ಬೈಕೆರೆ ನಾಗೇಶ್ ನಿಧನ, ದೆಹಲಿಯಲ್ಲಿ ದೇವೇಗೌಡರ ಆಪ್ತ ಕಾರ್ಯದರ್ಶಿಯಾಗಿದ್ದ, ಸೇವಾಪರತೆಯ ಅಧಿಕಾರಿ ಈಗ ನೆನಪು
Jan 23, 2024 03:53 PM IST
ಹಿರಿಯ ಅಧಿಕಾರಿ ಬೈಕೆರೆ ನಾಗೇಶ್ ಬೆಂಗಳೂರಿನಲ್ಲಿ ಮಂಗಳವಾರ ನಿಧನರಾಗಿದ್ಧಾರೆ.
- memory ದೆಹಲಿಯಲ್ಲಿ ಕರ್ನಾಟಕದ ಅಧಿಕಾರಿಯಾಗಿ ಹಲವು ವರ್ಷ ಕೆಲಸ ಮಾಡಿ ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಿದ್ದ ಬೈಕೆರೆ ನಾಗೇಶ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೆನಪಿಸಿಕೊಂಡಿದ್ದಾರೆ.
ಸಜ್ಜನ ಸಹೃದಯಿ ಬೈಕೆರೆ ನಾಗೇಶ್ (72) ಇಷ್ಟು ಬೇಗ ನಮ್ಮನ್ನು ಅಗಲುವರು ಎಂದು ನಿರೀಕ್ಷಿಸಿರಲಿಲ್ಲ.
ದೆಹಲಿಯ ಕರ್ನಾಟಕಭವನದಲ್ಲಿ ಬಹುಕಾಲ ಕೆಲಸ ಮಾಡಿ ಹಲವರ ಒಡನಾಡಿಯೂ ಆಗಿದ್ದ ಹಿರಿಯ ಅಧಿಕಾರಿ ಬೈಕೆರ್ ನಾಗೇಶ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
ಸಕಲೇಶಪುರ ತಾಲ್ಲೂಕು ಕುಗ್ರಾಮ ಬೈಕೆರೆಯಿಂದ ದೆಹಲಿ ತನಕ ನಾಗೇಶ್ ಪಯಣಿಸಿದ ಹಾದಿ ನೋಡಿದರೆ ಎಂಥವರಿಗೂ ನಿಬ್ಬೆರಗಾಗುವಂತಾದ್ದು.
ಯಾರ ವೈರತ್ವವನ್ನು ಕಟ್ಟಿಕೊಳ್ಳದ ಮುಗುಳ್ನಗೆ ಸ್ನೇಹತ್ವದಲ್ಲಿಯೇ ತನ್ನವರನ್ನಾಗಿಸಿಕೊಂಡು ಎಲ್ಲರೊಳಗೂ ಸರಳ ವ್ಯಕ್ತಿತ್ವದ ಛಾಪು ಮೂಡಿಸುತ್ತಿದ್ದ ನಾಗೇಶ್ ನಾಡಿನ ಅಪರೂಪದ ಕ್ರಿಯಾಶೀಲ ಅಧಿಕಾರಿ.
ದೆಹಲಿ ಪಯಣ
ಜಾಫರ್ ಷರೀಫ್ ಬಳಿ ಆಪ್ತ ಕಾರ್ಯದರ್ಶಿಯಾಗಿ ದೆಹಲಿಯತ್ತ ಮುಖ ಮಾಡಿದವರು ಮತ್ತೆ ರಾಜ್ಯ ಸೇವೆಗೆ ಹಿಂತಿರುಗಲಿಲ್ಲ. ದೆಹಲಿಯನ್ನು ಕಾರ್ಯಚಟುವಟಿಕೆ ಕೇಂದ್ರವನ್ನಾಗಿಸಿಕೊಂಡು ಅಲ್ಲಿಯೇ ಗಟ್ಟಿ ನೆಲೆನಿಂತವರು ನಾಗೇಶ್.
ದೆಹಲಿಯಲ್ಲಿ ಕನ್ನಡಿಗರ ಐಕಾನ್ ಆಗಿ ಕೆಲಸ ಮಾಡಿದ ನಾಗೇಶ್ ಅವರನ್ನು ಪಕ್ಷಾತೀತವಾಗಿ ಬಹುತೇಕ ಎಲ್ಲಾ ರಾಜಕಾರಣಿಗಳು ಪ್ರೀತಿಸಿದವರೇ. ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಬಗೆಬಗೆದು ರಾಜ್ಯದ ಕಡೆಗೆ ಹರಿಸಿದ್ದರಲ್ಲಿ ನಾಗೇಶ್ ಪಾತ್ರ ದೊಡ್ಡದು.
