logo
ಕನ್ನಡ ಸುದ್ದಿ  /  ಕರ್ನಾಟಕ  /  Education News: 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಪಾಸ್; ಮುಂದಿನ ತರಗತಿಗೆ ಮುಂದುವರೆಸಲು ಅನುಮತಿ

Education News: 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಪಾಸ್; ಮುಂದಿನ ತರಗತಿಗೆ ಮುಂದುವರೆಸಲು ಅನುಮತಿ

Umesha Bhatta P H HT Kannada

May 21, 2024 07:05 AM IST

google News

5, 8 ಮತ್ತು 9 ತರಗತಿ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ತೇರ್ಗಡೆಯಾಗಿದ್ದಾರೆ.

    • ಕರ್ನಾಟಕದಲ್ಲಿ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದ 5 8 ಮತ್ತು 9 ತರಗತಿಗಳ ಪರೀಕ್ಷೆ ಫಲಿತಾಂಶದ ವಿವಾದಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ತೆರೆ ಎಳೆದಿದೆ. 
5, 8 ಮತ್ತು 9 ತರಗತಿ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ತೇರ್ಗಡೆಯಾಗಿದ್ದಾರೆ.
5, 8 ಮತ್ತು 9 ತರಗತಿ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ತೇರ್ಗಡೆಯಾಗಿದ್ದಾರೆ.

ಬೆಂಗಳೂರು: ಇದು ಶಾಲಾ ವಿದ್ಯಾರ್ಥಿಗಳು ಖುಷಿ ಪಡುವ ವಿಷಯ. ರಾಜ್ಯದ ಎಲ್ಲ ಶಾಲೆಗಳ 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ಹಿಂದೆ 2023-24ನೇ ಸಾಲಿನ ಫಲಿತಾಂಶವನ್ನು ರಾಜ್ಯದ ಎಲ್ಲ ಶಾಲೆಗಳಲ್ಲಿ ಏಪ್ರಿಲ್ 8ರಂದು ಪ್ರಕಟಿಸುವಂತೆ ಸೂಚಿಸಲಾಗಿತ್ತು. ಆದರೆ, ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಇನ್ನೂ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿಲ್ಲ. ಅಂತಿಮ ತೀರ್ಪು ಬಾಕಿ ಇದೆ.

ಪ್ರಸ್ತುತ 2023- 24ನೇ ಸಾಲಿನ ಶೈಕ್ಷಣಿಕ ವರ್ಷ ಕೊನೆಗೊಳ್ಳುತ್ತಿದ್ದು,2024ರ ಮೇ 29 ರಿಂದ 2024- 25 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ.

ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶ ಪ್ರಕಟವಾಗದಿರುವ ಹಿನ್ನೆಲೆಯಲ್ಲಿ 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ತರಗತಿಗೆ ಪ್ರವೇಶ, ದಾಖಲಾತಿ, ಪ್ರವೇಶ ಶುಲ್ಕ ಪಾವತಿ ಹಾಗೂ ಬೇರೆ ಸ್ಥಳಗಳಿಗೆ ವರ್ಗಾವಣೆಗೆ ಪ್ರಮಾಣ ಪತ್ರ (ಟಿಸಿ), ಪ್ರಗತಿ ಪತ್ರ, ವ್ಯಾಸಂಗ ಪ್ರಮಾಣ ಪತ್ರ ವಿತರಿಸಲು ಶಾಲೆಗಳಿಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಶಾಲೆಗಳಲ್ಲಿ ನಡೆದಿರುವ FA- 1, FA-2, FA-3, FA-4 ಮತ್ತು SA-1 ಗಳ ಮೌಲ್ಯಾಂಕನದ ಆಧಾರದ ಮೇಲೆ ಮಕ್ಕಳನ್ನು ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರೆಸಲು ಅವಕಾಶ ಕಲ್ಪಿಸುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಬಿ.ಬಿ.ಕಾವೇರಿ ಸೂಚನೆ ನೀಡಿದ್ದಾರೆ.

ಪೋಷಕರು, ಶಾಲಾ ಆಡಳಿತ ಮಂಡಳಿ ಮತ್ತು ಶಾಲೆಗಳ ಮುಖ್ಯಸ್ಥರು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ರಜೆ ಅವಧಿ ಕಡಿತ ಮಾಡಬೇಡಿ

ರಾಜ್ಯದ ಕೆಲವು ಖಾಸಗಿ ಶಾಲೆಗಳು ಬೇಸಿಗೆ ರಜೆ ಅವಧಿಯನ್ನು ಕಡಿತಗೊಳಿಸಿ ಶಾಲೆ ಆರಂಭಿಸಿರುವ ಕ್ರಮ ಸರಿಯಾಗಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲೆಗಳನ್ನು ನಿಗದಿಯಂತೆಯೇ ಮೇ 29ರಿಂದಲೇ ಆರಂಭಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.‌

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಏಪ್ರಿಲ್‌ 11ರಿಂದ ಮೇ 28ರ ವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಇದರ ನಡುವೆಯೇ ಕೆಲವು ಶಾಲೆಗಳು ರಜೆ ಕಡಿತಗೊಳಿಸಿದ್ದವು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಿಗದಿಯಂತೆಯೇ ಶೈಕ್ಷಣಿಕ ರಜೆ ಮುಂದುವರಿಸುವಂತೆ ಕೋರಿತ್ತು.

ಈ ಹಿಂದೆ ನಿಗದಿ ಮಾಡಿದಂತೆಯೇ ಶಾಲೆಗಳನ್ನು ಆರಂಭಿಸಲು ಎಲ್ಲ ಉಪ ನಿರ್ದೇಶಕರು ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಸೂಚನೆ ನೀಡಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