿ ಬಿಇಎಂಎಲ್‌ ಹಾಗೂ ಚೆನ್ನೈನಲ್ಲಿರುವ ರೈಲ್ವೆ ಕೋಚ್‌ ನಿರ್ಮಾಣ ಘಟಕದಲ್ಲಿ ಪ್ರಾಯೋಗಿಕ ಸ್ಲೀಪರ್‌ ಕೋಚ್‌ಗಳ ನಿರ್ಮಾಣವೂ ಶುರುವಾಗಿದೆ.

ಸದ್ಯ ರಾಜಧಾನಿ ಸೇರಿದಂತೆ ಹಲವು ರೈಲುಗಳು ಸ್ಲೀಪರ್‌ ಮಾದರಿಯಲ್ಲಿ ಸಂಚರಿಸುತ್ತಿವೆ. ಅವುಗಳಿಗಿಂತ ವೇಗವಾಗಿ ಸಂಚರಿಸಬಲ್ಲ ವಂದೇಭಾರತ್‌ ಸ್ಲೀಪರ್‌ ರೈಲು ಇದು. ಮಾರ್ಚ್‌ ಹೊತ್ತಿಗೆ ಮೊದಲ ಘಟಕ ಸಿದ್ದವಾಗಲಿದ್ದು, ಏಪ್ರಿಲ್‌ನಲ್ಲಿ ಪ್ರಾಯೋಗಿಕ ರೈಲು ಸಂಚಾರ ನಡೆಯಲಿದೆ. ಮುಂದಿನ ವರ್ಷಾಂತ್ಯದ ಹೊತ್ತಿಗೆ ವಂದೇ ಭಾರತ್‌ ಸ್ಲೀಪರ್‌ ರೈಲುಗಳು ಭಾರತದ ಹಳಿ ಮೇಲೆ ಸಂಚರಿಸುವುದು ಖಚಿತ ಎನ್ನುತ್ತವೆ ರೈಲ್ವೆ ಮೂಲಗಳು.

ಹೇಗಿರಲಿದೆ ಹೊಸ ರೈಲು

ಭಾರತದಲ್ಲಿ ಐದು ವರ್ಷದ ಹಿಂದೆ ವಂದೇ ಭಾರತ್‌ ರೈಲು ಕುರಿತು ಚರ್ಚೆಗಳು ಶುರುವಾಗಿದ್ದವು. ಎರಡು ವರ್ಷದ ಹಿಂದೆ ವಂದೇ ಭಾರತ್‌ ರೈಲು ಸಂಚಾರ ಶುರುವಾಗಿತ್ತು.ಈಗ 41 ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ. ಇದನ್ನು 75 ರವರೆಗೆ ವಿಸ್ತರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈಗಾಗಲೇ ಹಗಲು ವೇಳೆ ಸಂಚರಿಸುವ ವಂದೇ ಭಾರತ್‌ ರೈಲುಗಳ ಯೋಜನೆ ಸಾಕಾರಗೊಂಡಿದ್ದು, ಭಾರತೀಯ ರೈಲ್ವೆ ವಂದೇ ಭಾರತ್‌ ರೈಲನ್ನು ರಾತ್ರಿ ವೇಳೆ, ಸ್ಲೀಪರ್‌ ರೂಪದಲ್ಲಿ ಆರಂಭಿಸುವ ತಯಾರಿಯನ್ನು ಆರಂಭಿಸಿದೆ.

ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಯೋಜನೆ ಈಗಾಗಲೇ ಚೆನ್ನೈನಲ್ಲಿರುವ ಇಂಟಗ್ರಲ್‌ ಕೋಚ್‌ ಫ್ಯಾಕ್ಟರಿ( ICF) ನಲ್ಲಿ ಶುರುವಾಗಿದೆ. ಇದು ಅತಿವೇಗವಾಗಿ ಸಂಚರಿಸುವ ರೈಲು. ಒಂದು ರಾಜ್ಯದ ಪ್ರಮುಖ ನಗರಗಳ ನಡುವೆ ಈ ರೈಲಿನ ಸಂಚಾರ ಇರಲಿದೆ. ಇದು ರಾತ್ರಿ ಪ್ರಯಾಣದ ಅವಧಿಯನ್ನು ಕಡಿತಗೊಳಿಸಿ ಬೇಗನೇ ಮತ್ತೊಂದು ಸ್ಥಳ ತಲುಪಲು ನೆರವಾಗಲಿದೆ. ಕಚೇರಿ ಅವಧಿಯನ್ನು ಗಮನದಲ್ಲಿಟ್ಟುಕೊಂಡು ರೈಲು ಪ್ರಯಾಣದ ಸಮಯವನ್ನು ವಂದೇ ಭಾರತ್‌ ಸ್ಲೀಪರ್‌ ರೈಲುಗಳಿಗೆ ರೂಪಿಸಲಾಗುತ್ತಿದೆ. ಬೇಗನೇ ನಿಗದಿತ ಸ್ಥಳಕ್ಕೆ ತಲುಪವ ಹೊಂದಾಣಿಕೆಯನ್ನು ಮಾಡಲಾಗುತ್ತದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

