Bangalore Mysuru expressway: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 24 ಮೇಲ್ಸೇತುವೆಗಳ ನಿರ್ಮಾಣಕ್ಕೆ ಅಸ್ತು: ಎಲ್ಲೆಲ್ಲಿ ಬರಲಿವೆ ಸೇತುವೆ
Dec 12, 2023 11:29 AM IST
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ 24 ಮೇಲ್ಸೇತುವೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
- Bangalore Mysuru express way overbridge ಬೆಂಗಳೂರು ಹಾಗೂ ಮೈಸೂರು ನಡುವೆ ಬರುವ ಹಲವಾರು ಹಳ್ಳಿಗಳಲ್ಲಿ ರಸ್ತೆ ದಾಟಲು ಅಡ್ಡಿಯಾಗುತ್ತಿದ್ದುದರಿಂದ ಹೆದ್ದಾರಿಯಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ನಡುವಿನ ಗ್ರಾಮಸ್ಥರ ಒತ್ತಾಯಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಮಣಿದಿದೆ.
ತೀರ ಅಗತ್ಯವಿರುವ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆ ವ್ಯಾಪ್ತಿಯ ಎಕ್ಸ್‌ಪ್ರೆಸ್‌ವೇನಲ್ಲಿ 24 ಮೇಲ್ಸೇತುವೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಎಕ್ಸ್‌ಪ್ರೆಸ್‌ವೇ ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳಿಂದ ದೂರುಗಳು ಮತ್ತು ಬೇಡಿಕೆಗಳು ಬಂದ ನಂತರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಮೇಲ್ಸೇತುವೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯೋಜನೆಯನ್ನು ರೂಪಿಸುವಂತೆ ಈಗಾಗಲೇ ರಾಜ್ಯ ಸರ್ಕಾರವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ ) ಕೇಳಿಕೊಂಡಿದೆ. 2024ರ ಜನವರಿ ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಒಂದು ವೇಳೆ ಮೇಲ್ಸೇತುವೆಗಳು ನಿರ್ಮಾಣವಾದರೆ ಎಕ್ಸ್‌ಪ್ರೆಸ್‌ವೇ ಅಕ್ಕಪಕ್ಕದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ.
ಸತೀಶ್ ಜಾರಕಿಹೊಳಿ ಹೇಳಿಕೆ
ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಮಧು ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಕ್ಸ್‌ಪ್ರೆಸ್‌ವೇ ದಾಟಲು ಅನುಕೂಲವಾಗುವಂತೆ ಅಡ್ಡಲಾಗಿ ಒಟ್ಟು 24 ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮಸ್ಥರು ಬೇಲಿಯಿಂದ ಹಾರುವುದು ಮತ್ತು ಅವುಗಳನ್ನು ಹಾನಿಗೊಳಿಸುವುದು ತಪ್ಪುತ್ತದೆ. ಬೆಂಗಳೂರು ನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಅವರು ವಿವರಣೆ ನೀಡಿದ್ದಾರೆ.
ಎಲ್ಲೆಲ್ಲಿ ಮೇಲ್ಸೇತುವೆಗಳು
ಬೆಂಗಳೂರು ನಗರ ಜಿಲ್ಲೆಯ ಕಣಮಿಣಿಕೆ, ರಾಮನಗರ ಜಿಲ್ಲೆಯ ಮಂಚನಾಯಕನ ಹಳ್ಳಿ, ಕಳ್ಳುಗೋಪಹಳ್ಳಿ, ಹುಲತ್ತೂರು, ಹೊಸದೊಡ್ಡಿ, ಮಾದೇಪುರ ಮತ್ತು ದಾಬನಗುಂಡಿ, ಮಂಡ್ಯ ಜಿಲ್ಲೆಯ ಮದ್ದೂರು, ಉಮ್ಮಡಹಳ್ಳಿ ಗೇಟ್, ಇಂಡುವಾಳ, ಸುಂಡಹಳ್ಳಿ, ರಾಗಿ ಮುದ್ದನಹಳ್ಳಿ ಮತ್ತು ಗರುಡನಉಕ್ಕಡದಲ್ಲಿ ಮೇಲ್ಸೇತುವೆಗಳು ನಿರ್ಮಾಣವಾಗಲಿವೆ.
