Nandi betta Train: ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲಿನಲ್ಲಿ ಸಂಚರಿಸಿ: ಡಿ 11ರಿಂದ ಸೇವೆ ಶುರು
Dec 06, 2023 09:41 AM IST
ನಂದಿಬೆಟ್ಟಕ್ಕೆ ವಿದ್ಯುತ್ ರೈಲು ಸಂಚಾರ ಡಿಸೆಂಬರ್ 11ರಂದು ಆರಂಭವಾಗಲಿದೆ.
- Memu train to nandi hills ಪ್ರಸಿದ್ದ ಪ್ರವಾಸಿ ಸ್ಥಳ ನಂದಿಬೆಟ್ಟಕ್ಕೆ( Nandi betta) ವಿದ್ಯುತ್ ರೈಲು ಸಂಚಾರ ಆರಂಭವಾಗುತ್ತಿದೆ. ಬಹು ದಿನಗಳ ಕನಸು ಈಗ ನನಸಾಗುತ್ತಿದೆ.
ಬೆಂಗಳೂರು: ನೀವು ಪ್ರವಾಸಿ ಪ್ರಿಯರೇ. ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತೀರಾ. ಹಾಗಾದರೇ ಬೆಂಗಳೂರು ಸಮೀಪದ ಅತ್ಯಂತ ಸುಂದರ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲಿನಲ್ಲಿ ಸಂಚರಿಸಲು ಅಣಿಯಾಗಿ.
ಭಾರತೀಯ ರೈಲ್ವೆಯು ನಂದಿ ಬೆಟ್ಟಕ್ಕೆ ಮೊದಲ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭಿಸಲು ಅಣಿಯಾಗಿದೆ. ಡಿಸೆಂಬರ್ 11ರಂದು ನಂದಿ ಬೆಟ್ಟ ಭಾಗದ ಸಂಚಾರ ಶುರುವಾಗಲಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಈಗಾಗಲೇ ನೈರುತ್ಯರೈಲ್ವೆ(South Western Railway) ಡೀಸೆಲ್ ಆಧರಿತ ರೈಲು( Demu) ರೈಲು ಸೇವೆಯನ್ನು ಬೆಂಗಳೂರು- ಚಿಕ್ಕಬಳ್ಳಾಪುರ ನಡುವೆ ಆರಂಭಿಸಿದೆ. ಇದೇ ಮಾರ್ಗದಲ್ಲಿ ಮೇನ್ ಲೇನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್( Memu) ರೈಲು ಸಂಚಾರವನ್ನು ಆರಂಭಿಸುತ್ತಿದೆ.
ಈಗ ದೇವನಹಳ್ಳಿಯಿಂದ ವಿಮಾನ ನಿಲ್ದಾಣ ಮಾರ್ಗವಾಗಿ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಸಂಚಾರ ಶುರುವಾಗಲಿದೆ. ಇದರಡಿ ಬೆಂಗಳೂರು ಕಂಟೋನ್ಮೆಂಟ್- ಚಿಕ್ಕಬಳ್ಳಾಪುರ- ಕಂಟೋನ್ಮೆಂಟ್( ರೈಲು ಗಾಡಿ ಸಂಖ್ಯೆ 06531/06532), ಚಿಕ್ಕಬಳ್ಳಾಪುರ- ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ( ರೈಲು ಗಾಡಿ ಸಂಖ್ಯೆ 06535/06538) ಹಾಗೂ ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ( ರೈಲು ಗಾಡಿ ಸಂಖ್ಯೆ 06593/06594) ಸೇವೆಯನ್ನು ಈ ಮಾರ್ಗದಲ್ಲಿ ಶುರು ಮಾಡಲಿವೆ.
ಈಗಾಗಲೇ ಯಲಹಂಕ ಹಾಗೂ ಚಿಕ್ಕಬಳ್ಳಾಪುರ ನಡುವಿನ ರೈಲು ಮಾರ್ಗದ ವಿದ್ಯುದೀಕರಣ ಕಾರ್ಯ ಮುಗಿದಿತ್ತು. ಕಳೆದ ವರ್ಷದ ಮಾರ್ಚ್‌ನಲ್ಲಿ ಇದು ಪೂರ್ಣಗೊಂಡರೂ ವಿದ್ಯುತ್ ರೈಲು ಸಂಚಾರ ಶುರುವಾಗಿರಲಿಲ್ಲ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ.
