logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ; 1680 ಎಂ ಎಲ್ ಡಿ ನೀರು ಕೊರತೆ, ಟ್ಯಾಂಕರ್‌ ನೀರಿನತ್ತ ಚಿತ್ತ

Bangalore News: ಬೆಂಗಳೂರಿನಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ; 1680 ಎಂ ಎಲ್ ಡಿ ನೀರು ಕೊರತೆ, ಟ್ಯಾಂಕರ್‌ ನೀರಿನತ್ತ ಚಿತ್ತ

Umesha Bhatta P H HT Kannada

Feb 22, 2024 05:03 PM IST

google News

ಬೆಂಗಳೂರಲ್ಲೂ ನೀರಿನ ಸಮಸ್ಯೆ ಹೆಚ್ಚಿ ಟ್ಯಾಂಕರ್‌ ನೀರು ಅವಲಂಬಿಸಬೇಕಾಗಿದೆ.

    • Water issue ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಈಗಲೇ ಕಾಣಿಸಿಕೊಂಡಿದೆ. ಜನ ಟ್ಯಾಂಕರ್‌ ನೀರು ತರಿಸುವ ಸ್ಥಿತಿ ಕಂಡು ಬಂದಿದೆ. 
    • (ವರದಿ: ಎಚ್.ಮಾರುತಿ. ಬೆಂಗಳೂರು)
ಬೆಂಗಳೂರಲ್ಲೂ ನೀರಿನ ಸಮಸ್ಯೆ ಹೆಚ್ಚಿ ಟ್ಯಾಂಕರ್‌ ನೀರು ಅವಲಂಬಿಸಬೇಕಾಗಿದೆ.
ಬೆಂಗಳೂರಲ್ಲೂ ನೀರಿನ ಸಮಸ್ಯೆ ಹೆಚ್ಚಿ ಟ್ಯಾಂಕರ್‌ ನೀರು ಅವಲಂಬಿಸಬೇಕಾಗಿದೆ.

ಬೆಂಗಳೂರು:ಬೇಸಿಗೆ ಆರಂಭಕ್ಕೂ ಮೊದಲೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ.ಉದ್ಯಾನ ನಗರಿಯ 1.4 ಕೋಟಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ವಾರ ಮತ್ತು 15 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಬೋರ್ ವೆಲ್‍ಗಳ ಅಂತರ್ಜಲ ಮಟ್ಟ ಕುಸಿದಿದ್ದು, ನೀರು ಸಿಗುತ್ತಿಲ್ಲ. ಸಾರ್ವಜನಿಕರು ಕುಡಿಯುವ ನೀರಿಗೆ ಶುದ್ಧ ನೀರಿನ ಘಟಕಗಳನ್ನು ಅವಲಂಬಿಸಿದ್ದರು. ಇದೀಗ ಒಂದು ತಿಂಗಳಿನಿಂದ ಅವೂ ಬಂದ್ ಆಗಿವೆ. ಹೀಗಾಗಿ ನೀರಿಗೆ ಬರ ಆವರಿಸಿದೆ.

ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ಹೆಚ್ಚು ಸುಡುತ್ತಿದೆ. ದಿನನಿತ್ಯದ ಉಷ್ಣಾಂಶ 30 ಡಿಗ್ರಿಗಿಂತ ಕೆಳಗೆ ಇಳಿದಿಲ್ಲ. ಬೆಂಗಳೂರಿಗೆ ಪ್ರತಿದಿನ 1,860 ಮಿಲಿಯನ್ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದ್ದು, ಇನ್ನೂ 1680 ಮಿಲಿಯನ್ ಲೀಟರ್ ನೀರು ಅವಶ್ಯಕತೆ ಇದೆ.

ನಾನಾ ಕಾರಣ

ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ನಾನಾ ಕಾರಣಗಳಿಂದ ಬೆಂಗಳೂರಿನಲ್ಲಿ ಫೆಬ್ರುವರಿಯಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಅಭಾವ ಇರುವ ಕಾರಣ ಬೆಂಗಳೂರಿನ ಬಹುತೇಕ ಪ್ರದೇಶದ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಸಮಯ ನಿಗದಿ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಬೋರ್ಡ್‌ಗಳನ್ನು ಅಳವಡಿಸಿ ನೀರಿನ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ.

ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರು ಜಲಮಂಡಳಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ನೂರು ಕಿ.ಮೀ.ಗಿಂತಲೂ ಹೆಚ್ಚು ದೂರದ ಕಾವೇರಿ ನದಿಯಿಂದ ಪಂಪ್‌ ಮಾಡಿ 1000 ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ ನೀರು ತರಲಾಗುತ್ತಿದೆ. ಈ ನೀರನ್ನೇ ಬೆಂಗಳೂರು ಬಹುವಾಗಿ ಆಶ್ರಯಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಮಳೆ ಕಡಿಮೆಯಾಗಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಬೇಸಿಗೆಯಲ್ಲಿ ನೀರಿನ ಬಳಕೆ ಶೇ 5ರಷ್ಟು ಹೆಚ್ಚಾಗುತ್ತದೆ. ಪಂಪ್‌ ಮಾಡುವ ಮೋಟಾರ್‌ ದುರಸ್ತಿ, ವಿದ್ಯುತ್ ವ್ಯತ್ಯಯ, ಪೈಪ್ ಗಳು ಒಡೆದು ಹೋಗಿರುವುದು ಮೊದಲಾದ ಸಬೂಬುಗಳನ್ನು ಜಲ ಮಂಡಳಿ ನೀಡುತ್ತಿದೆ.

