logo
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections2024: ಲೋಕಸಭೆ ಪ್ರವೇಶಿಸುವ ಕನಸು ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಈಡೇರಿಲ್ಲ, ಇಬ್ಬರೂ ಎಷ್ಟು ಬಾರಿ ಸೋತಿದ್ದಾರೆ?

Lok Sabha Elections2024: ಲೋಕಸಭೆ ಪ್ರವೇಶಿಸುವ ಕನಸು ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಈಡೇರಿಲ್ಲ, ಇಬ್ಬರೂ ಎಷ್ಟು ಬಾರಿ ಸೋತಿದ್ದಾರೆ?

Umesha Bhatta P H HT Kannada

Feb 20, 2024 08:30 PM IST

google News

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಇನ್ನೂ ಲೋಕಸಭೆ ಸದಸ್ಯರಾಗುವ ಅವಕಾಶ ಬಂದಿಲ್ಲ.

    • Karnataka politics ಕರ್ನಾಟಕದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹೆಚ್ಚು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ಧಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಇನ್ನೂ ಲೋಕಸಭೆ ಸದಸ್ಯರಾಗುವ ಅವಕಾಶ ಬಂದಿಲ್ಲ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಇನ್ನೂ ಲೋಕಸಭೆ ಸದಸ್ಯರಾಗುವ ಅವಕಾಶ ಬಂದಿಲ್ಲ.

ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಗೆ ಜೋಡೆತ್ತುಗಳ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ತಯಾರಾಗಿದ್ದಾರೆ. ಸ್ಪರ್ಧೆ ಮಾಡುವುದಕ್ಕೆ ಅಲ್ಲ. ಬದಲಿಗೆ ಕನಿಷ್ಠ 20 ಲೋಕಸಭಾ ಕ್ಷೇತ್ರಗಳಲ್ಲಾದರೂ ಗೆಲ್ಲಲೇಬೇಕು ಎನ್ನುವ ಉಮೇದಿನೊಂದಿಗೆ ಇಬ್ಬರೂ ಕರ್ನಾಟಕದಲ್ಲಿ ಅಖಾಡ ಅಣಿಗೊಳಿಸುತ್ತಿದ್ದಾರೆ. ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಉತ್ಸಾಹ ಅವರ ಬೆನ್ನಿಗಿದೆ. ಆದರೆ ಅವರಿಬ್ಬರೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೂ ಗೆಲ್ಲಲು ಆಗಿಲ್ಲ. ಒಮ್ಮೆಯೂ ಲೋಕಸಭೆಯನ್ನು ಪ್ರವೇಶಿಸಿಲ್ಲ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಕರ್ನಾಟಕದ ಕಾಂಗ್ರೆಸ್‌ ನ ಕಟ್ಟಾಳುಗಳು. ಸಿದ್ದರಾಮಯ್ಯ 9 ಬಾರಿ ವಿಧಾನಸಭೆ ಪ್ರವೇಶಿಸಿದ್ದರೆ, ಡಿ.ಕೆ.ಶಿವಕುಮಾರ್‌ ಅವರು 8ನೇ ಬಾರಿ ಗೆದ್ದಿದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ5 ಬಾರಿ , ವರುಣಾದಲ್ಲಿ 3 ಬಾರಿ, ಬಾದಾಮಿ ಕ್ಷೇತ್ರವನ್ನು ಒಂದು ಬಾರಿ ಪ್ರತಿನಿಧಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಆರಂಭದಲ್ಲಿ 4 ಬಾರಿ ಸಾತನೂರು ಕ್ಷೇತ್ರದಿಂದ, ಆ ಕ್ಷೇತ್ರ ಮಾಯವಾದ ನಂತರ ಕನಕಪುರ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಗೆದ್ದಿದ್ದಾರೆ. ಸಿದ್ದರಾಮಯ್ಯ ಪಕ್ಷೇತರ, ಜನತಾಪಕ್ಷ, ಜನತಾದಳ, ಜಾ.ದಳದ ಬಳಿಕ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಡಿ.ಕೆ.ಶಿವಕುಮಾರ್‌ 1994ರಲ್ಲಿ ಒಮ್ಮೆ ಪಕ್ಷೇತರರಾಗಿ ಗೆದ್ದು ಉಳಿದೆಲ್ಲಾ ಬಾರಿ ಕಾಂಗ್ರೆಸ್‌ನಿಂದಲೇ ಚುನಾಯಿತರಾಗುತ್ತಾ ಬಂದಿದ್ದಾರೆ.

