logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಕಾರು ಮನೆಯಲ್ಲಿದ್ದರೂ ಟೋಲ್‌ ಕಡಿತ, ಬೆಂಗಳೂರಲ್ಲಿ ಹೆಚ್ಚಿದ ಪ್ರಕರಣ: ಅನಗತ್ಯ ಹಣ ಕಡಿತಗೊಂಡರೆ ಹೀಗೆ ಮಾಡಿ

Bangalore News: ಕಾರು ಮನೆಯಲ್ಲಿದ್ದರೂ ಟೋಲ್‌ ಕಡಿತ, ಬೆಂಗಳೂರಲ್ಲಿ ಹೆಚ್ಚಿದ ಪ್ರಕರಣ: ಅನಗತ್ಯ ಹಣ ಕಡಿತಗೊಂಡರೆ ಹೀಗೆ ಮಾಡಿ

HT Kannada Desk HT Kannada

Dec 28, 2023 09:52 AM IST

google News

ಬೆಂಗಳೂರಿನ ಟೋಲ್‌ಗಳಲ್ಲಿ ಸಂಚರಿಸದೇ ಇದ್ದರೂ ಹಣ ಕಡಿತ ಪ್ರಕರಣ ಹೆಚ್ಚಿವೆ.

    • Bangalote Toll issues ಬೆಂಗಳೂರು ಸುತ್ತಮುತ್ತಲಿನ ಕೆಲವು ಟೋಲ್‌ಗಳಲ್ಲಿ ಸಂಚರಿಸದೇ ಇದ್ದರೂ ಹಣ ಕಡಿತವಾದ ದೂರುಗಳು ಬರುತ್ತಿವೆ. ಸಂಚರಿಸದೇ ಹಣ ಕಡಿತವಾದರೇ ಏನು ಮಾಡಬೇಕು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಬೆಂಗಳೂರಿನ ಟೋಲ್‌ಗಳಲ್ಲಿ ಸಂಚರಿಸದೇ ಇದ್ದರೂ ಹಣ ಕಡಿತ ಪ್ರಕರಣ ಹೆಚ್ಚಿವೆ.
ಬೆಂಗಳೂರಿನ ಟೋಲ್‌ಗಳಲ್ಲಿ ಸಂಚರಿಸದೇ ಇದ್ದರೂ ಹಣ ಕಡಿತ ಪ್ರಕರಣ ಹೆಚ್ಚಿವೆ.

ಬೆಂಗಳೂರು: ಅವರು ಖಾಸಗಿ ಕಂಪೆನಿ ಉದ್ಯೋಗಿ. ಅಂದು ಮನೆಯಿಂದಲೇ ಹೊರ ಹೋಗಿರಲಿಲ್ಲ. ಕಾರು ಕೂಡ ಮನೆಯಲ್ಲಿಯೇ ಇತ್ತು. ಫಾಸ್ಟ್‌ ಟ್ಯಾಗ್‌ ಕೂಡ ಕದಲಿರಲಿಲ್ಲ. ಆದರೆ ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಹಣ ಕಡಿತವಾಗಿತ್ತು.

ಮತ್ತೊಬ್ಬ ಖಾಸಗಿ ಉದ್ಯೋಗಿ ಕಚೇರಿಗೆ ಹೋಗಿದ್ದರು. ಆದರೆ ಅವರಿಗೆ ವಾಹನ ಸಂಚಾರದ ಕಡಿತದ ಕುರಿತು ಸಂದೇಶ ಬಂದಿತ್ತು.

ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರು ಕಚೇರಿಯಲ್ಲಿದ್ದರೆ ಕಾರು ಮನೆಯಲ್ಲಿಯೇ ಇತ್ತು. ಅವರದ್ದೂ ಟೋಲ್‌ ಕಡಿತವಾಗಿತ್ತು. ಇದನ್ನು ಗಮನಿಸಿದವರು ಮನೆಗೆ ಕರೆ ಮಾಡಿ ಪತ್ನಿಯನ್ನು ವಿಚಾರಿಸಿದರೆ, ಕಾರು ಮನೆಯಲ್ಲಿಯೇ ಇದೆ.

ಇದು ಬೆಂಗಳೂರಿನ ಹಲವು ಮಂದಿಗೆ ಆಗಿರುವ ಅನುಭವ. ತಮ್ಮ ವಾಹನ ಬಳಸದೇ ಇದ್ದರೂ ಟೋಲ್‌ ಗೇಟ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ಮೂಲಕ ಹಣ ಕಡಿತಗೊಳಿಸುವ ಪ್ರಕರಣಗಳು ಅಧಿಕವಾಗುತ್ತಿವೆ. ಕೆಲವರು ಕಡಿಮೆ ಮೊತ್ತ ಎಂದು ದೂರು ದಾಖಲಿಸದೇ ಸುಮ್ಮನಾದರೇ, ಮತ್ತೆ ಕೆಲವರು ದೂರು ದಾಖಲಿಸಿ ಹಣ ವಾಪಾಸ್‌ ಪಡೆದಿದ್ದೂ ಇದೆ. ಬಹಳಷ್ಟು ಮಂದಿ ಕರೆ ಮಾಡಿ ವಿಚಾರಿಸಿ ಸುಮ್ಮನಾಗಿ ಬಿಡುತ್ತಿದ್ದಾರೆ.

