Bangalore Crime: ಕಳ್ಳತನಕ್ಕೆ ಬಂದು ದೇವರ ಮನೆ ಎದುರು ಶೂ ಬಿಚ್ಚಿಟ್ಟು ಸಿಕ್ಕಿಬಿದ್ದ ಕಳ್ಳರು: ಕಳ್ಳರನ್ನು ಹಿಡಿದುಕೊಟ್ಟ ಬೆಂಗಳೂರು ಉದ್ಯಮಿ
Dec 09, 2023 02:35 PM IST
ಬೆಂಗಳೂರಿನಲ್ಲಿ ಕಳ್ಳರು ಮನೆಗೆ ನುಗ್ಗಿದ್ದನ್ನು ಸೂಕ್ಷ್ಮವಾಗಿ ಅರಿತ ಉದ್ಯಮಿಯೊಬ್ಬರು ಭಯಕ್ಕೊಳಗಾಗದೇ ಕಳ್ಳರನ್ನು ಹಿಡಿದು ಕೊಟ್ಟಿದ್ದಾರೆ.
- Bangalore Thieves ಬೆಂಗಳೂರಿನ ಉದ್ಯಮಿಯೊಬ್ಬರ( Bangalore industrialist) ಮನೆಗೆ ಕಳ್ಳತನಕ್ಕೆ ಬಂದು ದೇವರ ಮನೆ ಎದುರು ಶೂ ಬಿಟ್ಟು ಇಬ್ಬರು ಕಳ್ಳರು ಸಿಕ್ಕಿಬಿದ್ದ ಆಸಕ್ತಿದಾಯಕ ವರದಿಯಿದು.
ಎಲ್ಲೋ ಹೊರಗೆ ಹೋಗಿದ್ದ ನೀವು ಮನೆಗೆ ಮರಳಿದಾಗ ನಿಮ್ಮ ಮನೆಯೊಳಗೆ ಅಪರಿಚಿತರು ಅಥವಾ ದರೋಡೆಕೋರರು ಇರುವುದು ಕಂಡು ಬಂದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಒಂದು ವೇಳೆ ನೀವು ಗದ್ದಲ ಎಬ್ಬಿಸಿದರೆ ಅವರು ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.
ಇಲ್ಲವೇ ನಿಮ್ಮ ಮೇಲೆ ಹಲ್ಲೆ ನಡೆಸಿಯೂ ಪರಾರಿಯಾಗಬಹುದು ಅಲ್ಲವೇ? ಇಲ್ಲೊಬ್ಬ ಚಾಣಾಕ್ಷ ಮನೆ ಮಾಲೀಕ ಏನು ಮಾಡಿದರು ನೋಡಿ..
ಇಲ್ಲಿ ಆಗಿದ್ದು ಹೀಗೆ
ಉದ್ಯಮಿ ಶ್ರೀನಿವಾಸ್(ಹೆಸರು ಬದಲಾಯಿಸಲಾಗಿದೆ) ಮತ್ತು ಕುಟುಂಬದವರು ವಾರಣಾಸಿ ಪ್ರವಾಸ ಮುಗಿಸಿಕೊಂಡು ಬೆಂಗಳೂರಿನ ತಮ್ಮ ಸದಾಶಿವನಗರದ ತಮ್ಮ
ಮನೆಗೆ ಮರಳಿದ್ದಾರೆ. ಅವರು ಹಿಂತಿರುಗಿದಾಗ ತಡ ರಾತ್ರಿಯಾಗಿತ್ತು. ಬೀಗ ತೆಗೆದು ಮನೆ ಪ್ರವೇಶಿಸಿದಾಗ ಮನೆಯೊಳಗಿನಿಂದ ಸದ್ದು ಕೇಳಿದೆ.
ನೋಡಿದಾಗ ವಾರ್ಡ್ ರೋಬ್ ತಡಕಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಈ ದೃಶ್ಯವನ್ನು ಕಂಡು ತಕ್ಷಣ ಬೇರೆ ಯಾರೇ ಆಗಿದ್ದರೂ ಕೂಗಾಡಿ ಕಿರುಚಾಡಿ ಕಳ್ಳರು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದರು. ಆದರೆ ಶ್ರೀನಿವಾಸ್ ಹಾಗೆ ಮಾಡಲಿಲ್ಲ. ತುಂಬಾ ಬುದ್ದಿವಂತಿಕೆಯನ್ನು ಉಪಯೋಗಿಸಿ ಕಳ್ಳರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ತಡರಾತ್ರಿ ಕಾರ್ಯಾಚರಣೆ
ಶ್ರೀನಿವಾಸ್ ಕುಟುಂಬ ತಡರಾತ್ರಿ 1.30 ರ ಸುಮಾರಿಗೆ ಮನೆಗೆ ಹಿಂತಿರುಗಿದ್ದಾರೆ. ತಡರಾತ್ರಿಯಾಗಿದ್ದರಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತದೆ ಎಂದು ಸದ್ದು ಮಾಡದೆ
ನಿಧಾನವಾಗಿ ಮನೆ ಪ್ರವೇಶಿಸಿದ್ದಾರೆ. ಮೊದಲು ಇವರು ವಾರಣಾಸಿಯಿಂದ ತಂದಿದ್ದ ಪವಿತ್ರ ವಸ್ತುಗಳನ್ನು ಇಡಲು ಪೂಜಾ ಕೋಣೆಯತ್ತ ತೆರಳಿದ್ದಾರೆ. ಆದರೆ ಅವರಿಗೆ ಅಲ್ಲಿ ಶಾಕ್
ಕಾದಿತ್ತು. ದೇವರ ಕೋಣೆಯ ಹೊರಗೆ ಎರಡು ಜೊತೆ ಶೂ ಗಳಿದ್ದದ್ದು ಕಂಡು ಬಂದಿದೆ.
