logo
ಕನ್ನಡ ಸುದ್ದಿ  /  ಕರ್ನಾಟಕ  /  Mlc Elections2024: ಪರಿಷತ್‌ ಚುನಾವಣೆ, ಸಿಟಿರವಿ, ಮುಳೆಗೆ ಅವಕಾಶ, ಸುಮಲತಾಗೆ ನಿರಾಸೆ

MLC Elections2024: ಪರಿಷತ್‌ ಚುನಾವಣೆ, ಸಿಟಿರವಿ, ಮುಳೆಗೆ ಅವಕಾಶ, ಸುಮಲತಾಗೆ ನಿರಾಸೆ

Umesha Bhatta P H HT Kannada

Jun 02, 2024 01:56 PM IST

google News

ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟಿಸಿದೆ.

    • Karnataka Politics ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಮುಂದಿನ ವಾರ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.
ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟಿಸಿದೆ.
ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟಿಸಿದೆ.

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಮೂರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಪರಿಷತ್‌ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಸಿ.ಟಿ.ರವಿ ಅವರು ಮೇಲ್ಮನೆ ಪ್ರವೇಶಿಸಲಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾಗಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಅವಕಾಶ ಸಿಕ್ಕಿಲ್ಲ. ಇದರಿಂದ ಅವರಿಗೆ ನಿರಾಶೆಯಾಗಿದೆ. ಅದೇ ರೀತಿ ಕಳೆದ ಅವಧಿಯಲ್ಲಿ ಸಕ್ರಿಯವಾಗಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ನಲ್ಲಿ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಅವರಿಗೆ ಮತ್ತೊಮ್ಮೆ ಅವಕಾಶ ದೊರೆತಿದೆ. ಬೀದರ್‌ ಮೂಲದ ಹಿರಿಯ ನಾಯಕ ಎಂ.ಜಿ.ಮುಳೆ ಅವರ ಹೆಸರನ್ನೂ ಪ್ರಕಟಿಸಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ನಮ್ಮವರೇ ನನ್ನನ್ನ ಸೋಲಿಸಿದರು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿಕೊಂಡಿದ್ದರು. ಲೋಕಸಭೆ ಚುನಾವಣೆಗೆ ಚಿಕ್ಕಮಗಳೂರು ಉಡುಪಿ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯೂ ಆಗಿದ್ದರು. ̈

ಚುನಾವಣೆ ಪ್ರಚಾರದ ವೇಳೆ ಸಿ.ಟಿ.ರವಿಗೆ ಚುನಾವಣೆಯಲ್ಲಿ ಅನ್ಯಾಯವಾಗಿದೆ. ಅವರಿಗೆ ಸೂಕ್ತ ಸ್ಥಾನ ಮಾನ ನೀಡಲಾಗುವುದು ಎಂದು ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಬಹಿರಂಗವಾಗಿಯೇ ಹೇಳಿದ್ದರು.

ಇದಾದ ನಂತರ ಪಕ್ಷದ ಹೈ ಕಮಾಂಡ್‌ ಕೂಡ ಸಿಟಿ ರವಿಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿತ್ತು. ಅದರಂತೆ ಅವರಿಗೆ ಪರಿಷತ್‌ ಸದಸ್ಯ ಚುನಾವಣೆಗೆ ಅವಕಾಶ ನೀಡಲಾಗಿದೆ.

ರವಿಕುಮಾರ್‌ ಮತ್ತೊಮ್ಮೆ

ಅದೇ ರೀತಿ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಸಂಘಟನೆ ವಿಭಾಗ ನೋಡಿಕೊಳ್ಳುತ್ತಿರುವ ದಾವಣಗೆರೆ ಮೂಲದ ಎನ್‌.ರವಿಕುಮಾರ್‌ ಅವರಿಗೆ ಎರಡನೇ ಬಾರಿಗೆ ಅವಕಾಶ ಮಾಡಿಕೊಡಲಾಗಿದೆ. ಆರು ವರ್ಷ ಪಕ್ಷ ಹಾಗೂ ಸದನದಲ್ಲಿ ಸಕ್ರಿಯವಾಗಿಯೇ ಕೆಲಸ ಮಾಡಿದ ಕಾರಣದಿಂದಲೂ ಹೈಕಮಾಂಡ್‌ ರವಿಕುಮಾರ್‌ ಅವರ ಹೆಸರು ಪರಿಗಣಿಸಿದೆ. ಅವರೇ ಪರಿಷತ್‌ ನಲ್ಲಿ ಬಿಜೆಪಿ ನಾಯಕ ಹಾಗೂ ಪ್ರತಿಪಕ್ಷ ನಾಯಕರೂ ಆಗಬಹುದು ಎನ್ನಲಾಗುತ್ತಿದೆ.

ಬೀದರ್‌ನವರೇ ಆದ ಬಿಜೆಪಿ ಹಿರಿಯ ನಾಯಕ ರಘುನಾಥ ರಾವ್‌ ಮಲ್ಕಾಪುರೆ ಬದಲು ಬಸವಕಲ್ಯಾಣ ಮಾಜಿ ಶಾಸಕ ಎಂ.ಜಿ.ಮುಳೆ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಮಲ್ಕಾಪುರೆ ಎರಡು ಬಾರಿ ಎಂಎಲ್ಸಿಯಾಗಿ ಪರಿಷತ್‌ನಲ್ಲಿ ಪ್ರತಿ ಪಕ್ಷ ನಾಯಕರೂ ಆಗಿದ್ದರು. ಮುಳೆ ಕೂಡ ಹಲವಾರು ವರ್ಷದಿಂದ ಪಕ್ಷದಲ್ಲೇ ಇದ್ದವರು. ಮರಾಠ ಸಮಾಜದವರಿಗೆ ಪ್ರಾತಿನಿಧ್ಯ ನೀಡುವ ಉದ್ದೇಶವೂ ಇವರ ನೇಮಕದ ಹಿಂದೆ ಇದೆ ಎನ್ನಲಾಗಿದೆ.

ಹಲವರಿಗೆ ನಿರಾಸೆ

ಈ ನಡುವೆ ಬಿಜೆಪಿಯಲ್ಲೂ 20ಕ್ಕೂ ಹೆಚ್ಚು ಮಂದಿ ಪ್ರಬಲ ಆಕಾಂಕ್ಷಿಗಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಹಲವರು ಕೂಡ ಪರಿಷತ್‌ ಸದಸ್ಯರಾಗಲು ಬಯಸಿದ್ದರು. ಅವರಲ್ಲಿ ಮಂಡ್ಯದಲ್ಲಿ ಟಿಕೆಟ್‌ ತಪ್ಪಿಸಿಕೊಂಡಿದ್ದ ಸುಮಲತಾ ಅಂಬರೀಷ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿನಿ ಅನಂತಕುಮಾರ್‌ ಸಹಿತ ಹಲವರಿದ್ದರು. ಆದರೆ ಸುಮಲತಾಗೆ ಈ ಬಾರಿ ಅವಕಾಶ ಸಿಗದೇ ಇರುವುದು ಅವರಿಗೆ ನಿರಾಶೆ ಮೂಡಿಸಿದೆ.

ಮುಂದೆ ಯಾವುದಾದರೂ ಚುನಾವಣೆಯಲ್ಲಿ ಅವಕಾಶ ನೀಡುವ ಭರವಸೆಯನ್ನು ಸುಮಲತಾ ಅವರಿಗೆ ನೀಡಲಾಗಿತ್ತು. ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸುವ ಇರಾದೆಯೂ ಪಕ್ಷದಲ್ಲಿ ಇರಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