logo
ಕನ್ನಡ ಸುದ್ದಿ  /  ಕರ್ನಾಟಕ  /  Viral Video: ಐಡಿ ಇಲ್ಲದೇ ಶಕ್ತಿ ಸೌಲಭ್ಯಕ್ಕೆ ಬೆಂಗಳೂರಲ್ಲಿ ಬಿಎಂಟಿಸಿ ಕಂಡಕ್ಟರ್ ಜೊತೆ ವಾಗ್ವಾದ; ಕೇಂದ್ರ ನೌಕರ ಮಹಿಳೆ ವೀಡಿಯೊ ವೈರಲ್‌

viral Video: ಐಡಿ ಇಲ್ಲದೇ ಶಕ್ತಿ ಸೌಲಭ್ಯಕ್ಕೆ ಬೆಂಗಳೂರಲ್ಲಿ ಬಿಎಂಟಿಸಿ ಕಂಡಕ್ಟರ್ ಜೊತೆ ವಾಗ್ವಾದ; ಕೇಂದ್ರ ನೌಕರ ಮಹಿಳೆ ವೀಡಿಯೊ ವೈರಲ್‌

Umesha Bhatta P H HT Kannada

Aug 13, 2024 09:21 PM IST

google News

ಬೆಂಗಳೂರಿನ ಬಸ್‌ನಲ್ಲಿ ಜಗಳಕ್ಕೆ ಇಳಿದ ಮಹಿಳೆ.

    • BMTC ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುತ್ತಿದ್ದ ಕೇಂದ್ರ ಸರ್ಕಾರಿ ನೌಕರರು ಎಂದು ಹೇಳಿಕೊಂಡ ಮಹಿಳೆ ಶಕ್ತಿ ಯೋಜನೆ ಸೌಲಭ್ಯ ಪಡೆಯಲು ದಾಖಲೆ ತೋರಿಸದೇ ರಂಪಾಟ ಮಾಡಿರುವ ವಿಡಿಯೋ ವೈರಲ್‌( Viral Video) ಆಗಿದೆ.
ಬೆಂಗಳೂರಿನ ಬಸ್‌ನಲ್ಲಿ ಜಗಳಕ್ಕೆ ಇಳಿದ ಮಹಿಳೆ.
ಬೆಂಗಳೂರಿನ ಬಸ್‌ನಲ್ಲಿ ಜಗಳಕ್ಕೆ ಇಳಿದ ಮಹಿಳೆ.

ಬೆಂಗಳೂರು: ಕರ್ನಾಟಕದಲ್ಲಿ ಶಕ್ತಿ ಯೋಜನೆ ಆರಂಭಗೊಂಡು 15 ತಿಂಗಳು ಮುಗಿದು 16ನೇ ತಿಂಗಳೇ ಆಗಿದೆ. ಕೋಟ್ಯಂತರ ಮಹಿಳೆಯರು ಶಕ್ತಿ ಯೋಜನೆಯ ಉಪಯೋಗವನ್ನು ಕರ್ನಾಟಕದಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಆಗಾಗ ಯೋಜನೆ ವಿಚಾರವಾಗಿ ಬಸ್‌ ಕಂಡಕ್ಟರ್‌ ಹಾಗೂ ಪ್ರಯಾಣಿಕರ ನಡುವೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಜಗಳ ಆಗುತ್ತಲೇ ಇರುತ್ತದೆ. ಕೆಲವು ಕಡೆ ಮಾರಾಮಾರಿಯೂ ನಡೆದಿರುವುದು ವರದಿಯಾಗಿದೆ. ಈಗ ಇಂತಹದೇ ಕಂಡಕ್ಟರ್‌ ಹಾಗೂ ಪ್ರಯಾಣಿಕರ ನಡುವೆ ಭಾರೀ ಜಗಳವೇ ಆಗಿದೆ. ಶಕ್ತಿ ಯೋಜನೆ ಉಪಯೋಗ ಪಡೆಯಲು ಐಡಿ ಕಾರ್ಡ್‌ ಕಡ್ಡಾಯ. ಆದರಲ್ಲೂ ಆಧಾರ್‌ ಇದ್ದವರಿಗೆ ಪ್ರಯಾಣ ಉಚಿತ ಎಂದು ತಿಳಿಸಲಾಗಿದೆ. ದಾಖಲೆ ಇಲ್ಲದೇ ದುಡ್ಡುಕೊಟ್ಟು ಸಂಚರಿಸಬೇಕು. ಆದರೆ ಬೆಂಗಳೂರಿನಲ್ಲಿ ಬಿಎಂಟಿಸಿ( BMTC) ಬಸ್‌ ಏರಿದ ಮಹಿಳೆ ಐಡಿ ಇಲ್ಲದೇ ಶಕ್ತಿಯಡಿ( Shakti Scheme) ಉಚಿತ ಟಿಕೆಟ್‌ ನೀಡುವಂತೆ ಕಂಡಕ್ಟರ್‌ ಜತೆ ಜಗಳವಾಡಿಕೊಂಡಿದ್ದಾರೆ. ಅದೂ ಜಗಳಕ್ಕೆ ಇಳಿದ ಮಹಿಳೆ ಕೇಂದ್ರ ಸರ್ಕಾರಿ ನೌಕರರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ.

ಉಚಿತ ಬಸ್ ಸೇವೆ ಬಳಸುವಾಗ ಆಧಾರ್ ಕಾರ್ಡ್ ತೋರಿಸಲು ನಿರಾಕರಿಸಿದ ಕಾರಣ ಬಿಎಂಟಿಸಿ ಬಸ್ ಕಂಡಕ್ಟರ್ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ಹೇಳಿಕೊಂಡ ಮಹಿಳೆ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದನ್ನು ಬಸ್‌ನಲ್ಲಿದ್ದವರು ಗಮನಿಸಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಿಗೆ ಅಪ್ಲೋಡ್‌ ಮಾಡಿದ್ದಾರೆ.

ಕೆಲಸ ಮುಗಿಸಿ ಕೇಂದ್ರ ಸರ್ಕಾರಿ ನೌಕರರು ಎನ್ನಲಾದ ಮಹಿಳೆ ಬಿಎಂಟಿಸಿ ಬಸ್‌ ಏರಿದರು. ಸಹಜವಾಗಿಯೇ ಕಂಡಕ್ಟರ್‌ ಟಿಕೆಟ್‌ ಕೇಳಿದರು. ಆಗ ಶಕ್ತಿ ಯೋಜನೆಯಡಿ ನೀಡಿ ಎಂದು ಮಹಿಳೆ ತಿಳಿಸಿದರು. ದಾಖಲೆ ಕೊಡಿ ಎಂದು ಕಂಡಕ್ಟರ್‌ ಎಂದಿನಂತೆ ಕೇಳಿದರು. ಆದರೆ ಮಹಿಳೆ ಬಳಿ ದಾಖಲೆ ಇರಲಿಲ್ಲ. ಮೊಬೈಲ್‌ನಲ್ಲಿ ಏನನ್ನೋ ತೋರಿಸದರು ಅದು ದಾಖಲೆಯಾಗಿರಲಿಲ್ಲ. ಅಲ್ಲದೇ ನಾನು ಕೇಂದ್ರ ಸುಂಕ ಇಲಾಖೆ ಅಧಿಕಾರಿ ಎಂದು ಆಕೆ ಹೇಳಿಕೊಂಡರು.

ಇದಕ್ಕೆ ಒಪ್ಪದೇ ದಾಖಲೆ ಇಲ್ಲದೇ ಇದ್ದಾಗ ಟಿಕೆಟ್‌ಗೆ ಹಣ ಕೊಡಿ ಎಂದು ಕಂಡಕ್ಟರ್‌ ಕೇಳಿಕೊಂಡರು. ನಿತ್ಯವೂ ನಾನು ಬಸ್‌ನಲ್ಲಿ ಉಚಿತವಾಗಿಯೇ ಸಂಚರಿಸುತ್ತೇನೆ. ದಾಖಲೆ ತಂದಿಲ್ಲ. ಟಿಕೆಟ್‌ ಕೊಡಿ ಎಂದು ಪ್ರಯಾಣಿಕರು ಕೊಂಚ ಏರಿದ ದನಿಯಲ್ಲಿಯೇ ಕೇಳಿದ್ದಾರೆ. ಇದಕ್ಕೆ ಕಂಡಕ್ಟರ್‌ ಅನುಮತಿ ನೀಡದೇ ಟಿಕೆಟ್‌ ಪಡೆಯಲೇಬೇಕು ಎಂದು ತಾಕೀತು ಮಾಡಿದ್ಧಾರೆ. ಈ ವೇಳೆ ಮಹಿಳೆ ಬಸ್ ಒಳಗೆ ಕಿರುಚುತ್ತಿರುವುದು ಕಂಡುಬಂದಿದೆ. ಸಹ ಪ್ರಯಾಣಿಕರು ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದರೂ ಅದಕ್ಕೆ ಅವರು ಒಪ್ಪಿಲ್ಲ.

ಬಿಎಂಟಿಸಿ ಅನುಸರಿಸಬೇಕಾದ ಕೆಲವು ನಿಯಮಗಳಿವೆ ಮತ್ತು ಸರಿಯಾದ ಗುರುತಿನ ಪುರಾವೆಗಳಿಲ್ಲದೆ ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಕಂಡಕ್ಟರ್‌ ಇನ್ನೊಮ್ಮೆ ತಿಳಿ ಹೇಳಿದರು.

ಆದಾಗ್ಯೂ, ಮಹಿಳೆ ಈ ವಿಷಯದ ಬಗ್ಗೆ ದೂರು ನೀಡುವುದಾಗಿ ಹೇಳಿದರು. ಕೊನೆಗೆ ಮಹಿಳೆ ಇಳಿದು ಹೋದರು ಎನ್ನಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