Areca Tea: ಕರ್ನಾಟಕದ ಅಡಿಕೆ ಚಹಾ; ಮಧುಮೇಹ, ಗ್ಯಾಸ್ಟ್ರಿಕ್, ಜೀರ್ಣಕ್ರಿಯೆಗೂ ಉತ್ತಮ ಈ ಪೇಯ, ಇಲ್ಲಿದೆ ವಿವರ
Feb 08, 2024 05:33 PM IST
ಅಡಿಕೆಯಿಂದ ತಯಾರಿಸಿದ ಅರೆಕಾ ಟೀ ಜನಪ್ರಿಯವಾಗಿದೆ.
- ಚಹಾವನ್ನುಹಲವು ರೂಪದಲ್ಲಿ ತಯಾರಿಸಲಾಗುತ್ತದೆ. ಅದು ಅಡಿಕೆ ರೂಪದಲ್ಲಿಯೂ ಬಂದಿದೆ. ಕರ್ನಾಟಕದವರೇ ಉತ್ಪಾದಿಸಿರುವ ಅರೇಕಾ ಟೀ ಔಷಧೀಯ ಗುಣಗಳನ್ನೂ ಹೊಂದಿದೆ.
ಬೆಂಗಳೂರು: ಇದು ಕರ್ನಾಟಕದ ಅಪ್ಪಟ ಮಲೆನಾಡ ಚಹಾ. ಇದು ಚಹಾ ಪುಡಿಯಿಂದ ಮಾಡಿದ್ದಲ್ಲ.ಬದಲಿಗೆ ಅಡಿಕೆಯಿಂದ ತಯಾರಿಸಿದ್ದು. ಅರೇಕಾ ಟೀ ಎನ್ನುವ ಹೆಸರಿನಲ್ಲಿ ಜನಪ್ರಿಯವಾಗಿದೆ. ಇದನ್ನು ಅಡಿಕೆ ಜತೆಗೆ ಆಯುರ್ವೇದದ ಕೆಲವು ಔಷಧಗಳನ್ನು ಬಳಸಿರುವುದರಿಂದ ಆರೋಗ್ಯ ಪೇಯ ಎಂದು ಕರೆಯಲಾಗುತ್ತದೆ. ಎಂಟು ವರ್ಷದ ಹಿಂದೆಯೇ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ದೇಶದಲ್ಲೂ ಅರೇಕಾ ಟೀ ಬಳಕೆಯಲ್ಲಿದೆ. ಮಾಮೂಲಿ ಚಹಾ ಬಳಸುವವರಿಗಿಂತ ಇದನ್ನು ಕಡಿಮೆ ಜನ ಬಳಸಿದರೂ ಅಡಿಕೆ ಬಗ್ಗೆ ತಿಳಿದವರು ಅರೇಕಾ ಟೀ ಇಷ್ಟಪಟ್ಟು ಉಪಯೋಗಿಸುತ್ತಿದ್ದಾರೆ.
ಮಲೆನಾಡ ಸಂಶೋಧನೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆಯವರಾದ ನಿವೇದನ್ ನೆಂಪೆ ಅರೇಕಾ ಟೀ ರೂಪಿಸಿದವರು. ಅವರ ಕುಟುಂಬವೂ ಅಡಿಕೆ ಬೆಳಯುತ್ತಿದ್ದರಿಂದ ಅದರ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಆದರೆ ಅಡಿಕೆಯನ್ನು ಹೆಚ್ಚು ಗುಟ್ಕಾಗೆ ಬಳಕೆ ಮಾಡಲಾಗುತ್ತಿತ್ತು. ಗುಟ್ಕಾ ನಿಷೇಧದ ನಂತರ ಅಡಿಕೆ ಬೆಳೆಗೂ ಸಾಕಷ್ಟು ಏಟು ಬಿದ್ದು ಬೆಲೆಯೂ ಕುಸಿದಿತ್ತು. ಅಡಿಕೆ ಬೆಳೆಯಬೇಕು. ಅದನ್ನು ಬಳಬೇಕು ಎನ್ನುವ ಒತ್ತಡವಂತೂ ಇತ್ತು. ಭಾರತದ ನಂತರ ಆಸ್ಟ್ರೇಲಿಯಾದಲ್ಲೂ ಉನ್ನತ ಶಿಕ್ಷಣ ಪಡೆದಿದ್ದ ನಿವೇದನ್ ಏನಾದರೂ ಮಾಡಬೇಕು ಎಂದು ಅಡಿಕೆ ಪರ್ಯಾಯಗಳ ಹುಟುಕಾಟದಲ್ಲಿ ತೊಡಗಿದರು. ಆಸ್ಟ್ರೇಲಿಯಾಲ್ಲಿಯೇ ಇದ್ದಿದ್ದರೆ ಲಕ್ಷಾಂತರ ರೂ. ಸಂಬಳ ಪಡೆಯಬಹುದಿತ್ತು. ಆದರೂ ಅವರ ಮನಸು ಹೊಸತನದ ಕಡೆಗೆ ತುಡಿಯುತ್ತಿತ್ತು. ಇಲ್ಲಿಗೆ ಬಂದು ಅಡಿಕೆಯನ್ನು ಬಳಸಿ ಚಹಾವನ್ನು ಉತ್ಪಾದಿಸಿದರು.
ಏನಿದೆ ಇದರಲ್ಲಿ
ಇದು ಸಾಮಾನ್ಯ ಅಡಿಕೆ ಮತ್ತು ಗಿಡಮೂಲಿಕೆಗಳಿಂದ ರೂಪಿಸಿದ ಟೀ ಪೌಡರ್ . ಶೇ.80ರಷ್ಟು ಚಿಟ್ಟಿ ಅಡಿಕೆಯನ್ನು ಸಂಸ್ಕರಿಸಿ ಮತ್ತು ಇದಕ್ಕೆ ಶೇ. 20ರಷ್ಟು ವಿವಿಧ ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ವಿಶೇಷ ಟೀ ಪೌಡರ್ ತಯಾರಿಸಲಾಗಿದೆ. ಇದಕ್ಕೆ ‘ಅರೇಕಾ ಟೀ’ ಎನ್ನುವ ಹೆಸರನ್ನು ನೀಡಲಾಗಿದೆ. ಗ್ರೀನ್ ಟೀಯಂತೆಯೇ ಇದೂ ಸಹ ಆರೋಗ್ಯಕರ ಪಾನೀಯ ಎಂದು ಪ್ರಯೋಗಗಳ ಮೂಲಕ ಸಾಬೀತಾಗಿದೆ ಎನ್ನುವುದು ನಿವೇದನ್ ಅವರು ನೀಡುವ ವಿವರಣೆ.
ಗ್ರೀನ್ ರೆಮಿಡೀಸ್ ಸಂಸ್ಥೆಅಡಿ ಇದನ್ನು ಅಭಿವೃದ್ದಿ ಕೂಡ ಮಾಡಿದರು. ಇದಕ್ಕೆ ಬೇಕಾದ ಎಲ್ಲಾ ಪರೀಕ್ಷೆಗಳು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಜನ ಬಳಸಬಹುದು ಎಂದುಕೊಂಡ ಮೇಲೆಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ವೈದ್ಯರ ನೆರವು ಮತ್ತು ಸಲಹೆ, ಸೂಚನೆಯೊಂದಿಗೆ ಹಲವು ಮಂದಿ ಮಧುಮೇಹ ರೋಗಿಗಳಿಗೆ ಅರೇಕಾ ಟೀ ನೀಡಲಾಗಿದೆ. ವಿಶೇಷವಾಗಿ ವೈದ್ಯರೂ ಮಧುಮೇಹ ನಿಯಂತ್ರಣಕ್ಕೆ ರೋಗಿಗಳಿಗೆ ಅರೇಕಾ ಟೀ ಬಳಸಬಹುದು ಎನ್ನುವ ಸಲಹೆ ಕೊಟ್ಟಿದ್ದಾರೆ.
2017ರಲ್ಲಿಯೇ ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಧರ್ಮಸ್ಥಳದ ಶ್ರೀವೀರೇಂದ್ರ ಹೆಗ್ಗಡೆಯವರು ಇದನ್ನು ಬಿಡುಗಡೆ ಮಾಡಿದ್ದರು. ಆಗಿನಿಂದಲೂ ಕರ್ನಾಟಕ ಮಾತ್ರವಲ್ಲದೇ ದೇಶ ಹಾಗೂ ಹೊರ ದೇಶದಲ್ಲೂ ಮಾರುಕಟ್ಟೆ ಮಾಡಲಾಗಿದೆ. ಆಸಕ್ತಿ ಇರುವವರು ಖರೀದಿಸಿ ಬಳಕೆ ಕೂಡ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಹೊಟೇಲ್‌ಗಳಲ್ಲೂ ಇದರ ಬಳಕೆಯಿದೆ.
