ಬೆಂಗಳೂರು ಕನ್ನಡ ನಾಮಫಲಕ, ಕರವೇ ಆಕ್ರೋಶ, ಕಾರ್ಯಪಡೆ ರಚನೆಗೆ ಮುಂದಾದ ಸರ್ಕಾರ: ಸಮಯ ಕೊಡಿ ಎಂದ ವಾಣಿಜ್ಯ ಮಹಾ ಸಂಸ್ಥೆ
Dec 28, 2023 08:15 AM IST
ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಕರವೇ ಹೋರಾಟ ನಡೆಸಿತು.
- ಬೆಂಗಳೂರಿನ ವಾಣಿಜ್ಯ ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಕಾವು ಜೋರಾಗಿಯೇ ಇತ್ತು.
ಬೆಂಗಳೂರು: ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಹೆಚ್ಚಿರುವ ಆಂಗ್ಲ ಫಲಕಗಳ ಅಬ್ಬರದ ವಿರುದ್ದ ತೀವ್ರ ಹೋರಾಟ ನಡೆಸಿರುವ ಕರ್ನಾಟಕ ರಕ್ಷಣಾ ವೇದಿಕೆ ಹಲವು ಕಡೆ ಫಲಕಗಳನ್ನು ಧ್ವಂಸಗೊಳಿಸಿದೆ.
ಬೆಂಗಳೂರಿನ 15ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ಪ್ರತಿಭಟನೆ ನಡೆದಿದ್ದು, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸಹಿತ ಹಲವರ ವಿರುದ್ದ ಪ್ರಕರಣ ದಾಖಲಾಗಿದೆ. ಹಲವರನ್ನು ವಶಕ್ಕೆ ಪಡೆದ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಇದು ಕನ್ನಡದ ಅಸ್ತಿತ್ವದ ಹೋರಾಟವಷ್ಟೇ. ಯಾವುದೇ ಭಾಷಿಕರು, ಸಮುದಾಯಗಳ ವಿರುದ್ದ ಅಲ್ಲವೇ ಅಲ್ಲ. ಕರ್ನಾಟಕದಲ್ಲಿದ್ದವರು ಕನ್ನಡ ಬಳಕೆ ಮಾಡಲೇಬೇಕು. ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಈಗ ಹೋರಾಟ ಆರಂಭಿಸಲಾಗಿದೆ. ಈ ಹೋರಾಟವನ್ನು ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ಇತರೆ ಭಾಗಗಳಲ್ಲಿಯೂ ವಿಸ್ತರಿಸುವುದಾಗಿ ಕರವೇ ಹೇಳಿಕೊಂಡಿದೆ.
ಈ ನಡುವೆ ಬೆಂಗಳೂರಿನ ವಾಣಿಜ್ಯ ಸ್ಥಳಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಎಲ್ಲ ಪ್ರಯತ್ನಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಹಿನ್ನೆಲೆಯಲ್ಲಿ ಸ್ಪಂದಿಸಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮಹಾ ಸಂಸ್ಥೆ( FKCCI) ಸರ್ಕಾರದ ಆದೇಶ ಪಾಲಿಸಲು ನಾವು ಸಿದ್ದರಿದ್ದೇವೆ. ಇದಕ್ಕೆ ಇನ್ನಷ್ಟು ಸಮಯ ಬೇಕು. ಇದಕ್ಕೆ ಸರ್ಕಾರವೇ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದೆ.
ಮಸಿ ಬಳಿದರು, ಫಲಕ ಕಿತ್ತು ಹಾಕಿದರು
ಮೊದಲೇ ಘೋಷಣೆ ಮಾಡಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಂಗಳೂರಿನ ಹಲವು ಭಾಗಗಳಲ್ಲಿ ಏಕಕಾಲಕ್ಕೆ ಬುಧವಾರ ಹೋರಾಟಕ್ಕೆ ಇಳಿದರು.
ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಸಾದಹಳ್ಳಿ ಗೇಟ್ ಬಳಿಯಿಂದ ಜಾಗೃತಿ ಮೆರವಣಿಗೆ ಶುರುವಾಯಿತು. ಹಲವರು ಅವರೊಂದಿಗೆ ಹೆಜ್ಜೆ ಹಾಕಿ ಕನ್ನಡ ಪರವಾದ ಘೋಷಣೆಗಳನ್ನು ಕೂಗಿದರು. ಇದಲ್ಲದೇ ಹಲವು ಭಾಗಗಳಲ್ಲಿ ಮೆರವಣಿಗೆಗಳೂ ನಡೆದವು.
ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನ ಎಂಜಿ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಬ್ರಿಗೇಡ್ ರಸ್ತೆ, ಚಿಕ್ಕಜಾಲ, ಸಾದಹಳ್ಳಿ, ವಿಜಯನಗರ, ಗಾಂಧಿನಗರ, ಚಿಕ್ಕಪೇಟೆ, ಕಬ್ಬನ್‌ಪಾರ್ಕ್, ರಾಜಾಜಿನಗರ ಸಹಿತ ಹಲವು ಕಡೆಗಳಲ್ಲಿ ಫಲಕಗಳನ್ನು ಕಿತ್ತು ಹಾಕುವ ಪ್ರಯತ್ನವೂ ನಡೆಯಿತು.
ಕೆಲವು ಭಾಗಗಳಲ್ಲಿ ಕರವೇ ಕಾರ್ಯಕರ್ತರು ನಾಮಫಲಕಗಳಿಗೆ ಕಪ್ಪು ಬಣ್ಣ ಕೂಡ ಬಳಿದರು. ಇಂಗ್ಲೀಷ್‌ನಲ್ಲಿದ್ದ ಫಲಕಗಳ ದೀಪಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಂಗಡಿಯವರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಸ್ಥಳದಲ್ಲಿದ್ದ ಪೊಲೀಸರು, ನಿಮ್ಮ ಹೋರಾಟವನ್ನು ಮಾತ್ರ ದಾಖಲಿಸಿ. ಫಲಕ ಒಡೆದು ಹಾಕುವುದು. ಬೆದರಿಕೆ ಹಾಕುವ ಕೆಲಸ ಮಾಡಬೇಡಿ ಎಂದು ತಿಳಿಹೇಳಿದರೂ ಆಕ್ರೋಶ ಮಾತ್ರ ಕಡಿಮೆಯಾಗಲಿಲ್ಲ. ಈ ವೇಳೆ ಬಹಳಷ್ಟು ಕಡೆಗೆ ಪೊಲೀಸರು ಲಾಠಿ ಬೀಸಿ ಚದುರಿಸಿದ್ದೂ ನಡೆಯಿತು. ಆದರೂ ಆಕ್ರೋಶ ಕಡಿಮೆಯಾಗಲಿಲ್ಲ. ಕೊನೆಗೆ ಅಲ್ಲಲ್ಲಿ ಪೊಲೀಸರು ಕರವೇ ಕಾರ್ಯಕರ್ತರು ಹಾಗೂ ಪ್ರಮುಖರನ್ನು ವಶಕ್ಕೆ ಪಡೆದು ಸಂಜೆ ನಂತರ ಬಿಡುಗಡೆ ಮಾಡಿದರು.
ಪ್ರಕರಣ ದಾಖಲು, ಬಂಧನ ಬಿಡುಗಡೆ
ಘಟನೆ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗ ಹಾಗೂ ಪಶ್ಚಿಮ ವಿಭಾಗದಲ್ಲಿ ತಲಾ 1, ಈಶಾನ್ಯ ವಿಭಾಗದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಕಾನೂನು ಉಲ್ಲಂಘನೆ ಶಾಂತಿ ಭಂಗ ಹಾಗೂ ಪ್ರಚೋದನೆ ನೀಡಿದ ಆರೋಪದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 500ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.\
ಸ್ಪಷ್ಟ ಸಂದೇಶ: ನಾರಾಯಣಗೌಡ
ಕನ್ನಡವನ್ನು, ಕನ್ನಡಿಗರನ್ನು ತಿರಸ್ಕಾರದಿಂದ ನೋಡುತ್ತಿದ್ದವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟದ ಮೂಲಕ ಸರಿಯಾದ ಸಂದೇಶ ರವಾನಿಸಿದೆ. ಕನ್ನಡಿಗರ ತಾಳ್ಮೆಯನ್ನು ಕೆಣಕಿದರೆ ಏನಾಗುತ್ತದೆ ಎನ್ನುವುದಕ್ಕೆ ನಾಮಫಲಕದ ಪ್ರತಿಭಟನೆಯೇ ಸಾಕ್ಷಿ. ರಾಜ್ಯದ ನಾನಾ ಭಾಗಗಳಿಂದ ಬಂದ ಕಾರ್ಯಕರ್ತರು ಕನ್ನಡೇತರ ಸಾವಿರಾರು ನಾಮಫಲಕಗಳನ್ನು ಕಿತ್ತು ಹಾಕಿದ್ದಾರೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಕನ್ನಡ ಫಲಕ ಬರುವವರೆಗೂ ನಿರಂತರವಾಗಿ ಮುಂದುವರಿಯಲಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ..ನಾರಾಯಣಗೌಡ ತಿಳಿಸಿದ್ದಾರೆ.
