DKS CBI Enquiry: ಡಿಕೆಶಿ ವಿರುದ್ದ ಸಿಬಿಐ ತನಿಖೆ ಅನುಮತಿ ರದ್ದು: ಕರ್ನಾಟಕದ ಏಜೆನ್ಸಿಗಳಿಂದಲೇ ತನಿಖೆಗೆ ಸಂಪುಟ ನಿರ್ಧಾರ
Nov 24, 2023 07:04 AM IST
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಹಿಂದಿನ ಸರ್ಕಾರ ನೀಡಿದ್ದ ಸಿಬಿಐ ತನಿಖೆ ಆದೇಶವನ್ನು ಕರ್ನಾಟಕದ ಈಗಿನ ಸರ್ಕಾರ ವಾಪಾಸ್ ಪಡೆದಿದೆ.
- Karnataka Politics ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್( DK Shivakumar) ವಿರುದ್ದ ದಾಖಲಿಸಲಾಗಿದ್ದ ಪ್ರಕರಣದ ವಿಚಾರಣೆಗೆ ಸಿಬಿಐ ತನಿಖೆ( CBI Enquiry) ಅನುಮತಿಯನ್ನು ರದ್ದುಪಡಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದರೆ, ಈಗಿನ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ಇದು ರಾಜಕೀಯ ಸಂಘರ್ಷಕ್ಕೂ ವೇದಿಕೆಯಾಗಬಹುದು.
ಬೆಂಗಳೂರು: ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ.
ಆದಾಯ ಮಿರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕದ ತನಿಖಾ ಏಜೆನ್ಸಿಗಳಿದಂದಲೇ ತನಿಖೆ ನಡೆಸುವುದಕ್ಕೆ ಅನುಮತಿ ನೀಡಲಾಗಿದೆ. ಈ ನಿರ್ಧಾರ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ- ಜೆಡಿಎಸ್ ಪಕ್ಷಗಳ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಗಳು ಹೆಚ್ಚಿವೆ.
ನಿರ್ಧಾರ ಏನು
ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ಮೂರು ದಿನಗಳಲ್ಲಿ.ಅಧಿಕೃತ ಆದೇಶ ಹೊರಬೀಳಲಿದೆ.
ಡಿಕೆ ಶಿವಕುಮಾರ್ ಪ್ರಕರಣದ ಸಂಬಂಧ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಅಡ್ವೋಕೇಟ್ ಜನರಲ್ ಸಿಬಿಐಗೆ ವಹಿಸಲು ಸಮ್ಮತಿ ನೀಡಿದ್ದರು. ಆದರೆ ಈಗಿನ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ಅಭಿಪ್ರಾಯವನ್ನು ಆಧರಿಸಿ ಸರ್ಕಾರ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಇದರಿಂದ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಗುರುವಾರ ಸಂಜೆ 6 ರಿಂದ 9 ಗಂಟೆಯವರೆಗೆ ನಡೆದ ಸಂಪುಟ ಸಭೆಗೆ ಶಿವಕುಮಾರ್ ಹಾಜರಾಗಿರಲಿಲ್ಲ. ತಮಗೆ ಸಂಬಂಧಿಸಿದ ಪ್ರಕರಣವೊಂದನ್ನು ಕುರಿತು ಚರ್ಚೆ ನಡೆಯುವ ಕಾರಣದಿಂದ ಅವರು ಸಚಿವ ಸಂಪುಟ ಸಭೆಯಿಂದ ಅಂತರ ಕಾಯ್ದುಕೊಂಡಿದ್ದರು.
