MLC Elections2024: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ, ಯತೀಂದ್ರ ಸಿದ್ದರಾಮಯ್ಯಗೆ ಮಣೆ, ಇತರ ಆಕಾಂಕ್ಷಿಗಳು ಯಾರು
May 20, 2024 07:03 PM IST
ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಜೂನ್‌ನಲ್ಲಿ ಮತದಾನ ನಡೆಯಲಿದೆ.
- ಕರ್ನಾಟಕದ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ( Karnataka Council Elections2024) ನಡೆಯಲಿರುವ ಚುನಾವಣೆಗೆ ದಿನಾಂಕ ಘೋಷಿಸಲಾಗಿದೆ.
- (ವರದಿ: ಎಚ್.ಮಾರುತಿ. ಬೆಂಗಳೂರು)
ಬೆಂಗಳೂರು: ಮುಂದಿನ ತಿಂಗಳು ತೆರವಾಗಲಿರುವ ಕರ್ನಾಟಕ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದ್ದು ಜೂನ್ 13 ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದ್ದು, ಜೂನ್ 4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 6ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿರುತ್ತದೆ. ಮತದಾನ ದಿನ ಸಂಜೆ ಐದು ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.ವಿಧಾನಸಭೆಯಿಂದ ವಿಧಾನಪರಿಷತ್ ಗೆ ಆಯ್ಕೆಯಾಗಿರುವ 11 ಸದಸ್ಯರ ಅವಧಿ ಜೂನ್ 17 ರಂದು ಕೊನೆಗೊಳ್ಳಲಿದೆ.
ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ರಘುನಾಥ ರಾವ್ ಮಲ್ಕಾಪುರೆ, ಎನ್. ರವಿಕುಮಾರ್, ಎಸ್.ರುದ್ರೇಗೌಡ, ಕೆ.ಹರೀಶ್ ಕುಮಾರ್, ಮುನಿರಾಜುಗೌಡ ಪಿ.ಎಂ ಮತ್ತು ಬಿ.ಎಂ. ಫಾರೂಕ್, ಅರವಿಂದ ಕುಮಾರ್ ಅರಳಿ, ಅವರ ಅವಧಿ ಕೊನೆಗೊಳ್ಳಲಿದೆ. ಬಿಜೆಪಿಯ ಡಾ.ತೇಜಸ್ವಿನಿ ಗೌಡ ಮತ್ತು ಕೆ.ಪಿ. ನಂಜುಂಡಿ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ.
ಸಚಿವ ಬೋಸರಾಜುಗೆ ಅವಕಾಶ
ಇವರಲ್ಲಿ ಸಚಿವ ಎನ್.ಎಸ್. ಬೋಸರಾಜು ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಕೆ.ಗೋವಿಂದರಾಜ್ ಅವರು ಮತ್ತೊಂದು ಆಯ್ಕೆಗೆ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯ ಎನ್. ರವಿಕುಮಾರ್ ಅವರು ಮರು ಆಯ್ಕೆಯಾಗುವ ಸಾಧ್ಯತೆಗಳಿವೆ. ಪಕ್ಷ ನಿಷ್ಠೆ ಆವರನ್ನು ಕೈ ಹಿಡಿಯಲಿದೆ. ಉಳಿದಂತೆ ಅಲ್ಲಿಯೂ ಹೊಸಬರಿಗೆ ಅವಕಾಶ ಸಿಗಬಹುದು. ಡಾ.ತೇಜಸ್ವಿನಿ ಗೌಡ ಮತ್ತು ಕೆ.ಪಿ. ನಂಜುಂಡಿ ಅವರೂ ಮೇಲ್ಮನೆಗೆ ಪುನರಾಯ್ಕೆಗೆ ಕಾಂಗ್ರೆಸ್‌ನಿಂದ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಪ್ರಬಲರ ಲಾಬಿ
ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ ಗೆ ಸವಾಲಾಗಿ ಪರಿಣಮಿಸಿದೆ. ಮಾಜಿ ಸಭಾಪತಿ ಯು.ಆರ್. ಸುದರ್ಶನ್, ಹಿರಿಯ ನಾಯಕ ಬಿ.ಎಲ್.ಶಂಕರ್, ವಕ್ತಾರ ರಮೇಶ್ ಬಾಬು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಮಾಜಿ ಶಾಸಕ ಎನ್.ಸಂಪಂಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ವಿಜಯ್ ಮುಳಗುಂದ, ಚಿತ್ರದುರ್ಗದ ಜಿ.ಎಸ್. ಮಂಜುನಾಥ್, ಮಂಗಳೂರಿನ ಐವನ್ ಡಿಸೋಜಾ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ವಿಧಾನಸಭೆಯ ಶಾಸಕರ ಬಲಾಬಲದ ಆಧಾರದಲ್ಲಿ 11 ಸ್ಥಾನಗಳಲ್ಲಿ 7 ಸ್ಥಾನಗಳು ಕಾಂಗ್ರೆಸ್ ಗೆ ಸುಲಭವಾಗಿ ದಕ್ಕಲಿವೆ. ಬಿಜೆಪಿಗೆ ಮೂರು ಮತ್ತು ಜೆಡಿಎಸ್ ಗೆ ಒಂದು ಸ್ಥಾನ ದೊರಕಲಿದೆ. ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ಕಾಂಗ್ರೆಸ್ ಗೆ ಹೋಗಲಿದೆ.
ಯತೀಂದ್ರ ಹೆಸರು ಮುಂಚೂಣಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಅವರನ್ನು ವಿಧಾನಪರಿಷತ್ ಗೆ ತರಲು ಸಿದ್ದರಾಮಯ್ಯ ಅವರ ಆಪ್ತ ಸಚಿವರು ಮತ್ತು ಶಾಸಕರು ಒಲವು ತೋರಿದ್ದಾರೆ. ಇವರ ಹೆಸರು ಬಹುತೇಕ ಅಂತಿಮವಾಗಬಹುದು ಎನ್ನಲಾಗುತ್ತಿದೆ.
ಈ ಚುನಾವಣೆ ನಂತರ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಮೊದಲ ಸ್ಥಾನಕ್ಕೆ ಏರಲಿದ್ದು ಸಭಾಪತಿ ಸ್ಥಾನವೂ ಸಿಗಲಿದೆ. ಪ್ರಸ್ತುತ ಬಿಜೆಪಿಯ ಬಸವರಾಜ ಹೊರಟ್ಟಿ ಸಭಾಪತಿಯಾಗಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)