ಟ್ಯಾಂಕರ್‌ ನೀರು

ಕಳೆದ ಒಂದು ತಿಂಗಳಲ್ಲಿ ಟ್ಯಾಂಕರ್ ನೀರಿನ ಬೆಲೆ ದುಪ್ಪಟ್ಟಾಗಿದೆ. ಜನವರಿ ಆರಂಭದಲ್ಲಿ ಒಂದು ಟ್ಯಾಂಕರ್ ನೀರಿನ ಬೆಲೆ 700-800 ರೂಪಾಯಿ ಇದ್ದದ್ದು, ಈಗ 2000 ರೂ. ದಾಟಿದೆ. ಬುಕ್ ಮಾಡಿದ 12 ಗಂಟೆ ಕಾಲ ಟ್ಯಾಂಕರ್ ಗೆ ಕಾಯಬೇಕಾಗಿದೆ ಎಂದು ಸ್ಥಳೀಯರು ಆಕ್ರೋಶದಿಂದಲೇ ಹೇಳುತ್ತಾರೆ.

ಟ್ಯಾಂಕ್‌ ಮೂಲಕ ನೀರು ಪೂರೈಕೆ ಮಾಡುವ ಮಾಲೀಕರ ಜೊತೆಯಲ್ಲಿ ಮಂಡಳಿಯ ಕೆಲವು ಅಧಿಕಾರಿಗಳು ಕೈ ಜೋಡಿಸಿದ್ದು ಕೃತಕವಾಗಿ ನೀರಿನ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ನಗರದಲ್ಲಿ ಪ್ರತಿದಿನ 144 ಕೋಟಿ ಲೀಟರ್‌ಗಳಷ್ಟು ತ್ಯಾಜ್ಯ ನೀರು ಉತ್ಪಾದನೆಯಾಗುತ್ತಿದ್ದು, ಕೇವಲ 42.75 ಕೋಟಿ ಲೀಟರ್‌ ನೀರನ್ನು ಮಾತ್ರ ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಸಂಸ್ಕರಿಸಿದ ನೀರಿನ ಬಳಕೆಗೆ ಸಾರ್ವಜನಿಕರು ಸಿದ್ಧವಿದ್ದರೂ ಪೂರೈಕೆ ಇಲ್ಲವಾಗಿದೆ.

110 ಹಳ್ಳಿಗಳ ಪರಿಸ್ಥಿತಿ ಚಿಂತಾಜನಕ

ದಶಕದ ಹಿಂದೆ ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಪರಿಸ್ಥಿತಿಯಂತೂ ಇನ್ನೂ ಚಿಂತಾಜನಕವಾಗಿದೆ. ಈ ಪ್ರದೇಶಗಳಗೆ ನೀರು ಪೂರೈಕೆ ಮಾಡುವ ವ್ಯವಸ್ಥೆಯೇ ಇಲ್ಲ. ಈ ಭಾಗಗಳ ಜನ ಕೊಳವೆಬಾವಿ ಹಾಗೂ ಟ್ಯಾಂಕರ್‌ ಮೂಲಕ ಪೂರೈಕೆಯಾಗುತ್ತಿರುವ ನೀರನ್ನೇ ಅವಲಂಬಿಸಿದ್ದಾರೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಬತ್ತಿ ಹೋಗಿರುವ, ನೀರು ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ಮರು ಕೊರೆಯಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಮೇ ವೇಳೆಗೆ ಕಾವೇರಿ 5ನೇ ಹಂತದ ಮೂಲಕ ನೀರು ಪೂರೈಕೆ ಆರಂಭಿಸಲಾಗಲಿದೆ.

ಫೆಬ್ರುವರಿಯಿಂದ ಜುಲೈವರೆಗೆ ಒಟ್ಟು 11.24 ಟಿಎಂಸಿ ಅಡಿ ನೀರನ್ನು ಕಾವೇರಿ ಜಲಾಶಯದಲ್ಲಿ ಶೇಖರಿಸಿ ಪೂರೈಸಲು ಕಾವೇರಿ ನೀರಾವರಿ ನಿಗಮಕ್ಕೆ ಹೇಳಲಾಗಿದೆ.

ಬೆಂಗಳೂರು ಶಾಸಕರ ಆಗ್ರಹ

ಬೆಂಗಳೂರಿನಲ್ಲಿ ಈ ವರ್ಷ ಶೇ 40ರಷ್ಟು ಮಳೆ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಸುಮಾರು 11 ಸಾವಿರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ರೀ ಡ್ರಿಲ್ಲಿಂಗ್‌ ಮಾಡಲು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಣೆ ನೀಡಿದ್ದಾರೆ. ಹೊಸ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಬೇಕು. ಹೊಸದಾಗಿ ಕೊಳವೆ ಬಾವಿ ಕೊರೆಯಲು ಇರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂಬ ಬೆಂಗಳೂರಿನ ಶಾಸಕರು ಆಗ್ರಹಪಡಿಸಿದ್ದಾರೆ.

ಕೈಗಾರಿಕೆಗಳು ಮತ್ತು ಹೋಟೆಲ್‌ ಮಾಲೀಕರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ದುಬಾರಿ ದರ ನೀಡಿ ಟ್ಯಾಂಕರ್‌ ನೀರು ಖರೀದಿಸಬೇಕಾದ ಸ್ಥಿತಿ ಎದುರಾಗಿದೆ. ಸಾರ್ವಜನಿಕರು ನೀರನ್ನು ಇತಿಮಿತಿಯಿಂದ ಬಳಸುವುದನ್ನು ಕಲಿತುಕೊಂಡರೆ ಅವರಿಗೆ ಅನುಕೂಲ ಎನ್ನುವ ಸಲಹೆ ಬಳಕೆದಾರರದ್ದು.

(ವರದಿ: ಎಚ್.ಮಾರುತಿ. ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