ಇಬ್ಬರಿಗೂ ಚುನಾವಣೆಗಳನ್ನು ಎದುರಿಸಿ, ಅಭ್ಯರ್ಥಿಗಳನ್ನು ಗೆಲ್ಲಿಸಿ ಗೊತ್ತು. ಪ್ರಬಲ ನಾಯಕರಾಗಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಇಬ್ಬರಿಗೂ ಲೋಕಸಭೆ ಚುನಾವಣೆ ಪ್ರವೇಶಿಸುವ ಆಸೆ ಈಡೇರಿಲ್ಲ. ಸಿದ್ದರಾಮಯ್ಯ ಎರಡು ಬಾರಿ, ಡಿ.ಕೆ.ಶಿವಕುಮಾರ್‌ ಒಂದು ಬಾರಿ ಲೋಕಸಭೆ ಚುನಾವಣೆ ಕಣಕ್ಕೆ ಧುಮುಕಿ ಸೋಲು ಕಂಡಿದ್ದಾರೆ.

ಸಿದ್ದರಾಮಯ್ಯಗೂ ಗೆಲುವಿಲ್ಲ

ಸಿಎಂ ಸಿದ್ದರಾಮಯ್ಯ ಅವರು 1978 ರಲ್ಲಿ ಮೈಸೂರು ತಾಲ್ಲೂಕು ಬೋರ್ಡ್‌ ಸದಸ್ಯರಾಗಿದ್ದವರು. ರೈತಸಂಘದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರೊಂದಿಗೆ ಚಳವಳಿಗಳಲ್ಲಿ ಭಾಗಿಯಾಗಿದ್ದವರು. ಅದು 1980. ಲೋಕಸಭೆ ಚುನಾವಣೆ ಘೋಷಣೆಯಾಗಿತ್ತು. ಆಗ ಮೈಸೂರಿನಿಂದ ಸಿದ್ದರಾಮಯ್ಯ ಅವರನ್ನು ನಂಜುಂಡಸ್ವಾಮಿ ಮತ್ತವರ ಬೆಂಬಲಿಗರು ಕಣಕ್ಕೆ ಇಳಿಸಿದ್ದರು. ಆಗ ಹೋರಾಟ ಮಾಡಿದ ಸಿದ್ದರಾಮಯ್ಯ ಅವರು ಸೋತರು. ಇಂದಿರಾ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಎಂ.ರಾಜಶೇಖರಮೂರ್ತಿ ಗೆದ್ದರೆ, ಸಂಸ್ಥಾ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ತುಳಸೀದಾಸ್‌ ದಾಸಪ್ಪ ಹಾಗೂ ಜನತಾಪಕ್ಷದ ಎಂ.ಎಸ್.ಗುರುಪಾದಸ್ವಾಮಿ ಕೂಡ ಸೋಲು ಅನುಭವಿಸಿದರು.