ಮಾರ್ಚ್‌ನಲ್ಲಿ ಉದ್ಘಾಟನೆ
ಇದೇ ವರ್ಷ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪ್ರೆಸ್ ವೇ ಉದ್ಘಾಟಿಸಿದ್ದರು. 119 ಕಿಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ ರಸ್ತೆಯನ್ನು ರೂ. 8,408 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 5 ಬೈಪಾಸ್ ಗಳು, 11 ಮೇಲ್ಸೇತುವೆಗಳು, 64 ಅಂಡರ್‌ಪಾಸ್‌ಗಳು, ಮತ್ತು 42 ಸಣ್ಣ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.
ಆರು ಪಥಗಳನ್ನು ಹೊಂದಿರುವ ಈ ಎಕ್ಸ್‌ಪ್ರೆಸ್‌ವೇನ ಎರಡೂ ಬದಿಯಲ್ಲಿ ಹೆಚ್ಚುವರಿ ದ್ವಿಪಥದ ಸರ್ವಿಸ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ಮತ್ತು ಆಟೋ ಸಂಚಾರವನ್ನು ನಿಷೇಧಿಸಲಾಗಿದೆ.
ಆದರೆ ರಸ್ತೆ ದಾಟಲು ಮೇಲ್ಸೇತುವೆಗಳು ಇಲ್ಲದಿರುವುದು ಎಕ್ಸ್‌ಪ್ರೆಸ್‌ವೇ ಅಕ್ಕಪಕ್ಕದ ಗ್ರಾಮಸ್ಥರಿಗೆ ತೊಂದರೆಯಾಗಿತ್ತು. ಇದೇ ಕಾರಣಕ್ಕೆ ಸ್ಥಳೀಯರು ತಡೆಗೋಡೆಯನ್ನು ಮುರಿದು ಹೆದ್ದಾರಿಯನ್ನು ದಾಟುತ್ತಿದ್ದರು. ಆರಂಭದಲ್ಲಿ ಈ ಕಾರಣಕ್ಕೂ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು.
ಹಾನಿ ಮಾಡದಂತೆ ಸಂಸದ ಮನವಿ
ಈ ಹಿಂದೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಎಕ್ಸ್‌ಪ್ರೆಸ್‌ವೇಯಲ್ಲಿ ಇರುವ ಬೇಲಿಗಳಿಗೆ ಹಾನಿ ಮಾಡದಂತೆ ಹಲವಾರು ಗ್ರಾಮಗಳ ಗ್ರಾಮಸ್ಥರಿಗೆ ಮನವಿ ಮಾಡಿಕೊಂಡಿದ್ದರು. ಹೆದ್ದಾರಿಯ ಎರಡೂ ಬದಿಗಳಲ್ಲಿ ನಿರ್ಮಿಸಿರುವ ಕಂಬಗಳ ಮೇಲಿನ ಬ್ರೇಸಿಂಗ್‌ಗಳನ್ನು ಕಳ್ಳತನ ಮಾಡಲಾಗುತ್ತಿದೆ. ಇದು ಸರಿಯಲ್ಲ. ಈ ರೀತಿ ಕಳ್ಳತನ ಆಗುತ್ತಿದೆ ಎಂದು ದೂರು ನೀಡಲು ನನಗೂ ನೋವಾಗುತ್ತದೆ ಎಂದು ತಿಳಿಸಿದ್ದರು.
ರಸ್ತೆ ನಿರ್ಮಾಣ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವುದು ನಿಮ್ಮ ಹಣದಲ್ಲಿ. ಮತ್ತೆ ಅವುಗಳನ್ನು ಅಳವಡಿಸುವುದೂ ನಿಮ್ಮ ಹಣದಲ್ಲಿಎನ್ನುವುದನ್ನು ಮರೆಯಬೇಡಿ ಎಂದು ಕಿವಿ ಮಾತು ಹೇಳಿದ್ದರು.
ಇನ್ನು ಮುಂದಾದರೂ ಮೂಲಭೂತ ಸೌಕರ್ಯಗಳನ್ನು ಹಾಳು ಮಾಡಬೇಡಿ. ಬದಲಾಗಿ ಎಚ್ಚರಿಕೆಯಿಂದ ಬಳಸಿ. ಇದರಿಂದ ದೇಶಕ್ಕೆ ಒಳ್ಳೆಯದು ಎಂದು ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ವರದಿ:ಎಚ್.ಮಾರುತಿ, ಬೆಂಗಳೂರು)