ಸದ್ಯ ನಂದಿಬೆಟ್ಟ ಮಾರ್ಗವಾಗಿ ಕೆಎಸ್‌ಆರ್ ಬೆಂಗಳೂರು- ಕೋಲಾರ- ಕಂಟೋನ್ಮೆಂಟ್ ಡೆಮು ರೈಲು( ಗಾಡಿ ಸಂಖ್ಯೆ06387/06388) ಹಾಗ ಕೆಎಸ್‌ಆರ್ ಬೆಂಗಳೂರು- ಕೋಲಾರ- ಕೆಎಸ್‌ಆರ್ ಬೆಂಗಳೂರು ಡೆಮು ರೈಲು( ಗಾಡಿ ಸಂಖ್ಯೆ 16549/16550 ) ಸಂಚಾರ ನಡೆಸಿವೆ. ಈ ರೈಲುಗಳಿಗೆ ನಂದಿ ಬೆಟ್ಟದ ನಿಲ್ದಾಣದಲ್ಲಿ ನಿಲುಗಡೆಯಿದೆ.
ಸಮಯದ ಬಗ್ಗೆ ತಕರಾರು
ಆದರೆ ವಿದ್ಯುತ್ ರೈಲು ಆರಂಭದ ದಿನಾಂಕ ಕೊನೆಗೂ ಘೋಷಣೆಯಾದರೂ ನಂದಿ ಬೆಟ್ಟಕ್ಕೆ ಆಗಮಿಸುವ ಸಮಯದ ಬಗ್ಗೆ ಹಲವರಿಗೆ ತಕರಾರುಗಳಿವೆ. ವಿದ್ಯಾರ್ಥಿ ಮಂಜು ನಾಯರ್ ಹೇಳುವಂತೆ, ನಂದಿ ಬೆಟ್ಟಕ್ಕೆ ಆರಂಭಿಸುತ್ತಿರುವ ಮೆಮು ರೈಲಿನ ಸಮಯ ಸರಿಯಾಗಿಲ್ಲ. ಬೆಳಿಗ್ಗೆ 6:37ಗೆ ನಂದಿಗೆ ಆಗಮಿಸುವ ಸಮಯ ಬದಲಾಗಬೇಕು. ಏಕೆಂದರ ಆ ಹೊತ್ತಿಗೆ ಸೂರ್ಯೋದಯ ಆಗಿರುವುದರಿಂದ ಅಷ್ಟು ಹೊತ್ತಿಗೆ ಬರುವುದು ತಡವಾಗಲಿದೆ. ಪ್ರವಾಸಿಗರಿಗೆ ಇದರಿಂದ ಉಪಯೋಗವಾಗೋಲ್ಲ. ಇನ್ನೂ ಬೇಗ ನಂದಿ ಬೆಟ್ಟ ನಿಲ್ದಾಣಕ್ಕೆ ರೈಲು ಬರುವಂತಾಬೇಕು ಎಂದು ಸಲಹೆ ನೀಡುತ್ತಾರೆ.
ಇತರೆಡೆಯೂ ನಿಲ್ಲಿಸಿ
ಇದೇ ರೈಲು ದೊಡ್ಡಜಾಲ, ಬೆಟ್ಟ ಹಲಸೂರು, ಚನ್ನಸಂದ್ರ ಪ್ರದೇಶಗಳಿಗೆ ನಿಲುಗಡೆ ಇಲ್ಲ. ಈ ನಿಲ್ದಾಣಗಳಲ್ಲೂ ಮೆಮು ರೈಲಿನ ನಿಲುಗಡೆಗೆ ಅವಕಾಶ ನೀಡಿದರೆ ಹಲವರಿಗೆ ಉಪಯೋಗವಾಗಲಿದೆ ಎಂದು ಸ್ಥಳೀಯರಾದ ರಾಜಕುಮಾರ್ ದುಗ್ಗರ್ ಹೇಳುತ್ತಾರೆ.