ಬಗೆಬಗೆಯ ಅನುಭವ

ಜೆನಿಲ್‌ ಜೈನ್‌ ಎಂಬುವವರು ಹರಳೂರು ಸರ್ಜಾಪುರ ರಸ್ತೆಯಲ್ಲಿರುವ ಮನೆಯಲ್ಲಿಯೇ ಇದ್ದರು. ಅವರ ಫಾಸ್ಟ್‌ ಟ್ಯಾಗ್‌ ನಿಂದ ಕಡಿತವಾದ ಮೊತ್ತ 60 ರೂ. ಟೋಲ್‌ ಇರುವುದು ಅವರ ಮನೆಯಿಂದ 50 ಕಿ.ಮಿ ದೂರದಲ್ಲಿ. ಪೇಟಿಎಂ ಬ್ಯಾಂಕ್‌ನೊಂದಿಗ ಫಾಸ್ಟ್‌ ಟ್ಯಾಗ್‌ ಲಿಂಕ್‌ ಆಗಿತ್ತು. ದೂರು ದಾಖಲಿಸಿ ಹಣ ವಾಪಾಸ್‌ ಪಡೆಯುವ ಹೊತ್ತಿಗೆ ಒಂದು ತಿಂಗಳಾಗಿತ್ತು. ಕಾರಣ ಮಾತ್ರ ತಿಳಿಯಲೇ ಇಲ್ಲ.

ಮತ್ತೊಬ್ಬರು ಕೊತ್ತನೂರು ನಿವಾಸಿ ಅಲೆನ್‌ ಜೇಮ್ಸ್‌ ಎಂಬುವವರಿಗೆ ಇದೇ ಅನುಭವವಾಯಿತು. ಅವರು ಕಚೇರಿಯಲ್ಲಿದ್ದರೆ ಟೋಲ್‌ ಕಡಿತವಾಗಿದೆ. ಮನೆಯಲ್ಲಿದ್ದ ಸಹೋದರ ಕಾರು ತೆಗೆದುಕೊಂಡು ಹೋಗಿರಬಹುದೇ ಎಂದು ವಿಚಾರಸಿದರೆ ಅವರು ಕುಳಿತು ಟಿವಿ ನೋಡುತ್ತಿದ್ದರೆ ಹೊರತು ಹೊರಗೇ ಹೋಗಿರಲಿಲ್ಲ. ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಫಾಸ್ಟ್‌ಟ್ಯಾಗ್‌ ಲಿಂಕ್‌ ಆಗಿತ್ತು. 30 ರೂ. ಆದ್ದರಿಂದ ಸುಮ್ಮನಾದರು.

ಸಿವಿ ರಾಮನ್‌ ನಗರ ನಿವಾಸಿ ರಾಖಿ ಅನಿಲ್‌ ಅವರಿಗೆ ಪತಿ ಕಾರಿನ ಫಾಸ್ಟ್‌ಟ್ಯಾಗ್‌ನಿಂದ ಹಣ ಕಡಿತದ ಸಂದೇಶ ಬಂದಿತ್ತು. ಕಾರು ಮನೆಯಲ್ಲಿಯೇ ಇದ್ದರೆ ಹಣ ಕಡಿತವಾಗಿತ್ತು. ಅವರೂ ಕೂಡ ಹಣ ವಾಪಾಸಿಗೆ ಮುಂದಾಗದೇ ದೂರು ನೀಡಿ ಸುಮ್ಮನಾದರು.

ಸಮಸ್ಯೆ ನಿಜ

ಈ ಕುರಿತು ವಿಚಾರಿಸಿದವರಿಗೆ ದೊರೆತ ಉತ್ತರ, ಟೋಲ್‌ಗೇಟ್‌ಗಳಲ್ಲಿ ಕೆಲವೊಮ್ಮೆ ತಾಂತ್ರಿಕ ಸಮಸ್ಯೆ ಎದುರಾಗಿ ವಿವರವನ್ನು ಅಲ್ಲಿಯೇ ದಾಖಲಿಸಲಾಗುತ್ತದೆ. ಆಗ ಒಂದು ಸಂಖ್ಯೆ ಹೆಚ್ಚು ಕಡಿಮೆ ದಾಖಲಿಸಿದರೂ ಟೋಲ್‌ ಕಡಿತವಾಗಿ ಬಿಡುತ್ತದೆ. ಇದೂ ಹೀಗೆ ಆಗಿರಬಹುದು ಎಂಬ ಉತ್ತರ ದೊರೆತಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಟೋಲ್‌ ಅನಗತ್ಯ ಹಣ ಕಡಿತ ಕುರಿತು ತಮ್ಮ ಅನುಭವಗಳನ್ನು ಹಲವರು ಹಂಚಿಕೊಂಡಿದ್ದಾರೆ. ಅದರಲ್ಲೂ ಬೆಂಗಳೂರಿನ ನವಯುಗ ಟೋಲ್‌ನಲ್ಲಿಯೇ ಇಂತಹ ಘಟನೆ ಹೆಚ್ಚು ಆಗಿರುವಂತದ್ದು.

