logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಿನಲ್ಲಿ ಮಾಸ್ಕ್‌ ಧರಿಸಿ ವ್ಯಕ್ತಿ ನಡುರಾತ್ರಿ ಪಿಜಿ ಪ್ರವೇಶ; ಯುವತಿ ಮೇಲೆ ಹಲ್ಲೆ, ಉಂಗುರ ಮೊಬೈಲ್‌ ಕಸಿದು ಪರಾರಿ

Bangalore Crime: ಬೆಂಗಳೂರಿನಲ್ಲಿ ಮಾಸ್ಕ್‌ ಧರಿಸಿ ವ್ಯಕ್ತಿ ನಡುರಾತ್ರಿ ಪಿಜಿ ಪ್ರವೇಶ; ಯುವತಿ ಮೇಲೆ ಹಲ್ಲೆ, ಉಂಗುರ ಮೊಬೈಲ್‌ ಕಸಿದು ಪರಾರಿ

Umesha Bhatta P H HT Kannada

Jul 23, 2024 07:30 AM IST

google News

ಬೆಂಗಳೂರಿನಲ್ಲಿ ಪಿಜಿಗೆ ನುಗ್ಗಿದ ವ್ಯಕ್ತಿ ಯುವತಿ ಮೇಲೆ ಹಲ್ಲೆ ಮಾಡಿ ಉಂಗುರು ಕಿತ್ತುಕೊಂಡು ಹೋದ ಘಟನೆ ನಡೆದಿದೆ.

    • Bangalore PG News ಬೆಂಗಳೂರಿನಲ್ಲಿ ನಡುರಾತ್ರಿ ವ್ಯಕ್ತಿಯೊಬ್ಬ ಪಿಜಿಯನ್ನು ಪೈಪ್‌ಗಳನ್ನೇರಿ ಪ್ರವೇಶಿಸಿ ಉಂಗುರ ಕಿತ್ತುಕೊಂಡು ಹೋದ ಘಟನೆ ನಡೆದಿದೆ. 
    • ವರದಿ: ಎಚ್‌.ಮಾರುತಿ.ಬೆಂಗಳೂರು
ಬೆಂಗಳೂರಿನಲ್ಲಿ ಪಿಜಿಗೆ ನುಗ್ಗಿದ ವ್ಯಕ್ತಿ ಯುವತಿ ಮೇಲೆ ಹಲ್ಲೆ ಮಾಡಿ ಉಂಗುರು ಕಿತ್ತುಕೊಂಡು ಹೋದ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಪಿಜಿಗೆ ನುಗ್ಗಿದ ವ್ಯಕ್ತಿ ಯುವತಿ ಮೇಲೆ ಹಲ್ಲೆ ಮಾಡಿ ಉಂಗುರು ಕಿತ್ತುಕೊಂಡು ಹೋದ ಘಟನೆ ನಡೆದಿದೆ.

ಬೆಂಗಳೂರು: ಮಾಸ್ಕ್‌ ಧರಿಸಿದ್ದ ಯುವಕನೊಬ್ಬ ಪಿಜಿಗೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನದ ಉಂಗುರ ಮತ್ತು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿರುವ ಘಟನೆ ಮಾನ್ಯತಾ ಟೆಕ್‌ ಪಾರ್ಕ್‌ ಸಮೀಪ ವರದಿಯಾಗಿದೆ. ಕಳೆದ ವಾರ ನಡುರಾತ್ರಿಯಲ್ಲಿ ಈ ಘಟನೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ಮಾನ್ಯತಾ ಪಾರ್ಕ್‌ ಸಮೀಪದ ಶ್ರೀ ರಾಧಾಕೃಷ್ಣ ನಿವಾಸ್‌ ಪಿಜಿಯಲ್ಲಿ ಮುಂಜಾನೆ 2.15ರಿಂದ 2.30ರೊಳಗೆ ಈ ಘಟನೆ ನಡೆದಿದೆ. 25 ವರ್ಷದ ಪ್ರತಿಭಾ (ಹೆಸರು ಬದಲಾಯಿಸಲಾಗಿದೆ) ಅವರು ಮಾನ್ಯತಾ ಟೆಕ್‌ ಪಾರ್ಕ ನಲ್ಲಿ ಉದ್ಯೋಗಿಯಾಗಿದ್ದು, ಹಲ್ಲೆ ನಡೆಸಿದ ಪರಿಣಾಮ ಅವರ ಕೈಮತ್ತು ಬೆನ್ನಿಗೆ ಗಾಯಗಳಾಗಿವೆ. ಸೋಮವಾರ ಮಧ್ಯರಾತ್ರಿಯಲ್ಲಿ ಕೆಲಸ ಮುಗಿಸಿಕೊಂಡು ತಡರಾತ್ರಿ 1.30ರ ಸುಮಾರಿಗೆ ಪಿಜಿಗೆ ಮರಳಿ ನಾಲ್ಕನೇ ಮಹಡಿಯಲ್ಲಿರುವ ತಮ್ಮ ಕೊಠಡಿಗೆ ತೆರಳಿದ್ದಾರೆ. ಆದರೆ ಬೀಗದ ಕೈಯನ್ನು ಬಾಗಿಲಿನಲ್ಲೇ ಮರೆತು ಒಳಗೆ ಹೋಗಿ ನಿದ್ರೆಗೆ ಜಾರಿದ್ದಾರೆ.

2.15ರ ವೇಳೆಗೆ ಏನೋ ಸದ್ದಾಗುತ್ತಿದೆ ಎಂದು ಎಚ್ಚರಗೊಂಡಿದ್ದಾರೆ. ಮಾಸ್ಕ್‌ ಧರಿಸಿದ್ದ ವ್ಯಕ್ತಿಯೊಬ್ಬ ಗಾಜಿನ ಚೂರೊಂದನ್ನು ಕೈಯಲ್ಲಿ ಹಿಡಿದು ಆಕೆಯ ಕೊಠಡಿಗೆ ನುಗ್ಗಿದ್ದಾನೆ. ಗಟ್ಟಿಗಿತ್ತಿಯಾಗಿದ್ದ ಪ್ರತಿಭಾ ಆತನೊಂದಿಗೆ 15 ನಿಮಿಷಗಳ ಕಾಲ ಹೊಡೆದಾಟ ನಡೆಸಿದ್ದಾರೆ. ಆದರೂ ಆತ ಪ್ರತಿಭಾ ಅವರ ಚಿನ್ನದ ಉಂಗುರ ಮತ್ತು ಮೊಬೈಲ್‌ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ನಂತರ ಪ್ರತಿಭಾ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಮಾಸ್ಕ್‌ ಧರಿಸಿದ್ದ ಆತ ಬಯೋಮೆಟ್ರಿಕ್‌ ನಲ್ಲಿ ಬೆರಳು ಒತ್ತಿ ಮುಖ್ಯ ದ್ವಾರದ ಮೂಲಕ ಪಿಜಿ ಪ್ರವೇಶಿಸಲು ಪ್ರಯತ್ನ ನಡೆಸಿದ್ದಾನೆ. ಆದರೆ ಸಾದ್ಯವಾಗಿಲ್ಲ. ನಂತರ ಆತ ಪಿಜಿ ಪಕ್ಕದ ಕಟ್ಟಡದ ಐದನೇ ಮಹಡಿಯನ್ನು ಹತ್ತಿ ನಂತರ ಪೈಪ್‌ ಹಿಡಿದುಕೊಂಡು ನಾಲ್ಕನೇ ಮಹಡಿಗೆ ಇಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಜಿ ಮಾಲೀಕ ಮಾದೇಶ್‌ ಪ್ರತಿಕ್ರಿಯಿಸಿ ನಮ್ಮ ಪಿಜಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಕಳ್ಳನು ಪೈಪ್‌ ಗಳ ಮೂಲಕ ನಾಲ್ಕನೇ ಮಹಡಿಗೆ ಬಂದಿದ್ದಾನೆ. ಈಗ ಪೈಪ್‌ ಗಳನ್ನು ಕಬ್ಬಿಣದ ಗ್ರಿಲ್‌ ಗಳ ಮೂಲಕ ಮುಚ್ಚಿಸಲು ಕ್ರಮ ಕೈಗೊಂಡಿದ್ಧೇನೆ. ನಾನು ಬೆಳಗಿನ ಜಾವವೇ 3 ಗಂಟೆಗೆ ಪಿಜಿ ತಲುಪಿ ಪ್ರತಿಭಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ಧೇನೆ ಎಂದು ತಿಳಿಸಿದ್ದಾರೆ.

