Bangalore Crime: ಬೆಂಗಳೂರಿನಲ್ಲಿ ತೀರ್ಥಹಳ್ಳಿ ಮೂಲದ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿ ಭೀಕರ ಹತ್ಯೆ
Nov 05, 2023 08:38 PM IST
ಬೆಂಗಳೂರಿನಲ್ಲಿ ಕೊಲೆಯಾದ ತೀರ್ಥಹಳ್ಳಿ ಮೂಲದ ಅಧಿಕಾರಿ ಪ್ರತಿಮಾ
- officer murder in Bangalore ಗಣಿ ಮತ್ತು ಭೂಗರ್ಭ ಇಲಾಖೆ ( Mines and geology) ಉಪನಿರ್ದೇಶಕರಾಗಿದ್ದ ಶಿವಮೊಗ್ಗ ಮೂಲದ ( Shimoga) ಪ್ರತಿಮಾ ಎಂಬುವವರನ್ನು ಬೆಂಗಳೂರಿನಲ್ಲಿ( Bangalore) ಹತ್ಯೆ ಮಾಡಲಾಗಿದ್ದು, ತನಿಖೆ ಚುರುಕುಗೊಂಡಿದೆ
ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿದ್ದ ತೀರ್ಥಹಳ್ಳಿ ಮೂಲಕ ಅಧಿಕಾರಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಶನಿವಾರ ರಾತ್ರಿ ಈ ಕೃತ್ಯ ನಡೆದಿದ್ದು ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಾಗಿದ್ದ ಪ್ರತಿಮಾ ಸತ್ಯನಾರಾಯಣ (45) ಕೊಲೆಯಾದವರು. ಪ್ರತಿಮಾ ಸಹೋದರ ಪ್ರತೀಶ್ ಬೆಂಗಳೂರಿನಲ್ಲಿಯೇ ವಾಸವಿದ್ದು, ಸಹೋದರಿಗೆ ಕರೆ ಮಾಡಿದರೂ ಸ್ವೀಕರಿಸದೇ ಇದ್ದಾಗ ಅನುಮಾನಗೊಂಡ ನೆರೆಮನೆಯವರಿಗೆ ತಿಳಿಸಿದಾಗ ಕೊಲೆಯಾಗಿರುವುದು ಬಯಲಾಗಿದೆ.
ಪ್ರತಿಮಾ ಅವರು ಮೂಲತಃ ಶಿವಮೊಗ್ಗದವರು. 18 ವರ್ಷದ ಹಿಂದೆಯೇ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸತ್ಯನಾರಾಯಣ ಅವರೊಂದಿಗೆ ವಿವಾಹವಾಗಿತ್ತು. ಇದರಿಂದ ಪತಿ ಸತ್ಯನಾರಾಯಣ ಅವರು ಮಗನೊಂದಿಗೆ ಊರಿನಲ್ಲಿಯೇ ಇದ್ದರು. ಮಗ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ. ಶಿವಮೊಗ್ಗದಲ್ಲಿಯೇ ಕೆಲಸ ಮಾಡುತ್ತಿದ್ದ ಪ್ರತಿಮಾ ಎಂಟು ವರ್ಷದ ಹಿಂದೆ ರಾಮನಗರಕ್ಕೆ ವರ್ಗವಾಗಿ ಬಂದಿದ್ದರು.
ಅಲ್ಲಿಂದ ಬೆಂಗಳೂರು ನಗರ ಜಿಲ್ಲೆಗೆ ವರ್ಗವಾಗಿದ್ದರು. ಬೆಂಗಳೂರಿನಲ್ಲಿಯೇ ಕಚೇರಿ ಇದ್ದುದರಿಂದ ಇಲ್ಲಿಯೇ ನೆಲೆಸಿದ್ದರು. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು.
