ನೀಟ್ ಪರೀಕ್ಷೆ ರದ್ದು, 1971ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಿರ್ಣಯ ಅಂಗೀಕಾರ; ಗ್ರೇಟರ್ ಬೆಂಗಳೂರು ಮಸೂದೆ ವಾಪಾಸ್
Jul 25, 2024 08:09 PM IST
ಬೆಂಗಳೂರಿನಲ್ಲಿ ನಡೆದ ವಿಧಾನಪರಿಷತ್ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
Karnataka Assembly Session ಕರ್ನಾಟಕದ ವಿಧಾನಮಂಡಲದ ಅಧಿವೇಶನದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ನೀಟ್ ಪರೀಕ್ಷೆ ರದ್ದು, ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕೆಂಬದು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸುವ ನಿರ್ಣಯಗಳನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಲಾಗಿದೆ. ಜತೆಗೆ ಗ್ರೇಟರ್ ಬೆಂಗಳೂರು ಮಸೂದೆ ಕುರಿತು ವಿಸ್ತೃತ ಚರ್ಚೆ ನಡೆಸಲು ಸದನ ಸಮಿತಿ ರಚಿಸಲು ಒಪ್ಪಿಕೊಂಡಿರುವ ಸರ್ಕಾರ ಈ ಮಸೂದೆಯನ್ನು ಹಿಂಪಡೆದಿರುವುದು ಇಂದಿನ ವಿಧಾನ ಮಂಡಲದ ಕಲಾಪದ ಪ್ರಮುಖ ಅಂಶಗಳು.
ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಧರಣಿ ಮತ್ತು ಕೋಲಾಹಲದ ಮಧ್ಯೆಯೇ ನಿರ್ಣಯಗಳನ್ನು ಅಂಗೀಕರಿಸಿ ಒಪ್ಪಿಗೆ ಪಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ನಿರ್ಣಯಗಳನ್ನು ಮಂಡಿಸಿದರು.
ಕುತೂಹಲ ಎಂದರೆ ಒಂದು ರಾಷ್ಟ್ರ ಮತ್ತು ಒಂದು ಚುನಾವಣೆ ಪ್ರಸ್ತಾವಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತೇ ಹೊರತು ಉಳಿದ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಲಿಲ್ಲ.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ ಈ ಮೂರೂ ನಿಣಯಗಳನ್ನು ಚರ್ಚಿಸಲು ಪ್ರತ್ಯೇಕ ಅಧಿವೇಶನಗಳನ್ನು ಕರೆಯಬೇಕು. ಪ್ರತಿಪಕ್ಷಗಳು ಧರಣಿ ನಡೆಸುತ್ತಿರುವಾಗ ನಿರ್ಣಯಗಳನ್ನು ಮಂಡಿಸುವುದು ಸರಿಯಲ್ಲ. ನಿರ್ಣಯಗಳನ್ನು ಕುರಿತು ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕಿತ್ತು ಎಂದು ವಾದಿಸಿದರು.
ನೀಟ್ ನಿರ್ಣಯದಲ್ಲಿ ಏನಿದೆ?
ನೀಟ್ ಪರೀಕ್ಷಾ ವ್ಯವಸ್ಥೆಯಿಂದ ಗ್ರಾಮೀಣ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ರಾಜ್ಯ ಸರ್ಕಾರ ನಡೆಸುವ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ರಾಜ್ಯಗಳ ಅಧಿಕಾರವನ್ನು ನೀಟ್ ಕಸಿದುಕೊಳ್ಳುತ್ತದೆ. ಆದ್ದರಿಂದ ನೀಟ್ ಪರೀಕಾ ಪದ್ದತಿಯನ್ನೇ ರದ್ದುಗೊಳಿಸಬೇಕು ಎಂದು ನಿರ್ಣಯದಲ್ಲಿ ಬಲವಾಗಿ ಪ್ರತಿಪಾದಿಸಲಾಗಿದೆ.
