Bangalore Tumkur Metro: ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ರೈಲು ವಿಸ್ತರಣೆ; ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ
Mar 29, 2024 06:48 PM IST
ಬೆಂಗಳೂರು ತುಮಕೂರು ನಡುವೆ ಮೆಟ್ರೋ ರೈಲು ಯೋಜನೆ ವಿಸ್ತರಣೆ ಚಟುವಟಿಕೆ ಶುರುವಾಗಿದೆ.
- ಬೆಂಗಳೂರು ಹಾಗೂ ತುಮಕೂರು ನಗರಗಳ ನಡುವಿನ ಸಂಚಾರನ್ನು ಸರಳಗೊಳಿಸಲು ಮೆಟ್ರೋ ವಿಸ್ತರಣೆ ಯೋಜನೆ ರೂಪಿಸಲಾಗಿದೆ. ಇದರ ವಿವರ ಇಲ್ಲಿದೆ.
- ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಆಸಕ್ತಿ ಹೊಂದಿರುವ ಬಗ್ಗೆ ಈ ಹಿಂದೆ ತಿಳಿಸಲಾಗಿತ್ತು. ಇದೀಗ ಈ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಾಗಿದೆ. ಬೆಂಗಳೂರಿನಿಂದ ತುಮಕೂರು ರಸ್ತೆಯ ಮಾದಾವರದವರೆಗೆ ಹಸಿರು ಮೆಟ್ರೋ ಸಂಪರ್ಕ ಇದೆ. ಅಲ್ಲಿಂದ ತುಮಕೂರಿಗೆ 52.41 ಕಿ.ಮೀ ದೂರವಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ಸಂಪರ್ಕ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೇ ಮೆಟ್ರೋ ನಿರ್ಮಾಣ ಕಲ್ಪಿಸಬಹುದಾಗಿದೆ. 52.41 ಕಿ.ಮೀ. ಮಾರ್ಗದಲ್ಲಿ, 19 ಎತ್ತರಿಸಿದ ನಿಲ್ದಾಣಗಳನ್ನು ಗುರುತಿಸಲಾಗಿದೆ.
ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ಯೋಜನೆಗೆ ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಕರೆಯಲಾಗಿದೆ. ಮಾರ್ಚ್ 1 ರಿಂದ ಟೆಂಡರ್ ದಾಖಲೆಗಳನ್ನು ಬಿಎಂಆರ್‌ಸಿಎಲ್(Bangalore Metro Rail Corporation Limited ) ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಬಿಡ್ ಸಲ್ಲಿಸಲು ಏಪ್ರಿಲ್ 2 ಅಂತಿಮ ದಿನವಾಗಿದೆ.
ಇತ್ತೀಚೆಗೆ ಮಂಡಿಸಿದ 2024-25ರ ತಮ್ಮ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೋ ಸಂಪರ್ಕ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ಸಂಪರ್ಕ ನಿರ್ಮಾಣವಾಗುವ ಸಾಧ್ಯತೆಗಳಿವೆ.
ತುಮಕೂರು-ಬೆಂಗಳೂರು ನಡುವೆ ಮೆಟ್ರೋ ಜಾರಿಯಿಂದ ಪ್ರತಿನಿತ್ಯ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ತಡೆರಹಿತ ಪ್ರಯಾಣ ಮಾಡಲು ಅನುಕೂಲ ಆಗುವುದರ ಜೊತೆಗೆ ಈ ಮಾರ್ಗದಲ್ಲಿ ಬಂಡವಾಳ ಹೂಡಿಕೆಗೆ ಸಹಾಯವಾಗಲಿದೆ. ಬೆಂಗಳೂರನ್ನು ಬಿಟ್ಟು ಆಚೆಯೂ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರಲಿದ್ದಾರೆ. ಉತ್ತಮ ಸಾರಿಗೆ ಸೌಲಭ್ಯ ಬಂಡವಾಳ ಆಕರ್ಷಿಸಲು ಮೊದಲ ಸಾಧನವಾಗಿದೆ.
