logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Assembly Session: ಕರ್ನಾಟಕ ಶಾಸಕರಿಗೂ ಆಸ್ಟ್ರೇಲಿಯಾ ಮಾದರಿಯ ಗಂಡಭೇರುಂಡ ಬ್ಯಾಡ್ಜ್‌

Karnataka Assembly Session: ಕರ್ನಾಟಕ ಶಾಸಕರಿಗೂ ಆಸ್ಟ್ರೇಲಿಯಾ ಮಾದರಿಯ ಗಂಡಭೇರುಂಡ ಬ್ಯಾಡ್ಜ್‌

HT Kannada Desk HT Kannada

Nov 14, 2023 07:23 AM IST

google News

ಕರ್ನಾಟಕದ ಎಲ್ಲಾ ಶಾಸಕರಿಗೆ ಗಂಡಭೇರುಂಡ ಲಾಂಭನ ಇರುವ ಬ್ಯಾಡ್ಜ್‌ ಅನ್ನು ವಿತರಿಸಲಾಗುತ್ತಿದೆ.

    • Karnataka Assembly ಕರ್ನಾಟಕದ ಶಾಸಕರಿಗೆ( Karnataka Legislators) ಗಂಡಭೇರುಂಡ( GandaBherunda) ಲಾಂಛನವಿರುವ ಬ್ಯಾಡ್ಜ್‌ ವಿತರಿಸಲು ವಿಧಾನಸಭೆ ಸ್ಪೀಕರ್ ನಿರ್ಧಾರ. ಪ್ರತಿದಿನ ಮೊದಲು ಸದನ ಪ್ರವೇಶಿಸುವ ಶಾಸಕರಿಗೆ ಬಹುಮಾನ ನೀಡುವ ಹೊಸ ನಿಯಮವನ್ನು ಸ್ಪೀಕರ್ ಯು.ಟಿ.ಖಾದರ್‌( UT Khader) ಜಾರಿಗೆ ತರಲಿದ್ದಾರೆ.
ಕರ್ನಾಟಕದ ಎಲ್ಲಾ ಶಾಸಕರಿಗೆ ಗಂಡಭೇರುಂಡ ಲಾಂಭನ ಇರುವ ಬ್ಯಾಡ್ಜ್‌ ಅನ್ನು ವಿತರಿಸಲಾಗುತ್ತಿದೆ.
ಕರ್ನಾಟಕದ ಎಲ್ಲಾ ಶಾಸಕರಿಗೆ ಗಂಡಭೇರುಂಡ ಲಾಂಭನ ಇರುವ ಬ್ಯಾಡ್ಜ್‌ ಅನ್ನು ವಿತರಿಸಲಾಗುತ್ತಿದೆ.

ಬೆಂಗಳೂರು: ರಾಜ್ಯ ವಿಧಾನಸಭೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಶಾಸಕರಿಗೆ ಗಂಡಭೇರುಂಡ ಲಾಂಛನವಿರುವ ತಲಾ ಮೂರು ಬ್ಯಾಡ್ಜ್‌ಗಳನ್ನು ವಿತರಿಸಲು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್‌ ನಿರ್ಧರಿಸಿದ್ದಾರೆ.

ಆಡಳಿತ ಮತ್ತು ವಿರೋಧ ಪಕ್ಷಗಳ ಮುಖಂಡರ ಜತೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬ ಶಾಸಕರಿಗೆ ತಲಾ ಮೂರು ಬ್ಯಾಡ್ಜ್‌ ವಿತರಿಸಲು ತೀರ್ಮಾನಿಸಲಾಗಿದೆ. ಆರಂಭದಲ್ಲಿ ಒಬ್ಬ ಶಾಸಕರಿಗೆ ಒಂದು ಬ್ಯಾಡ್ಜ್‌ ವಿತರಿಸಲು ಉದ್ದೇಶಿಸಲಾಗಿತ್ತು.

ಬೆಂಗಳೂರಿನ ಐ ಡ್ರೀಮ್ಸ್‌ ಟ್ರೇಡ್‌ ಆ್ಯಂಡ್‌ ಈವೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಿಂದ ಪ್ರತಿ ಬ್ಯಾಡ್ಜ್‌ಗೆ ಜಿ ಎಸ್ ಟಿ ಸೇರಿದಂತೆ ರೂ. 2,832ರ ದರದಲ್ಲಿ ಬ್ಯಾಡ್ಜ್‌ಗಳನ್ನು ಖರೀದಿಸಲಾಗುತ್ತಿದೆ. ರೂ. 19.03 ಲಕ್ಷ ವೆಚ್ಚದಲ್ಲಿ ಬ್ಯಾಡ್ಜ್‌ಗಳನ್ನು ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್‌ 4–ಜಿ ಅಡಿ ವಿನಾಯ್ತಿ ನೀಡಿ ಆರ್ಥಿಕ ಇಲಾಖೆ ಅಕ್ಟೋಬರ್‌ 30ರಂದು ಆದೇಶ ಹೊರಡಿಸಿದೆ.

