Petrol diesel Rates: ಪೆಟ್ರೋಲ್,ಡೀಸೆಲ್ ದರ ಹೆಚ್ಚಳ ಜಾರಿ, ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಕಡಿಮೆ, ಎಷ್ಟಿದೆ ವ್ಯತ್ಯಾಸ
Jun 16, 2024 09:34 AM IST
ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ.
- ಕರ್ನಾಟಕದಲ್ಲಿ ಶನಿವಾರ ಮಧ್ಯರಾತ್ರಿಯಿಂದಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದ ರಾಜ್ಯದ ದರಗಳ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು: ಲೋಕ ಸಭೆ ಚುನಾವಣೆ ಫಲಿತಾಂಶ ಜಾರಿಯಾಗಿ ಎರಡು ವಾರದೊಳಗೆ ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ತೆರಿಗೆಯನ್ನು ಕರ್ನಾಟಕ ಸರ್ಕಾರ ಹೆಚ್ಚಿಸಿದೆ. ಹೊಸ ದರ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಪರಿಷ್ಕೃತ ದರದ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್ ಲೀಟರ್‌ಗೆ 3 ರೂ.ಗಳಷ್ಟು ಹೆಚ್ಚಾಗಿದೆ. ಭಾನುವಾರ ಬೆಳಿಗ್ಗೆಯಿಂದ ವಾಹನ ಸವಾರರು ಗೊಣಗುತ್ತಲೇ ಹೆಚ್ಚಿನ ದರವನ್ನು ನೀಡಿ ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸಿಕೊಂಡು ಹೋಗುವುದು ಕಂಡು ಬಂದಿದೆ. ಆದರೆ ಕರ್ನಾಟಕದಲ್ಲಿರುವ ದರವನ್ನು ಹೋಲಿಸಿದರೆ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಈಗಲೂ ಪೆಟ್ರೋಲ್ ಹಾಗೂ ಡೀಸೆಲ್ ಕಡಿಮೆಯಿದೆ. ಆ ರಾಜ್ಯಗಳಲ್ಲಿ ತೆರಿಗೆ ಏರಿಸದೇ ಇದ್ದರೂ ಅಲ್ಲಿ ಅಧಿಕವಾಗಿಯೇ ಇದೆ.
ಯಾವ ರಾಜ್ಯದಲ್ಲಿ ಎಷ್ಟಿದೆ
ಕರ್ನಾಟಕದಲ್ಲಿ ಪೆಟ್ರೋಲ್ ದರ ಈವರೆಗೂ ಲೀಟರ್‌ಗೆ 99.83 ರೂ. ಇತ್ತು. ಕೇಂದ್ರ ಸರ್ಕಾರ 2 ರೂ.ತೆರಿಗೆ ಕಡಿತಗೊಳಿಸಿದ್ದರಿಂದ ನೂರು ರೂ. ಆಜುಬಾಜಿನಲ್ಲೇ ದರ ಇತ್ತು. ಈಗ ಹೊಸ ದರ ಲೀಟರ್‌ಗೆ 102.85 ರೂ ಆಗಿದೆ. ಅದೇ ರೀತಿ ಡೀಸೆಲ್ ದರ ಲೀಟರ್‌ಗೆ 85.93 ರೂ. ಇತ್ತು. ಈಗ ಅದು 88.93 ರೂ. ಆಗಲಿದೆ. ಕೆಲವು ನಗರಗಳಲ್ಲಿ ತೆರಿಗೆ ವ್ಯತ್ಯಾಸ ಹಾಗೂ ಕಂಪೆನಿಗಳಲ್ಲಿನ ದರ ವ್ಯತ್ಯಾಸ ಇರುವದರಿಂದ ಮಾರಾಟ ದರದಲ್ಲೂ ಕೊಂಚ ವ್ಯತ್ಯಯ ಕಾಣಬಹುದು.
ನೆರೆಯ ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 109.48 ರೂ.ಗಳಾಗಿದ್ದರೆ, ಡೀಸೆಲ್ ದರವು 97.33 ರೂ.ಗಳಷ್ಟಿದೆ. ನಮ್ಮ ರಾಜ್ಯಕ್ಕಿಂತ ಶೇ. 10ರಷ್ಟು ದರ ಆಂಧ್ರಪ್ರದೇಶದಲ್ಲಿ ಹೆಚ್ಚಿದೆ.
