BBMP News: ಬೆಂಗಳೂರಿಗೆ ನೀವೇ ಮೊದಲ ಶತ್ರು: ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ತರಾಟೆ
Oct 12, 2023 01:13 PM IST
ಬೆಂಗಳೂರಿನ ಜಾಹೀರಾತು ಫಲಕಲಗಳ ನೀತಿ ವಿಚಾರವಾಗಿ ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
- High court Slams BBMP ಬೆಂಗಳೂರಿನಲ್ಲಿ ಅಳವಡಿಸಲಾಗಿರುವ ಹೋರ್ಡಿಂಗ್ ಸಹಿತ ಇತರೆ ಜಾಹೀರಾತು ಫಲಕಗಳ ವಿಚಾರವಾಗಿ ಬಿಬಿಎಂಪಿ ನೀತಿಯನ್ನು ಕಟುವಾಗಿ ಟೀಕಿಸಿರುವ ಕರ್ನಾಟಕ ಹೈಕೋರ್ಟ್ ಈ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಬೆಂಗಳೂರು: ಬೆಂಗಳೂರು ನಗರಕ್ಕೆ ನೀವೇ ಮೊದಲ ಶತ್ರುಗಳು. ನಿಮ್ಮಿಂದಲೇ ಬೆಂಗಳೂರಿನ ಮರ್ಯಾದೆಯೂ ಹಾಳಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( BBMP)ಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಬೆಂಗಳೂರು ನಗರದಲ್ಲಿ ಅಳವಡಿಸಿರುವ ಅಕ್ರಮ ಹೋರ್ಡಿಂಗ್, ಬ್ಯಾನರ್, ಪೋಸ್ಟರ್ ವಿಚಾರವಾಗಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ( PIL)ಯ ವಿಚಾರಣೆ ವೇಳೆ ವಿಭಾಗೀಯ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಹಾಗೂ ನ್ಯಾ. ಕೃಷ್ಣದೀಕ್ಷಿತ್ ಅವರಿದ್ದ ಪೀಠವು ವಿಚಾರಣೆ ನಡೆಸಿ, ನಗರ ಸೌಂದರ್ಯ ಹಾಳಾಗಲು ಬಿಬಿಎಂಪಿ ನೀತಿಯೂ ಕಾರಣ. ಬಿಬಿಎಂಪಿ ಹೋರ್ಡಿಂಗ್, ಬ್ಯಾನರ್ ಸಹಿತ ಜಾಹೀರಾತು ರೂಪದಲ್ಲಿ ಅಳವಡಿಸಿರುವ ಫಲಕ ಎಷ್ಟು. ಅಧಿಕೃತ ಎಷ್ಟಿವೆ. ಅನಧಿಕೃತ ಎಷ್ಟು ಹಾಕಲಾಗಿದೆ. ಇದಕ್ಕೆ ಕೈಗೊಂಡ ಕ್ರಮ ಏನು ಎನ್ನುವ ಕುರಿತು ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿ ನವೆಂಬರ್ ಕೊನೆ ವಾರಕ್ಕೆ ವಿಚಾರಣೆ ಮುಂದೂಡಿದರು.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್, ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಹೋರ್ಡಿಂಗ್ಸ್, ಫಲಕಗಳು ಸೇರಿದಂತೆ ಜಾಹೀರಾತು ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಜಾಹೀರಾತುದಾರರೊಂದಿಗೆ ಒಳ ಒಪ್ಪಂದ ಹೊಂದಿದ್ದಾರೆ. ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿರುವ ಜತೆಗೆ ಪಾಲಿಕೆಗೆ ಆದಾಯವೂ ಸೋರಿಕೆಯಾಗುತ್ತಿದೆ. ಅದರಲ್ಲೂ ಬೆಂಗಳೂರಿನ ಮೇಲ್ಸೇತುವೆ ಮೇಲೆ ಅಳವಡಿಸಿರುವ ಹೋರ್ಡಿಂಗ್‌ಗಳನ್ನು ಪ್ರತಿದಿನ ಬದಲಿಸುತ್ತಿದ್ದು, ಇವೆಲ್ಲವೂ ಅನಧಿಕೃತ ಎಂದು ಹೇಳಿದರು.
ಬಿಬಿಎಂಪಿ ರೂಪಿಸಿಕೊಂಡಿರುವ ಕಾಯಿದೆ ಪ್ರಕಾರವೇ ಅನಧಿಕೃತವಾಗಿ ಹಾಕಿರುವ ಜಾಹೀರಾತು ಫಲಕಗಳನ್ನು ತೆಗೆದು ಹಾಕಬೇಕು. ನಿಗದಿತ ಸ್ಥಳದಲ್ಲಿ ಮಾತ್ರ ಅನುಮತಿ ನೀಡಬೇಕು. ಅದಕ್ಕೆ ಇಂತಿಷ್ಟು ಅವಧಿಗೆ ಶುಲ್ಕ ಪಾವತಿಸಬೇಕು. ಆದರೆ ಇದು ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಆದಾಯವೂ ಪಾಲಿಕೆಗೆ ಖೋತಾ ಆಗುತ್ತಿದೆ. ಹೋರ್ಡಿಂಗ್‌ಗಳು ಬೇಕಾಬಿಟ್ಟಿ ತಲೆ ಎತ್ತಿವೆ. ಇದರಲ್ಲಿ ಪಾಲಿಕೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ವಿವರಿಸಿದರು.
