logo
ಕನ್ನಡ ಸುದ್ದಿ  /  ಕರ್ನಾಟಕ  /  Viral Video: ಬೆಂಗಳೂರು ಸಾಫ್ಟ್‌ವೇರ್‌ ಎಂಜಿನಿಯರ್‌ ಆನ್‌ಲೈನ್‌ ಬುಕ್‌ ಮಾಡಿದ್ದ ವಸ್ತುವಿನ ಬಾಕ್ಸ್‌ನಲ್ಲಿ ಬಂತು ನಾಗರಹಾವು !

Viral Video: ಬೆಂಗಳೂರು ಸಾಫ್ಟ್‌ವೇರ್‌ ಎಂಜಿನಿಯರ್‌ ಆನ್‌ಲೈನ್‌ ಬುಕ್‌ ಮಾಡಿದ್ದ ವಸ್ತುವಿನ ಬಾಕ್ಸ್‌ನಲ್ಲಿ ಬಂತು ನಾಗರಹಾವು !

Umesha Bhatta P H HT Kannada

Jun 19, 2024 10:19 AM IST

google News

ಬಾಕ್ಸ್‌ನೊಂದಿಗೆ ಬಂದಿರುವ ಹಾವನ್ನು ಬಕೆಟ್‌ ನಲ್ಲಿ ಇರಿಸಲಾಗಿದೆ.

    • Bangalore News  ಅಮೆಜಾನ್‌ ಪ್ರೈಮ್‌( Amazon prime) ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ ವಸ್ತುವಿನ ಜತೆಗೆ ನಾಗರಹಾವು ಬಂದಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಬಾಕ್ಸ್‌ನೊಂದಿಗೆ ಬಂದಿರುವ ಹಾವನ್ನು ಬಕೆಟ್‌ ನಲ್ಲಿ ಇರಿಸಲಾಗಿದೆ.
ಬಾಕ್ಸ್‌ನೊಂದಿಗೆ ಬಂದಿರುವ ಹಾವನ್ನು ಬಕೆಟ್‌ ನಲ್ಲಿ ಇರಿಸಲಾಗಿದೆ.

ಬೆಂಗಳೂರು: ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ದಂಪತಿಗಳು ಅಮೆಜಾನ್‌ ಇಂಡಿಯಾ ಪ್ರೈಮ್‌ ( Amazon prime) ಮೂಲಕ ಆನ್‌ಲೈನ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ವಸ್ತುವೊಂದನ್ನು ಆರ್ಡರ್‌ ಮಾಡಿದ್ದರು. ಎರಡು ದಿನದಲ್ಲಿಯೇ ಆರ್ಡರ್‌ ಮನೆಗೇನೂ ಬಂದಿತು. ಆದರೆ ವಸ್ತುವಿನೊಂದಿಗೆ ನಾಗರಹಾವು ಕೂಡ ಬಾಕ್ಸ್‌ನಲ್ಲಿತ್ತು. ಅದನ್ನು ನೋಡಿದ ದಂಪತಿಗೆ ಸಂಪೂರ್ಣ ಶಾಕ್‌. ಬಾಕ್ಸ್‌ ಹಾಗೂ ಅದರಲ್ಲಿದ್ದ ಹಾವಿನ ಸಂಪೂರ್ಣ ಚಿತ್ರಣವನ್ನು ಮಾಡಿ ಸಾಮಾಜಿಕ ಮಾಧ್ಯಮಕ್ಕೆ ದಂಪತಿ ಹಾಕಿದ್ದಾರೆ. ಕೊನೆಗೆ ಹಾವು ಹಿಡಿಯುವವರನ್ನು ಕರೆಯಿಸಿ ಸುರಕ್ಷಿತವಾಗಿ ಸೆರೆ ಹಿಡಿಸಿದ್ದಾರೆ. ಇದನ್ನು ಅಮೆಜಾನ್‌ ಇಂಡಿಯಾದವರಿಗೆ ತಿಳಿಸಿ ಬಾಕ್ಸ್‌ ಅನ್ನು ವಾಪಾಸ್‌ ಕಳುಹಿಸಿ ಹಣ ಸಂಪೂರ್ಣ ಮರುಪಾವತಿ ಮಾಡಿಸಿಕೊಂಡಿದ್ದಾರೆ.