ಅದೇರೀತಿ ತೆಲಂಗಾಣ ರಾಜ್ಯದಲ್ಲಿ ಪೆಟ್ರೋಲ್ ದರವು 107ರೂ. ಹಾಗೂ ಡೀಸೆಲ್ ದರವು ಲೀಟರ್‌ಗೆ 95 ತಲುಪಿದೆ. ಇದು ಚುನಾವಣೆಗೂ ಮುಂಚೆಯಿಂದಲೂ ತೆಲಂಗಾಣದಲ್ಲಿ ಜಾರಿಯಲ್ಲಿರುವ ದರ.
ತಮಿಳು ನಾಡು ರಾಜ್ಯದಲ್ಲಿ ಇರುವುದರಲ್ಲಿ ಕಡಿಮೆ. ಇಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 102.87 ಇದ್ದರೆ, ಡೀಸೆಲ್ ಮಾತ್ರ ಕೊಂಚ ದುಬಾರಿಯೇ. ಅಲ್ಲಿ ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ 94.44 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಪಕ್ಕದ ಕೇರಳದಲ್ಲೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಅಲ್ಲಿ ಪೆಟ್ರೋಲ್ ಅನ್ನು ಪ್ರತಿ ಲೀಟರ್‌ಗೆ 105.90 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಡೀಸೆಲ್ ದರ ಕೂಡ ದುಬಾರಿಗೆ. ಲೀಟರ್‌ಗೆ 97.42 ರೂ.ಗಳನ್ನು ಪಾವತಿಸಬೇಕು.
ಮತ್ತೊಂದು ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 103.84 ರೂ.ಗಳಷ್ಟಿದೆ. ಅದೇ ರೀತಿ ಡೀಸೆಲ್ ದರವೂ ಕೊಂಚ ಕಡಿಮೆಯೇ ಇದೆ. ಅಲ್ಲಿ ಡೀಸೆಲ್ ದರವು ಲೀಟರ್‌ಗೆ 90.35 ರೂ. ಎನ್ನುವ ವಿವರ ಲಭ್ಯವಾಗಿದೆ.
ತೆರಿಗೆ ಏರಿಕೆ ಎಷ್ಟು
ಕರ್ನಾಟಕದಲ್ಲಿ ಇಂಧನ ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡಿರುವುದರಿಂದಲೇ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಸದ್ಯ ಪೆಟ್ರೋಲ್ ಮೇಲೆ ಕರ್ನಾಟಕ ಸರ್ಕಾರವು ಲೀಟರ್‌ಗೆ 25.92 ರೂ. ಇದ್ದಂತಹ ತೆರಿಗೆ ಪ್ರಮಾಣವನ್ನು 29.84 ರೂ.ಗೆ ಏರಿಸಿದೆ. ಅದೇ ರೀತಿ ಡೀಸೆಲ್‌ಗೆ ಇದ್ದಂತಹ ತೆರಿಎ ಪ್ರಮಾಣ ಪ್ರತಿ ಲೀಟರ್‌ಗೆ 14.34 ರೂ.ಗಳಿಂದ 18.44 ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಕಾರಣದಿಂದಲೇ ಮಾರಾಟ ದರದಲ್ಲೂ ಹೆಚ್ಚಳವಾಗಿದೆ. ಇದೇ ತೆರಿಗೆಯನ್ನು ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಇಳಿಸಿತ್ತು.
ಬಿಜೆಪಿ ಕಟು ಟೀಕೆ
ಲೋಕಸಭೆ ಚುನಾವಣೆಯಲ್ಲಿ ಕನ್ನಡಿಗರು ಬಿಜೆಪಿಗೆ ಮತ ಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹೊರಟಿದೆ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ. ಅವೈಜ್ಞಾನಿಕ ಗ್ಯಾರೆಂಟಿಗಳಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿರುವ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಮೇಲೆ ತೆರಿಗೆ ಭಾರ ಹೊರಿಸಿ ಖಜಾನೆ ತುಂಬಿಸಲು ಹೊರಟಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ ಮತ್ತು ಡೀಸೆಲ್ ಬೆಲೆ 3.50 ರೂ. ಹೆಚ್ಚಳ ಮಾಡಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದಾರೆ.