logo
ಕನ್ನಡ ಸುದ್ದಿ  /  ಕರ್ನಾಟಕ  /  Ganeshotsav2024: ಗಣಪತಿ ಕೂರಿಸಲು ಚಂದಾ ಕೊಡುವಂತೆ ಒತ್ತಾಯಿಸುವಂತಿಲ್ಲ, ಬೆದರಿಕೆ ಹಾಕಿದ್ರೇ ಬೀಳಲಿದೆ ಕ್ರಿಮಿನಲ್‌ ಕೇಸ್‌, ಈ ನಿಯಮ ಪಾಲಿಸಿ

Ganeshotsav2024: ಗಣಪತಿ ಕೂರಿಸಲು ಚಂದಾ ಕೊಡುವಂತೆ ಒತ್ತಾಯಿಸುವಂತಿಲ್ಲ, ಬೆದರಿಕೆ ಹಾಕಿದ್ರೇ ಬೀಳಲಿದೆ ಕ್ರಿಮಿನಲ್‌ ಕೇಸ್‌, ಈ ನಿಯಮ ಪಾಲಿಸಿ

Umesha Bhatta P H HT Kannada

Aug 29, 2024 01:21 PM IST

google News

ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವ ಸಮಿತಿಯವರು ಚಂದಾ ವಸೂಲಿ ವಿಚಾರದಲ್ಲಿ ಕೆಲ ನಿಯಮ ಪಾಲಿಸುವುದು ಸೂಕ್ತ.

    • Public Ganesha ಗಣೇಶೋತ್ಸವ ಆಚರಿಸುವ ಭರದಲ್ಲಿ ಚಂದಾಕ್ಕಾಗಿ ಒತ್ತಡ ಹಾಕುವುದು, ಕಿರಿಕಿರಿ ಉಂಟು ಮಾಡುವುದು ಬೆದರಿಕೆ ಹಾಕುವುದು ಕಾನೂನು ಬಾಹಿರ. ಇದಕ್ಕಾಗಿ ಕೆಲ ನಿಯಮಗಳನ್ನು ಪಾಲಿಸಲೇಬೇಕು.
ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವ ಸಮಿತಿಯವರು ಚಂದಾ ವಸೂಲಿ ವಿಚಾರದಲ್ಲಿ ಕೆಲ ನಿಯಮ ಪಾಲಿಸುವುದು ಸೂಕ್ತ.
ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವ ಸಮಿತಿಯವರು ಚಂದಾ ವಸೂಲಿ ವಿಚಾರದಲ್ಲಿ ಕೆಲ ನಿಯಮ ಪಾಲಿಸುವುದು ಸೂಕ್ತ.

ಗೌರಿ ಗಣೇಶ ಹಬ್ಬ ಇನ್ನೇನು ಬಂದೇ ಬಿಟ್ಟಿತು. ಗಣೇಶನ ಸಡಗರ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆಯಾದರೂ ನಮ್ಮವರ ಉತ್ಸಾಹಕ್ಕೂ ಕೊರತೆ ಏನೂ ಇಲ್ಲ. ಬಹುತೇಕರು ಮನೆಯಲ್ಲಿ ಗೌರಿ ಗಣೇಶ ಇರಿಸಿ ಪೂಜೆ ಸಲ್ಲಿಸುತ್ತಾರೆ. ಇದರೊಟ್ಟಿಗೆ ಸಾರ್ವಜನಿಕ ಗಣೇಶನನ್ನು ಕೂರಿಸುವ ಚಟುವಟಿಕೆಗಳು ಸಕ್ರಿಯವಾಗುತ್ತವೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್‌, ಧಾರವಾಡ, ಗದಗ, ಹಾವೇರಿ ಸಹಿತ ಪ್ರಮುಖ ಜಿಲ್ಲೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಜೋರು ಇರಲಿದೆ. ಅದೇ ರೀತಿ ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ, ಹಾಸನ ಸಹಿತ ದಕ್ಷಿಣ ಭಾಗದ ಜಿಲ್ಲೆಗಳಲ್ಲೂ ಸಾರ್ವಜನಿಕ ಗಣೇಶೋತ್ಸವ ಕಂಡು ಬರಲಿವೆ. ಈ ರೀತಿ ಗಣೇಶೋತ್ಸವ ನಡೆಸುವವರು ಚಂದಾ ವಸೂಲಿ ಮಾಡುವುದು ಸಾಮಾನ್ಯ. ಅದರಲ್ಲೂ ತಮ್ಮ ಬಡಾವಣೆ, ಊರುಗಳಲ್ಲಿನ ಪ್ರಮುಖರು, ಗಣ್ಯ ವ್ಯಾಪಾರಸ್ಥರು. ಮನೆಗಳವರಿಂದ ಚಂದಾ ಎತ್ತಿ ಗಣೇಶೋತ್ಸವವನ್ನು ಸಡಗರದಿಂದ ಆಚರಿಸುವ ವಾಡಿಕೆಯಿದೆ. ಇತ್ತೀಚಿನ ವರ್ಷಗಳಲ್ಲಿ ಸಾಮೂಹಿಕ ಗಣೇಶೋತ್ಸವ ಪ್ರಮಾಣ ಏರಿಕೆಯಾಗಿದೆ.

