logo
ಕನ್ನಡ ಸುದ್ದಿ  /  ಕರ್ನಾಟಕ  /  ಟಿ20 ವಿಶ್ವಕಪ್ 2024: ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ರಾರಾಜಿಸಿದ ಕರ್ನಾಟಕದ ನಂದಿನಿ; ಸಹಕಾರಿ ಸಂಸ್ಥೆ ಹಿರಿಮೆ ಈಗ ವಿಶ್ವವ್ಯಾಪಿ

ಟಿ20 ವಿಶ್ವಕಪ್ 2024: ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ರಾರಾಜಿಸಿದ ಕರ್ನಾಟಕದ ನಂದಿನಿ; ಸಹಕಾರಿ ಸಂಸ್ಥೆ ಹಿರಿಮೆ ಈಗ ವಿಶ್ವವ್ಯಾಪಿ

Umesha Bhatta P H HT Kannada

May 16, 2024 05:30 PM IST

google News

ಕ್ರಿಕೆಟ್‌ ಆಟಗಾರನ ಟಿ ಶರ್ಟ್‌ನಲ್ಲಿ ಕನ್ನಡ ಮತ್ತು ನಂದಿನಿ.

    • ಕನ್ನಡಿಗರ ಹೆಮ್ಮೆಯ ನಂದಿನಿ(Nandini) ಬ್ರಾಂಡ್‌ ಈಗ ಟಿ-20 ವಿಶ್ವಕಪ್‌ನ( T-20 Worldcup) ಮೂಲಕ  ಜಾಗತಿಕ ಮಟ್ಟದಲ್ಲೂ ಮಿಂಚಲಿದೆ. 
    • ವರದಿ: ಎಚ್‌.ಮಾರುತಿ, ಬೆಂಗಳೂರು
ಕ್ರಿಕೆಟ್‌ ಆಟಗಾರನ ಟಿ ಶರ್ಟ್‌ನಲ್ಲಿ ಕನ್ನಡ ಮತ್ತು ನಂದಿನಿ.
ಕ್ರಿಕೆಟ್‌ ಆಟಗಾರನ ಟಿ ಶರ್ಟ್‌ನಲ್ಲಿ ಕನ್ನಡ ಮತ್ತು ನಂದಿನಿ.

ಬೆಂಗಳೂರು: ಸಮಸ್ತ ಕನ್ನಡಿಗ ಕರ್ನಾಟಕ ಹೆಮ್ಮೆ ಪಡುವ ಸುದ್ದಿ. ಐಸಿಸಿ ಪುರುಷರ ಟಿ–20 ಕ್ರಿಕೆಟ್‌ ವಿಶ್ವಕಪ್‌ನ ಟೂರ್ನಿಗೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಂದಿನಿಪ್ರಾಯೋಜಕತ್ವ ಪಡೆದುಕೊಂಡಿದೆ. ನಂದಿನಿ ಲಾಂಛನವಿರುವ ನೂತನ ಜೆರ್ಸಿಯನ್ನು ಸ್ಕಾಟ್ಲೆಂಡ್ ಬಿಡುಗಡೆ ಮಾಡಿದೆ. ನಂದಿನಿ ಲಾಂಛನವಿರುವ ಹೊಸ ಜೆರ್ಸಿಯನ್ನು ತೊಟ್ಟಿರುವ ಆಟಗಾರರ ಚಿತ್ರವನ್ನು ಕ್ರಿಕೆಟ್ ಸ್ಕಾಟ್ಲೆಂಡ್‌ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ನಂದಿನಿ ಬ್ರಾಂಡ್‌ ಪ್ರಾಯೋಜಕತ್ವ ಪಡೆದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ನ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಎಕ್ಸ್‌ ಜಾಲತಾಣದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.ಈ ಬಾರಿ ವಿಶ್ವಕಪ್ ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಜೆರ್ಸಿಯ ಬಲ ತೋಳಿನಲ್ಲಿ ನಂದಿನಿ ಲಾಂಛನವನ್ನು ಹಾಕಲಾಗಿದೆ. ನಂದಿನಿ ಎಂದು ಕನ್ನಡ ಹಾಗೂ ಇಂಗ್ಲೀಷ್‌ ಎರಡೂ ಭಾಷೆಗಳಲ್ಲಿ ನಲ್ಲಿ ಬರೆಯಲಾಗಿದೆ.

ಟಿ–20 ಅಭಿಯಾನದಲ್ಲಿ ಸ್ಕಾಟ್ಲೆಂಡ್‌ ಜೊತೆ ಪಾಲುದಾರಿಕೆ ಹೊಂದಿದ್ದು ನಮಗೆ ಸಂತೋಷವಾಗಿದೆ. ನಂದಿನಿಯು ಒಂದು ಬ್ರಾಂಡ್ ಆಗಿ ಶ್ರೇಷ್ಠತೆ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಕಳೆದ ನಲವತ್ತು ವರ್ಷಗಳಲ್ಲಿ ನಾವು ಜಾಗತಿಕ ಬ್ರಾಂಡ್ ಆಗಿ ಬೆಳೆದಿದ್ದೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್‌ ಅವರ ಹೇಳಿಕೆಯನ್ನು ಕ್ರಿಕೆಟ್ ಸ್ಕಾಟ್ಲೆಂಡ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ನಂದಿನಿ ಜೊತೆ ಪಾಲುದಾರರಾಗಿದ್ದು ನಮಗೆ ಸಂತೋಷ ಉಂಟು ಮಾಡಿದೆ. ನಮ್ಮ ಪುರುಷರ ಕ್ರಿಕೆಟ್ ತಂಡಕ್ಕೆ ಸ್ಥಾಪಿತವಾದ ಬ್ರಾಂಡ್‌ ಬೆಂಬಲ ನೀಡುತ್ತಿರುವುದೇ ಅದ್ಭುತ. ಅವರ ಬ್ರ್ಯಾಂಡ್‌ ಹಾಗೂ ಸ್ಕಾಟ್ಲೆಂಡ್‌ ಕ್ರಿಕೆಟ್‌ ಅನ್ನು ಪ್ರಚಾರ ಪಡಿಸಲು ನಂದಿನಿ ಜೊತೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌, ನಮೀಬಿಯಾ, ಒಮಾನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ನಂದಿನಿ ಲಾಂಛನ ಜೊತೆಗೆ ಹೆಮ್ಮೆಯ ಸ್ಕಾಟ್ಲೆಂಡ್‌ ಬಣ್ಣಗಳೂ ಇರಲಿವೆ ಎಂದು ಕ್ರಿಕೆಟ್ ಸ್ಕಾಟ್ಲೆಂಡ್‌ನ ವಾಣಿಜ್ಯ ಕಾರ್ಯನಿರ್ವಾಹಕ ಕ್ಲಾರ್‌ ಡ್ರುಮಂಡ್ ಹೇಳಿದ್ದಾರೆ.

ಇನ್ನು ಮುಖ್ಯಮಂತ್ರಿಗಳ ಹೇಳಿಕೆಗೆ ಸಾವಿರಾರು ಮಂದಿ ಸಂತೋಷ ಮತ್ತು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವಾರು ಮಂದಿ ರೈತರ ನೆರವಿಗೆ ದಾವಿಸುವಂತೆ ಮನವಿ ಮಾಡಿದ್ದಾರೆ.

ರೈತರಿಗೆ ಹಾಲು ಒಕ್ಕೂಟಗಳಿಂದ ನೀಡುವ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹ ಧನವನ್ನು ನಿಲ್ಲಿಸಲಾಗಿದೆ. ಈ ಬಾಕಿಯನ್ನು ನೀಡಿ ರೈತರ ನೆರವಿಗೆ ಧಾವಿಸಿ ಎಂದು ಸಲಹೆ ನೀಡಿದ್ದಾರೆ.

ಏನೇ ಇರಲಿ, ಜಾಗತಿಕ ಮಟ್ಟದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಮತ್ತಷ್ಟು ಹೆಸರು ಮಾಡಲಿವೆ. ಜೊತೆಗೆ ಕನ್ನಡ ಭಾಷೆಯೂ ರಾರಾಜಿಸಲಿದೆ ಎನ್ನುವುದೇ ರೋಮಾಂಚನ ಉಂಟು ಮಾಡುತ್ತದೆ. ನಮ್ಮ ಹಳ್ಳಿಯ ರೈತರು ಉತ್ಪಾದಿಸುವ ಹಾಲು ಆನಂತರ ನಂದಿನಿ ಬ್ರಾಂಡ್‌ ನಲ್ಲಿ ಈಗ ಮನೆ ಮಾತಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಆಸರೆಯೂ ಆಗಿದೆ. ಈಗ ಅದೇ ಬ್ರಾಂಡ್‌ ತನ್ನ ಕ್ಷಿತಿಜಗಳನ್ನು ವಿಶ್ವ ಮಟ್ಟದಲ್ಲಿ ವಿಸ್ತರಿಸುವುದು ಹೆಮ್ಮಯ ಸಂಗತಿಯೂ ಹೌದು ಎನ್ನುವ ಸಂತಸದ ಮಾತುಗಳು ಕೇಳಿ ಬರುತ್ತಿವೆ.

(ವರದಿ: ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