ಎರಡು ನಗರಗಳ ನಡುವೆ

ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ಎಲ್ಲೆಲ್ಲಿ ಓಡಿಸಬೇಕು ಎನ್ನುವ ಕುರಿತು ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆದಿದೆ. ಮೊದಲ ರೈಲು ಮುಂಬೈ ಹಾಗೂ ದೆಹಲಿ, ದೆಹಲಿ ಹಾಗೂ ಹೌರಾ ನಡುವೆಯೇ ಇರಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ವಂದೇ ಭಾರತ್‌ ಸ್ಲೀಪರ್‌ ರೈಲಿನ ಕೋಚ್‌ಗಳು ಅತ್ಯಾಧುನಿಕ ಆಗಿರಲಿವೆ. ಒಟ್ಟು 16 ಬೋಗಿಗಳು ಇರಲಿದ್ದು,. ಇದರಲ್ಲಿ ಮೂರು, ಎರಡು ಹಾಗೂ ಒಂದು ಟಯರ್‌ನ ಬೋಗಿಗಳು ಕೂಡ ಇರಲಿವೆ. ಉಳಿದಂತೆ ಸ್ಲೀಪರ್‌ ಕೋಚ್‌ಗಳೇ ಹೆಚ್ಚು ಇರುತ್ತವೆ. ಈಗಾಗಲೇ ಚೆನ್ನೈನ ಜತೆಗೆ ಬೆಂಗಳೂರಿನ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌( BEML) ಫ್ಯಾಕ್ಟರಿಯಲ್ಲೂ ಹೊಸ ಸ್ಲೀಪರ್‌ ಕೋಚ್‌ಗಳ ನಿರ್ಮಾಣ ಕಾರ್ಯ ನಡೆದಿದೆ. ಇಂತಹ ಅತ್ಯಾಧುನಿಕ ಹತ್ತು ರೈಲುಗಳ ನಿರ್ಮಾಣ ಕಾರ್ಯ ಸಾಗಿದೆ ಎಂದು ತಿಳಿಸುತ್ತಾರೆ.

ರೈಲ್ವೆ ಸಚಿವರು ಹೇಳೋದೇನು

ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಕೂಡ ಹೊಸ ತಲೆಮಾರಿನ ಅತ್ಯಾಧುನಿಕ ರೈಲುಗಳ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ವಂದೇ ಭಾರತ್‌, ಅಮೃತ್‌ ಭಾರತ್‌ ಹಾಗೂ ನಮೋ ಭಾರತ್‌ ರೈಲುಗಳು ಪ್ರಯಾಣಿಕರ ಅನುಭವವನ್ನೇ ಬದಲಿಸಿವೆ. ಅಷ್ಟರ ಮಟ್ಟಿಗೆ ಹೊಸ ರೈಲುಗಳ ಸಂಚಾರ ಗುಣಮಟ್ಟ ವೃದ್ದಿಸಿದೆ. ಇವೆಲ್ಲವೂ ಮೇಡ್‌ ಇನ್‌ ಇಂಡಿಯಾ ಅಡಿ ರೂಪಿಸಿದ ರೈಲುಗಳು. ಈ ರೈಲುಗಳು ನಮ್ಮಲ್ಲಿ ಮಾತ್ರವಲ್ಲದೇ ಹೊರ ದೇಶಗಳಲ್ಲೂ ಬಳಕೆ ಯೋಗ್ಯವಿವೆ. ಇಂತಹ ಕೋಚ್‌ಗಳ ರಫ್ತಿಗೂ ಅವಕಾಶವಿದೆ ಎಂದು ಸಚಿವರು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿಯೇ ಸ್ಲೀಪರ್‌ ರೈಲುಗಳ ಪ್ರಯೋಗ ನಡೆದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