ಪಾಲಿಕೆ ಅಧಿಕಾರಿಗಳೇ ಅನಧಿಕೃತ ಹೋರ್ಡಿಂಗ್‌ಗಳು ಬರಲು ಪರೋಕ್ಷವಾಗಿ ಕಾರಣವಾಗಿದ್ದು, ಸೂಕ್ತ ತಪಾಸಣೆ, ಆದಾಯ ಸಂಗ್ರಹದ ವ್ಯವಸ್ಥೆಯೇ ಇಲ್ಲದಾಗಿದೆ. ಇದನ್ನು ಸರಿಪಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಕೃಷ್ಣ ದೀಕ್ಷಿತ್, ಕೋಟ್ಯಂತರ ರೂ. ಆದಾಯ ಸೋರಿಕೆಯಾಗುತ್ತಿದೆ. ಜನರ ಮೇಲೆ ಅನಗತ್ಯವಾಗಿ ಹೊರೆ ಹಾಕುವ ಬಿಬಿಎಂಪಿ ಅಧಿಕಾರಿಗಳು ಇಂತಹ ಸೋರಿಕೆ ಯಾಕೆ ತಡೆಯುತ್ತಿಲ್ಲ ಜನರಿಗೆ ತೊಂದರೆ ಕೊಡುವ ಬೆಂಗಳೂರಿನ ಮೊದಲ ಶತ್ರುಗಳು ನೀವೇ ಎಂದು ತರಾಟೆಗೆ ತೆಗೆದುಕೊಂಡರು.
ಅನಧಿಕೃತ ಜಾಹೀರಾತು ಫಲಕಗಳು ಇರಲು ಅವಕಾಶವೇ ಇಲ್ಲ. ನಗರದಲ್ಲಿ ಆಗುತ್ತಿರುವ ಸೌಂದರ್ಯ ಹಾಳು ಮಾಡುವ ಕೆಲಸ ತಕ್ಷಣವೇ ನಿಲ್ಲಬೇಕು. ಸೂಕ್ತ ದರ ನಿಗದಿ ಮಾಡಿ ನಿಗದಿತ ಸ್ಥಳದಲ್ಲಿ ಫಲಕ ಹಾಕಲು ಅವಕಾಶ ನೀಡಬೇಕು. ಇದರ ನೀತಿ ಇನ್ನಷ್ಟು ಸ್ಪಷ್ಟವಾಗಬೇಕು ಎಂದು ಸೂಚಿಸಿದರು.
ಕೂಡಲೇ ಬೆಂಗಳೂರಿನಲ್ಲಿ ಇರುವ ಹೋರ್ಡಿಂಗ್‌ಗಳ ಸಂಖ್ಯೆ, ಅಧಿಕೃತ ಹಾಗೂ ಅನಧಿಕೃತ, ಆದಾಯದ ಪ್ರಮಾಣ, ಈವರೆಗೂ ಸಂಗ್ರಹವಾದ ದಂಡದ ಮೊತ್ತ, ಆದಾಯದ ವಿವರವಾದ ಸಮೀಕ್ಷೆ ನಡೆಸಬೇಕು. ಈ ಕುರಿತು ವಿವರವಾದ ವರದಿಯನ್ನು ಪೀಠಕ್ಕೆ ಸಲ್ಲಿಸಬೇಕು ಎಂದು ವಿಚಾರಣೆ ಮುಂದೂಡಿದರು.
ಇದಕ್ಕೂ ಮುನ್ನ ಬಿಬಿಎಂಪಿ ಕೂಡ ವಿವರಣೆಯನ್ನು ಪೀಠದ ಮುಂದೆ ಸಲ್ಲಿಸಿತು. ಈವರೆಗೂ 47 ಪ್ರಕರಣ ದಾಖಲಿಸಿ 5.1 ಲಕ್ಷ ರೂ. ದಂಡ ಸಂಗ್ರಹಿಸಿದೆ. ಹಲವರಿಗ ನೊಟೀಸ್ ಕೂಡ ಜಾರಿಯಾಗಿದೆ. ಪಾಲಿಕೆ ಅನಧಿಕೃತ ಹೋರ್ಡಿಂಗ್ ತಡೆಗೆ ಬಿಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ವಿವರ ನೀಡಿದರು.