logo
ಕನ್ನಡ ಸುದ್ದಿ  /  ಕರ್ನಾಟಕ  /  Valmiki Corporation Scam: ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ, ಎಸ್‌ಐಟಿ ರಚಿಸಿದ ಸರ್ಕಾರ, ಯಾವ್ಯಾವ ಅಧಿಕಾರಿಗಳಿದ್ದಾರೆ

Valmiki Corporation Scam: ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ, ಎಸ್‌ಐಟಿ ರಚಿಸಿದ ಸರ್ಕಾರ, ಯಾವ್ಯಾವ ಅಧಿಕಾರಿಗಳಿದ್ದಾರೆ

Umesha Bhatta P H HT Kannada

May 31, 2024 07:30 PM IST

google News

ಎಸ್‌ಐಟಿಗೆ ಮನೀಶ್‌ ಕರ್ಬೀಕರ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಿದೆ.

    • ಶಿವಮೊಗ್ಗದಲ್ಲಿ ಆತ್ಮಹತ್ಯೆಮಾಡಿಕೊಂಡ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಸಾವಿನ ಪ್ರಕರಣ ಹಾಗೂ ಹಗರಣದ ಕುರಿತು ತನಿಖೆಗೆ ಎಸ್‌ಐಟಿ ರಚಿಸಲಾಗಿದ್ದು. ಎಡಿಜಿಪಿ ಮನೀಶ್‌ ಕರ್ಬೀಕರ್‌ ನೇತೃತ್ವ ವಹಿಸಲಿದ್ದಾರೆ.
ಎಸ್‌ಐಟಿಗೆ ಮನೀಶ್‌ ಕರ್ಬೀಕರ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಿದೆ.
ಎಸ್‌ಐಟಿಗೆ ಮನೀಶ್‌ ಕರ್ಬೀಕರ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಿದೆ.

ಬೆಂಗಳೂರು: ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕ ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಪ್ರಕರಣ ಹಾಗೂ ನಿಗಮದಲ್ಲಿ ನಡೆದಿರುವ ಹಗರಣದ ಕುರಿತಾಗಿ ತನಿಖೆ ನಡೆಸಲು ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡ( SIT) ರಚಿಸಿದೆ. ಈ ಕುರಿತು ಅಧಿಕೃತ ಆದೇಶ ಹೊರ ಬಿದ್ದಿದೆ. ತನಿಖೆಗೆ ಎಸ್‌ ಐಟಿ ರಚಿಸಿರುವ ಬಗ್ಗೆ ಕರ್ನಾಟಕ ಒಳಾಡಳಿತ ಇಲಾಖೆ ಉಪ ಕಾರ್ಯದರ್ಶಿ ಬಿ.ಕೆ.ಭುವನೇಂದ್ರಕುಮಾರ್‌ ಅವರು ಆದೇಶವನ್ನು ಹೊರಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಗಡಳ ಅಭಿವೃದ್ದಿ ನಿಗಮ ನಿಯಮಿತದ ಅಧೀಕ್ಷಕರಾಗಿದ್ದ ಪಿ.ಚಂದ್ರಶೇಖರನ್‌ ಅವರು ನಿಗಮದ ಅನುದಾನ ಹಣ ದುರುಪಯೋಗವಾಗಿರುವ ಆರೋಪಿಸಿ ಡೆತ್‌ ನೋಟ್‌ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಶಿವಮೊಗ್ಗದ ವಿನೋಬಾನಗರ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣದಲ್ಲಿ ಅನುದಾನವು ಬ್ಯಾಂಕ್‌ ಮೂಲಕ ದುರ್ಬಳಕೆಯಾಗಿರುವ ಬಗ್ಗೆ ನಿಗಮದ ಮುಖ್ಯ ನಿಬಂಧಕ ಎ.ರಾಜಶೇಖರ್‌ ಅವರು ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ನೀಡಿದ್ದು. ಅಲ್ಲಿಯೂ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣಗಳ ಕುರಿತು ತನಿಖೆಗೆ ಎಸ್‌ಐಟಿ ರಚಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಈ ಪ್ರಕರಣದಲ್ಲಿ ಆರ್ಥಿಕ ಅವ್ಯವಹಾರಗಳ ಗಂಭೀರತೆಯನ್ನು ಸರ್ಕಾರವು ಪರಿಗಣಿಸಿ ಈ ಕುರಿತು ಸಮಗ್ರ ತನಿಖೆಯನ್ನು ನಡೆಸಲು ತಾಂತ್ರಿಕ ಪರಿಣಿತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡವನು ರಚಿಸಲಾಗಿದೆ. ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಎಡಿಜಿಪಿ ಮನೀಷ್‌ ಕರ್ಬೀಕರ್‌ ಅವರ ನೇತೃತ್ವದಲ್ಲಿ ಎಸ್‌ ಐಟಿ ಕೆಲಸ ಮಾಡಲಿದೆ.

ಇವರೊಂದಿಗೆ ಸದಸ್ಯರಾಗಿ ಐಪಿಎಸ್‌ ಅಧಿಕಾರಿಗಳದ ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಶಿವಪ್ರಕಾಶ್‌ ದೇವರಾಜು, ಗುಪ್ತವಾತ್ತೆ ಎಸ್ಪಿ ಹರಿರಾಮ ಶಂಕರ್‌, ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಅವರು ಕಾರ್ಯನಿರ್ವಹಿಸಲಿದ್ದಾರೆ.

ಆತ್ಮಹತ್ಯೆ ಹಾಗೂ ಹಣ ದುರುಪಯೋಗದ ಕುರಿತಂತೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಬೇಕು, ಈ ತನಿಖಾ ತಂಡಕ್ಕೆ ಇತರೆ ಸದಸ್ಯರ ಅವಶ್ಯಕತೆ ಇದ್ದಲ್ಲಿ ಡಿಜಿಪಿ ಅವರ ಅನುಮೋದನೆಯೊಂದಿಗೆ ತನಿಖಾ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ವಿಶೇಷ ತನಿಖಾ ತಂಡವು ಸಿಐಡಿಯಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಡಿಜಿಪಿ ಅವರ ಮೇಲ್ವಿಚಾರಣೆಯಲ್ಲಿ ತನಿಖಾ ತಂಡ ಕಾರ್ಯನಿರ್ವಹಿಸಲಿದೆ. ವಿಶೇಷ ತನಿಖಾ ತಂಡವು ಆತ್ಮಹತ್ಯೆ ಹಾಗೂ ಹಗರಣದ ಕುರಿತು ತನಿಖೆ ನಡೆಸುವುದು. ಆರ್ಥಿಕ ಅವ್ಯವಹಾರಗಳ ಹಾಗೂ ಸಂಬಧಿತ ಇತರೆ ಅವ್ಯವಹಾರಗಳ ಸಮಗ್ರ ತನಿಖೆಯನ್ನು ನಡೆಸಿ ತನಿಖಾ ವರದಿಯನ್ನು ಡಿಜಿಪಿ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.

ಈ ಪ್ರಕರಣ ಈಗಾಗಲೇ ರಾಜಕೀಯ ಸ್ವರೂಪ ಪಡೆದಿದ್ದು, ಸಚಿವರ ರಾಜೀನಾಮೆಗೂ ಬಿಜೆಪಿ ಒತ್ತಾಯಿಸಿ ಗಡುವು ನೀಡಿದೆ. ಈ ಕಾರಣದಿಂದ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ನೀಡಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