logo
ಕನ್ನಡ ಸುದ್ದಿ  /  ಕರ್ನಾಟಕ  /  Rajya Sabha Elections 2024: ಜೆಡಿಎಸ್‌- ಬಿಜೆಪಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ, ಹರಿಯಾಣ ಫಲಿತಾಂಶ ಮರುಕಳಿಸುವ ಆತಂಕ

Rajya Sabha Elections 2024: ಜೆಡಿಎಸ್‌- ಬಿಜೆಪಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ, ಹರಿಯಾಣ ಫಲಿತಾಂಶ ಮರುಕಳಿಸುವ ಆತಂಕ

Umesha Bhatta P H HT Kannada

Feb 15, 2024 03:00 PM IST

google News

ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆ ಐದನೇ ಅಭ್ಯರ್ಥಿ ಪ್ರವೇಶದಿಂದ ಕುತೂಹಲ ಮೂಡಿಸಿದೆ.

    • Karnataka Politics ರಾಜಸಭೆ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್‌ಗೆ ಜೆಡಿಎಸ್‌ ಬಿಜೆಪಿ ಕುಪೇಂದ್ರ ರೆಡ್ಡಿ ಬೆಂಬಲಿಸಿ ಸೆಡ್ಡು ಹೊಡೆದಿವೆ. ಒಂದೂವರೆ ವರ್ಷದ ಹಿಂದೆ ಹರಿಯಾಣದಲ್ಲಿ ರಾಜ್ಯಸಭೆ ಚುನಾವಣೆ ಸೋತಿದ್ದ ಕಾಂಗ್ರೆಸ್‌ ನ ಅಜಯ್‌ ಮಕೇನ್‌ ಅವರನ್ನು ಸುರಕ್ಷಿತ ದಡ ಸೇರಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಮತ್ತಿತರರು ಪ್ರಯತ್ನಿಸುತ್ತಿದ್ದಾರೆ.
ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆ ಐದನೇ ಅಭ್ಯರ್ಥಿ ಪ್ರವೇಶದಿಂದ ಕುತೂಹಲ ಮೂಡಿಸಿದೆ.
ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆ ಐದನೇ ಅಭ್ಯರ್ಥಿ ಪ್ರವೇಶದಿಂದ ಕುತೂಹಲ ಮೂಡಿಸಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯ 4 ಸ್ಥಾನಗಳಿಗೆ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಯ 5ನೇ ಅಭ್ಯರ್ಥಿಯಾಗಿ ಉದ್ಯಮಿ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದಿದ್ಧಾರೆ. ಇದರಿಂದ ರಾಜ್ಯಸಭೆ ಚುನಾವಣೆ ಕದಕ ಕರ್ನಾಟಕದಲ್ಲಿ ಕುತೂಹಲ ಘಟ್ಟ ತಲುಪಲಿದೆ. ಐದನೇ ಅಭ್ಯರ್ಥಿ ಕಣಕ್ಕಿಳಿದಿರುವುದು ಸಹಜವಾಗಿಯೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಆತಂಕ ಹೆಚ್ಚಿಸಲಿದೆ. ದೆಹಲಿ ಮೂಲದ ಅಜಯ್‌ ಮಕೇನ್‌ ಅವರನ್ನು ಕಣಕ್ಕಿಳಿಸಿರುವುದನ್ನು ಲಾಭ ಮಾಡಿಕೊಳ್ಳಲು ಜೆಡಿಎಸ್‌ ಬಿಜೆಪಿ ಯತ್ನಿಸುತ್ತಿವೆ. ಒಂದೂವರೆ ವರ್ಷದ ಹಿಂದೆಯಷ್ಟೇ ಹರಿಯಾಣದಲ್ಲಿ ಇದೇ ಅಜಯ್‌ ಮಕೇನ್‌ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿ ಉದ್ಯಮಿಯೊಬ್ಬರ ವಿರುದ್ದ ಸೋತಿದ್ದರು. ಈ ಕಾರಣದಿಂದ ಕದಕ ಕುತೂಹಲ ಇನ್ನು 12 ದಿನ ಜೋರಾಗಲಿದೆ.