ಆದರೆ ಮಗನನ್ನು ನೋಡಿಕೊಂಡು ಬರಲು ಆಗಾಗ ಹೋಗುತ್ತಿದ್ದರು. ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯಲ್ಲೇ ಮನೆ ಕಟ್ಟಿಸಿದ್ದು ಪ್ರತಿಮಾ ಹೋಗಿ ಬಂದಿದ್ದರು
ಶನಿವಾರವೂ ಕೆಲಸ ಮುಗಿಸಿ ಅಪಾರ್ಟ್‌ಮೆಂಟ್ ಬಂದಿದ್ದಾರೆ. ಕಾರು ಚಾಲಕ ಇವರನ್ನು ಬಿಟ್ಟು ವಾಪಾಸ್ ಹೋಗಿದ್ಧಾನೆ. ಇದಾದ ಕೆಲ ಹೊತ್ತಿನಲ್ಲಿ ಕೊಲೆ ನಡೆದಿದೆ. ಪ್ರತಿಮಾ ಅವರ ಕತ್ತು ಕತ್ತರಿಸಿ ಕೊಲೆ ಮಾಡಲಾಗಿದೆ.
ಶನಿವಾರ ರಾತ್ರಿಯೇ ಸಹೋದರ ಪ್ರತೀಶ್ ಕರೆ ಮಾಡಿದ್ದು, ಆಗ ಪ್ರತಿಮಾ ಕರೆ ಸ್ವೀಕರಿಸಿಲ್ಲ. ಕೆಲಸ ಮುಗಿಸಿ ಬಂದಿದ್ದರಿಂದ ಮಲಗಿರಬೇಕು ಎಂದು ಸುಮ್ಮನಾಗಿದ್ದು, ಬೆಳಿಗ್ಗೆಯೂ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಪಕ್ಕದ ಮನೆಯವರಿಗೆ ನೋಡುವಂತೆ ತಿಳಿಸಿದಾಗ ಕಿಟಕಿಯಿಂದ ನೋಡಿದಾಗ ಕೊಲೆಯಾಗಿರುವುದು ಕಂಡು ಬಂದಿತ್ತು. ಬಾಗಿಲು ಕೂಡ ತೆರೆದಿತ್ತು. ಕೂಡಲೇ ಪ್ರತೀಶ್ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.
ಈ ಕುರಿತು ದೂರು ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಶಹಪುರ್‌ವಾಡ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳವನ್ನು ಕರೆಯಿಸಲಾಗಿತ್ತು. ಸಿಸಿ ಕ್ಯಾಮರಾ ಸಂಬಂಧಿಸಿದ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ. ಕುಟುಂಬದವರೂ ಆಗಮಿಸಿದ್ದು. ಅವರಿಂದಲೂ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಪ್ರತಿಮೆ ಒಬ್ಬರೇ ಇದ್ದರು. ಆಗಾಗ ಸಂಬಂಧಿಕರು ಬಂದು ಹೋಗುತ್ತಿದ್ದರು. ಅವರು ಬರುವುದು ತಡವಾಗುತ್ತಿತ್ತು. ಇದರಿಂದ ಹೆಚ್ಚು ನಮ್ಮ ಜತೆ ಮಾತುಕತೆ ಇರಲಿಲ್ಲ. ಆದರೆ ಕೊಲೆಯಾಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಎಲ್ಲಾ ಆಯಾಮದಲ್ಲೂ ಕೊಲೆ ತನಿಖೆ ನಡೆದಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ಬೆಂಗಳೂರು ನಗರ ಡಿಸಿ ಕೆ.ಎ.ದಯಾನಂದ, ಅವರ ಮೇಲೆ ಯಾವುದೇ ದೂರುಗಳಾಗಿ, ಸಮಸ್ಯೆಯಾಗಿ ಇರಲಿಲ್ಲ. ಇಲಾಖೆಯಲ್ಲಿ ಒಳ್ಳೆಯ ಹೆಸರಿತ್ತು. ನಗುಮುಖದಿಂದಲೇ ಕೆಲಸ ಮಾಡುತ್ತಿದ್ದರು. ಯಾವ ಕಾರಣಕ್ಕೆ ಕೊಲೆಯಾಗಿದೆ ಎನ್ನುವುದು ತನಿಖೆಯಿಂದಲೇ ತಿಳಿಯಬೇಕು ಎಂದು ಹೇಳಿದರು.
ಡಿಸಿಪಿ ರಾಹುಲ್ ಶಹಪುರ್‌ವಾಡ್ ಮಾತನಾಡಿ, ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದೇವೆ. ಮೂರು ತಂಡಗಳನ್ನು ರಚಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿರಿ