logo
ಕನ್ನಡ ಸುದ್ದಿ  /  ಕರ್ನಾಟಕ  /  Guarantee Schemes Fate: ಕರ್ನಾಟಕ ಗ್ಯಾರಂಟಿ ಯೋಜನೆಗಳ ಕಥೆ ಏನು, ಪರಿಷ್ಕರಣೆ ಮಾಡಲು ಇನ್ನು ಎಷ್ಟು ದಿನ ಬೇಕಾಗಬಹುದು ?

Guarantee Schemes Fate: ಕರ್ನಾಟಕ ಗ್ಯಾರಂಟಿ ಯೋಜನೆಗಳ ಕಥೆ ಏನು, ಪರಿಷ್ಕರಣೆ ಮಾಡಲು ಇನ್ನು ಎಷ್ಟು ದಿನ ಬೇಕಾಗಬಹುದು ?

Umesha Bhatta P H HT Kannada

Aug 15, 2024 03:01 PM IST

google News

Karnataka Guarantee Schemes ಕರ್ನಾಟಕದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಚರ್ಚೆ ಜೋರಾಗಿದೆ,

    • ಕರ್ನಾಟಕ ಸರ್ಕಾರಕ್ಕೆ  ಐದು ಗ್ಯಾರಂಟಿ ಯೋಜನೆಗಳು (Karnataka Guarantee schemes) ಹೊರೆಯಾಗುತ್ತಿವೆಯೇ ಎನ್ನುವುದು ಸಚಿವರ ಹೇಳಿಕೆಗಳಿಂದ ಬಯಲಾಗಿದೆ. ಯೋಜನೆಗಳ ಪರಿಷ್ಕರಣೆಗೆ ಹೆಚ್ಚುತ್ತಿರುವ ಒತ್ತಡದ ನಡುವೆ ಇದು ಯಾವಾಗ ಮುಗಿಯಬಹುದು, ಇದಕ್ಕೆ ಸರ್ಕಾರ ಏನು ಮಾಡಬಹುದು ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 
    • ವರದಿ: ಎಚ್.ಮಾರುತಿ, ಬೆಂಗಳೂರು
Karnataka Guarantee Schemes ಕರ್ನಾಟಕದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಚರ್ಚೆ ಜೋರಾಗಿದೆ,
Karnataka Guarantee Schemes ಕರ್ನಾಟಕದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಚರ್ಚೆ ಜೋರಾಗಿದೆ,

ಬೆಂಗಳೂರು: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದು ಅದರಂತೆ ಪಕ್ಷ ಅಧಿಕಾರಕ್ಕೆ ಬಂಧ ನಂತರ ಹಂತ ಹಂತವಾಗಿ ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಂದು ವರ್ಷ ಅಧಿಕಾರ ಪೂರೈಸಿದ್ದು, ಇದೀಗ ಗ್ಯಾರಂಟಿಗಳ ಬಗ್ಗೆ ಸರ್ಕಾರದೊಳಗೆ ಭಿನ್ನರಾಗ ಆರಂಭವಾಗಿದೆ. ಕೆಲವು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೇ ಈ ಗ್ಯಾರಂಟಿಗಳನ್ನು ಅರ್ಹರಿಗೆ ಮಾತ್ರ ತಲುಪುವಂತೆ ಪರಿಷ್ಕರಿಸಬೇಕು ಎಂದು ಚರ್ಚೆಗೆ ನಾಂದಿ ಹಾಡಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಇತರರು ಗ್ಯಾರಂಟಿಗಳನ್ನು ಪರಿಷ್ಕರಿಸಿ ಅರ್ಹರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದರೆ ಇನ್ನೂ ಕೆಲವು ಸಚಿವರು ಈಗಿನ ಸ್ವರೂಪದಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಪಡಿಸಿದ್ದಾರೆ. ಐದು ವರ್ಷ ಈ ಗಾರಂಟಿಗಳನ್ನು ಮುಂದುವರೆಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಈ ಯೋಜನೆಗಳಿಗೆ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದ್ದು, ಅಭಿವೃದ್ದಿ ಕುಂಠಿತವಾಗುತ್ತಿದೆ. ಆದ್ದರಿಂದ ಈ ಯೋಜನೆಗಳ ಲಾಭ ಬಡವರನ್ನು ಮಾತ್ರ ತಲುಪಬೇಕೇ ಹೊರತು ಉಳ್ಳವರನ್ನು ಅಲ್ಲ ಎಂದು ಒಂದು ವರ್ಗ ವಾದಿಸಿದರೆ ಮತ್ತೊಂದು ಗುಂಪು ಈ ಹಿಂದೆ ಭರವಸೆ ನೀಡಿದ್ದಂತೆ 5 ವರ್ಷ ಮುಂದುವರೆಸಬೇಕು ಎಂದು ಸಲಹೆ ನೀಡಿದೆ.