ಸಿಬಿಐ ಶೇ.90 ರಷ್ಟು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಈ ರೀತಿ ಹಿಂದಕ್ಕೆ ಪಡೆಯುವುದು ನ್ಯಾಯಾಂಗ ನಿಂದನೆಯಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕರ್ನಾಟಕದಲ್ಲೇ ತನಿಖೆ
ಸಿಬಿಐ ತನಿಖೆಯನ್ನು ಹಿಂಪಡೆದ ನಂತರ ಈ ಪ್ರಕರಣವನ್ನು ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಅಥವಾ ರಾಜ್ಯ ಪೊಲೀಸರಿಂದ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಶಿವಕುಮಾರ್ ವಿರುದ್ಧ ತನಿಖೆಯನ್ನು ಸಿಬಿಐ ಗೆ ವಹಿಸುವುದಕ್ಕೂ ಮುನ್ನ ಸಭಾಧ್ಯಕ್ಷರಿಂದ ಅನುಮತಿ ಪಡೆದಿರಲಿಲ್ಲ. ಕೇವಲ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇರೆಗೆ ಈ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು ಎಂದು ಸಂಪುಟದ ನಿರ್ಣಯಗಳನ್ನು ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಸಿಬಿಐಗೆ ವಹಿಸಿದ್ದು ಏಕೆ ಎಂಬುದಕ್ಕೆ ಸೂಕ್ತ ಕಾರಣ ಮತ್ತು ಅನಿವಾರ್ಯತೆಯನ್ನು ಸರ್ಕಾರ ತಿಳಿಸಿರಲಿಲ್ಲ. ಆದ್ದರಿಂದ ಇದೊಂದು ಕಾನೂನುಬಾಹಿರ ಕ್ರಮ ಎಂದು ಈಗಿನ ಸರ್ಕಾರ ಪರಿಗಣಿಸಿದ್ದು, ಈಗಿನ ಅಡ್ವೋಕೆಟ್ ಜನರಲ್ ಅವರ ಅಭಿಪ್ರಾಯ ಪಡೆದು ಹಿಂದಕ್ಕೆ ಪಡೆಯಲಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಹೋರಾಟ ಸಾಧ್ಯತೆ
ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದ್ದು, ಸರ್ಕಾರದ ಈ ಕ್ರಮ ಭಾರಿ ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳಿವೆ. ಶಿವಕುಮಾರ್ ವಿರುದ್ಧ ಸೆಟೆದು ನಿಂತಿರುವ
ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಎದುರಾಳಿಯ ವಿರುದ್ದ ಹೋರಾಟ ನಡೆಸಲು ಸಿಕ್ಕ ಅವಕಾಶವನ್ನು ಬಿಡಲಾರರು. ಬಿಜೆಪಿಯೂ ಸರ್ಕಾರ ದ ವಿರುದ್ಧ ಇಂದಿನಿಂದಲೇ ಹೋರಾಟ ನಡೆಸುವ ಸಾಧ್ಯತೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?
ದೇಶದ ಶ್ರೀಮಂತ ಶಾಸಕರಲ್ಲಿ ಡಿ.ಕೆ. ಶಿವಕುಮಾರ್ ಅವರೂ ಒಬ್ಬರಾಗಿದ್ದು, 1,413 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 2019, ಸೆಪ್ಟಂಬರ್ 25 ರಂದು ಅಂದಿನ ಅಡ್ವೋಕೇಟ್
ಜನರಲ್ ಪ್ರಭುಲಿಂಗ ನಾವದಗಿ ಅವರ ಸಲಹೆಯ ಮೇರೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಅನುಮತಿ ನೀಡಿದ್ದರು. ಅಂದಿನಿಂದಲೂ ಶಿವಕುಮಾರ್ ಇದೊಂದು ರಾಜಕೀಯ ಪ್ರೇರಿತ ತನಿಖೆ ಎಂದು ವಾದಿಸುತ್ತಲೇ ಬಂದಿದ್ದರು.
ಶಿವಕುಮಾರ್ ಅವರು 1ಏಪ್ರಿಲ್ 2013ರಿಂದ 30, ಏಪ್ರಿಲ್ 2018ರವರೆಗೆ ತಮ್ಮ ಆದಾಯಕ್ಕೂ ಮೀರಿ 74.93 ಕೋಟಿ ರೂಗಳ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ ಎಂದು ಸಿಬಿಐ ವಾದಿಸುತ್ತಿದೆ. ಭ್ರಷ್ಟಾಚಾರದ ಆಪಾದನೆ ಮೇರೆಗೆ ಅಕ್ಟೋಬರ್ 2020ರಲ್ಲಿ ಸಿಬಿಐ, ಎಫ್ ಐ ಆರ್ ದಾಖಲಿಸಿತ್ತು. ಡಿಕೆಶಿ ಅವರಿಗೆ ಸಂಬಂಧಿಸಿದ ಸುಮಾರು 70 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಹಿಂದಿನ ಸರ್ಕಾರ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಶಿವಕುಮಾರ್ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಯ ವಿಚಾರಣೆ ಇದೇ ತಿಂಗಳ 29ರಂದು ವಿಚಾರಣೆಗೆ ಬರಲಿದೆ.