Lok Sabha Elections 2024: ಲೋಕಸಭೆ ಚುನಾವಣೆ ಬಿಜೆಪಿ ಪಟ್ಟಿ ಬಿಡುಗಡೆ, ಕರ್ನಾಟಕದ ಒಂದೇ ಹೆಸರು ಪ್ರಕಟಿಸಿಲ್ಲ ಏಕೆ
Mar 03, 2024 04:33 PM IST
ಬಿಜೆಪಿ ಮೊದಲ ಪಟ್ಟಿಯಲ್ಲಿ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಎ.ನಾರಾಯಣಸ್ವಾಮಿ ಅವರ ಹೆಸರು ಕೂಡ ಪ್ರಕಟವಾಗಿಲ್ಲ.
- Karnataka Politics ಲೋಕಸಭೆ ಚುನಾವಣೆಗೆ ಮೊದಲ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದರೂ ಕರ್ನಾಟಕವನ್ನು ಮರೆತಿದೆ. ಇದು ಸಹಜವೋ ಅಥವಾ ರಾಜಕೀಯ ತಂತ್ರಗಾರಿಕೆಯೋ ಎನ್ನುವ ಚರ್ಚೆ ಬಿಜೆಪಿ ವಲಯದಲ್ಲಿಯೇ ನಡೆದಿದೆ.
ಹಿರಿಯ ನಾಯಕರು, ಕೇಂದ್ರದ ಸಚಿವರ ಹೆಸರುಗಳಿವೆ. ಆದರೆ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಒಬ್ಬರೇ ಹೆಸರನ್ನು ಘೋಷಿಸಿಲ್ಲ. ಅದರಲ್ಲೂ ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಆರು ಸಂಸದರಿದ್ದು, ಅವರಲ್ಲಿ ರಾಜೀವ್ ಚಂದ್ರಶೇಖರ್ ಒಬ್ಬರ ಹೆಸರು ಕೇರಳದ ತಿರುವನಂತಪುರಂ ಕ್ಷೇತ್ರಕ್ಕೆ ಘೋಷಣೆಯಾಗಿದೆ. ಕರ್ನಾಟಕಕ್ಕೆ ಮಾತ್ರ ಒಬ್ಬರ ಹೆಸರನ್ನು ಘೋಷಿಸಿಲ್ಲ. ಇದು ಬಿಜೆಪಿ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.
ಅದರಲ್ಲೂ ಕೇಂದ್ರದಲ್ಲಿ ಸಚಿವರಾಗಿರುವ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಎ. ನಾರಾಯಣಸ್ವಾಮಿ ಅವರಲ್ಲಿ ಇಬ್ಬರ ಹೆಸರಾದರೂ ಘೋಷಣೆಯಾಗಬಹುದು ಎನ್ನುವ ಲೆಕ್ಕಾಚಾರಗಳಿದ್ದವು. ಒಂದೇ ಒಂದು ಹೆಸರನ್ನೂ ವರಿಷ್ಠರು ಪರಿಗಣಿಸಿಲ್ಲ. ಇದಕ್ಕೆ ಹತ್ತಾರು ಕಾರಣಗಳನ್ನು ಬಿಜೆಪಿ ಕರ್ನಾಟಕದ ಮುಖಂಡರು ವ್ಯಾಖ್ಯಾನಿಸುತ್ತಿದ್ದಾರೆ.
ಈ ಬೆಳವಣಿಗೆ ಮೈತ್ರಿ ಪಕ್ಷ ಜೆಡಿಎಸ್‌ಗೂ ಅಚ್ಚರಿ ಮೂಡಿಸಿದೆ. ಮತ್ತೊಂದು ಕಡೆ ಈ ಬೆಳವಣಿಗೆಗಳನ್ನು ಕಾಂಗ್ರೆಸ್ ಎಚ್ಚರಿಕೆಯಿಂದಲೇ ಗಮನಿಸುತ್ತಿದೆ.
