CM Janata Darshan: ಮುಖ್ಯಮಂತ್ರಿ ಜನತಾದರ್ಶನದಲ್ಲಿ ಜನವೋ ಜನ, 3 ತಿಂಗಳಲ್ಲಿ ಪರಿಹಾರಕ್ಕೆ ಸಿಎಂ ಕಟ್ಟಾಜ್ಞೆ
Feb 08, 2024 02:52 PM IST
ಬೆಂಗಳೂರಿನಲ್ಲಿ ಗುರುವಾರ ನಡೆದ ಜನತಾದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಅಹವಾಲುಗಳನ್ನು ಆಲಿಸಿ ಪರಿಹಾರದ ಅಭಯ ನೀಡಿದರು.
- ಬೆಂಗಳೂರಿನ ವಿಧಾನಸೌಧದ ಎದುರು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜನತಾದರ್ಶನಕ್ಕೆ ನಿರೀಕ್ಷೆ ಮೀರಿ ಜನ ಬಂದರು. ಎಲ್ಲರ ಅಹವಾಲುಗಳನ್ನು ಆಲಿಸಲಾಯಿತು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಜನತಾದರ್ಶನಕ್ಕೆ ಜನವೋ ಜನ. ತಮ್ಮ ಅಹವಾಲುಗಳನ್ನು ಹಿಡಿದು ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ನಾನಾ ಭಾಗಗಳಿಂದ ಬಂದಿದ್ದವರು ಸಿಎಂ ಅವರನ್ನು ಕಂಡು ಖುಷಿಯಾದರು. ಅವರಿಗೆ ಮನವಿ ಅರ್ಪಿಸಿದರು. ನಮಗೆ ಸಹಾಯ ಮಾಡಿ ಎಂದು ಕೋರಿದರು. ಎಲ್ಲರ ಅಹವಾಲುಗಳನ್ನು ತಾಳ್ಮೆಯಿಂದಲೇ ಆಲಿಸಿದ ಸಿದ್ದರಾಮಯ್ಯ ಅಭಯವನ್ನೂ ನೀಡಿದರು. 3 ತಿಂಗಳಲ್ಲಿ ಜನಸ್ಪಂದನ ಅರ್ಜಿಗಳಿಗೆ ಪರಿಹಾರ ಕೊಡಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನೂ ಸಿದ್ದರಾಮಯ್ಯ ಕೊಟ್ಟರು.
ಹಿಂದಿನ ರಾತ್ರಿಯೇ ಜನ ಸ್ಪಂದನ ಕಾರ್ಯಕ್ರಮಕ್ಕಾಗಿ ದೂರದೂರುಗಳಿಂದ ಜನ ಆಗಮಿಸಿದ್ದು, ಬೆಳಿಗ್ಗೆ 8.30 ಗಂಟೆಗೇ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ, ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಕಂದಾಯ ಇಲಾಖೆಯ ಕೌಂಟರಿನಲ್ಲಿ ನಿರೀಕ್ಷೆಗೂ ಮೀರಿ ಜನರು ಸೇರಿದ್ದನ್ನು ಕಂಡು, ಕೂಡಲೇ ಆಯೋಜಕರು ಇನ್ನೊಂದು ಕೌಂಟರ್ ತೆರೆದು ಜನರಿಗೆ ಆಸನ ವ್ಯವಸ್ಥೆ ಮಾಡಿದರು.
ಮುಖ್ಯಮಂತ್ರಿಗಳ ಕನಸಿನ ಎರಡನೇ ಜನಸ್ಪಂದನ ಕಾರ್ಯಕ್ರಮಕ್ಕೆ ಬೆಳಗ್ಗೆಯಿಂದಲೇ ಉತ್ತಮ ಸ್ಪಂದನೆ ವ್ಯಕ್ತವಾಯಿತು. ನಾಡಿನ ನಾನಾ ಕಡೆಗಳಿಂದ ಎಲ್ಲಾ ಜನವರ್ಗದ ಮಂದಿ ವಿಧಾನಸೌದದ ಬಾಗಿಲಿಗೆ ಬಂದಿಳಿದಿದ್ದರು. ಜನತಾದರ್ಶನಕ್ಕೆ ಹಾಕಲಾಗಿದ್ದ ವಿಶಾಲ ಪೆಂಡಾಲ್‌ನಲ್ಲಿ ವಿಕಲಚೇತನರು, ಆಶಕ್ತರು, ಹಿರಿಯರಿಗೆ ಆಸನ ಕಲ್ಪಿಸಿದರೆ, ಇತರರು ಸರದಿಯಲ್ಲಿ ಬಂದು ಅಹವಾಲು ಸಲ್ಲಿಸುವಂತೆ ಸೂಚಿಸಲಾಯಿತು. ಕಂದಾಯ ಇಲಾಖೆ ಕೌಂಟರ್ ನಲ್ಲಿ ಅಹವಾಲು ಸಲ್ಲಿಸುವವರ ಸಂಖ್ಯೆ ವಿಪರೀತ ಹೆಚ್ಚಾಗಿದ್ದರಿಂದ ತಕ್ಷಣ ತೀರ್ಮಾನ ತೆಗೆದುಕೊಂಡು ಮತ್ತೊಂದು ಕೌಂಟರ್ ತೆರೆಯಲಾಯಿತು. ಕಂದಾಯ ಇಲಾಖೆ ಅರ್ಜಿದಾರರು ಕೌಂಟರ್ 1 ರಲ್ಲಿ ಅರ್ಜಿ ಸಲ್ಲಿಸಿ ಕೌಂಟರ್ ನಂಬರ್ 29 ರಲ್ಲಿ ಕೂರಲು ವ್ಯವಸ್ಥೆ ಮಾಡಲಾಯಿತು.