ಇದು ನಡೆದಿರುವುದು ಬೆಂಗಳೂರಿನ ಸರ್ಜಾಪುರದಲ್ಲಿ. ಸಾಫ್ಟ್‌ವೇರ್‌ ಎಂಜಿನಿಯರ್‌ ದಂಪತಿ ಎಕ್ಸ್‌ಬಾಕ್ಸ್‌ ಕಂಟ್ರೋಲರ್‌ ಅನ್ನು ಎರಡು ದಿನದ ಹಿಂದೆ ಅಮೆಜಾನ್‌ ಇಂಡಿಯಾ ಆಪ್‌ ಮೂಲಕ ಬುಕ್‌ ಮಾಡಿದ್ದರು. ಮಂಗಳವಾರ ಮಧ್ಯಾಹ್ನ ಆರ್ಡರ್‌ ಅಪಾರ್ಟ್‌ಮೆಂಟ್‌ ಗೆ ತಲುಪಿದೆ. ಅದನ್ನು ವಿತರಣೆ ಮಾಡಿದ ವ್ಯಕ್ತಿ ಸಹಿ ಪಡೆದು ಸಹಜವಾಗಿ ತೆರಳಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಬಾಕ್ಸ್‌ ಅನ್ನು ತೆರೆದಾಗ ಅದರಲ್ಲಿ ಬುಸ್‌ ಎನ್ನುವ ಶಬ್ದ ಬಂದಿದೆ. ಭಯಗೊಂಡ ದಂಪತಿ ನೋಡಿದರೆ ಒಳಭಾಗದಲ್ಲಿ ನಾಗರಹಾವು ಕುಳಿತಿದೆ. ಅದೂ ಎಕ್ಸ್‌ ಕಂಟ್ರೋಲರ್‌ಗೆ ಅಂಟಿಸಿದ್ದ ಟೇಪ್‌ನಲ್ಲಿ ಸಿಲುಕಿದ್ದರಿಂದ ಏಕಾಏಕಿ ಮೇಲೆ ಬರಲು ಆಗಿಲ್ಲ. ಇಲ್ಲದೇ ಇದ್ದರೆ ಕಚ್ಚುವ ಸಾಧ್ಯತೆಯೂ ಇತ್ತು. ಎಲ್ಲವನ್ನೂ ವಿಡಿಯೋ ಮಾಡಿಕೊಂಡು ಕೂಡಲೇ ಬಾಕ್ಸ್‌ ಅನ್ನು ಬಕೆಟ್‌ ಒಂದರಲ್ಲಿ ಹಾಕಿ ಹಾವು ಹೊರ ಬಾರದಂತೆ ದಂಪತಿ ನೋಡಿಕೊಂಡರು. ಸಮೀಪವೇ ಇದ್ದ ಹಾವು ಹಿಡಿಯುವವರಿಗೆ ಕರೆ ಮಾಡಿದರು. ಅವರು ಬಂದು ಹಾವನ್ನು ಸುರಕ್ಷಿತವಾಗಿ ಹಿಡಿದುಕೊಂಡು ಹೋಗಿದ್ದಾರೆ.

ಇದಾದ ಬಳಿಕ ಆನ್‌ಲೈನ್‌ ಮೂಲಕವೇ ಅಮೆಜಾನ್‌ ಇಂಡಿಯಾದವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಡಿಯೋವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್‌ ಮಾಡಿದ್ದಾರೆ.

ಎಚ್ಚೆತ್ತುಕೊಂಡು ಕಂಪೆನಿಯ ಬೆಂಗಳೂರು ಔಟ್‌ಲೆಟ್‌ ನವರೇ ವಸ್ತುವನ್ನು ವಾಪಾಸ್‌ ಪಡೆದುಕೊಂಡು ಪೂರ್ತಿ ಹಣವನ್ನು ಪಾವತಿ ಮಾಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಆನ್‌ಲೈನ್‌ನಲ್ಲಿ ನಾವು ಬಹುತೇಕ ವಸ್ತು ಖರೀದಿಸುತ್ತೇವೆ.ಎಂದೂ ಹೀಗೆ ಆಗರಲಿಲ್ಲ. ಮೊದಲ ಬಾರಿ ಇಂತಹ ಅನುಭವ ವಾಗಿದೆ. ಬಾಕ್ಸ್‌ನಲ್ಲಿ ಹಾವನ್ನು ನೋಡಿದ ಕೂಡಲೇ ಹೆದರಿಕೆಯಾಯಿತು .ನಮ್ಮ ಅದೃಷ್ಟಕ್ಕೆ ಏನೂ ಅನಾಹುತ ಆಗಲಿಲ್ಲ. ಸಂಪೂರ್ಣ ವಿಡಿಯೋವನ್ನು ಮಾಡಿಕೊಂಡಿದ್ದೇವೆ. ಪ್ರತ್ಯಕ್ಷದರ್ಶಿಗಳಾಗಿ ಅಕ್ಕಪಕ್ಕದವರು ನೀಡಿದ್ದಾರೆ. ಈ ಕುರಿತು ಸಂಬಂಧಪಟ್ಟವರಿಗೆ ದೂರು ನೀಡಿದ್ಧೇವೆ ಎನ್ನುವುದು ಎಂಜಿನಿಯರ್‌ ಅವರ ಮಾಹಿತಿ.

ಯಾವುದೇ ವಸ್ತು ಸಾಗಣೆ ಎಂದರೆ ಅಲ್ಲಿ ಸುರಕ್ಷತೆಯೇ ಅತಿ ಮುಖ್ಯ. ಈ ರೀತಿ ಸುರಕ್ಷತೆಯೇ ಇಲ್ಲದೇ ವಸ್ತುವಿನೊಂದಿಗೆ ಹಾವು ಬಂದರೆ ಎಂಥವರಿಗೂ ಭಯವಾಗುತ್ತದೆ. ಅದೂ ವಿಷಕಾರಿ ಹಾವು. ಅದನ್ನು ಅನುಭವಿಸಿದವರಿಗೆ ಭಯ ಗೊತ್ತಾಗೋದು. ನಮ್ಮನ್ನು ಅಪಾಯಕ್ಕೆ ತಳ್ಳಿದಂತೆಯೇ ಆಗಿದೆ. ಇದು ಸ್ಪಷ್ಟವಾಗಿ ಅಮೆಜಾನ್ ನಿರ್ಲಕ್ಷ್ಯ ಮತ್ತು ಅವರ ಕಳಪೆ ಸಾರಿಗೆ / ಗೋದಾಮು ನೈರ್ಮಲ್ಯ ಮತ್ತು ಮೇಲ್ವಿಚಾರಣೆಯಿಂದ ಉಂಟಾದ ಸುರಕ್ಷತಾ ಉಲ್ಲಂಘನೆಯಾಗಿದೆ. ಸುರಕ್ಷತೆಯಲ್ಲಿ ಇಂತಹ ಗಂಭೀರ ಲೋಪಕ್ಕೆ ಉತ್ತರದಾಯಿತ್ವ ಎಲ್ಲಿದೆ?" ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ.

ಇದಕ್ಕೆ ಕ್ಷಮೆ ಯಾಚಿಸಿರುವ ಬೆಂಗಳೂರಿನ ಅಮೆಜಾನ್‌ ಔಟ್‌ಲೆಟ್‌ ಅಧಿಕಾರಿಗಳು, ಈಗಾಗಲೇ ದೂರು ಬಂದಿದೆ. ಹಣ ಪಾವತಿ ಮಾಡಿದ್ದೇವೆ. ಗ್ರಾಹಕರಿಗೂ ಕ್ಷಮೆ ಕೋರಿದ್ದೇವೆ. ಯಾವ ರೀತಿ ಆಗಿದೆ ಎನ್ನುವುದನ್ನು ಪರಿಶೀಲಿಸುತ್ತೇವೆ. ಮುನ್ನೆಚ್ಚರಿಕೆಯನ್ನೂ ವಹಿಸುತ್ತೇವೆ ಎಂದು ಹೇಳಿದ್ದಾರೆ.

ಈ ರೀತಿ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿದ ವಸ್ತುಗಳನ್ನು ಆಯಾ ರಾಜ್ಯದ ಪ್ರಮುಖ ನಗರಗಳಲ್ಲಿರುವ ತಮ್ಮದೇ ಕಂಪೆನಿಯ ಔಟ್‌ಲೆಟ್‌ ಇಲ್ಲವೇ ಹೊರ ಗುತ್ತಿಗೆ ಪಡೆದ ಸಂಸ್ಥೆಯವರು ರವಾನೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಬಹುತೇಕ ಆನ್‌ ಲೈನ್‌ ಸಂಸ್ಥೆಗಳ ಔಟ್‌ಲೆಟ್‌ಗಳಿವೆ. ದೊಡ್ಡ ಗೋಡೌನ್‌ ನಲ್ಲಿ ವಸ್ತುಗಳನ್ನು ಸಂಗ್ರಹಿಸಿಟ್ಟು ಸರಬರಾಜು ಮಾಡಲಾಗುತ್ತದೆ. ಗೋಡೌನ್‌ನಲ್ಲಿ ಇರಿಸಿದಾಗ ಹಾವು ಬಾಕ್ಸ್‌ನಲ್ಲಿ ಸೇರಿಕೊಂಡಿರುವ ಸಾಧ್ಯತೆಯಿದೆ ಎನ್ನುವುದು ಸಂಸ್ಥೆಯರು ನೀಡಿರುವ ವಿವರಣೆ್.

ಸಾಫ್ಟ್‌ವೇರ್‌ ಎಂಜಿನಿಯರ್‌ ದಂಪತಿ ಈ ಕುರಿತು ಸಂಸ್ಥೆಯವರಿಗೆ ದೂರು ನೀಡಿದ್ಧಾರೆ. ಗ್ರಾಹಕರ ನ್ಯಾಯಾಲಯ ಇಲ್ಲವೇ ಸಂಬಂಧಿಸಿದ ಪ್ರಾಧಿಕಾರಕ್ಕೆ ದೂರು ನೀಡಿ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಮಾಡಲು ದೂರು ದಾಖಲಿಸಲು ಚಿಂತಿಸುತ್ತಿದ್ದು. ಒಂದೆರಡು ದಿನದಲ್ಲಿ ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