ಏಕೆಂದರೆ ಎಲ್ಲಾ ಬಡಾವಣೆಗಳಲ್ಲೂ, ಬೀದಿಗಳಲ್ಲೂ ಗಣೇಶನನ್ನು ಕೂರಿಸುವ ಸಂಪ್ರದಾಯ ಹೆಚ್ಚಿದೆ. ಒಂದೇ ರಸ್ತೆಯಲ್ಲೂ ಮೂರ್ನಾಲ್ಕು ಗಣೇಶೋತ್ಸವಗಳು ನಡೆಯುತ್ತಿವೆ. ಇಂತಹ ವೇಳೆ ಚಂದಾ ನೆಪದಲ್ಲಿ ಬೆದರಿಸುವುದು, ಕಿರಿಕಿರಿ ಮಾಡುವ ಪ್ರಸಂಗಗಳೂ ಅಲ್ಲಲ್ಲಿ ನಡೆಯುತ್ತಿವೆ. ಹೀಗೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಯಾ ಪೊಲೀಸ್‌ ಠಾಣೆ ಅಧಿಕಾರಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ. ಚಂದಾ ವಸೂಲಿ ಮಾಡುವಾಗ ಈ ಸೂಚನೆಗಳನ್ನು ಪಾಲಿಸಿ.

