Karnataka Budget 2024: ಗ್ಯಾರಂಟಿ ಯೋಜನೆಗಳಂತೆ ಕೃಷಿಯಲ್ಲೂ ದೇಶಕ್ಕೆ ಮಾದರಿ ಕಾರ್ಯಕ್ರಮ ಘೋಷಿಸಿ, ಸಿದ್ದರಾಮಯ್ಯಗೆ ರೈತ ನಾಯಕರ ಸಲಹೆ
Feb 12, 2024 07:30 AM IST
ಬಜೆಟ್ ನಲ್ಲಿ ಕೃಷಿಗೆ ಒತ್ತು ನೀಡುವಂತೆ ತಜ್ಞರು. ರೈತ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
- Siddaramaiah meeting ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಬೆಂಗಳೂರಿನಲ್ಲಿ ಕೃಷಿ, ಉದ್ಯಮ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಸಂಬಂಧಿಸಿ ಪ್ರತ್ಯೇಕ ಸಭೆ ನಡೆಸಿದರು.
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಅವಧಿಯಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೀರಿ. ಇಷ್ಟು ಕಡಿಮೆ ಅವಧಿಯಲ್ಲಿ ಯಾರೂ ಭರವಸೆ ಈಡೇರಿಸಿಲ್ಲ. ನಿಮ್ಮ ಈ ಪ್ರಯತ್ನಕ್ಕೆ ನಮ್ಮೆಲ್ಲರ ಅಭಿನಂದನೆಗಳು ಇವೆ. ಇದೇ ರೀತಿಯಲ್ಲಿ ರೈತಾಪಿ ವರ್ಗಕ್ಕೂ ಇನ್ನಷ್ಟು ಸಹಾಯಕವಾಗುವಂತಹ, ಜನ ನೆನಪಿಟ್ಟುಕೊಳ್ಳುವಂತಹ ಯೋಜನೆಯನ್ನು ಈ ಬಾರಿ ಬಜೆಟ್‌ನಲ್ಲಿ ತನ್ನಿ. ಕೃಷಿ ವಲಯವನ್ನು ಮರೆಯಬೇಡಿ. ನಿಮ್ಮಿಂದ ಬಹಳಷ್ಟು ನಿರೀಕ್ಷೆಗಳನ್ನು ಕರ್ನಾಟಕದ ಅನ್ನದಾತರು ಇಟ್ಟುಕೊಂಡಿದ್ದಾರೆ.
ಇದು ಕರ್ನಾಟಕದ ಬಜೆಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಯಾರಿ ಮಾಡಿಕೊಳ್ಳುತ್ತಿರುವಾಗ ಕರ್ನಾಟಕದ ರೈತ ನಾಯಕರು, ಮುಖಂಡರು, ಕೃಷಿ ತಜ್ಞರು ಭಾನುವಾರ ನೀಡಿದ ಸಲಹೆಗಳು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಬಜೆಟ್ ಪೂರ್ವ ರೈತ ಮುಖಂಡರು ಮತ್ತು ರೈತ ಹೋರಾಟಗಾರರ ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಯ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು.
ರೈತ ಮಹಿಳೆಯರ ಮತ್ತು ರೈತ ಕುಟುಂಬಗಳ ಆರ್ಥಿಕ ಶಕ್ತಿ-ಚೈತನ್ಯವನ್ನು ಗ್ಯಾರಂಟಿ ಯೋಜನೆಗಳು ಹೆಚ್ಚಿಸಿರುವುದನ್ನು ವಿವರಿಸಿದ ಬಡಗಲಾಪುರ ನಾಗೇಂದ್ರ ಅವರು, ರೈತರ ಮತ್ತು ಜನ ಸಮುದಾಯದ ಪೌಷ್ಠಿಕತೆ ಹೆಚ್ಚಿಸುವ ದಿಕ್ಕಿನಲ್ಲಿ ಸಲಹೆ ನೀಡಿದರು. ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.
ಬಹಳ ಕಷ್ಟ ಪಟ್ಟು ಗ್ಯಾರಂಟಿ ಯೋಜನೆಗಳನ್ನು ಇಷ್ಟು ಶೀರ್ಘವಾಗಿ ಜಾರಿ ಮಾಡಿದ್ದೀರಿ. ಇದರ ಅನುಕೂಲ ರಾಜ್ಯದ ಜನರಿಗೆ ಆಗುತ್ತಿರುವ ಹೊತ್ತಲ್ಲಿ ಟೀಕೆಗಳಿಗೆ ಅಂಜುವ ಅಗತ್ಯವಿಲ್ಲ ಎನ್ನುವ ಅಭಿಪ್ರಾಯಗಳು ರೈತ ಪ್ರತಿನಿಧಿಗಳಿಂದ ವ್ಯಕ್ತವಾಯಿತು.