ಇದಾದ ಬಳಿಕ ಜನತಾದಳದಿಂದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಸಿದ್ದರಾಮಯ್ಯ ಅವರು 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಕಾಂಗ್ರೆಸ್‌ನ ಬಸವರಾಜ ಪಾಟೀಲ್‌ ಅನ್ವರಿ ವಿರುದ್ದ ಸಿದ್ದರಾಮಯ್ಯ ಸೋಲು ಅನುಭವಿಸಿದರು. ಅನ್ವರಿ ಅವರಿಗೆ 241176 ಮತ ಬಂದರೆ, ಜನತಾದಳ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಅವರು ಪಡೆದಿದ್ದು 229979 ಮತ. ಬರೀ 12 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಅವರಿಗೆ ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇರಾದೆ ಇತ್ತು. ಹೈಕಮಾಂಡ್‌ ಕೂಡ ದೆಹಲಿ ರಾಜಕಾರಣಕ್ಕೆ ಬನ್ನಿ ಎನ್ನುವ ಸೂಚನೆಯನ್ನು ಸಿದ್ದರಾಮಯ್ಯ ಅವರಿಗೆ ನೀಡಿತ್ತು. ಆದರೆ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಯೋಚನೆ ಕೈ ಬಿಟ್ಟರು.

ಡಿಕೆಶಿಗೂ ಸೋಲು

2001 ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಮಳವಳ್ಳಿ ಮೂಲದ ಕಾಂಗ್ರೆಸ್‌ ನಾಯಕ ಚಂದ್ರಶೇಖರಮೂರ್ತಿ ತೀರಿಕೊಂಡರು. ಆಗ ತೆರವಾದ ಸ್ಥಾನಕ್ಕೆ 2002ರಲ್ಲಿ ಉಪ ಚುನಾವಣೆ ಎದುರಾಯಿತು. ಆಗ ಕರ್ನಾಟಕದಲ್ಲಿ ಎಸ್‌.ಎಂ.ಕೃಷ್ಣ ಸರ್ಕಾರ. ಅವರ ಮಾನಸ ಪುತ್ರರಂತೆಯೇ ಇದ್ದ ಡಿ.ಕೆ.ಶಿವಕುಮಾರ್‌ ಇದ್ದರು. ಆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾದವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ. ಆಗ ಡಿ.ಕೆ.ಶಿವಕುಮಾರ್‌ ಅವರನ್ನೇ ಕನಕಪುರ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಯಿತು.

ಬಿಜೆಪಿಯಿಂದ ಮಾಜಿ ಸಚಿವ ಶಿವಮೊಗ್ಗದ ಕೆ.ಎಸ್‌.ಈಶ್ವರಪ್ಪ ಅವರನ್ನು ಅಭ್ಯರ್ಥಿಯನ್ನಾಗಿಸಲಾಯಿತು. ಆಗ ಸಿದ್ದರಾಮಯ್ಯ ಸಹಿತ ಬಹುತೇಕ ಜೆಡಿಎಸ್‌ ನಾಯಕರು ಸೋತಿದ್ದರೂ ದೇವೇಗೌಡರ ಪರವಾಗಿ ಕೆಲಸ ಮಾಡಿದರು. ಆಗ ಗೌಡರು 581,709 ಮತ ಪಡೆದು ಗೆದ್ದರೆ, ಕಾಂಗ್ರೆಸ್‌ ಸರ್ಕಾರ ಇದ್ದರೂ ಡಿ.ಕೆ.ಶಿವಕುಮಾರ್‌ ಗೆಲ್ಲಲು ಆಗಲಿಲ್ಲ. ಡಿಕೆಶಿಗೆ 5,29,133 ಮತ ಬಂದವು. ಕೆ.ಎಸ್.ಈಶ್ವರಪ್ಪ 2,28,134 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಇದಾದ ನಂತರ ಡಿ.ಕೆ.ಶಿವಕುಮಾರ್‌ ರಾಜ್ಯ ರಾಜಕಾರಣದಲ್ಲಿ ಮುಂದುವರೆದರೆ, ಅವರ ಸಹೋದರ ಡಿ.ಕೆ.ಸುರೇಶ್‌ ಹೊಸದಾಗಿ ರಚನೆಯಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೂರು ಬಾರಿ ಲೋಕಸಭೆ ಸದಸ್ಯರಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