Yuva Nidhi Scheme: ಯುವನಿಧಿಗೆ ಇಂದು ಚಾಲನೆ: ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ, ಏನೆಲ್ಲಾ ಅರ್ಹತೆ ಇರಬೇಕು
Dec 26, 2023 10:56 AM IST
ಯುವ ನಿಧಿ ಯೋಜನೆಗೆ ನೋಂದಣಿಗೆ ಪ್ರಕ್ರಿಯೆ ಮಂಗಳವಾರದಿಂದ ಆರಂಭ.
- Yuva Nidhi Scheme Registration ಕರ್ನಾಟಕ ಸರ್ಕಾರದ ಗ್ಯಾರಂಟಿ ಘೋಷಣೆ ಯುವನಿಧಿ ಯೋಜನೆಗೆ ಮಂಗಳವಾರ ಚಾಲನೆ. ನೊಂದಣಿ ಪ್ರಕ್ರಿಯೆಯೂ ಶುರು. ಜನವರಿ 12 ರಂದು ಮೊದಲು ಕಂತಿನ ಯುವನಿಧಿ ನೆರವು ಬಿಡುಗಡೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಚುನಾವಣೆಗೆ ಮುನ್ನ ಘೋಷಿಸಿದ್ದ ಐದು ಘೋಷಣೆಯಲ್ಲಿ ಕೊನೆಯದಾಗಿ ಯುವನಿಧಿ ಜಾರಿಗೊಳ್ಳುವ ಸಮಯ ಬಂದಿದೆ. ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷ ಭತ್ಯೆ ನೀಡುವ ಯುವನಿಧಿ ಯೋಜನೆಗೆ ಡಿಸೆಂಬರ್ 26ರ ಮಂಗಳವಾರ ಚಾಲನೆ ದೊರಕಲಿದೆ.
ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೊಳಿಸಿದ್ದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತೊಂದು ಗ್ಯಾರಂಟಿಯನ್ನು ಜಾರಿಗೊಳಿಸಿದೆ.
ಎಲ್ಲಾ ಜಿಲ್ಲೆಗಳಲ್ಲಿ ಚಾಲನೆ
ಯುವನಿಧಿ ಯೋಜನೆ ನೊಂದಣಿಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಚಾಲನೆ ನೀಡಲಿದ್ದಾರೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೇ ಜನಪ್ರತಿನಿಧಿಗಳು ಯುವನಿಧಿಗೆ ಚಾಲನೆ ಕಾರ್ಯಕ್ರಮವೂ ನಿಗದಿಯಾಗಿದೆ. ಸಿಎಂ ಅವರು ಚಾಲನೆ ನೀಡಿದ ಬಳಿಕ ಮಂಗಳವಾರದಿಂದಲೇ ನೋಂದಣಿ ಶುರುವಾಗಲಿದೆ.
ಪದವೀಧರ ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆಯ ನೆರವು ನೀಡುವ ನಮ್ಮ ಸರ್ಕಾರದ 5ನೇ ಗ್ಯಾರಂಟಿ "ಯುವನಿಧಿ" ಯೋಜನೆಯ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳಲಿದೆ. ಆರ್ಥಿಕ ಸಂಕಷ್ಟದ ನಡುವೆ ಕನಸಿನ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನರು ಯೋಜನೆಗೆ ನೊಂದಾಯಿಸಿಕೊಳ್ಳುವ ಮೂಲಕ ಸದುಪಯೋಗ ಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಸಮೀಪದ ಆನ್‌ಲೈನ್‌ಸೆಂಟರ್‌ಗಳಿಗೆ ತೆರಳಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವೇ ನೀವೇ ಖುದ್ದು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅರ್ಜಿ ಸಲ್ಲಿಸಿ ಪರಿಶೀಲನೆ ಬಳಿಕ ಅರ್ಹರಾದವರಿಗೆ 2024ರ ಜನವರಿ ತಿಂಗಳಿನಿಂದಲೇ ಯುವನಿಧಿ ಸಹಾಯಧನ ಬ್ಯಾಂಕ್‌ಗಳ ಖಾತೆಗೆ ಬರಲಿದೆ.
ಈ ವರ್ಷದಲ್ಲಿ ಈಗಾಗಲೇ ಪದವಿ, ಡಿಪ್ಲೊಮಾ ಮುಗಿಸಿದವರಲ್ಲಿ ಸುಮಾರು 5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದು, ಅವರು ತಮ್ಮ ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ಪದವಿ/ಡಿಪ್ಲೊಮಾ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪತ್ರ, ಉದ್ಯೋಗ ಇಲ್ಲದ ಬಗ್ಗೆ ನೋಟರಿಯಿಂದ ಪ್ರಮಾಣ ಪತ್ರ ಇಲ್ಲವೇ ಸ್ವಯಂ ದೃಢೀಕರಣ ಪತ್ರ ಸಲ್ಲಿಸಲು ಅವಕಾಶವಿದೆ.