ವಿಧಾನಸಭೆ ಚುನಾವಣೆ ಪಾಠ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ ಕಹಿಯ ಪಾಠವನ್ನು ವರಿಷ್ಠರು ಇನ್ನೂ ಮರೆತಂತೆ ಕಾಣುತ್ತಿಲ್ಲ. ಏಕೆಂದರೆ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರು ಬಣಗಳಾಗಿ ರೂಪುಗೊಂಡು ಅಧಿಕಾರ ಕಳೆದುಕೊಂಡಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ,. ಮಾಜಿ ಸಿ.ಎಂ.ಬಸವರಾಜ ಬೊಮ್ಮಾಯಿ ಹಾಗೂ ಪಕ್ಷ ನಿಷ್ಠರ ಪ್ರತ್ಯೇಕ ಬಣಗಳು ವಿರುದ್ದ ದಿಕ್ಕಿನಲ್ಲಿ ಕೆಲಸ ಮಾಡಿದ್ದು ಪಕ್ಷ ಹೀನಾಯವಾಗಿ ಸೋಲುವಂತೆ ಮಾಡಿತ್ತು.
ಇದಾದ ಏಳು ತಿಂಗಳವರೆಗೂ ವರಿಷ್ಠರು ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕರನ್ನೂ ನೇಮಿಸಿದೇ ಸ್ಥಳೀಯ ಮುಖಂಡರಿಗೆ ಪಾಠ ಕಲಿಸಿತ್ತು. ಅಲ್ಲದೇ ಬಿಜೆಪಿ ಅಧ್ಯಕ್ಷರ ನೇಮಕವನ್ನೂ ವಿಳಂಬ ಮಾಡಿತ್ತು. ಪರೋಕ್ಷವಾಗಿ ವರಿಷ್ಠರು ಸ್ಥಳೀಯ ನಾಯಕರ ವರ್ತನೆ ಬೇಸರಗೊಂಡಿದ್ದನ್ನು ವ್ಯಕ್ತಪಡಿಸಿದ ರೀತಿ ಇದಾಗಿತ್ತು.
ಆನಂತರ ಪಕ್ಷದ ಅಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ, ಮತ್ತೊಂದು ಬಣದ ಆರ್.ಅಶೋಕ್‌ಗೆ ವಿಧಾನಸಭೆ, ಪಕ್ಷದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ನೀಡಲಾಗಿತ್ತು.
ಮುಗಿಯದ ಬಣ ರಾಜಕಾರಣ
ಇದಾಗಿ ಐದು ತಿಂಗಳೇ ಕಳೆಯುತ್ತಾ ಬರುತ್ತಿದೆ. ಹೀಗಿದ್ದರೂ ಕರ್ನಾಟಕ ಬಿಜೆಪಿಯಲ್ಲಿ ಇನ್ನೂ ಪರಿಸ್ಥಿತಿ ಸುಧಾರಿಸಿಲ್ಲ. ಮೇಲ್ನೋಟಕ್ಕೆ ಒಂದಾದಂತೆ ಕಂಡರೂ ಒಳಗಡೆ ಬಣ ತಿಕ್ಕಾಟ ನಿಂತಿಲ್ಲ. ವಿಧಾನಸಭೆ ಚುನಾವಣೆ ವೇಳೆ ಆದಂತೆಯೇ ಈ ಸಂಘರ್ಷದ ವಾತಾವರಣ ಲೋಕಸಭೆ ಚುನಾವಣೆಗೂ ವಿಸ್ತರಣೆಯಾಗುವ ಸೂಚನೆಗಳು ದೊರೆತಿವೆ. ಏಕೆಂದರೆ ಹತ್ತಕ್ಕೂ ಹೆಚ್ಚು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆಯ ಒತ್ತಡ ಬಲವಾಗಿ ಕೇಳಿ ಬರುತ್ತಿದೆ. ಅದೂ ಬಹಿರಂಗವಾಗಿಯೇ ಆಕಾಂಕ್ಷಿಗಳು ಹೇಳಿಕೆ ನೀಡುತ್ತಿದ್ದಾರೆ. ವಿಜಯೇಂದ್ರ ನೇಮಕಗೊಂಡರೂ ಯಡಿಯೂರಪ್ಪ ತಮ್ಮವರಿಗೆ ಮಣೆ ಹಾಕುತ್ತಾರೆ ಎನ್ನುವ ಆತಂಕ ಇನ್ನೊಂದು ಬಣದಲ್ಲಿದೆ.
ಈ ಕಾರಣದಿಂದಲೇ ವರಿಷ್ಠರು ಲೋಕಸಭೆ ಚುನಾವಣೆಗೆ ಪ್ರಕಟಿಸಿದ ಪಟ್ಟಿಯಲ್ಲಿ ಒಬ್ಬರ ಹೆಸರೂ ಇರಲಿಲ್ಲ. ಅದರಲ್ಲೂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರನ್ನು ಕರೆಯಿಸಿ ವರಿಷ್ಠರು ಮಾತನಾಡಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಮುಂದಿನ ಪಟ್ಟಿಯಲ್ಲಿ ಹೊಸ ಮುಖಗಳೂ ಸೇರಿ ಕೆಲವರ ಹೆಸರು ಪ್ರಕಟವಾಗಬಹುದು. ಅದಕ್ಕೂ ವರಿಷ್ಠರು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬಹುದು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಜೆಡಿಎಸ್ ಕಡೆ ಗಮನ
ಕರ್ನಾಟಕದಲ್ಲಿ ಎರಡೂವರೆ ದಶಕದ ನಂತರ ಬಿಜೆಪಿ ಮೈತ್ರಿಗೆ ಮುಂದಾಗಿದೆ. ಹಿಂದೆ ರಾಮಕೃಷ್ಣ ಹೆಗಡೆ ಬಣದ ಲೋಕಜನಶಕ್ತಿ, ಸಂಯುಕ್ತ ಜನತಾದಳ ಜತೆಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿತ್ತು. ಇದಾದ ನಂತರ ಈಗ ದೇವೇಗೌಡರ ಬಣದ ಜೆಡಿಎಸ್ ಜತೆಗೆ ಮೈತ್ರಿ ಆಗಿದೆ. ಬಿಜೆಪಿ ಒಳ ಜಗಳದ ಬಿಸಿ ಜೆಡಿಎಸ್‌ಗೂ ತಟ್ಟಬಾರದು ಎನ್ನುವ ಮುನ್ನೆಚ್ಚರಿಕೆಯನ್ನು ಬಿಜೆಪಿ ವರಿಷ್ಠರು ವಹಿಸಿರುವುದು ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಹೆಸರು ಪ್ರಕಟಿಸದೇ ಇರುವುದನ್ನು ಗಮನಿಸಿದರೆ ಗೊತ್ತಾಗುತ್ತದೆ.
ಕಾಂಗ್ರೆಸ್‌ಗೂ ಠಕ್ಕರ್
ಮತ್ತೊಂದು ಕಡೆ ಕರ್ನಾಟಕ ಕಾಂಗ್ರೆಸ್ ಕೂಡ ಬಿಜೆಪಿ ಟಿಕೆಟ್ ಹಂಚಿಕೆ, ಚುನಾವಣೆ ರಣನೀತಿಯ ಕಡೆ ಚಿತ್ತ ಹರಿಸಿದೆ. ಯಾರಿಗಾದರೂ ಟಿಕೆಟ್ ತಪ್ಪಿದರೆ ಅವರನ್ನು ಕಾಂಗ್ರೆಸ್ ಸೆಳೆಯುವ ತಂತ್ರಗಾರಿಕೆಯನ್ನೂ ಕಾಂಗ್ರೆಸ್ ಮಾಡುತ್ತಿದೆ. ಏಕೆಂದರೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗಳಿಲ್ಲ. ಬಿಜೆಪಿಯಿಂದ ಅಂತವರನ್ನು ಸೆಳೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ರಾಜ್ಯ ಸಭೆ ಚುನಾವಣೆಯಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಡ್ಡ ಮತದಾನದ ಮೂಲಕ ಬಿಜೆಪಿ ಬುಟ್ಟಿಗೆ ಕೈ ಹಾಕಿರುವುದು ಇದಕ್ಕೆ ಉದಾಹರಣೆ. ಇದನ್ನೂ ವರಿಷ್ಠರು ಗಮನದಲ್ಲಿಟ್ಟುಕೊಂಡು ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಮೂಲಗಳು ಖಚಿತಪಡಿಸಿವೆ.