ಕೆಲವರ ಬಳಿ ತಾವೇ ಖುದ್ದು ಬಂದು ಅವರ ಸಮಸ್ಯೆಯನ್ನು ಆಲಿಸಿದ ಸಿದ್ದರಾಮಯ್ಯ ನಗುತ್ತಲೇ ಅವರಲ್ಲಿ ವಿಶ್ವಾಸ ತುಂಬಿದರು. ಮಾತೃಹೃದಯಿಯಂತೆ ಸ್ಪಂದಿಸಿ ಅಧಿಕಾರಿಗಳಿಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಕೆಲವರಿಗೆ ಆರ್ಥಿಕ ನೆರವು, ಮತ್ತೆ ಕೆಲವರಿಗೆ ಉದ್ಯೋಗ, ಬಹುತೇಕರು ಎದುರಿಸುತ್ತಿದ್ದ ಆಡಳಿತಾತ್ಮಕ, ವೈಯಕ್ತಿಕ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡುವ ಭರವಸೆಗಳೂ ದೊರೆತವು.
ಭಾರೀ ಭದ್ರತೆ
ಬೆಂಗಳೂರು ಕೇಂದ್ರ ಡಿಸಿಪಿ ಶೇಖರ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಒಟ್ಟು 936 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 8 ಎಸಿಪಿ, 23 ಇನ್ಸ್‌ಪೆಕ್ಟರ್, 58 ಸಬ್ ಇನ್ಸ್‌ಪೆಕ್ಟರ್, 205 ಪೊಲೀಸ್ ಕಾನ್ಸ್‌ಟೇಬಲ್, 142 ಮಹಿಳಾ ಪೊಲೀಸ್ ಸಿಬ್ಬಂದಿ, 500 ಹೋಂ ಗಾರ್ಡ್‌ಗಳನ್ನು ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲಾಗಿದೆ.
ಸಿಎಂ ಸೂಚನೆ ಏನು
- 3 ತಿಂಗಳಲ್ಲಿ ಜನಸ್ಪಂದನ ಅರ್ಜಿಗಳಿಗೆ ಪರಿಹಾರ ಕೊಡಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಸಿದ್ದರಾಮಯ್ಯ ಕಾನೂನು ಪ್ರಕಾರ ಪರಿಹಾರ ಸಾಧ್ಯವಿಲ್ಲದಿದ್ದರೆ ಆ ರೀತಿ ಹಿಂಬರಹ ಕೊಡಬೇಕು. ಪ್ರತೀ ಅರ್ಜಿಗೂ ಸರ್ಕಾರದ ಸ್ಪಂದನೆ ಇರಬೇಕು
- ನವೆಂಬರ್ 27 ರಂದು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ. 98 ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ, ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ.
- ಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕೆಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
- ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಬಹುದಾಗಿದೆ.
- ಕಾನೂನುಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರ್ಕಾರ ಪರಿಹಾರ ಒದಗಿಸಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಈ ಕುರಿತು ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಲಾಗುವುದು
ಇದನ್ನೂ ಓದಿರಿ: IRCTC Andaman Tour 2024: ಸುಂದರ ಪ್ರವಾಸಿ ತಾಣ ಅಂಡಮಾನ್ ನೋಡುವ ಪ್ಲಾನ್ ಇದೆಯಾ; ಐಆರ್‌ಸಿಟಿಸಿ ಬೆಸ್ಟ್ ಟೂರ್ ಪ್ಯಾಕೇಜ್ ತಿಳಿಯಿರಿ
- ಆಡಳಿತ ವ್ಯವಸ್ಥೆ ಚುರುಕುಗೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರ ರೂಪಿಸುವ ಜನೋಪಯೋಗಿ ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು.
- ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳೊಳಗಾಗಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷಗಳ ನಾಯಕರು ಈಗ ಯೋಜನೆ ಜಾರಿಗೊಳಿಸಿ ಆಮೇಲೆ ನಿಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು.
- ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮ. ಅಸಮಾನತೆ ನಿವಾರಿಸುವ ಕಾರ್ಯಕ್ರಮ. ನಾವು ಸಂವಿಧಾನದಲ್ಲಿ, ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಸಮಾಜದಲ್ಲಿ ಭ್ರಾತೃತ್ವ ಬೆಳೆಯಬೇಕು. ಸಮಾನತೆ ಮೂಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ಸಾಧ್ಯ.