ಹಣ ಕಳೆದುಕೊಂಡ ಉದ್ಯೋಗಿ

ಅನಾಮಿಕ ಕರೆಗೆ ಪ್ರತಿಕ್ರಿಯಿಸಿ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವ ಭರದಲ್ಲಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬ 3.7 ಲಕ್ಷ ರೂ ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ.

ಇವರು ನೀಡಿರುವ ದೂರನ್ನು ಆಧರಿಸಿ ಬೆಂಗಳೂರು ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಅಪರಾಧ\ವಿಭಾಗದ ಪೊಲೀಸರು ಅನಾಮಿಕ ವ್ಯಕ್ತಿಯ ವಿರುದ್ಧ ಐಟಿ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಅನಾಮಿಕ ವ್ಯಕ್ತಿಯೊಬ್ಬ ಬ್ಯಾಂಕ್ ಪ್ರತಿನಿಧಿ ಎಂದು ಹೇಳಿಕೊಂಡು ಆಧಾರ್‌ ಮತ್ತು ಮೊಬೈಲ್‌ ನಂಬರನ್ನು ಅಪ್‌ ಡೇಟ್‌ ಮಾಡುವಂತೆ ಲಿಂಕ್‌ ವೊಂದನ್ನು ಹಂಚಿಕೊಂಡಿದ್ದಾನೆ. ನಂತರ ಕೆಲವೇ ನಿಮಿಷಗಳಲ್ಲಿ ಇವರ ವಾಟ್ಸ್‌ ಆಪ್‌ ಬ್ಲಾಕ್‌ ಆಗಿದ್ದು, ಇವಿಧ ಅಪರಿಚಿತ ಮೊಬೈಲ್‌ ನಂಬರ್‌ ಗಳಿಂದ ಕರೆ ಮಾಡಿ ಅನ್‌ ಬ್ಲಾಕ್‌ ಮಾಡಿರುವುದಾಗಿ ತಿಳಿಸಿದ್ದಾನೆ.

ನಂತರ ಸಂದೇಶಗಳನ್ನು ಪರಿಶೀಲಿಸಿದಾಗ ಇವರ ಬ್ಯಾಂಕ್‌ ಖಾತೆಯಿಂದ 3.7 ಲಕ್ಷ ರೂ. ವರ್ಗಾವಣೆಯಾಗಿದೆ. ಇದೇ ಮಾದರಿಯ ವಂಚನೆಯೊಂದು ಕುಮಾರ ಪಾರ್ಕ್‌ ಪೂರ್ವ ಬಡಾವಣೆಯಲ್ಲೂ ವರದಿಯಾಗಿದೆ. ಅಂಚೆ ಕಚೇರಿ ಉದ್ಯೋಗಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಉದ್ಯಮಿಯೊಬ್ಬರಿಗೆ ಕರೆ ಮಾಡಿ ನಿಮ್ಮ ಹೆಸರಿಗೆ ಪಾರ್ಸೆಲ್‌ ಬಂದಿದ್ದು, ವಿಳಾಸ ಪೂರ್ಣವಾಗಿಲ್ಲ. ಆದ್ದರಿಂದ ಈಗ

ಕಳುಹಿಸುವ ಲಿಂಕ್‌ ಅನ್ನು ಭರ್ತಿ ಮಾಡಿ ಕಳುಹಿಸಿದರೆ ಪಾರ್ಸೆಲ್‌ ಅನ್ನು ತಲುಪಿಸುವುದಾಗಿ ತಿಳಿಸಿದ್ದಾನೆ. ಉದ್ಯಮಿಯು ಲಿಂಕ್‌ ಭರ್ತಿ ಮಾಡಿದ ಕೆಲವೇ

ನಿಮಿಷಗಳಲ್ಲಿ 35,730 ರೂ.ಗಳ ಕಡಿತವಾಗಿರುತ್ತದೆ. ಅವರೂ ಸಹ ದೂರು ಸಲ್ಲಿಸಿದ್ದಾರೆ. ಈ ರೀತಿಯ ಕರೆಗಳಿಗೆ ಸ್ಪಂದಿಸಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಪೊಲೀಸರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.

ವರದಿ: ಎಚ್.ಮಾರುತಿ,ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