ಏನಿದು ಚುನಾವಣೆ

ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಈಗ ಕರ್ನಾಟಕ ನಾಲ್ಕು ಸದಸ್ಯರ ಅವಧಿ ಏಪ್ರಿಲ್‌ ಮೊದಲ ವಾರ ಮುಗಿಯಲಿದ್ದು. ಅದರೊಳಗೆ ನಾಲ್ವರು ಸದಸ್ಯರನ್ನು ವಿಧಾನಸಭೆ ಸದಸ್ಯರು ಮತ ಹಾಕಿ ಗೆಲ್ಲಿಸಬೇಕು. ಸದ್ಯ ಕಾಂಗ್ರೆಸ್‌ ನ ಎಲ್‌.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್‌, ನಾಸಿರ್‌ ಹುಸೇನ್‌ ಹಾಗೂ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ಅವಧಿ ಮುಗಿಯಲಿದೆ. ಇದರಲ್ಲಿ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ಬದಲಿಗೆ ನಾರಾಯಣ ಸಾ ಭಾಂಡಗೆ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಲ್ಲ ಹನುಮಂತಯ್ಯ ಅವರನ್ನು ಬದಲಿಸಿ ಕಾಂಗ್ರೆಸ್‌ ಖಜಾಂಚಿ ಹಾಗೂ ದೆಹಲಿ ಮೂಲದ ಅಜಯ್‌ ಮಕೇನ್‌ ಅವರಿಗೆ ಅವಕಾಶ ಮಾಡಿಕೊಟ್ಟಿದ್ದು, ಚಂದ್ರಶೇಖರ್‌, ನಾಸಿರ್‌ ಹುಸೇನ್‌ ಮರು ಆಯ್ಕೆ ಬಯಸಿದ್ದಾರೆ. ಫೆ. 27ರಂದು ಚುನಾವಣೆ ನಡೆಯಲಿದೆ.

ಕರ್ನಾಟಕದಲ್ಲಿನ ಸ್ಥಿತಿ

ಪ್ರತಿಯೊಬ್ಬರು ಗೆಲ್ಲಲು ಕನಿಷ್ಟ 45 ಮತಗಳನ್ನು ಪಡೆಯಲೇಬೇಕು. ಸದ್ಯದ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 135, ಬಿಜೆಪಿ 66 ಹಾಗೂ ಜೆಡಿಎಸ್‌ 19 ಸದಸ್ಯ ಬಲ ಹೊಂದಿದೆ. ನಾಲ್ವರು ಪಕ್ಷೇತರರಾಗಿದ್ದಾರೆ. ಇದರಲ್ಲಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್‌, ಗೌರಿ ಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಕಾಂಗ್ರೆಸ್‌ ಬೆಂಬಲ ಘೋಷಿಸಿದ್ಧಾರೆ. ಇದರಿಂದ ಕಾಂಗ್ರೆಸ್‌ ಬಲ 138ಕ್ಕೆ ಏರಿದೆ. ಆದರೆ ಕಾಂಗ್ರೆಸ್‌ ಮೂರು ಸ್ಥಾನ ಗೆಲ್ಲಲು 135 ಸದಸ್ಯ ಬಲ ಸಾಕು.

ಇನ್ನು ಬಿಜೆಪಿಯಲ್ಲಿ ನಾರಾಯಣ ಸಾ ಭಾಂಡಗೆ ಅವರಿಗೆ 45 ಮತ ನೀಡಿದರೆ ಉಳಿದ 21 ಮತಗಳನ್ನು ಮೈತ್ರಿ ಅಭ್ಯರ್ಥಿಗೆ ನೀಡಬಹುದು. ಜೆಡಿಎಸ್‌ನ ಬಳಿ 19 ಮತ ಸೇರಿದಂತೆ 40 ಆಗಲಿದೆ. ಪಕ್ಷೇತರ ಜನಾರ್ದನ ರೆಡ್ಡಿ ಬಿಜೆಪಿಗೆ ಬೆಂಬಲಿಸಿರುವುದರಿಂದ ಇವರಿಗೆ 41 ಮತ ಆಗಿ 4 ಮತದ ಕೊರತೆಯಾಗಲಿದೆ. ಆಗ ಕಾಂಗ್ರೆಸ್‌ನ ಸದಸ್ಯರ ಮತ ಅಡ್ಡಮತದಾನ ಮಾಡಿಸಿದರೆ ಗೆಲ್ಲಿಸಬಹುದು ಎನ್ನುವುದು ಮೈತ್ರಿ ಲೆಕ್ಕಾಚಾರ.

ಅಸಮಾಧಾನಗೊಂಡಿರುವ ಬಿಜೆಪಿಯಲ್ಲೂಎಸ್.ಟಿ. ಸೋಮಶೇಖರ್‌, ಶಿವರಾಮ ಹೆಬ್ಬಾರ್‌, ಜೆಡಿಎಸ್‌ನ ಶರಣಗೌಡ ಕಂದಕೂರ ಅವರ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಇದು ಚುನಾವಣೆ ಕುತೂಹಲವನ್ನು ಹೆಚ್ಚಿಸಿದೆ.

