logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನಲ್ಲಿ ಆಸ್ತಿ ಮೌಲ್ಯ ಏರಿಕೆ ನಿರೀಕ್ಷೆ: ನೋಂದಣಿ ಮಾರ್ಗಸೂಚಿ ಹೊಸ ದರ ಜಾರಿ ಪರಿಣಾಮ

Bangalore News: ಬೆಂಗಳೂರಿನಲ್ಲಿ ಆಸ್ತಿ ಮೌಲ್ಯ ಏರಿಕೆ ನಿರೀಕ್ಷೆ: ನೋಂದಣಿ ಮಾರ್ಗಸೂಚಿ ಹೊಸ ದರ ಜಾರಿ ಪರಿಣಾಮ

Umesha Bhatta P H HT Kannada

Sep 21, 2023 06:54 AM IST

google News

ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಪರಿಷ್ಕೃತ ದರ ಅಕ್ಟೋಬರ್‌ನಲ್ಲಿ ಜಾರಿಯಾಗಲಿದೆ.

    • Bangalore Real Estate Boom ಬೆಂಗಳೂರಿನಲ್ಲಿಆಸ್ತಿ ನೋಂದಣಿ ಪರಿಷ್ಕೃತ ಮಾರ್ಗಸೂಚಿ ದರ ಸರಾಸರಿ ಶೇ.25 ರಿಂದ ಶೇ.30 ರಷ್ಟು ಹೆಚ್ಚಾಗಲಿದೆ. ಇದು ಸಹಜವಾಗಿಯೇ ಆಸ್ತಿ ಮೌಲ್ಯದ ಹೆಚ್ಚಳಕ್ಕೂ ದಾರಿಯಾಗಲಿದ್ದು, ದುಬಾರಿಯೂ ಆಗಲಿವೆ.
ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಪರಿಷ್ಕೃತ ದರ ಅಕ್ಟೋಬರ್‌ನಲ್ಲಿ ಜಾರಿಯಾಗಲಿದೆ.
ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಪರಿಷ್ಕೃತ ದರ ಅಕ್ಟೋಬರ್‌ನಲ್ಲಿ ಜಾರಿಯಾಗಲಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ಟೋಬರ್‌ 1 ರಿಂದ ಹೊಸ ಆಸ್ತಿ ನೋಂದಣಿಗೆ ಹೊಸ ಮಾರ್ಗಸೂಚಿ ದರ ಜಾರಿಯಾಗುತ್ತಿದೆ. ಇದು ಜಾರಿಯಾದರೆ ಆಸ್ತಿ ಮೌಲ್ಯ ಹೆಚ್ಚಿ ರಿಯಲ್‌ ಎಸ್ಟೇಟ್‌ ವಲಯದಲ್ಲೂ ಬದಲಾವಣೆ ನಿರೀಕ್ಷಿಸಬಹುದು.

ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಪರಿಷ್ಕೃತ ಮಾರ್ಗಸೂಚಿ ದರ ಸರಾಸರಿ ಶೇ.25 ರಿಂದ ಶೇ.30 ರಷ್ಟು ಹೆಚ್ಚಾಗಲಿದೆ. ಆಯಾ ಪ್ರದೇಶದಲ್ಲಿನ ವಹಿವಾಟು ಆಧರಿಸಿ ಪರಿಷ್ಕರಣೆಯಾಗುವುದರಿಂದ ಇದು ಹೆಚ್ಚಲೂ ಬಹುದು ಇಲ್ಲವೇ ಕಡಿಮೆಯಾಗಲೂಬಹುದು.

ಈಗಾಗಲೇ ಬೆಂಗಳೂರಿನಲ್ಲಿ ಭೂಮಿ ಬೆಲೆ ದುಬಾರಿಯೇ. ಹಳೆಯ, ಹೊಸ ಪ್ರದೇಶ, ಹೊರ ವಲಯ ಹೀಗೆ ಭಿನ್ನ ಪ್ರದೇಶಗಳಲ್ಲಿ ಬೇರೆ ಬೇರೆ ದರವಿದೆ. ಆದರೂ ಬೆಂಗಳೂರಿನಲ್ಲಿ ಭೂಮಿ ಖರೀದಿಸುವುದೆಂದರೆ ಅದು ಸುಲಭವಲ್ಲ.

