Bangalore crime: ಬಾಣಂತಿ ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪೇದೆ: 13 ದಿನದ ಹಸುಗೂಸು ಅನಾಥ
Nov 09, 2023 08:34 AM IST
ಕೊಲೆಯಾದ ಬಾಣಂತಿ ಪ್ರತಿಭಾ ಹಾಗೂ ಆಕೆಯ ಪತಿ ಪೊಲೀಸ್ ಪೇದೆ ಕಿಶೋರ್
- Bangalore Crime News ವರ್ಷದ ಹಿಂದೆ ಮದುವೆಯಾಗಿ ಮಗುವಿಗೆ ಜನ್ಮ ನೀಡಿದ್ದ ಯುವತಿಯನ್ನು ಆಕೆಯ ಪತಿಯೇ ಕೊಲೆ ಮಾಡಿ ಆತನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.
ಬೆಂಗಳೂರು: ಮದುವೆಯಾಗಿ ವರ್ಷವಾಗಿತ್ತು. ಗಂಡು ಮಗು ಹುಟ್ಟಿ ವಾರವಾಗಿತ್ತು. ಆದರೆ ಸಣ್ಣ ಅನುಮಾನವೊಂದು ತಲೆಗೆ ಹೊಕ್ಕರೆ ಏನಾಗುತ್ತದೆ ಎನ್ನುವುದಕ್ಕೆ ಈ ದುರಂತ ಘಟನೆಯೇ ಸಾಕ್ಷಿ.
ಪತಿಯ ಅನುಮಾನಕ್ಕೆ ಬಾಣಂತಿ ಕೊಲೆಯಾಗಿದ್ದಾಳೆ. ಕೊಲೆ ಮಾಡಿದವನು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. 13 ದಿನದ ಹಸುಗೂಸು ಈಗ ಅನಾಥವಾಗಿದೆ.
ಇಂತಹದೊಂದು ಘಟನೆ ನಡೆದಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ. ಪ್ರತಿಭಾ ಎಂಬ ಯುವತಿ ಕೊಲೆಗೀಡಾಗಿದ್ದು, ಚಾಮರಾಜನಗರದ ಪೊಲೀಸ್ ಪೇದೆ ಡಿ.ಕಿಶೋರ್ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕಂಪ್ಯೂಟರ್ ಸೈನ್ಸ್ ಪದವೀಧರೆಯಾಗಿದ್ದ ಪ್ರತಿಭಾ(23) ವಿವಾಹ ಕಳೆದ ವರ್ಷದ ನವೆಂಬರ್‌ನಲ್ಲಿ ಕೋಲಾರ ಜಿಲ್ಲೆಯ ವೀರಾಪುರ ಮೂಲದ ಸದ್ಯ ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಡಿ.ಕಿಶೋರ್(32) ಜತೆ ಆಗಿತ್ತು. ಇಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಪತ್ನಿ ಅಕ್ಟೋಬರ್ 28ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇದು ಖುಷಿಪಡುವ ಕ್ಷಣ, ಆದರೆ ಪ್ರತಿಭಾ ಜೀವನದಲ್ಲಿ ಆಗಿದ್ದೇ ಬೇರೆ. ಪತಿ ಕರೆ ಮಾಡಿ ನಿನಗೆ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ. ಮಗು ನನ್ನದಲ್ಲ ಎನ್ನುವ ರೀತಿ ಜಗಳವಾಡುತ್ತಲೇ ಇದ್ದ. ಎರಡು ದಿನದ ಹಿಂದೆಯೂ ಕರೆ ಮಾಡಿ ಜಗಳವಾಡಿದ್ದ. ಬಾಣಂತಿಗೆ ತೊಂದರೆಯಾಗಬಹುದು ಎಂದು ಮನೆಯವರು ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಹೇಳಿದರು. ಮರು ದಿನ ಮೊಬೈಲ್ ಆನ್ ಮಾಡಿದರೆ ಬರೋಬ್ಬರಿ 150 ಮಿಸ್ ಕಾಲ್‌ಗಳು. ಮತ್ತೆ ಅದೇ ಜಗಳ. ಸೋಮವಾರ ಸಂಜೆ ಹೊಸಕೋಟೆಗೆ ಆಗಮಿಸಿದ ಕಿಶೋರ್ ಆಕೆಯೊಂದಿಗೆ ಜಗಳವಾಡಿದ್ದ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊಠಡಿಯಲ್ಲೇ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಕಿಶೋರ್ ಅಲ್ಲಿಂದ ಪರಾರಿಯಾಗಿದ್ದ. ಮನೆಯ ಮೇಲ್ಛಾವಣಿಯಲ್ಲಿದ್ದ ಪ್ರತಿಭಾ ತಾಯಿಗೂ, ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿ ಕಿಶೋರ್ ಅಲ್ಲಿಂದ ಕಾಲ್ಕಿತ್ತಿದ್ದ. ಆದರೆ ಅಲ್ಲಿಂದ ಹೋದವನು ಚಾಮರಾಜನಗರಕ್ಕೆ ಆಗಮಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನನ್ನ ಮಗಳನ್ನು ಕೆಟ್ಟ ವ್ಯಕ್ತಿಗೆ ಮದುವೆ ಮಾಡಿಬಿಟ್ಟೆ. ಆರಂಭದಲ್ಲಿ ಚೆನ್ನಾಗಿದ್ದ ಆತ ಆನಂತರ ವರದಕ್ಷಿಣೆ ಕಿರುಕುಳ ನೀಡಿದ್ದ. ಹೇಗೋ ಸಹಿಸಿಕೊಂಡಿದ್ದೆವು. ಈಗ ಸೈಕೋ ರೀತಿ ನಡೆದುಕೊಂಡು ನನ್ನ ಮಗಳನ್ನು ಕೊಂದಿದ್ದಾನೆ. ಆತನಿಗೆ ಶಿಕ್ಷೆಯಾಗಬೇಕು. ಬೇರೆ ಹೆಣ್ಣು ಮಕ್ಕಳಿಗೆ ಹೀಗೆ ಆಗದಿರಲಿ ಎಂದು ಪ್ರತಿಭಾ ತಂದೆ ಕಣ್ಣೀರಾದರು.
ಈ ಕುರಿತು ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.