ಸತೀಶ್‌ ಜಾರಕಿಹೊಳಿ, ವೈದ್ಯರು, ಇಂಜಿನಿಯರ್‌ ಗಳು, ಮತ್ತು ಸರ್ಕಾರಿ ನೌಕರರೂ ಈ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಯನ್ನು ಶ್ರೀಮಂತರೂ ಪಡೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಅಭಿಪ್ರಾಯ ಕುರಿತು ನಿನ್ನೆಯಷ್ಟೇ ಸ್ಪಷ್ಟನೆ ನೀಡಿರುವ ಜಾರಕಿಹೊಳಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂದು ಹೇಳಿಲ್ಲ. ಯೋಜನೆಗಳ ಲಾಭ ಬಡವರಿಗೆ ಮಾತ್ರ ತಲುಪುವಂತೆ ಪರಿಷ್ಕರಿಸಬೇಕು ಎಂದೂ ಪಕ್ಷದ ಹೈಕಮಾಂಡ್‌ ಗೆ ಮನವಿ ಮಾಡಿಕೊಡಿದ್ಧೇನೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 10000-15,000 ಕೋಟಿ ರು.ಗಳ ಉಳಿತಾಯವಾಗುತ್ತದೆ ಎಂದಿದ್ದಾರೆ. ಜಾರಕಿಹೊಳಿ ಅವರ ಅಭಿಪ್ರಾಯವನ್ನು ಬೆಂಬಲಿಸಿರುವ ಆಹಾರ ಮತ್ತು ನಾಗರೀಕ ಸರಬರಾಜು ಯೋಜನೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಹೇಳಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ 5 ಗ್ಯಾರಂಟಿಗಳ ಅನುಷ್ಠಾನಕ್ಕೆ 2024-25ನೇ ಸಾಲಿನ ಬಜೆಟ್‌ ನಲ್ಲಿ 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಈ ಯೋಜನೆಗಳ ಲಾಭವನ್ನು ಶ್ರೀಮಂತರೂ ಪಡೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿರುವುದು ನಿಜ. ಮುಖ್ಯಮಂತ್ರಿಗಳು ಅನುದಾನವನ್ನು ಬಜೆಟ್‌ ನಲ್ಲಿ ಘೋಷಿಸಿರುವುದರಿಂದ ಈ ವರ್ಷ ಗ್ಯಾರಂಟಿಗಳನ್ನು ಮುಂದುವರೆಸಬಹುದು ಎಂದು ತಿಳಿಸಿದ್ದಾರೆ.

ಈ ಯೋಜನೆಗಳ ಪ್ರಯೋಜನವನ್ನು ಬಡವ, ಶ್ರೀಮಂತರೆಲ್ಲರೂ ಪಡೆದುಕೊಳ್ಳುತ್ತಿದ್ದರೂ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಂತಹ ಗಣನೀಯ ಲಾಭವೇನೂ ಆಗಲಿಲ್ಲ. ಗ್ಯಾರಂಟಿಗಳನ್ನೇ ನೆಚ್ಚಿಕೊಂಡಿದ್ದ ಪಕ್ಷ ಎರಡಂಕಿ ದಾಟಲು ಸಾಧ್ಯವಾಗಲೇ ಇಲ್ಲ. ಆಗಿನಿಂದಲೂ ಈ ಯೋಜನೆಗಳನ್ನು ಕುರಿತು ಮರು ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯ ಅಲ್ಲಲ್ಲಿ ಕೇಳಿ ಬರುತ್ತಿದೆ.