ಇವೆಲ್ಲದರ ಜತೆಗೆ ಕೃಷಿ ಇಲಾಖೆ ಅಧಿಕಾರಿಗಳು ಬೀಜ, ಗೊಬ್ಬರ ವಿತರಿಸುವುದಕ್ಕೆ ಮಾತ್ರ ಸೀಮಿತ ಆಗದೆ ಇವತ್ತಿನ ಕೃಷಿ ಬೇಡಿಕೆಗಳಿಗೆ ತಕ್ಕಂತೆ ಅಪ್ ಡೇಟ್ ಆಗಬೇಕು, ಕೆರೆಗಳ ಅಭಿವೃದ್ಧಿ, ಮಂಡ್ಯ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಹಣ ಸಹಾಯ ಕೊಟ್ಟಿರುವುದು ಸ್ವಾಗತಿಸಿ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು ಮುಂದಾಗಬೇಕು, ರೈತ ಯುವಕ-ಯುವತಿಯರಿಗೆ ಭರವಸೆ ಹುಟ್ಟಿಸುವ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ಘೋಷಿಸಬೇಕು, ಕೃಷಿಯಲ್ಲಿ ರಾಜ್ಯ ಮಾದರಿ ಆಗುವ ಕಾರ್ಯಕ್ರಮ ರೂಪಿಸಿ ಎನ್ನುವುದೂ ಸೇರಿದಂತೆ ನೂರಕ್ಕೂ ಅಧಿಕ ಬೇಡಿಕೆಗಳನ್ನು ರೈತ ಮುಖಂಡರು ಮುಖ್ಯಮಂತ್ರಿಗಳ ಎದುರು ಇಟ್ಟರು.
ಎಲ್ಲಾ ವಿಷಯಗಳನ್ನು ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಬೇಕಾದ ನೆರವುಗಳನ್ನು ನೀಡುವ ಅಭಯ ನೀಡಿದರು.
ಬದ್ದತೆ ಇರುವ ಸರ್ಕಾರ
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಮುಖಂಡರೊಂದಿಗೆ 2024- 25 ನೇ ಸಾಲಿನ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕದ ಲ್ಲಿ ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. 2008 ರಿಂದ 2013 ರವರೆಗೆ 22,000 ಕೋಟಿ ರೂ.ಗಳು ವೆಚ್ಚವಾಗಿದೆ. 2013 ರಿಂದ 2018 ರವರೆ 88 ಸಾವಿರ ಕೋಟಿ ರೂ.ಗಳು ವೆಚ್ಚವಾಗಿದೆ . ಹೆಚ್ಚು ದುರುಪಯೋಗವಾಗುತ್ತದೆ ಎಂಬ ಕಾರಣದಿಂದ 7 ಡಿ ಯನ್ನು ತೆಗೆದುಹಾಕಿ ಆದೇಶವನ್ನು ಹೊರಡಿಸಿದೆ. ಯಾವುದೇ ಆರ್ಥಿಕ ವರ್ಷದಲ್ಲಿ ಹಣ ಖರ್ಚಾಗದಿದ್ದರೆ ಮುಂದಿನ ವರ್ಷಕ್ಕೆ ಮುಂದುವರೆಯುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ದುರುಪಯೋಗವಾದರೆ ಕ್ರಿಮಿನಲ್ ಮೊಕದ್ದಮೆ ಹೂಡಬಹುದು. ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಖರ್ಚು ಮಾಡಬೇಕು ಎಂದು ಆಂಧ್ರಪ್ರದೇಶ ಹಾಗೂ ಕರ್ನಾಟಕ ದಲ್ಲಿ ಕಾಯ್ದೆ ತರಲಾಗಿದೆ. ಇದು ಇಡೀ ದೇಶದಲ್ಲಿ ಆಗಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯಲ್ಲಿ ಪ್ರಮುಖ ಯೋಜನೆಯಾಗಬೇಕೆಂದು ಸೂಚಿಸಿದೆ ಎಂದರು.
ಬಡ್ತಿಯಲ್ಲಿ ಮೀಸಲಾತಿ ಕಾಯ್ದೆ ಮಾಡಿದ್ದು ಇಡೀ ದೇಶದಲ್ಲಿ ಕರ್ನಾಟಕ ಮಾತ್ರ. ಪಿ.ಟಿ. ಸಿ.ಎಲ್ ಕಾಯ್ದೆ ತಿದ್ದುಪಡಿ ಮಾಡಿದೆ. ಎಸ್.ಸಿ.ಎಸ್.ಟಿ ಜನಾಂಗದವರಿಗೆ ಗುತ್ತಿಗೆಯಲ್ಲಿ 1 ಕೋಟಿ ವರೆಗೆ ಮೀಸಲಾತಿ ನೀಡಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಲು ಈ ಕ್ರಮಗಳನ್ನು ಕೈಗೊಂಡಿದೆ. ಬಿಜೆಪಿ ಸರ್ಕಾರದಲ್ಲಿ ಬಜೆಟ್ ಗಾತ್ರ ಹೆಚ್ಚಾದರೂ ಎಸ್.ಸಿ, ಎಸ್ಪಿ / ಟಿಎಸ್ಪಿ ಅನುದಾನ ಹೆಚ್ಚಾಗಿರಲಿಲ್ಲ. ಇದನ್ನು ಗುರುತಿಸಬೇಕು. ನಮ್ಮ ಸರ್ಕಾರ ಸಾಮಾಜಿಕ ಬದ್ಧತೆಯುಳ್ಳ ಸರ್ಕಾರ ಎಂದರು.
ಇದಕ್ಕೂ ಮುನ್ನ ನಾನಾ ವಲಯಗಳ ಕ್ಷೇತ್ರಗಳ ಉದ್ಯಮಿಗಳು, ತಜ್ಞರು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡಸಿದರು. ಸಚಿವ ಎಂ.ಬಿ.ಪಾಟೀಲ್ ಮತ್ತಿತರರು ಹಾಜರಿದ್ದರು.