ಈ ಹಿಂದೆಯೇ ನೈರುತ್ಯ ರೈಲ್ವೆ 108 ವರ್ಷ ಹಳೆಯದಾದ ಪಾರಂಪರಿಕ ಬೆಂಗಳೂರು-ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಪ್ರವಾಸಿಗರಿಗೆಂದೇ ಒಂದು ದಿನದ ಪ್ಯಾಕೇಜ್ ಪ್ರವಾಸ ಯೋಜನೆ ರೂಪಿಸಿತ್ತು. ಇದರಲ್ಲಿ ಪಾರಂಪರಿಕ ರೈಲು ನಿಲ್ದಾಣಗಳ ಪುನರುಜ್ಜೀವನವೂ ಸೇರಿತ್ತು.ನಂದಿ ಬೆಟ್ಟದ ಸೂರ್ಯೋದಯ, ದೇವನಹಳ್ಳಿ ಕೋಟೆ, ಚಿಕ್ಕಬಳ್ಳಾಪುರ ಆದಿಯೋಗಿ ಮೂರ್ತಿ ವೀಕ್ಷಣೆ ಸೇರಿದ್ದವು. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ.
ಎರಡು ತಿಂಗಳಲ್ಲಿ ಬದಲಾವಣೆ
ಈಗಾಗಲೇ ನೈರುತ್ಯ ರೈಲ್ವೆ ಇಂಟ್ಯಾಕ್ ಸಹಯೋಗದಲ್ಲಿ ಪಾರಂಪರಿಕ ರೈಲ್ವೆ ನಿಲ್ದಾಣಗಳ ರಕ್ಷಣಾ ಕಾರ್ಯ ಕೈಗೊಂಡಿದೆ. ದೊಡ್ಡಜಾಲ, ದೇವನಹಳ್ಳಿ, ಅವತಿಹಳ್ಳಿ, ನಂದಿ ಬೆಟ್ಟ ನಿಲ್ದಾಣಗಳ ಪುನರುಜ್ಜೀವನ ಕಾರ್ಯ ಎರಡು ತಿಂಗಳಲ್ಲಿ ಮುಗಿಯಲಿದೆ. ಈ ಕೆಲಸ ಮುಗಿದರೆ ಜನ ಬಯಸುವಂತೆ ನಂದಿ ಬೆಟ್ಟ ಸೂರ್ಯೋದಯ ವೀಕ್ಷಣೆ ಸಮಯಕ್ಕೆ ಮುಂಚೆಯೇ ರೈಲು ಸಂಚಾರ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಬೆಂಗಳೂರು ನೈರುತ್ಯ ರೈಲ್ವೆ ಹೆಚ್ಚುವರಿ ವಿಭಾಗೀಯ ವ್ದವಸ್ಥಾಪಕಿ ಕುಸುಮಾ ಹರಿಪ್ರಸಾದ್ ಹೇಳುತ್ತಾರೆ.
ಸರ್ ಎಂ. ವಿಶ್ವೇಶ್ವರಯ್ಯ ಅವರ ಜನುಮ ಸ್ಥಳ ಮುದ್ದೇನಹಳ್ಳಿ ಒಳಗೊಂಡ ಚಿಕ್ಕಬಳ್ಳಾಪುರ- ದೇವನಹಳ್ಳಿ ರೈಲ್ವೆಗೆ ಮಾರ್ಗಕ್ಕೆ ಸುದೀರ್ಘ ಇತಿಹಾಸವಿದೆ. 1915 ರಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ( PPP) ಈ ಮಾರ್ಗವನ್ನು ರೂಪಿಸಲಾಗಿತ್ತು. ಈ ಮಾದರಿಯ ದೇಶದ ಮೊದಲ ರೈಲ್ವೆ ಮಾರ್ಗ ಇದು ಎನ್ನುವ ಹಿರಿಮೆಯೂ ಇದೆ.