ಟೋಲ್‌ನವರು ಹೇಳೋದು ಏನು

ನವಯುಗ ಟೋಲ್‌ನ ವ್ಯವಸ್ಥಾಪಕ ಅಜಯಸಿಂಗ್‌ ಅವರ ಪ್ರಕಾರ, ಕೆಲವೊಮ್ಮೆ ಸಾಫ್ಟ್‌ ವೇರ್‌ ಸಮಸ್ಯೆಯಿಂದಲೂ ಹೀಗೆ ಅಗಿರಬಹುದು. ಕೆಲವು ಕಡೆ ಸಾಫ್ಟ್‌ವೇರ್‌ ಕೂಡ ಬದಲಿಸುತ್ತಿದ್ದೇವೆ ಎನ್ನುತ್ತಾರೆ.

ಅನಗತ್ಯವಾಗಿ ಟೋಲ್‌ ಮೊತ್ತ ಕಡಿತವಾದರೆ ಕರೆ ಮಾಡಬಹುದು. ಇದಕ್ಕಾಗಿಯೇ ಸಹಾಯವಾಣಿ ಸಂಖ್ಯೆಯನ್ನು 93533 77195 ಮೀಸಲಿಡಲಾಗಿದೆ. ದಾಖಲೆ ಸಹಿತ ವಿವರ ನೀಡಿದರೆ ಹಣ ವಾಪಾಸ್‌ಗೆ ಕ್ರಮ ವಹಿಸಲಾಗುತ್ತದೆ ಎಂಬುದು ಅವರ ವಿವರಣೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್‌ ಅವರು ಹೇಳುವಂತೆ, ಪ್ರತಿ ಟೋಲ್‌ನಲ್ಲಿ ಮೂರರಿಂದ ಐದು ವರ್ಷಕ್ಕೊಮ್ಮೆ ಸಾಫ್ಟ್‌ವೇರ್‌ ಬದಲಾಯಿಸಲಾಗುತ್ತದೆ. ಅಪ್ಡೇಟ್‌ ಸಾಫ್ಟ್‌ ವೇರ್‌ ಬಳಸುವುದು ಇದೆ. ಅದು ಹಲವಾರು ಟೋಲ್‌ಗಳಲ್ಲಿ ನಡದಿದೆ ಎನ್ನುತ್ತಾರೆ.

ಇಂತಹ ಸಮಸ್ಯೆಯಾದಾಗ ಹೀಗೆ ಮಾಡಿ

  1. ನಿಮ್ಮ ಹಣ ಟೋಲ್‌ಗಳಲ್ಲಿ ಅನಗತ್ಯವಾಗಿ ಕಡಿತವಾಗಿದ್ದರೆ ಕೂಡಲೇ 1033 ಗೆ ಕರೆ ಮಾಡಿ
  2. ಮೊದಲು ನಿಮ್ಮ ಹಣ ಕಡಿತವಾಗಿರುವ ಕುರಿತು ಮಾಹಿತಿ ನೀಡಿ.
  3. ಯಾವ ಟೋಲ್‌ನಲ್ಲಿ ಹೀಗೆ ಹಣ ಕಡಿತವಾಗಿದೆ ಎನ್ನುವುದನ್ನು ಗಮನಿಸಿ ಅಲ್ಲಿನ ಟೋಲ್‌ ಮ್ಯಾನೇಜರ್‌ ನಂಬರ್‌ ಪಡೆಯಿರಿ.
  4. ನಿಮ್ಮ ಹಣ ಕಡಿತದ ಸ್ಕ್ರೀನ್‌ ಶಾಟ್‌ ಸಹಿತ ಮಾಹಿತಿ ರವಾನಿಸಿ.
  5. ನಿಮ್ಮ ಫಾಸ್ಟ್‌ಟ್ಯಾಗ್‌ ಲಿಂಕ್‌ ಇರುವ ಬ್ಯಾಂಕ್‌ಗೂ ಮಾಹಿತಿ ನೀಡಿ
  6. ಮಾಹಿತಿಗೆ npci.org.inಗೆ ಸಂಪರ್ಕಿಸಿ ===============

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