IFS Transfers: ಕರ್ನಾಟಕದಲ್ಲಿ ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ, ಯಾರು ಎಲ್ಲಿಗೆ
Feb 17, 2024 03:13 PM IST
ಕರ್ನಾಟಕದಲ್ಲಿ ಐಎಫ್‌ಎಸ್ ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ.
- ಕರ್ನಾಟಕದಲ್ಲಿ ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು, ಇನ್ನಿಬ್ಬರು ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ.
ಬೆಂಗಳೂರು: ಕರ್ನಾಟಕ ಸರ್ಕಾರ ಕಳೆದ ವಾರವಿನ್ನೂ ಹತ್ತಕ್ಕೂ ಹೆಚ್ಚು ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಶನಿವಾರ ಮತ್ತೆ ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಈ ಬಾರಿ ಚಾಮರಾಜನಗರ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಳ್ಳಾರಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯನ್ನು ಪರಸ್ಪರ ವರ್ಗ ಮಾಡಲಾಗಿದೆ. ಈ ಇಬ್ಬರು ಸೋಮವಾರದಂದು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಎರಡು ವರ್ಷದಿಂದ ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಟಿ.ಹೀರಾಲಾಲ್ ಅವರನ್ನು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
2002 ನೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ, ದಾವಣಗೆರೆ ಜಿಲ್ಲೆಯವರಾದ ಟಿ.ಹೀರಾಲಾಲ್ ಈ ಹಿಂದೆ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು ಬಂಡೀಪುರ ರಾಷ್ಟ್ರೀಯ ಉದ್ಯಾನದ ನಿರ್ದೇಶಕರೂ ಆಗಿದ್ದರು. ಕರ್ನಾಟಕ ಲಂಬಾಣಿ ತಾಂಡಾಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಹೀರಾಲಾಲ್ ಕಾರ್ಯನಿರ್ವಹಿಸಿದ್ದರು. ಈಗ ಮತ್ತೆ ಚಾಮರಾಜನಗರ ವೃತ್ತಕ್ಕೆ ಬಂದಿದ್ದಾರೆ. ಚಾಮರಾಜನಗರ ಅರಣ್ಯ ವೃತ್ತವು ಬಂಡೀಪುರ, ಚಾಮರಾಜನಗರ, ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ.
ಇನ್ನು ಚಾಮರಾಜನಗರ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ನಾಯಕ್ ಅವರನ್ನು ಬಳ್ಳಾರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಿಯೋಜಿಸಲಾಗಿದೆ. ಕರ್ನಾಟಕ ಅರಣ್ಯ ಸೇವೆಯಿಂದ ಬಡ್ತಿ ಪಡೆದು ಚಂದ್ರಶೇಖರ್ ನಾಯಕ್ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾರೆ. ಬಳ್ಳಾರಿ ಅರಣ್ಯ ವೃತ್ತ ವ್ಯಾಪ್ತಿಗೆ ಐದು ಜಿಲ್ಲೆಗಳು ಬರುತ್ತವೆ. ಬಳ್ಳಾರಿ, ಕೊಪ್ಪಳ. ವಿಜಯನಗರ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯನ್ನು ಇದು ಒಳಗೊಂಡಿದೆ.