Bangalore Traffic: ಬೆಂಗಳೂರಲ್ಲಿ ಹೆಲ್ಮೆಟ್ ಧರಿಸದೇ ವಾಹನ ಸವಾರಿ, ತಡೆದ ಸಂಚಾರ ಪೊಲೀಸ್ ಕೈ ಕಡಿದ ಸವಾರ viral video
Feb 13, 2024 09:03 PM IST
ಹೆಲ್ಮೆಟ್ ಧರಿಸದೇ ವಾಹನದಲ್ಲಿ ಹೊರಟಿದ್ದಾತನನ್ನು ತಡೆದಾಗ ಪೊಲೀಸ್ ಪೇದೆ ಕೈ ಕಚ್ಚಿರುವ ಘಟನೆ ಬೆಂಗಳೂರಲ್ಲೊ ನಡೆದಿದೆ.
- ಸಂಚಾರ ಪೊಲೀಸ್ ಪೇದೆಯೊಬ್ಬರ ಕೈ ಕಡಿದ ಆರೋಪದ ಮೇಲೆ ಬೆಂಗಳೂರಿನ ದ್ವಿಚಕ್ರವಾಹನ ಸವಾರನನ್ನು ಬಂಧಿಸಲಾಗಿದೆ.
ಬೆಂಗಳೂರು: ವಾಹನ ಸವಾರರು ಹಾಗೂ ಸಂಚಾರ ಪೊಲೀಸರರ ಸಂಘರ್ಷ ಹೊಸದೇನೂ ಅಲ್ಲ. ಆಗಾಗ ವಿಭಿನ್ನ ರೂಪದಲ್ಲಿ ಇದು ಸಾರ್ವಜನಿಕರ ಎದುರು ಕಾಣಿಸುತ್ತಲೇ ಇರುತ್ತದೆ. ಹೆಲ್ಮೆಟ್ ಧರಿಸಿಲ್ಲ, ದಾಖಲೆ ಇಟ್ಟಿಲ್ಲ ಎಂದು ಸವಾರರನ್ನು ತಡೆದು ತೊಂದರೆಗೆ ಸಿಲುಕಿಸಿರುವ ಸಂಚಾರ ಪೊಲೀಸರು, ಕೆಲವೊಮ್ಮೆ ದಾಖಲೆ ಇಲ್ಲದೇ ಇದ್ದರೂ ದಂಡ ಕಟ್ಟಲು ಹಠ ಮಾಡುತ್ತಾ ಪೊಲೀಸರ ಮೇಲೆಯೇ ಹಲ್ಲೆ ಮಾಡುವ ಸವಾರರು. ಬೆಂಗಳೂರಲ್ಲಿ ವಾಹನ ಸವಾರರೊಬ್ಬರು ಸಂಚಾರ ಪೊಲೀಸರ ಕೈಗೆ ಕಡಿದಿರುವ ಘಟನೆ ನಡೆದಿದೆ.
ಘಟನೆ ಹಿನ್ನೆಲೆಯಲ್ಲಿ ಸಂಚಾರ ಪೇದೇ ಸಿದ್ದರಾಮೇಶ್ವರ ಕೌಜಲಗಿ ನೀಡಿದ ದೂರು ಆಧರಿಸಿ ಬಿಟಿಎಂಲೇಔಟ್ ನಿವಾಸಿ ಶಫಿ ಎಂಬಾತನನ್ನು ಬಂಧಿಸಲಾಗಿದೆ.
ಈ ಘಟನೆಯನ್ನು ಗಮನಿಸಿದ ಕೆಲವರು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದು ಭಾರೀ ವೈರಲ್ ಆಗಿದೆ. ನೆಟ್ಟಿಗರೂ ಈ ಘಟನೆಗೆ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರೂ ಕಂಡ ಕಂಡಲ್ಲಿ ಹಿಡಿದು ಸವಾರರಿಗೆ ತೊಂದರೆ ಕೊಡುವ ಬದಲು ಈಗಾಗಲೇ ಬಳಸುತ್ತಿರುವ ತಂತ್ರಜ್ಞಾನದಿಂದ ದಂಡ ಕಟ್ಟಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಕಾನೂನು ಎಲ್ಲರಿಗೂ ಒಂದೇ. ಪೊಲೀಸರು ಅವರ ಕೆಲಸ ಮಾಡುವಾಗ ಹಲ್ಲೆ ಮಾಡುವುದು, ಕಚ್ಚುವುದು ಬೇಡ ಎಂದು ಇನ್ನು ಕೆಲವರು ಸಲಹೆ ನೀಡಿದ್ದಾರೆ.