ಈ ಐಡಿಯಾ ಏಕೆ ಬಂದಿತು ಎಂದು ಯು.ಟಿ. ಖಾದರ್‌ ಹೀಗೆ ಹೇಳುತ್ತಾರೆ. ಆಸ್ಟ್ರೇಲಿಯಾದ ಮೇಯರ್‌ ಒಬ್ಬರನ್ನು ಇತ್ತೀಚೆಗೆ ಭೇಟಿ ಮಾಡಿದ್ದಾಗ ಅವರು ಅವರ ಸರ್ಕಾರದ ಲಾಂಛನವುಳ್ಳ ಬ್ಯಾಡ್ಜ್‌ ಅನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ಅಲ್ಲಿನ ಚುನಾಯಿತ ಪ್ರತಿನಿಧಿಗಳು ಗೌರವ ಸೂಚಕವಾಗಿ ಸರ್ಕಾರದ ಲಾಂಛನವುಳ್ಳ ಬ್ಯಾಡ್ಜ್‌ ಧರಿಸುತ್ತಾರೆ ಎಂದು ಅವರು ತಿಳಿಸಿದ್ದರು. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಶಾಸಕರಿಗೆ ಸರ್ಕಾರದ ಅಧಿಕೃತ ಲಾಂಛನವುಳ್ಳ ಬ್ಯಾಡ್ಜ್‌ ವಿತರಿಸಲು ನಿರ್ಧಾರ ಮಾಡಲಾಗಿದೆ ಎಂದು ಖಾದರ್‌ ವಿವರಿಸುತ್ತಾರೆ.

ಜೊತೆಗೆ ಶಾಸಕರು, ಗಣ್ಯರು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ವಿಧಾನಸಭೆ ಸಚಿವಾಲಯದಿಂದ ಸರ್ಕಾರದ ಲಾಂಛನವುಳ್ಳ ಡೈರಿ, ಪೆನ್‌, ಸ್ಟೀಲ್‌ ನೀರಿನ ಬಾಟಲ್, ವಿಸಿಟಿಂಗ್‌ ಕಾರ್ಡ್‌ ಹೋಲ್ಡರ್‌ ಮತ್ತು ಕೀ ಚೈನ್‌ ವಿತರಿಸಲು ಸಚಿವಾಲಯ ತೀರ್ಮಾನಿಸಿದೆ.

ಈ ಎಲ್ಲ ವಸ್ತುಗಳನ್ನು ಒಳಗೊಂಡ ಒಂದು ಸಾವಿರ ಗಿಫ್ಟ್ ಬಾಕ್ಸ್ ಗಳನ್ನು ತಲಾ ರೂ. 1,947ರ ದರದಲ್ಲಿ ಮಂಗಳೂರಿನ ಉಳ್ಳಾಲದ ಬಿ.ಕೆ. ಸಪ್ಲೈಯರ್ಸ್‌ ಸಂಸ್ಥೆಯಿಂದ ಖರೀದಿಸಲಾಗುತ್ತಿದೆ. ಇದಕ್ಕಾಗಿ ರೂ. 19.47 ಲಕ್ಷ ವ್ಯಯಿಸಲು ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4–ಜಿ ಅಡಿಯಲ್ಲಿ ವಿನಾಯ್ತಿ ನೀಡಲಾಗಿದೆ.

ಶಾಸಕರನ್ನು ಗುರುತಿಸಲು ಈ ಬ್ಯಾಡ್ಜ್‌ಗಳಿಂದ ಅನುಕೂಲ ಆಗಲಿದೆ. ಬ್ಯಾಡ್ಜ್‌ ಧರಿಸಿ ಹೋಗುವುದು ಶಾಸಕರಿಗೆ ಗೌರವದ ವಿಚಾರವೂ ಹೌದು ಎಂದು ಯು.ಟಿ. ಖಾದರ್ ಅಭಿಪ್ರಾಯಪಡುತ್ತಾರೆ.

ಕಪ್‌ ಸಾಸರ್‌ ಬಹುಮಾನ

ಅಧಿವೇಶನದ ಸಂದರ್ಭದಲ್ಲಿ ಪ್ರತಿದಿನ ಮೊದಲು ಸದನ ಪ್ರವೇಶಿಸುವ ಶಾಸಕರಿಗೆ ಬಹುಮಾನದ ರೂಪದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕೃತ ಲಾಂಛನಗಳನ್ನು ಅಚ್ಚು ಹಾಕಿಸಿದ ಕಪ್‌ ಮತ್ತು ಸಾಸರ್‌ ನೀಡಲು ವಿಧಾನಸಭೆ ಸಚಿವಾಲಯ ತೀರ್ಮಾನಿಸಿದೆ.

ಖಾದರ್ ಅವರು ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಬಹುಮಾನದ ವಿಚಾರ ಪ್ರಕಟಿಸಿದ್ದರು. ಅದೇ ರೀತಿ ಕೆಲವು ಶಾಸಕರಿಗೆ ಬಹುಮಾನ ವಿತರಿಸಬೇಕಿದೆ. ರಾಜಭವನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಲಾಂಛನವನ್ನು ಅಚ್ಚು ಹಾಕಿಸಿರುವ ವಿಶೇಷ ಕಪ್‌ ಸಾಸರ್‌ಗಳನ್ನು ಬಳಸಲಾಗುತ್ತಿದೆ. ಅಂತಹುದೇ ಮಾದರಿಯ ಬಹುಮಾನ ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಶಾಸಕರು ಅಧಿವೇಶನಕ್ಕೆ ಹಾಜರಾಗುವುದು ವಿರಳವಾಗಿದೆ. ಬಂದರೂ ಸಹಿ ಹಾಕಿ ನಿರ್ಗಮಿಸುತ್ತಾರೆ. ಇನ್ನು ಚರ್ಚೆಗಳಲ್ಲಿ ಭಾಗವಹಿಸುವುದು ಬೆರಳೆಣಿಕೆಯಷ್ಟು ಶಾಸಕರು ಮಾತ್ರ. ಎಲ್ಲಾ 224 ಶಾಸಕರು ಕಡ್ಡಾಯವಾಗಿ ಬೆಳಗ್ಗೆಯಿಂದ ಸಂಜೆವರೆಗೆ ಸದನದಲ್ಲಿ ಹಾಜರಿರಬೇಕು ಎಂದು ಶಾಸನ ರೂಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

(ವರದಿ: ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