ಕರ್ನಾಟಕ ಬಜೆಟ್ 2024: ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಹೊಸದೇನಿದೆ, ಇಲ್ಲಿದೆ 10 ಯೋಜನೆ, ಕಾರ್ಯಕ್ರಮ
Feb 16, 2024 11:53 AM IST
ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2024 ಮಂಡಿಸಿದರು.
- ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ಬಜೆಟ್ 2024 ಹೊಸ ಘೋಷಣೆಗಳ ಪಟ್ಟಿ ಇಲ್ಲಿದೆ.
ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2024 ಮಂಡಿಸಿದರು.
ಬೆಂಗಳೂರು: ಕರ್ನಾಟಕ ಕೃಷಿ ಅಭಿವೃದ್ದಿ ಪ್ರಾಧಿಕಾರ, ಕಿಸಾನ್ ಮಾಲ್ ಸ್ಥಾಪನೆ, ವಿಮಾನ ನಿಲ್ದಾಣಗಳ ಬಳಿ ಆಹಾರ ಪಾರ್ಕ್, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಆಯೋಗ ರಚನೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್. ಮಂಡ್ಯದಲ್ಲಿ ಪ್ರತ್ಯೇಕ ಕೃಷಿ ವಿವಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿರುವ ಹೊಸ ಘೋಷಣೆಗಳು.
ಕೃಷಿ, ತೋಟಗಾರಿಕೆ. ವೈದ್ಯಕೀಯ, ಆರೋಗ್ಯ, ಸಮಾಜಕಲ್ಯಾಣ ಸೇರಿದಂತೆ ಹಲವು ಇಲಾಖೆಗಳಲ್ಲಿ ಸಿದ್ದರಾಮಯ್ಯ ಅವರು ಹೊಸ ಕಾರ್ಯಕ್ರಮ, ಯೋಜನೆ ಘೋಷಿಸಿದ್ಧಾರೆ.
- ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಅನುವಾಗುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ.
- ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಗ್ರಾಮಾಂತರದ ಪೂಜೇನಹಳ್ಳಿಯಲ್ಲಿ ಸ್ಥಾಪನೆ.
- ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ಹಬ್ ಅಂಡ್ ಸ್ಪೋಕ್ ಮಾದರಿಯಲ್ಲಿ ವಿಸ್ತರಿಸುವ ಮೂಲಕ ತೀವ್ರ ಹೃದ್ರೋಗದ ಸ್ಟೆಮಿ ಚಿಕಿತ್ಸೆಯನ್ನು ಬಲಪಡಿಸಲಾಗುವುದು. ಇದಲ್ಲದೇ ಸ್ಟೆಮಿ ಮತ್ತು ಸ್ಟ್ರೋಕ್ ಚಿಕಿತ್ಸೆಗಾಗಿ ಥ್ರಂಬೋಲಿಟಿಕ್ ಔಷಧಗಳ (Thrombolytic Drugs) ಸಂಗ್ರಹಣೆಗಾಗಿ 32 ಕೋಟಿ ರೂ.ಗಳನ್ನು ಹಂಚಿಕೆ
- ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವೈದ್ಯಕೀಯ ಸಂಸ್ಥೆಗಳಲ್ಲಿ 64 ಅನಸ್ತೇಷಿಯಾ ವರ್ಕ್ ಸ್ಟೇಷನ್‌ಗಳನ್ನು 34 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿ ಅಳವಡಿಕೆ
- ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚನೆ.
- ತೋಟಗಾರಿಕೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ, ಮಾರುಕಟ್ಟೆ ಸಂಪರ್ಕ, ಬೇಸಾಯ ಪರಿಕರಗಳು ಮತ್ತು ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ.
- ರಾಯಚೂರಿನಲ್ಲಿ ಸುಸಜ್ಜಿತ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಮತ್ತು ರಾಣೆಬೆನ್ನೂರಿನಲ್ಲಿ 112 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭ.
- ವಸತಿ ಶಾಲೆಗಳು ಇಲ್ಲದಿರುವ ಹೋಬಳಿಗಳ ಪೈಕಿ 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಕ್ರೈಸ್ ಸಂಸ್ಥೆಯ ಮೂಲಕ ಪ್ರಾರಂಭ.
- ಅಂಗನವಾಡಿ ಮೂಲಕ ಕೈಗೊಳ್ಳುವ ಚಟುವಟಿಕೆಗಳನ್ನು ಸುಗಮಗೊಳಿಸಲು 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಹಂಚಿಕೆ.
- ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ʻಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಆಯೋಗʼ ರಚನೆ.