ಆಗಿದ್ದೇನು
ಇದು ನಡೆದಿರುವುದು ಸೋಮವಾರ ಬೆಳಿಗ್ಗೆ ಸಮಯದಲ್ಲಿ. ವಿಲ್ಸನ್ ಗಾರ್ಡನ್ ಏರಿಯಾದ ಡಾ.ಮರಿಗೌಡ ರಸ್ತೆಯಲ್ಲಿ ಸಂಚಾರ ಪೊಲೀಸರು ತಪಾಸಣೆಯಲ್ಲಿ ನಿರತರಾಗಿದ್ದರು. ಈ ವೇಳೆ ಯುವಕನೊಬ್ಬ KA05 LM 7938 ಸಂಖ್ಯೆಯ ಸ್ಕೂಟರ್‌ನಲ್ಲಿ ಹೊರಟಿದ್ದ. ಹೆಲ್ಮೆಟ್ ಧರಿಸದ್ದೇ ಇದ್ದುದರಿಂದ ಅತನನ್ನು ಸಂಚಾರ ಪೊಲೀಸ್ ಸಿಬ್ಬಂದಿ ತಡೆದರು.
ಹೆಲ್ಮೆಟ್ ಧರಿಸದೇ ಇದ್ದುದರಿಂದ ದಂಡ ಕಟ್ಟುವಂತೆ ಪೊಲೀಸರು ಸೂಚಿಸಿದ್ದಾರೆ. ರಶೀದಿ ಕೊಡಿ. ಪಾವತಿಸುತ್ತೇನೆ. ಆದರೆ ಕಂಡ ಕಂಡಲ್ಲಿ ತಡೆಯಬೇಡಿ ಎಂದು ಹೇಳಿದ್ದಾನೆ. ಆಗ ಮಾತಿನ ಚಕಮಕಿ ನಡೆದಿದ್ದು, ಯುವಕ ಅಲ್ಲಿಂದ ಹೊರಡಲು ಮುಂದಾಗಿದ್ಧಾನೆ. ಆಗ ಪೊಲೀಸರು ಗಾಡಿ ಕೀ ತೆಗೆದುಕೊಂಡಿದ್ದು ಇಬ್ಬರ ನಡುವೆ ಜಗಳ ಜೋರಾಗಿದೆ. ಆಗ ಯುವಕ ಕೀ ಅನ್ನು ಕಿತ್ತುಕೊಂಡಿದ್ದು ಪೊಲೀಸ್ ಅದನ್ನು ಪಡೆಯಲು ಮುಂದಾಗಿದ್ದಾರೆ.
ಈ ವೇಳೆ ಯುವಕ ಪೊಲೀಸ್ ಪೇದೆ ಕೈಗೆ ಕಡಿದು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಅಲ್ಲಿದ್ದ ಇತರೆ ಪೊಲೀಸ್ ಸಹಕಾರದಿಂದ ಯುವಕ ಅತ್ತ ಕಡೆಗೆ ಹೋಗದಂತೆ ತಡೆದಿದ್ಧಾನೆ.
ವಿಡಿಯೋ ವೈರಲ್
ಈ ಘಟನೆಯನ್ನು ನೋಡುತ್ತಿದ್ದವರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿದ್ಧಾರೆ. ಎಕ್ಸ್, ಇನ್ ಸ್ಟಾಗ್ರಾಂನಲ್ಲೂ ಪೋಸ್ಟ್ ಆಗಿದ್ದು. ಭಾರೀ ವೈರಲ್ ಆಗಿದೆ.
ಬೆಂಗಳೂರು ಸಂಚಾರ ಪೊಲೀಸರ ನಡೆಗೆ ಭಾರೀ ಆಕ್ರೋಶವೇ ವ್ಯಕ್ತವಾಗಿದೆ. ಹೆಲ್ಮೆಟ್ ಹಾಕಿಲ್ಲ ಎಂದು ಕೀ ಕಿತ್ತುಕೊಳ್ಳುವುದು ಮೋಟಾರ್ ವಾಹನ ಕಾಯಿದೆ ಯಲ್ಲಿ ಅವಕಾಶ ವಿಲ್ಲ. ಕಾಯಿದೆಯನ್ನೇ ಉಲ್ಲಂಘಿಸಿ ಸಂಚಾರ ಪೊಲೀಸರು ಹೀಗೆ ನಡೆದುಕೊಳ್ಳಬಾರದು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಯುವಕ ಬಂಧನ
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಚಾರ ಪೊಲೀಸ್ ಪೇದೆ ಸಿದ್ದರಾಮೇಶ್ವರ ಕೌಜಲಗಿ ಎಂಬುವವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆರಳು ಕಡಿದ ಆರೋಪದ ಮೇಲೆ ವಾಹನ ಸವಾರ ಶಫಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.