ಮಧುಮೇಹಕ್ಕೆ ಮದ್ದು
ಇದು ಮುಖ್ಯವಾಗಿ ಮಧುಮೇಹಿಗಳಿಗೆ ಮದ್ದು. ಚಹಾ ಅಂದರೆ ಮೊದಲೇ ಒಗರು. ಅದರಲ್ಲೂ ಅಡಿಕೆ ಅಂದರೆ ಇನ್ನಷ್ಟು ಒಗರು. ಆದರೆ ಅಡಿಕೆ ಒಗರಿಗೆ ಒಗ್ಗುವಂತೆ ತುಳಸಿ ಸಹಿತ ಕೆಲವು ಆಯುರ್ವೇದ ಮಹತ್ವದ ಗಿಡಮೂಲಿಕೆಗಳನ್ನು ಬಳಸುವುದರಿಂದ ರುಚಿಯೂ ಬದಲಾಗುತ್ತದೆ. ಇದರಿಂದ ಒಗರುತನ ಕಡಿಮೆಯಾಗಿ ಸೇವಿಸಲು ಖುಷಿಯಾಗುತ್ತದೆ. ಸಕ್ಕರೆ ಅಂಶವೂ ಇಲ್ಲದೇ ಇರುವುದರಿಂದ ಮಧುಮೇಹಿಗಳು ಸುಲಭವಾಗಿ ಬಳಸಬಹುದು. ಸಾಕಷ್ಟು ಮಂದಿ ಮಧುಮೇಹಿಗಳು ಅರೇಕಾ ಟೀ ಬಳಸುತ್ತಿದ್ದಾರೆ ಎನ್ನುವುದು ಉಡುಪಿಯಲ್ಲಿ ಇದರ ಮಾರುಕಟ್ಟೆ ಮಾಡುವ ಎಎಂ ಡಿಸಿಲ್ವಾ ಹೇಳುತ್ತಾರೆ.
ಇತರೆ ಕಾಯಿಲೆಗೂ ಓಕೆ
ಇದು ಮಧುಮೇಹದ ಜತೆಗೆ ಗ್ಯಾಸ್ಟ್ರಿಕ್‌ಗೂ ಮದ್ದು. ಅಲ್ಲದೇ ಪಚನಕ್ರಿಯೆ ಸರಳಗೊಳಿಸುತ್ತದೆ. ಕೆಲವೊಮ್ಮೆ ಚಹಾ ಸೇವಿಸಿದರೆ ನಿದ್ರೆ ಬರುವುದಿಲ್ಲ ಎನ್ನುವ ಅನುಭವವೂ ಆಗುತ್ತದೆ. ಆದರೆ ಅರೇಕಾ ಟೀ ಸೇವಿಸಿದರೆ ರಾತ್ರಿ ನಿದ್ರೆಯೂ ಸುಲಭವಾಗಿ ಆಗಬಲ್ಲದು ಎನ್ನುವುದು ಅವರ ಅಭಿಪ್ರಾಯ.
ಬಳಕೆ ಹೇಗೆ
ಇದು ಚಹಾಪುಡಿ ಮಾದರಿಯಲ್ಲಿ ಇಲ್ಲ. ಬದಲಿಗೆ ಡಿಪ್ ಬ್ಯಾಗ್ ಮಾದರಿಯಲ್ಲಿಯಿದೆ. ಇದಕ್ಕೆ ಬಿಸಿನೀರು ಇದ್ದರೆ ಸಾಕು. ಪ್ರಯಾಣ ಮಾಡುವಾಗಲೂ ಸುಲಭವಾಗಿಯೇ ಇದನ್ನು ಬಳಸಬಹುದು. ಆ ಮಾದರಿಯಲ್ಲಿಯೇ ಇದನ್ನು ರೂಪಿಸಲಾಗಿದೆ. ಅಲ್ಲಿಯೇ ಅದ್ದಿಕೊಂಡು ಬೇಕಾದ ರೀತಿಯಲ್ಲಿ ಚಹಾ ಮಾಡಿಕೊಂಡು ಸೇವಿಸಬಹುದು. ಒಟ್ಟು ಐದು ರುಚಿಯಲ್ಲಿ ಅರೇಕಾ ಟೀ ಡಿಪ್ ಬ್ಯಾಗ್‌ಗಳಿವೆ. ಇದರಲ್ಲಿ ಮಾಮೂಲಿ ಚಹಾ, ನಿಂಬೆ ರುಚಿ, ಮಿಂಟ್, ಶುಂಠಿ, ತುಳಸಿ ರುಚಿಯಲ್ಲಿ ಲಭ್ಯ.