ಕರ್ನಾಟಕ ಸರ್ಕಾರ ನಡೆಸುವ ಸಿಇಟಿ ಅಂಕಗಳನ್ನು ಪರಿಗಣಿಸಿಯೇ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ನೀಡಬೇಕು. ರಾಷ್ಟ್ರಮಟ್ಟದಲ್ಲೇ ನೀಟ್ ಪರೀಕ್ಷಾ ಪದ್ದತಿಯನ್ನುರದ್ದುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಕ್ಷೇತ್ರ ಪುನರ್ ವಿಂಗಡನೆ
ರಾಜ್ಯ ವಿಧಾನಸಭೆಯು 2026ರಲ್ಲಿನನ ಅಥವಾ ಅದರ ನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಬಾರದು. ಜನಸಂಖ್ಯೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯ ವಿಧಾನಸಭೆಯ ಸ್ಥಾನಗಳನ್ನು 1971ರ ಜನಗಣತಿ ಆಧಾರದಲ್ಲೇ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಸರ್ಕಾರ ಪ್ರತಿಪಾದಿಸಿದೆ.
ಒಂದು ರಾಷ್ಟ್ರ ಒಂದು ಚುನಾವಣೆ ಬೇಡ
ಈ ಪದ್ದತಿಯಿಂದ ಭಾರತ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಹೊಡೆತ ಬೀಳುತ್ತದೆ. ಒಂದು ರಾಷ್ಟ್ರ ಒಂದು ಚುನಾವಣಾ ಪದ್ದತಿಯು ರಾಷ್ಟ್ರೀಯ ವಿಷಯಗಳ ಆಧಾರದಲ್ಲಿ ನಡೆಯಲಿದ್ದು, ಸ್ಥಳೀಯ ಮತ್ತು ರಾಜ್ಯಗಳ ವಿಷಯಗಳು, ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಮರೆ ಮಾಚುತ್ತದೆ ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.
ಈ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಅಶೋಕ ಒಂದು ರಾಷ್ಟ್ರ ಒಂದು ಚುನಾವಣೆ ಉತ್ತಮ ಪರಿಕಲ್ಪನೆಯಾಗಿದೆ. ಇದರಿಂದ ಬೊಕ್ಕಸಕ್ಕೆ ಹಣ ಉಳಿತಾಯವಾಗತ್ತದೆ. ವರ್ಷವಿಡೀ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಲೇ ಇದ್ದರೆ ಸರ್ಕಾರಿ ಯಂತ್ರ ಕುಸಿದು ಹೋಗುತ್ತದೆ ಎಂದೂ ಆತಂಕ ವ್ಯಕಪಡಿಸಿದರು.
ಗ್ರೇಟರ್ ಬೆಂಗಳೂರು ಮಸೂದೆ ವಾಪಸ್
ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕುರಿತು ವ್ಯಾಪಕ ಚರ್ಚೆ ನಡೆಸಬೇಕಿರುವುದರಿಂದ ಈ ಮಸೂದೆಯನ್ನು ಸರ್ಕಾರ ಹಿಂಪಡೆದಿದೆ. ವಿಧಾನಸಭೆಯಲ್ಲಿ ಗುರುವಾರ ಈ ಮಸೂದೆಯನ್ನು ಪರ್ಯಾಲೋಚನೆಗೆ ಮಂಡಿಸಿದ ಉಪ ಮುಖ್ಯಮಂತ್ರಿ ಶಿವಕುಮಾರ್ ಮಸೂದೆಯ ಅನಿವಾರ್ಯತೆಯನ್ನು ಪ್ರತಿಪಾದಿಸಿದರು. ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಸರ್ಕಾರದ ಉದ್ದೇಶವಾಗಿದ್ದು, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮಸೂದೆ ಅನಿವಾರ್ಯ ಎಂದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ ಮಾತನಾಡಿ ಈ ಮಸೂದೆ ಕುರಿತು ವ್ಯಾಪಕ ಚರ್ಚೆ ನಡೆಯಬೇಕಿದೆ. ಈಗಿನ ರರೂಪದಲ್ಲೇ ರಚನೆಯಾದರೆ ಕೆಂಪೇಗೌಡ ಕಟ್ಟಿದ ಬೆಂಗಳೂರು ಹೋಳಾಗುತ್ತದೆ. ಆದ್ದರಿಂದ ಮಸೂದೆಯನ್ನು ಹಿಂದಕ್ಕೆ ಪಡೆದು ಸದನ ಸಮಿತಿ ರಚಿಸಬೇಕೆಂದು ಆಗ್ರಹಪಡಿಸಿದರು. ಅಂತಿಮವಾಗಿ ಶಿವಕುಮಾರ್ ಸದನ ಸಮಿತಿ ರಚನೆಗೆ ಒಪ್ಪಿಕೊಂಡು ಮಸೂದೆಯನ್ನು ಹಿಂಪಡೆದರು.
(ವರದಿ: ಎಚ್.ಮಾರುತಿ, ಬೆಂಗಳೂರು)