  • ಚಂದಾ ನೀಡುವಂತೆ ಯಾರನ್ನೂ ಒತ್ತಾಯಿಸುವಂತಿಲ್ಲ. ನಮ್ಮ ಬಡಾವಣೆಯಲ್ಲಿ ಗಣೇಶನನ್ನು ಕೂರಿಸುವುದರಿಂದ ಇಂತಿಷ್ಟು ಹಣ ನೀಡಿ ಎಂದು ಕೇಳುವಂತಿಲ್ಲ
  • ನೀವು ರಸ್ತೆ/ ಬಡಾವಣೆಯವರು ಆಗಿರುವುದರಿಂದ ಹಣ ನೀಡಲೇಬೇಕು ಎಂದು ತಾಕೀತು ಮಾಡುವುದು, ಬೆದರಿಕೆ ಹಾಕುವುದು ಕಾನೂನು ಬಾಹಿರ.
  • ಚಂದಾ ವಸೂಲಿ ಮಾಡುವಾಗ ಸೌಜನ್ಯದಿಂದ ವರ್ತಿಸಬೇಕು. ಹಣ ಪಡೆದರೆ ಸೂಕ್ತ ರಶೀತಿಯನ್ನು ನೀಡುವ ಪರಿಪಾಠ ಇಟ್ಟುಕೊಳ್ಳಬೇಕು
  • ಗಣೇಶೋತ್ಸವ ನಡೆಸುವ ಸಮಿತಿಯವರು ವಿಶ್ವಾಸಾರ್ಹತೆಯನ್ನು ಮೂಡಿಸುವ ರೀತಿ ಗೌರವವಾಗಿಯೇ ಜನರೊಂದಿಗೆ ನಡೆದುಕೊಳ್ಳಬೇಕು. ಅವರಿಗೆ ನೀವು ಮಾಡುತ್ತಿರುವ ಕಾರ್ಯಕ್ರಮದ ವಿಶೇಷತೆಗಳನ್ನು ತಿಳಿಸಬೇಕು.
  • ಆಯಾ ಬಡಾವಣೆ ಇಲ್ಲವೇ ರಸ್ತೆಯವರಾದರೆ ಒಬ್ಬರು ಇಲ್ಲವೇ ಇಬ್ಬರಿಗೆ ಚಂದಾವನ್ನು ಸ್ಥಳೀಯರು ನೀಡಬಹುದಷ್ಟೇ. ಹೆಚ್ಚು ಜನ ಬೇಡಿಕೆ ಇಟ್ಟರೆ ಹಣ ನೀಡುವುದು ಕಷ್ಟವಾಗಬಹುದು. ಬೇರೆ ಬಡಾವಣೆಗಳಿಂದ ಆಗಮಿಸಿ ಚಂದಾ ಕೇಳಿದಾಗ ಕೊಟ್ಟರೆ ಸರಿ. ಇಲ್ಲ ಎಂದಾಗ ಕಿರಿಕಿರಿ ಮಾಡಲು ಅವಕಾಶವಿರುವುದಿಲ್ಲ.
  • ಚಂದಾ ಕೊಡಲೇಬೇಕು ಎಂದು ಪಟ್ಟು ಹಿಡಿಯುವುದು. ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬೆದರಿಕೆ ಹಾಕುವುದು ಸುತಾರಾಂ ಮಾಡುವಂತಿಲ್ಲ. ಹೀಗೆ ಮಾಡುವುದು ಕಾನೂನು ಬಾಹಿರ.
  • ಬೆದರಿಕೆ ಹಾಕುವುದು, ಚಂದಾ ನೀಡಲಿಲ್ಲ ಎಂದು ಮನೆಯನ್ನು ವಿರೂಪಗೊಳಿಸುವುದು. ವಾಹನಗಳನ್ನು ಜಖಂ ಮಾಡುವುದು ಕ್ರಿಮಿನಲ್‌ ಅಪರಾಧ. ಇದರ ವಿರುದ್ದ ಪೊಲೀಸರು ಮೊಕದ್ದಮೆ ದಾಖಲಿಸಿ ಬಂಧಿಸಲು ಅವಕಾವಿದೆ.
  • ತಂಡ ಕಟ್ಟಿಕೊಂಡು ಬಂದು ಒತ್ತಡ ಹೇರಿ ಹಣ ನೀಡುವಂತೆ ಬೇಡಿಕೆ ಇಡುವುದು ಕಂಡು ಬಂದರೆ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಬಹುದು. ಆಗ ಪೊಲೀಸರು ಮೊಕದ್ದಮೆ ದಾಖಲಿಸಿ ಗಣೇಶೋತ್ಸವ ಆಚರಣೆಯನ್ನೇ ರದ್ದುಪಡಿಸಬಹುದು.
  • ಇಡೀ ಚಟುವಟಿಕೆಯನ್ನು ಆರ್ಥಿಕ ಪಾರದರ್ಶನಕತೆಯೊಂದಿಗೆ ರೂಪಿಸುವುದು ಒಳ್ಳೆಯದು.ಚಂದಾ ನೀಡಿದವರು ಏನೇನು ಮಾಡಿದಿರಿ ಎಂದು ವಿವರಣೆ ಕೇಳಿದಾಗ ಕೊಡಬೇಕಾಗುತ್ತದೆ. ಅವರೂ ದೂರು ನೀಡಿದರೆ ತೊಂದರೆ ಅನುಭವಿಸಬೇಕಾಗುತ್ತದೆ.

ಸಾರ್ವಜನಿಕರಿಂದ ಬಲವಂತದ ಚಂದಾ ವಸೂಲಿ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಅಧಿಕಾರಿಗಳು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಯಾರೂ ಕೂಡಾ ಮನೆ ಮನೆಗೆ ಹೋಗಿ ಹಣಕ್ಕಾಗಿ ಡಿಮ್ಯಾಂಡ್‌ ಮಾಡಬಾರದು. ದೇವರ ಮೇಲಿನ ಭಕ್ತಿಯಿಂದ ಎಷ್ಟು ಕೊಟ್ಟುತ್ತಾರೋ ಅದನ್ನು ಸ್ವೀಕರಿಸಬೇಕು. ರಾತ್ರಿಯ ವೇಳೆಯಲ್ಲಿ ಹೋಗಿ ಮನೆಯ ಬಾಗಿಲನ್ನು ಬಡಿಯಬಾರದು. ಇಷ್ಟೇ ಹಣ ಕೊಡಬೇಕು, ಹಣ ಕೊಟ್ಟಿಲ್ಲ ಅಂದ್ರೆ ನೋಡ್ಕೋತೀನಿ ಅನ್ನೋರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಸಮಿತಿ ನಿಷೇಧಿಸಬೇಕಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