ತಕ್ಷಣವೇ ಮನೆಗೆ ದರೋಡೆಕೋರರು ನುಗ್ಗಿದ್ದಾರೆ ಎನ್ನುವುದು ಇವರಿಗೆ ಅರ್ಥವಾಗಿದೆ. ಜೊತೆಗೆ ಮೊದಲ ಮಹಡಿಯಿಂದ ಸದ್ದು ಕೇಳಿ ಬಂದಿದೆ.ಕೂಡಲೇ ಶ್ರೀನಿವಾಸ್ ಅವರಿಗೆ ಏನು ಮಾಡಬೇಕು ಎನ್ನುವುದು ಅರ್ಥವಾಗಿತ್ತು.
ಬಾಗಿಲು ಹಾಕಿಕೊಂಡರು
ಸದ್ದುಮಾಡದೆ ಮೊದಲ ಮಹಡಿಗೆ ಹೋಗಿ ಕಳ್ಳರು ಇದ್ದ ಕೊಠಡಿಯ ಬಾಗಿಲು ಹಾಕಿದ್ದಾರೆ. ತಕ್ಷಣವೇ ಅವರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಇತ್ತ ಕಳ್ಳರು ಮನೆ ಮಾಲೀಕರ ಬಳಿ ಗೋಳಾಟ ಆರಂಭಿಸಿದ್ದಾರೆ. ನಾವು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದೇವೆ. ಕೆಲಸ ಸಿಕ್ಕಿರಲಿಲ್ಲ. ಬದುಕಿಕೊಳ್ಳಲು ಕಳ್ಳತನ ಮಾಡಿದ್ದೇವೆ ಎಂದು ಗೋಗೆರೆದಿದ್ದಾರೆ. ಆ ವೇಳೆಗೆ ಹೊಯ್ಸಳ ಪೊಲೀಸರು ಮನೆಗೆ ಆಗಮಿಸಿ ಕಳ್ಳರನ್ನು ಹಿಡಿದಿದ್ದಾರೆ.
ಅಂಗಲಾಚಿದ ಕಳ್ಳರು
24 ವರ್ಷದ ಅರುಣ್ ಕುಮಾರ್ ಮತ್ತು 23 ವರ್ಷದ ವಿನಯ್ ರೇವಂಕರ್ ಬಂಧಿತ ಕಳ್ಳರು ಎನ್ನುವ ಮಾಹಿತಿ ಪೊಲೀಸರ ವಿಚಾರಣೆಯಿಂದ ಬಯಲಾಗಿದೆ.
ಇಬ್ಬರೂ ಕಳ್ಳರು ಮನೆ ಮಾಲೀಕರ ಬಳಿ ಬಿಟ್ಟು ಬಿಡುವಂತೆ ಕೈಕಾಲು ಹಿಡಿದಿದ್ದಾರೆ. ನಾವು ಕಳ್ಳರಲ್ಲ, ಹೊಟ್ಟಪಾಡಿಗೆ ತಿಳಿಯದೆ ಮಾಡಿಬಿಟ್ಟಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ. ಮನೆ ಮಾಲೀಕ ಶ್ರೀವಾಸ್ ಅವರೂ ಸಹ ಕಳ್ಳರ ಮಾತಿಗೆ ಮರುಗಿ ಬಿಟ್ಟುಬಿಡಲು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಕಳ್ಳರನ್ನು ಬಿಡಲು ಒಪ್ಪಿಲ್ಲ. ಸಿಕ್ಕಿಹಾಕಿಕೊಂಡ ಎಲ್ಲ ಕಳ್ಳರೂ ತಾವು ಅಮಾಯಕರು, ತಿಳಿಯದೆ ಮಾಡಿದ್ದೇವೆ ಬಿಟ್ಟುಬಿಡಿ ಎಂದು ಅಂಗಾಲಾಚುತ್ತಾರೆ ಎಂದು ಶ್ರೀನಿವಾಸ್ ಅವರಿಗೆ ತಿಳಿಹೇಳಿ ಕಳ್ಳರನ್ನು ಕರೆದೊಯ್ದಿದ್ದಾರೆ.
ಇಬ್ಬರ ಬಳಿಯೂ 1.6 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳು ಮತ್ತು ಮೊಬೈಲ್ ಪತ್ತೆಯಾಗಿದೆ. ಇವು ದೇವರ ವಿಗ್ರಹಗಳಿಗೆ ಹಾಕಿದ್ದ ಸರಗಳು ಎಂದು ತಿಳಿದು ಬಂದಿದೆ.
ಈ ಕಳ್ಳ ಜೋಡಿ ಕಿಟಕಿ ಗಾಜನ್ನು ಮುರಿದು ಸರಳನ್ನು ಬಗ್ಗಿಸಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ಮನೆಯೊಳಗೆ ಎರಡು ಮೂರು ದಿನಗಳಿಂದ ಯಾರೂ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡೇ ಇವರು ಕಳ್ಳತನ ಮಾಡಲು ಬಂದಿದ್ದಾರೆ. ಆದರೆ ಮನೆ ಮಾಲೀಕರು ಆತಂಕಕ್ಕೆ ಒಳಗಾಗದೇ ಸುಲಭವಾಗಿ ಕಳ್ಳರನ್ನು ಹಿಡಿದುಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
( ವರದಿ: ಎಚ್.ಮಾರುತಿ)