ಸಿಎಂ ಡಿಸಿಎಂ ಹೇಳೋದು ಏನು

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಸೇರಿದಂತೆ ಅನೇಕ ಸಚಿವರು ಗ್ಯಾರಂಟಿಗಳನ್ನು ಈಗಿನ ಸ್ವರೂಪದಲ್ಲಿಯೇ 5 ವರ್ಷ ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಯಾರು ಏನೇ ಹೇಳಿದರೂ ಗ್ಯಾರಂಟಿಗಳ ಜಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದು ಸುಳ್ಳಲ್ಲ. ಅನೇಕ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆಇಲ್ಲವೇ ಆರಂಭಿಸಲು ಸಾಧ್ಯ ವಾಗಿಲ್ಲ. ಅಭಿವೃದ್ಧಿಗೆ ಪೂರಕವಾದ ಮೂಲಭೂತ ಸೌಕರ್ಯಗಳ ನಿರ್ಮಾಣ, ರಸ್ತೆ, ಸೇತುವೆ, ಶಾಲಾ ಕಾಲೇಜು, ಅಣೆಕಟ್ಟುಗಳ ನಿರ್ಮಾಣ, ಎಸ್‌ ಟಿ, ಎಸ್‌ ಸಿ ವರ್ಗಗಳ ಕಲ್ಯಾಣಕ್ಕೆ ಪೆಟ್ಟು ಬಿದ್ದಿರುವುದು ಸುಳ್ಳಲ್ಲ. ಅಷ್ಟೇ ಏಕೆ? ಶಾಸಕರ ಅನುದಾನಕ್ಕೂ ಕತ್ತರಿ ಬಿದ್ದಿದೆ. ಆಡಳಿತ ಪಕ್ಷದ ಶಾಸಕರೇ ಅನುದಾನ ನೀಡುತ್ತಿಲ್ಲ ಎಂದೂ ಖಾಸಗಿಯಾಗಿ ಅಲವತ್ತುಕೊಳ್ಳುತ್ತಿದ್ದಾರೆ.

ಏನಾಗಬಹುದು

ಆರ್ಥಿಕ ತಜ್ಞರೂ ಸಹ ಗ್ಯಾರಂಟಿಗಳನ್ನು ಪರಿಷ್ಕರಿಸಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಇದು ಏಕಾಏಕಿ ಆಗುವುದೂ ಅಲ್ಲ. ಇದಕ್ಕಾಗಿಯೇ ಇರುವ ಗ್ಯಾರಂಟಿ ಸಮಿತಿಯ ಮೂಲಕ ಇದನ್ನು ಪರಿಷ್ಕರಿಸಬಹುದು. ಇಲ್ಲವೇ ತಜ್ಞರ ಸಮಿತಿ ರಚಿಸಿ ಕಾಲಮಿತಿಯೊಳಗೆ ಪರಿಷ್ಕರಣೆ ಮಾಡಬಹುದು. ಇದಕ್ಕೆ ಕನಿಷ್ಠ ಆರು ತಿಂಗಳಾದರೂ ಬೇಕಾಗಬಹುದು. ಬೇಗನೇ ಆಗಬೇಕು ಎನ್ನುವ ರಾಜಕೀಯ ಒತ್ತಡ ಬಂದರೆ ಮೂರು ತಿಂಗಳಲ್ಲೂ ಆಗಬಹುದು. ಈಗಾಗಲೇ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿರುವುದರಿಂದ ಏಕಾಏಕಿ ಬದಲಾವಣೆ ಕಷ್ಟವಾಗಬಹುದು. ಬಹುಶಃ ಮುಂದಿನ ಬಜೆಟ್‌ ವೇಳೆಗೆ ಪರಿಷ್ಕರಣೆಯಾಗಲೂಬಹುದು ಎನ್ನುವ ಅಭಿಪ್ರಾಯಗಳು ಸರ್ಕಾರದ ಮಟ್ಟದಲ್ಲಿ ಕೇಳಿ ಬರುತ್ತಿವೆ.

(ವರದಿ: ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