logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗೆ ಜಲಕ್ಷಾಮದ ಸವಾಲು; ನೀರಿನ ಸಮಸ್ಯೆಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಸಾಸಿವೆಯಷ್ಟು ಮಾತ್ರ, ಪರಿಹಾರಗಳಿಲ್ಲದ ಆಯವ್ಯಯ

ಬೆಂಗಳೂರಿಗೆ ಜಲಕ್ಷಾಮದ ಸವಾಲು; ನೀರಿನ ಸಮಸ್ಯೆಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಸಾಸಿವೆಯಷ್ಟು ಮಾತ್ರ, ಪರಿಹಾರಗಳಿಲ್ಲದ ಆಯವ್ಯಯ

Raghavendra M Y HT Kannada

Feb 27, 2024 07:25 AM IST

google News

ಬೆಂಗಳೂರಿನ ನೀರಿನ ಸಮಸ್ಯೆಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಸಾಸಿವೆಯಷ್ಟು ಮಾತ್ರ, ಯಾವುದೇ ಗಂಭೀರ ಪರಿಹಾರಗಳನ್ನು ಘೋಷಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

    • ಬೆಂಗಳೂರಿನಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಒಂದಷ್ಟು ಪ್ರದೇಶಗಳನ್ನ ಹೊರತು ಪಡಿಸಿ ಬಹುತೇಕ ಕಡೆಗಳಲ್ಲಿ ನೀರಿಗಾಗಿ ಜನರು ಪರದಾಡುವಂತಾಗಿದೆ. ನೀರಿನ ಸಮಸ್ಯೆಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಎಷ್ಟು.
ಬೆಂಗಳೂರಿನ ನೀರಿನ ಸಮಸ್ಯೆಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಸಾಸಿವೆಯಷ್ಟು ಮಾತ್ರ, ಯಾವುದೇ ಗಂಭೀರ ಪರಿಹಾರಗಳನ್ನು ಘೋಷಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರಿನ ನೀರಿನ ಸಮಸ್ಯೆಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಸಾಸಿವೆಯಷ್ಟು ಮಾತ್ರ, ಯಾವುದೇ ಗಂಭೀರ ಪರಿಹಾರಗಳನ್ನು ಘೋಷಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಉದ್ಯಾನ ನಗರ, ಐಟಿ-ಬಿಟಿಗೆ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತದೆ. ಹೃದಯ ಭಾಗದ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಬಹುತೇಕ ಬೆಂಗಳೂರು ನೀರಿಗಾಗಿ ಮೊರೆಯಿಡುತ್ತಿದೆ. ಹತ್ತು ದಿನಗಳ ಹಿಂದೆ ತಮ್ಮ ದಾಖಲೆಯ 15 ನೇ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಲಿಕಾನ್ ಸಿಟಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪರಿಹಾರ ರೂಪಿಸಿದ್ದಾರೆಯೇ ಎಂದು ಹುಡುಕಾಟ ನಡೆಸಿದರೆ ನಿರಾಶೆ ಮೂಡಿಸುತ್ತದೆ.

ರಾಜ್ಯದಲ್ಲೇ ಅತಿ ಹೆಚ್ಚು ವರಮಾನ ತಂದುಕೊಡುವ ಬೆಂಗಳೂರಿನ ನೀರಿನ ಸಮಸ್ಯೆಗೆ ಏನನ್ನು ಕೊಟ್ಟಿದ್ದಾರೆ ಎಂದು ಅವಲೋಕಿಸಿದರೆ ಶೂನ್ಯ ಆವರಿಸುತ್ತದೆ. ಯಾವುದೇ ಸೂತ್ರವೂ ಇಲ್ಲ, ಯೋಜನೆಯೂ ಇಲ್ಲ. ನಗರದಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಹೊಸ ಪರಿಹಾರಗಳನ್ನೂ ರೂಪಿಸಿಲ್ಲ. ಜಲಮಂಡಳಿಯಿಂದ ಕಾವೇರಿ 5 ನೆ ಹಂತದಲ್ಲಿ ಮೇ ತಿಂಗಳಲ್ಲಿ ನೀರು ಒದಗಿಸಲಾಗುತ್ತದೆ. 110 ಹಳ್ಳಿಗಳಿಗೆ 200 ಕೋಟಿ ನೀಡಲಾಗಿದೆ ಎಂದು ಮಾತ್ರ ಹೇಳಿದೆ.