ಇದರ ನಡುವೆಯೇ ಕಂದಾಯ ಇಲಾಖೆಯಡಿ ಬರುವ ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಹೊಸ ಮಾರ್ಗ ಸೂಚಿ ದರವನ್ನು ಅಕ್ಟೋಬರ್‌ 1ರಿಂದ ಅನ್ವಯವಾಗುವಂತೆ ಜಾರಿ ಮಾಡುತ್ತಿರುವುದರಿಂದ ಸಹಜವಾಗಿಯೇ ಭೂಮಿ ದರದಲ್ಲಿ ಏರಿಕೆಯಾಗಲಿದೆ. ಇದು ವಹಿವಾಟು ಹೆಚ್ಚಳಕ್ಕೂ ದಾರಿ ಮಾಡಿಕೊಡಲಿದೆ.

ಬೆಂಗಳೂರಿನಲ್ಲಿ ಎಷ್ಟು ಹೆಚ್ಚಳ

ಬೆಂಗಳೂರಿನಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಮಾರ್ಗಸೂಚಿ ದರ ಜಾರಿಯಲ್ಲಿದೆ. ಅದೇ ರೀತಿಯೇ ಮೊದಲಿನಿಂದಲೂ ಪ್ರದೇಶವಾರು ಮಾರುಕಟ್ಟೆ ದರ ಆಧರಿಸಿಯೇ ಮಾರ್ಗಸೂಚಿ ದರವನ್ನು ನಿಗದಿಪಡಿಸುತ್ತಾ ಬರಲಾಗುತ್ತಿದೆ. ಬೆಂಗಳೂರಿನಲ್ಲಂತೂ ಕನಿಷ್ಠ ಶೇ.10 ರಷ್ಟಾದರೂ ದರ ಏರಿಕೆ ಮಾಡಲಾಗುತ್ತಿದೆ.

ಈ ಬಾರಿಯೂ ಬೆಂಗಳೂರಿನಲ್ಲಿ ಮಾರುಕಟ್ಟೆ ದರಕ್ಕೂ ಮಾರ್ಗಸೂಚಿ ದರಕ್ಕೂ ಸಾಮ್ಯತೆ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ.10 ರಷ್ಟು ಏರಿಕೆ ಮಾಡಲಾಗಿದೆ. ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಪರಿಷ್ಕೃತ ದರವನ್ನು ಶೇ.20 ರಿಂದ ಶೇ.25 ರಷ್ಟು ಹೆಚ್ಚಿಸಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500 ಪಟ್ಟು ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಮಾರ್ಗಸೂಚಿ ದರ 5 ರಿಂದ 10 ಲಕ್ಷ ಇದ್ದರೆ, ಮಾರುಕಟ್ಟೆ ದರ 10 ಕೋಟಿಗೂ ಅಧಿಕವಿದೆ. ಇಂತಹ ಪ್ರದೇಶಗಳಲ್ಲಿ ನೂತನ ಮಾರ್ಗಸೂಚಿ ದರವನ್ನು ಶೇ. 50ರಷ್ಟು ಹೆಚ್ಚಿಸಲಾಗಿದೆ. ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಾಗಿದ್ದರೆ, ಅಂತಹ ಭಾಗದಲ್ಲಿ ಮಾರ್ಗಸೂಚಿ ದರವನ್ನು ಮತ್ತಷ್ಟು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರ್ಗಸೂಚಿ ದರ ಶೇ.0 ಯಿಂದ ಶೇ.50ರ ವರೆಗೆ ಪ್ರತಿಯೊಂದು ಪ್ರದೇಶಕ್ಕೂ ಸಂಬಂಧಿಸಿದಂತೆ ಪ್ರತ್ಯೇಕ ಎಂದು ಪರಿಗಣಿಸಿ ಹೆಚ್ಚಾಗಲಿದೆ.

ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರಬಾರದು ಎಂಬ ಕಾನೂನಿದೆ. ಹೀಗಾಗಿ ಈ ಅಲ್ಪ ನ್ಯೂನ್ಯತೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆ ನಿಟ್ಟಿನಲ್ಲಿ ಈ ಕ್ರಮವನ್ನು ಮಾರ್ಗಸೂಚಿ ದರ ಪರಿಷ್ಕರಣೆ ಎಂಬುದಕ್ಕಿಂತ ನ್ಯೂನ್ಯತೆಯನ್ನು ಸರಿಪಡಿಸಲಾಗಿದೆ. ಮಾರ್ಗಸೂಚಿ ದರ ಪರಿಷ್ಕರಣೆಯಲ್ಲಿ ಯಾರಿಗಾದರೂ ತಕರಾರು ಇದ್ದರೆ, ಅದನ್ನೂ ಸಲ್ಲಿಸಬಹುದು. ಅಧಿಕಾರಿಗಳು ತಕರಾರುಗಳನ್ನೂ ಗಮನಿಸಿ ಹೊಸ ಮಾರ್ಗಸೂಚಿ ದರವನ್ನು ಜಾರಿಗೊಳಿಸುವರು ಎನ್ನುವುದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ವಿವರಣೆ.

ಇತರೆಡೆಯೂ ಜಾರಿ

ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ, ತುಮಕೂರು, ಶಿವಮೊಗ್ಗ, ವಿಜಯಪುರ ಸೇರಿದಂತೆ ಪ್ರಮುಖ ನಗರಗಳಲ್ಲೂ ಹೊಸ ಮಾರ್ಗಸೂಚಿ ದರ ಜಾರಿಯಾಗಲಿದೆ.

ಆದರೆ ಅದು ಈಗಲೇ ಅಲ್ಲದೇ ಇದ್ದರೂ ಸ್ಥಳೀಯವಾಗಿ ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಅಧಿಕಾರಿಗಳನ್ನೊಳಗೊಂಡ ಉಪ ಸಮಿತಿಗಳು ತೀರ್ಮಾನ ಕೈಗೊಳ್ಳಲಿವೆ. ಅಲ್ಲಿಯೂ ಈ ವರ್ಷದೊಳಗೆ ಹೊಸ ಮಾರ್ಗಸೂಚಿ ದರ ಜಾರಿಯಾಗಬಹುದು.

ಕರ್ನಾಟಕದಲ್ಲಿ ಬೆಂಗಳೂರು ನಂತರದ ಪ್ರಮುಖ ನಗರಗಳಲ್ಲೂ ಈಗಾಗಲೇ ಭೂಮಿ ಬೆಲೆ ಗಗನಕ್ಕೇರಿದೆ. ಹೊಸ ಮಾರ್ಗಸೂಚಿ ದರ ಜಾರಿಗೆ ಬಂದರೆ ಅಲ್ಲಿಯೂ ಭೂಮಿ ಬೆಲೆ ಮತ್ತಷ್ಟು ಏರುವ ಸಾಧ್ಯತೆಗಳೇ ಹೆಚ್ಚು.

ಆದಾಯದ ನಿರೀಕ್ಷೆ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳ ಜಾರಿಗೆ ಮುಂದಾಗಿದೆ. ಇದಕ್ಕಾಗಿಯೇ 50 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ಧಾರೆ. ಈ ಹಿನ್ನೆಲೆಯಲ್ಲಿ ಆದಾಯದ ಮೂಲಗಳನ್ನು ಗಟ್ಟಿಗೊಳಿಸಲು ಸರ್ಕಾರ ಮುಂದಾಗಿದೆ. ಮುಖ್ಯವಾಗಿ ಅಬಕಾರಿ, ವಾಣಿಜ್ಯ ತೆರಿಗೆ, ಸಾರಿಗೆ ಇಲಾಖೆ ಜತೆಗೆ ಮುದ್ರಾಂಕದ ನೋಂದಣಿ ಪ್ರಮಾಣವನ್ನು ಏರಿಸಿ ಆದಾಯವನ್ನು ಖಚಿತಪಡಿಸಿಕೊಳ್ಳುವುದು ಉದ್ದೇಶ. ಐದು ವರ್ಷದಿಂದ ಮಾರ್ಗಸೂಚಿ ದರ ಪರಿಷ್ಕರಣೆಯೂ ಆಗಿರಲಿಲ್ಲ. ಹೊಸ ದರ ಜಾರಿಯಿಂದ ಸರ್ಕಾರದ ಆದಾಯದಲ್ಲೂ ಏರಿಕೆ ಕಾಣಲಿದೆ ಎನ್ನುವುದು ಅಧಿಕಾರಿಯೊಬ್ಬರ ವಿವರಣೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