ಕರ್ನಾಟಕದ ಪರ ವಕಾಲತ್ತು
ಸದಾ ರಾಜ್ಯದ ಪರವಾಗಿ ವಕಾಲತ್ತು ವಹಿಸಿ ಕೆಲಸ ಮಾಡುತ್ತಿದ್ದ ಅವರನ್ನು ಎಲ್ಲಾ ಮುಖ್ಯಮಂತ್ರಿಗಳು ಇಷ್ಟಪಟ್ಟು ಹಲವು ಕೆಲಸವನ್ನು ಅವರ ಹೆಗಲಿಗೆ ಹಾಕಿಬಿಡುತ್ತಿದ್ದರು.
ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ವಿಶೇಷ ಕರ್ತವ್ಯಧಿಕಾರಿಯಾಗಿ ಕೆಲಸ ಮಾಡಿದವರು.
ತವರು ಪ್ರೇಮದಿಂದ ಸಕಲೇಶಪುರಕ್ಕೆ ಅಭಿವೃದ್ಧಿ ಹೊಳೆಯನ್ನೆ ಹರಿಸಿದ್ದ ನಾಗೇಶ್ ಶಾಸಕರಾಗುವ ಅವಕಾಶವನ್ನು ನಯವಾಗಿ ನಿರಾಕರಿಸಿ ದೆಹಲಿಯಲ್ಲಿ ಗಟ್ಟಿಯಾಗಿ ನಿಂತವರು.
ದೆಹಲಿಯಲ್ಲಿ ಆಸರೆ
ದೆಹಲಿಗೆ ಸಹಾಯ ಕೇಳಿ ಹೋದವರಿಗೆ ಯಾವುದಾದರೂ ರೂಪದಲ್ಲಿ ನೆರವಾದವರು ನಾಗೇಶ್. ಇಂತಹ ನೂರಾರು ಅನುಭವಗಳು ಕನ್ನಡಿಗರಲ್ಲಿದೆ. ಪತ್ರಕರ್ತರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಇದರಿಂದ ಹೊರತಲ್ಲ. ಸೇವೆಯಲ್ಲಿಯೂ ಒಂದು ರೀತಿಯ ತಾಯ್ತನ ಮೈಗೂಡಿಸಿಕೊಂಡಿದ್ದ ನಾಗೇಶ್ ವ್ಯಕ್ತಿತ್ವಕ್ಕೆ ಮಾರುಹೋಗದವರಿಲ್ಲ.
ರಾಜ್ಯಕ್ಕೆ ಬರಬೇಕಾದ ಯೋಜನೆ ಎಲ್ಲಿ ಬಾಕಿಯಾಗಿದೆ? ಎಂದು ಫೈಲ್ ಹಿಡಿದು ಕೇಂದ್ರ ಸರ್ಕಾರದ ಕಂಬ ಸುತ್ತಿ ಕೆಲಸ ಮಾಡಿಸುತ್ತಿದ್ದ ನಾಗೇಶ್ ಕಾರ್ಯವೈಖರಿ ಎಲ್ಲರಿಗಿಂತ ವಿಭಿನ್ನ.
ಹಲವಾರು ವರ್ಷ ರಾಜ್ಯದ ಪ್ರತಿನಿಧಿಯಾಗಿಯೂ ಆ ಸ್ಥಾನಕ್ಕೆ ನ್ಯಾಯ ಒದಗಿಸಿದವರು ನಾಗೇಶ್ ಎನ್ನುವುದು ಅತಿಶೋಯಕ್ತಿ ಅಲ್ಲ.
ಬೆಂಗಳೂರು ವಾಸ
ನಿವೃತ್ತಿ ಜೀವನ ಬೆಂಗಳೂರಿನಲ್ಲಿ ಕಳೆಯಲು ನಿರ್ಧರಿಸಿ ಬಂದ ಅವರಿಗೆ ಯಾಕೊ ಆರೋಗ್ಯ ಆಗಿಂದಾಗ್ಗೆ ಕೈಕೊಡುತ್ತಲೇ ಇತ್ತು.
ಇದೇ ಜ.6 ರಂದು ಪೋನ್ ಮಾಡಿ ಬಹಳ ಹೊತ್ತು ಮಾತನಾಡಿದ್ದರು. ನಿಮ್ಮನ್ನು ನೋಡಬೇಕು ಎಂದು ವಿಡಿಯೋ ಕಾಲ್ ಕೂಡ ಮಾಡಿದ್ದರು. ಅದೇ ಅವರ ಕೊನೆಯ ಪೋನ್ ಕರೆ ಆಗಿದ್ದು ವಿಧಿವಿಪರ್ಯಾಸ. ನಾಗೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ಶಿವಾನಂದ ತಗಡೂರು, ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