ಉಚಿತವಾಗಿ ಕರ್ನಾಟಕ ಒನ್,ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಯುವನಿಧಿಗೆ ಅರ್ಹರು ನೊಂದಾಯಿಸಿಕೊಳ್ಳಬಹುದು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಮಾಸಿಕ ನಿರುದ್ಯೋಗ ದೃಢೀಕರಣ ಕಡ್ಡಾಯ. ತಪ್ಪು ಮಾಹಿತಿ ನೀಡಿದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಯುವನಿಧಿಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : https://sevasindhu.karnataka.gov.in
ಸಹಾಯವಾಣಿ ಸಂಖ್ಯೆ 1800 599 9918
ನಿಬಂಧನೆಗಳು ಹೀಗಿವೆ
- ಪದವಿ ಇಲ್ಲವೇ ಡಿಪ್ಲೊಮಾ ಮುಗಿಸಿ ಆರು ತಿಂಗಳು ಕಳೆದರೂ ಉದ್ಯೋಗ ಲಭಿಸಿದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.
- ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಈ ಉದ್ಯೋ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ.
- ಭತ್ಯೆಯನ್ನು ನೇರ ಬ್ಯಾಂಕ್ ಖಾತೆಗೆ( DBT) ವರ್ಗ ಮಾಡಲಾಗುತ್ತದೆ.
- ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
- ನೀವು ನಿರುದ್ಯೋಗಿಗಳು ಎನ್ನುವುದಕ್ಕೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾಗುವವರಿಗೆ ದಂಡ ವಿಧಿಸಲಾಗುತ್ತದೆ.
ಅರ್ಹರು ಯಾರು
- ಇದು ಗರಿಷ್ಠ ಎರಡು ವರ್ಷದ ಅವಧಿಗೆ ಭತ್ಯೆಯನ್ನು ನೀಡುವ ಯೋಜನೆ
- 2023ರ ಸಾಲಿನಲ್ಲಿ ಉತ್ತೀರ್ಣಯಾದವರು ಅರ್ಜಿ ಸಲ್ಲಿಸಲು ಅರ್ಹರು
- ತೇರ್ಗಡೆಯಾದ ದಿನಾಂಕದಿಂದ 180 ದಿನಗಳ ಕಳೆದಿದ್ದರೂ ಉದ್ಯೋಗ ಸಿಗದೇ ಇದ್ದವರು
- ಪದವೀಧರ ನಿರುದ್ಯೋಗಿಗಳು ವೃತ್ತಿಪರ ಕೋರ್ಸ್ ಮುಗಿಸಿದ ಯುವಕರು. ಇವರಿಗೆ 3 ಸಾವಿರ ರೂ. ಮಾಸಿಕ ಭತ್ಯೆ ಸಿಗಲಿದೆ.
- ಇದೇ ಅವಧಿಯಲ್ಲಿ ಡಿಪ್ಲೋಮಾ ಪಾಸಾಗಿ ಉದ್ಯೋಗ ಸಿಗದವರು ಅರ್ಜಿ ಸಲ್ಲಿಸಬಹುದು. ಇವರಿಗೆ 1500 ರೂ. ನಿರುದ್ಯೋಗ ಭತ್ಯೆ ಮಾಸಿಕ ಸಿಗಲಿದೆ.
ಇವರು ಅರ್ಜಿ ಸಲ್ಲಿಸುವುದು ಬೇಡ
- ಉನ್ನತ ವ್ಯಾಸಂಗಕ್ಕೆ ದಾಖಲಾಗಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸಿದವರು
- ಶಿಶುಕ್ಷು( Apprentice) ವೇತನವನ್ನು ಪಡೆಯುತ್ತಿರುವವರು
- ಸರ್ಕಾರಿ ಇಲ್ಲವೇ ಖಾಸಗಿ ವಲಯದಲ್ಲಿ ಈಗಾಗಲೆ ಉದ್ಯೋಗ ಪಡೆಯುತ್ತಿರುವವರು
- ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು.
ಮೊದಲ ಕಂತು ಸಿಗೋದೆಂದು
ನೋಂದಣಿ ಮಾಡಿಕೊಂಡವರಿಗೆ ಮೊದಲ ಕಂತಿನ ಭತ್ಯೆ 2024ರ ಜನವರಿ 12ರಂದು ನೇರವಾಗಿ ಖಾತೆಗೆ ಜಮಾವಣೆಯಾಗಲಿದೆ.
ಅಂದು ವಿವೇಕಾನಂದ ಅವರ ಜನುಮ ದಿನದಂದು ರಾಷ್ಟ್ರೀಯ ಯುವ ದಿನವಾಗಿ ಆಚರಿಸುವುದರಿಂದ ಅಂದೇ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ ಎಂದು ಕರ್ನಾಟಕದ ಕೌಶಲಾಭಿವೃದ್ದಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.