ಎಚ್‌ಡಿಕೆ ಸಿಟ್ಟು

ಎಚ್‌ಡಿಕುಮಾರ ಸ್ವಾಮಿ ಅವರಿಗೆ ಎಂಟು ವರ್ಷದ ಹಿಂದೆ ನಡೆದಿದ್ದು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಒಳೇಟು ನೀಡಿ ಎಂಟು ಸದಸ್ಯರನ್ನು ಸೆಳೆದು ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿದರೆ ಜೆಡಿಎಸ್‌ನ ಬಿ.ಎಂ.ಫರೂಕ್‌ ಸೋತಿದ್ದರು. ಆಗ ಮತ ಹಾಕಿದ ಎಂಟು ಮಂದಿ ಬಳಿಕ ಕಾಂಗ್ರೆಸ್‌ ಸೇರಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕರು ಗೆದ್ದು ಇಬ್ಬರು ಸಚಿವರೂ ಆಗಿದ್ಧಾರೆ. ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲ ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಬೇಕು. ಆ ಮೂಲಕ ಹಿಂದೆ ಆದ ಮುಖಭಂಗ ತೀರಿಸಿಕೊಳ್ಳಬೇಕು ಎನ್ನುವ ಉದ್ದೇಶವಿದೆ. ಇದರಿಂದಲೇ ಕುಪೇಂದ್ರ ರೆಡ್ಡಿ ಕಣಕ್ಕಿಳಿಸಿದ್ಧಾರೆ ಎನ್ನುವ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.

ಸೋತಿದ್ದ ಮಕೇನ್‌

ದೆಹಲಿ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಅಜಯ್‌ ಮಕೇನ್‌ 2022ರ ಜೂನ್‌ 11ರಂದು ಹರಿಯಾಣ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಅಲ್ಲಿ ಕಾಂಗ್ರೆಸ್‌ನಿಂದ ಒಬ್ಬರು ಗೆಲ್ಲಲು ಅವಕಾಶವಿದ್ದರೂ ಆಡಳಿತಾರೂಢ ಬಿಜೆಪಿ ಸರ್ಕಾರ ಹಾಗೂ ಮೈತ್ರಿ ಪಕ್ಷ ಜನನಾಯಕ ಜನತಾ ಪಾರ್ಟಿ ಬೆಂಬಲ ನೀಡಿದ್ದರಿಂದ ಉದ್ಯಮಿ ಕಾರ್ತಿಕೇಯ ಶರ್ಮ ಗೆಲುವು ಸಾಧಿಸಿದ್ದರು. ಅಜಯ್‌ ಮಕೇನ್‌ ಸೋತರೆ ಬಿಜೆಪಿ ಅಭ್ಯರ್ಥಿ ಕೃಷ್ಣ ಲಾಲ್‌ ಪನ್ವಾರ್‌ ಕೂಡ ಗೆದ್ದಿದ್ದರು. ಇದರಿಂದ ಕಾಂಗ್ರೆಸ್‌ಗೆ ಮುಖಭಂಗವಾಗಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಅಜಯ್‌ ಮಕೇನ್‌ ಅವರಿಗೆ ಇಲ್ಲಿ ಟಿಕೆಟ್‌ ನೀಡಲಾಗಿದೆ.

ನೆಟ್ಟಿಗರ ಆಕ್ರೋಶ

ಈ ನಡುವೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಪಡೆಯಲು ಅರ್ಹರು ಇರಲಿಲ್ಲವೇ. ತೆರಿಗೆ ವಿಚಾರದಲ್ಲಿ ಉತ್ತರ ಭಾರತದಿಂದ ಅನ್ಯಾಯವಾಗುತ್ತಿದೆ ಎಂದು ಹೇಳುವ ಕಾಂಗ್ರೆಸ್‌ ನಾಯಕರು ರಾಜಸಭೆ ಚುನಾವಣೆಗೆ ಉತ್ತರ ಭಾರತದ ಅಭ್ಯರ್ಥಿ ಹಾಕಲು ಯಾಕೆ ಬಿಟ್ಟರು. ಕಾಂಗ್ರೆಸ್‌ ನ ನೀತಿ ಸರಿಯಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಿಸುತ್ತಿದ್ದಾರೆ. ಈ ಚರ್ಚೆ ಸಾಕಷ್ಟು ವೈರಲ್‌ ಕೂಡ ಆಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