ಸಮಯ ಕೊಡಿ, ಕಲ್ಲೆಸೆಯಬೇಡಿ: ಫಿಕ್ಕಿ
ಕಡ್ಡಾಯ ಕನ್ನಡ ನಾಮಫಲಕಗಳನ್ನು ಅಳವಡಿಸುವುದಕ್ಕೆ ಫೆ.28ರವರೆಗೆ ಗಡುವನ್ನು ಬಿಬಿಎಂಪಿ ನೀಡಿದೆ. ಇನ್ನೂ ಸಮಯ ಇರುವಾಗ ಯಾವುದೇ ಕ್ರಮ ತೆಗೆದುಕೊಳ್ಳುವುದು ಸೂಕ್ತವಲ್ಲ. ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಕಿರುಕುಳ ನೀಡುವುದು ಬೇಡ. ಜತೆಗೆ ಭಯ ಹುಟ್ಟಿಸುವ ಕೆಲಸವೂ ಆಗಬಾರದು ಎಂದು ಎಫ್‍ಕೆಸಿಸಿಐ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಾಣಿಜ್ಯ ಸಂಸ್ಥೆಗಳಿಗೆ ಶೇ 60ರಷ್ಟು ಕನ್ನಡ ನಾಮಫಲಕ ಅಳವಡಿಸುವ ಬಿಬಿಎಂಪಿ ನಿರ್ದೇಶನದ ಪಾಲನೆಗೆ ಸಮಯ ನೀಡುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಎಫ್‍ಕೆಸಿಸಿಐ ಹಾಗೂ ಸದಸ್ಯ ಸಂಸ್ಥೆಗಳು ಯಾವಾಗಲೂ ಸರ್ಕಾರದ ನಿಯಮಗಳನ್ನು ಅನುಸರಿಸುತ್ತಾ ಬರುತ್ತಿದೆ. ಆದೇಶ ಸೂಚನೆಗಳನ್ನು ಪಾಲಿಸುವಂತೆ ಸಂಸ್ಥೆಯ ಎಲ್ಲಾ ಸದಸ್ಯರಿಗೆ ಸೂಚನೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟಿಸಿ, ಹಿಂಸೆ ಬೇಡ: ಸಚಿವ
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಪದಗಳೇ ಇರಬೇಕು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯಡಿ ಕಠಿಣ ನಿಯಮಗಳನ್ನು ರೂಪಿಸುವ ಜತೆಗೆ ಕನ್ನಡದಲ್ಲಿ ನಾಮಫಲಕ ಅಳವಡಿಕೆ ಮೇಲೆ ನಿಗಾ ಇರಿಸಲು ಕಾರ್ಯಪಡೆ ರಚಿಸುವ ಚಿಂತನೆಯನ್ನೂ ಸರ್ಕಾರ ನಡೆಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕರವೇ ಪ್ರತಿಭಟನೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗಡಿ ಮಳಿಗೆ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಸಬೇಕೆಂಬ ಮಾರ್ಗಸೂಚಿ ಉಲ್ಲಂಘಿಸುವವರ ಉದ್ದಿಮೆ ಪರವಾನಗಿ ರದ್ದುಗೊಳಿಸಲು ಕಠಿಣ ನಿಯಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಮಾಡಬೇಕೆಂಬ ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹಕ್ಕೆ ನಮ್ಮದೂ ಸಂಪೂರ್ಣ ಬೆಂಬಲ ಇದೆ. ಪ್ರತಿಭಟನೆ ಹೆಸರಿನಲ್ಲಿ ಅಂಗಡಿಗಳ ಮೇಲೆ ಕಲ್ಲೆಸೆದು ಶಾಂತಿಭಂಗ ಮಾಡುವುದಕ್ಕೆ ಅವಕಾಶವಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಮಂಡಿಸುವುದು ಸೂಕ್ತ ಎಂದು ಸಚಿವರು ಹೇಳಿದರು.
ಸಿಎಂ ಸೂಚನೆ
ಕರ್ನಾಟಕ ರಕ್ಷಣಾ ವೇದಿಕೆಯವರು ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳನ್ನು ಹಾಕಬೇಕೆಂದು ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಕೋಲಾರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾಹಿತಿ ಬಂದಿದ್ದು, ಕಾನೂನು ಬಾಹಿರವಾಗಿ ನಡೆದು ಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
=================
ವಿಭಾಗ