ಬೆಂಗಳೂರಿನ ಮೇಲೆ ಹೊರೆ ತಗ್ಗಲಿದೆ, ವಾಹನ ದಟ್ಟಣೆ ಕಡಿಮೆಯಾಗಲಿದೆ ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ.ಒಮ್ಮೆ ಮೆಟ್ರೋ ಯೋಜನೆ ಕಾರ್ಯರೂಪಕ್ಕೆ ಬಂದರೆ ತುಮಕೂರು ನಗರ ಬೆಂಗಳೂರಿನ ಉಪನಗರವಾಗಿ ಹೊರಹೊಮ್ಮಲಿದೆ.ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೇ ಮೆಟ್ರೋ ನಿರ್ಮಾಣ ಕಲ್ಪಿಸಬಹುದಾಗಿದೆ.
19 ನಿಲ್ದಾಣಗಳು ಯಾವು ಎಂದರೆ: ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ನೆಲಮಂಗಲ ಬಸ್ ನಿಲ್ದಾಣ, ನೆಲಮಂಗಲ ರಾ.ಹೆ. ಕೊನೆಯ ಭಾಗ, ಬೂದಿಹಾಳ, ಟಿ.ಬೇಗೂರು, ಕುಲುವನಹಳ್ಳಿ, ಸೋಂಪುರ ಕೈಗಾರಿಕಾ ಪ್ರದೇಶ,ಡಾಬಸ್‌ಪೇಟೆ, ನಲ್ಲಯ್ಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿ, ಕ್ಯಾತ್ಸಂದ್ರ, ಬಟವಾಡಿ, ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ತುಮಕೂರು ಬಸ್ ನಿಲ್ದಾಣ.
ಆರಂಭದಲ್ಲಿ ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ಮಾದಾವರದಿಂದ ಕುಣಿಗಲ್ ಕ್ರಾಸ್ 11 ಕಿಮೀವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ ತುಮಕೂರು ಜಿಲ್ಲೆಯ ಕೊರಟಗೆರೆ ಶಾಸಕ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ ಮೆಟ್ರೋ ಜಾಲವನ್ನು ತಮ್ಮ ತವರು ಜಿಲ್ಲೆ ತುಮಕೂರಿಗೆ ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ.
ಬಂಡವಾಳ ವೆಚ್ಚ, ಸಂಚಾರ ದಟ್ಟಣೆ, ಮೆಟ್ರೋ ಹಳಿಗಳ ಮಾರ್ಗ, ವಶಪಡಿಸಿಕೊಳ್ಳಬೇಕಾದ ಆಸ್ತಿಗಳ ಸಂಖ್ಯೆ ಮತ್ತು ಭೂಮಿ ವಶಪಡಿಸಿಕೊಳ್ಳುವಲ್ಲಿ ಎದುರಾಗುವ ತೊಂದರೆಗಳನ್ನು ಕುರಿತು ಟೆಂಡರ್ ಪಡೆಯುವ ಸಂಸ್ಥೆ ಅಧ್ಯಯನ ನಡೆಸಲಿದೆ. ಈ ವರದಿಯು 3-4 ತಿಂಗಳಲ್ಲಿ ಸಿದ್ದಗೊಳ್ಳಲಿದ್ದು, ನಂತರದ ಕ್ರಮವನ್ನು ಸಕಾರ ನಿರ್ಧರಿಸುತ್ತದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ಈ ಮಾರ್ಗ ಎರಡು ಪ್ರಮುಖ ನಗರಗಳ ನಡುವಿನದ್ದಾಗಿದ್ದು, ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ ಅಡಿಯಲ್ಲಿ ನಿರ್ಮಾಣವಾಗಲಿದೆ. ಅಂದರೆ ದೆಹಲಿ ಮೀರತ್ ನಡುವಿನ ಸೆಮಿ ಹೈ ಸ್ಪೀಡ್ ಮೆಟ್ರೋ ಮಾರ್ಗದಂತೆ ಈ ಮಾರ್ಗವೂ ಇರಲಿದೆ. ಇದರ ಪ್ರಕಾರ ಮೆಟ್ರೋ ಸ್ಟೇಷನ್ ಗಳನ್ನು 5ರಿಂದ 10 ಕಿಮೀ ಗೆ ಒಂದರಂತೆ ನಿಲ್ದಾಣವನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಪ್ರಯಾಣದ ಸಮಯ ಉಳಿತಾಯವಾಗಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ವರದಿ: ಎಚ್. ಮಾರುತಿ, ಬೆಂಗಳೂರು