ಸಿಎಂ ಸಿದ್ದರಾಮಯ್ಯ ಬಜೆಟ್‌ ನಲ್ಲಿ ನೀರಿನ ಸಮಸ್ಯೆಗೆ ಹೇಳಿದ್ದಿಷ್ಟು

ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಒಂದು ಪ್ರತ್ಯೇಕ ಯೋಜನಾ ವಿಭಾಗವನ್ನು ಹಾಗೂ 2 ಉಪ ವಿಭಾಗಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಈ ಯೋಜನೆಯಡಿ ಮುಳುಗಡೆಯಾಗುವ ಭೂಮಿಯನ್ನು ಗುರುತಿಸುವ ಸರ್ವೆ ಹಾಗೂ ಮರಗಳ ಎಣಿಕೆ ಪ್ರಕ್ರಿಯೆಯನ್ನು ಚಾಲನೆಗೊಳಿಸಿದ್ದು ಉಳಿದ ಅಗತ್ಯ ತೀರುವಳಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಪಡೆದು ಶೀಘ್ರವಾಗಿ ಪ್ರಾರಂಭಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ, ಮಂಡಳಿಯ ವತಿಯಿಂದ 5,550 ಕೋಟಿ ರೂ. ಅಂದಾಜು ವೆಚ್ಚದಲ್ಲಿ 775 ಎಂ.ಎಲ್.ಡಿ ಸಾಮರ್ಥ್ಯದ ಕಾವೇರಿ ಹಂತ-5ಯೋಜನೆಯನ್ನು ಮೇ 2024 ರಲ್ಲಿ ಕಾರ್ಯಾರಂಭಗೊಳಿಸುವ ಮೂಲಕ 12 ಲಕ್ಷ ಜನರಿಗೆ ಪ್ರತಿದಿನ 110 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. ಕಾವೇರಿ ಹಂತ-5 ಅಡಿಯಲ್ಲಿ ಒಳಚರಂಡಿ ಕಾಮಗಾರಿಗಳನ್ನು ಡಿಸೆಂಬರ್ 2024 ರಲ್ಲಿ ಪೂರ್ಣಗೊಳಿಸಲಾಗುವುದು. ಇದರಿಂದ 228 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಅಳವಡಿಸಲಾಗುವುದು ಮತ್ತು 13 ಎಸ್.ಟಿ.ಪಿ ಘಟಕಗಳಿಂದ 100 ಎಂ.ಎಲ್.ಡಿ ರಫ್ತು ಒಳಚರಂಡಿ ನೀರನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಸೃಜಿಸಲಾಗುವುದು.

ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್.ಟಿ.ಪಿ) 441 ಕೋಟಿ ರೂ.ಗಳ ಮೊತ್ತದಲ್ಲಿ ಉನ್ನತೀಕರಿಸಲಾಗುವುದು. ಇದರಿಂದ 268 ಎಂಎಲ್‌ಡಿ ತ್ಯಾಜ್ಯ ನೀರನ್ನು ಪ್ರತಿನಿತ್ಯ ಸಂಸ್ಕರಿಸಿ ಮರುಬಳಕೆ ಮಾಡಲು ಅನುಕೂಲವಾಗಲಿದೆ. ಬೆಂಗಳೂರು ಕಳೆದ ನಾಲ್ಕು ದಶಕಗಳಿಂದ ವೇಗವಾಗಿ ಬೆಳೆಯುತ್ತಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಕಾರವೇ ಪ್ರತಿ ವರ್ಷ 10 ಲಕ್ಷ ಜನಸಂಖ್ಯೆ ಸೇರ್ಪಡೆಯಾಗುತ್ತದೆ. ವಿಸ್ತೀರ್ಣವೂ ಹೆಚ್ಚುತ್ತಿದೆ. ಆದರೆ ನೀರಿನ ಸೌಕರ್ಯ ಇದ್ದಷ್ಟೇ ಇದ್ದು, ಹೆಚ್ಚಿಸಲು ಅಲ್ಪಾವಧಿ ಅಥವಾ ದೀರ್ಘಕಾಲೀನ ಯೋಜನೆಗಳನ್ನು ರೂಪಿಸಲು ಇದ್ದ ಅವಕಾಶಗಳನ್ನು ಕೈ ಚೆಲ್ಲಿದರೇ ಎಂಬ ಅನುಮಾನ ಉಂಟಾಗುತ್ತದೆ.

ಈಗಲೂ ಭೂಗಳ್ಳರ ಪಾಲಾಗುತ್ತಿರುವ ಕೆರೆಗಳನ್ನು ರಕ್ಷಿಸಲು ಮತ್ತು ಒತ್ತುವರಿಯಾಗಿರುವ ಕೆರೆಗಳ ಭೂಮಿಯನ್ನು ವಶಕ್ಕೆ ಪಡೆಯಲು ಯೋಜನೆ ರೂಪಿಸಬಹುದಿತ್ತು. ಆ ಮೂಲಕ ಅಂತರ್ಜಲ ಹೆಚ್ಚಿಸಲು ಅವಕಾಶಗಳಿದ್ದವು. ಬೆಂಗಳೂರಿನಲ್ಲಿ ಸುರಿಯುವ ಮಳೆ ನೀರನ್ನು ತಂತ್ರಜ್ಞಾನ ಬಳಸಿ ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಕೇವಲ ಅರ್ಧದಷ್ಟು ಮಳೆ ನೀರನ್ನು ಸಂಗ್ರಹಿಸಿದರೂ ಸಮಸ್ಯೆಗೆ ಪರಿಹಾರ ಸಿಗುವ ಅವಕಾಶಗಳಿದ್ದವು.

ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯಗೊಳಿಸಿ ನಿಯಮ ಜಾರಿ ಗೊಳಿಸಲು ಅವಕಾಶಗಳಿದ್ದವು. ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಪ್ರಸ್ತಾಪ ಮಾಡಬಹುದಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಗರದ ಶೇ. 50ರಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸಲು ಕ್ರಮಗಳನ್ನು ಅನುಸರಿಸಬಹುದಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ನೀರಿನ ಸಮಸ್ಯೆಯನ್ನು ಕಡಿಮೆಗೊಳಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಮಾತ್ರ ಬೆಂಗಳೂರು ಜಲಕ್ಷಾಮದಿಂದ ಹೊರಬರಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