Bangalore North Result: ಬೆಂಗಳೂರು ಉತ್ತರದಲ್ಲಿ ಮತ್ತೆ ಅರಳಿದ ಕಮಲ ; ಕಾಂಗ್ರೆಸ್‌ನ ರಾಜೀವ್ ಗೌಡಗೆ ವಿರುದ್ಧ ಶೋಭಾ ಕರಂದ್ಲಾಜೆಗೆ ಗೆಲುವು
Jun 09, 2024 06:02 PM IST
ಬೆಂಗಳೂರು ಉತ್ತರದಲ್ಲಿ ಮತ್ತೆ ಅರಳಿದ ಕಮಲ; ಕಾಂಗ್ರೆಸ್‌ನ ರಾಜೀವ್ ಗೌಡಗೆ ವಿರುದ್ಧ ಶೋಭಾ ಕರಂದ್ಲಾಜೆಗೆ ಗೆಲುವು
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ನ ಅಭ್ಯರ್ಥಿ ಪ್ರೋ ರಾಜೀವ್ ಗೌಡ ವಿರುದ್ಧ 2,59,476 ಮತಗಳ ಭಾರಿ ಅಂತರ ಗೆಲುವು ಕಂಡಿದ್ದಾರೆ. Bengaluru North Lok Sabha Elections Result.
ಬೆಂಗಳೂರು: ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೋ ರಾಜೀವ್ ಗೌಡ ಅವರ ವಿರುದ್ಧ ಶ್ಲೋಭಾ ಕರಂದ್ಲಾಜೆ 2,59,476 ಮತಗಳ ಅಂತರ ದೊಡ್ಡ ಗೆಲುವು ದಾಖಲಿಸಿದ್ದಾರೆ. ಸತತ ನಾಲ್ಕು ಬಾರಿ ಇಲ್ಲಿ ಬಿಜೆಪಿ ಜಯ ಸಾಧಿಸಿದ್ದು, 5ನೇ ಬಾರಿಗೂ ಇಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿಗೆ ಜೈ ಎಂದಿದ್ದಾರೆ. ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಅಬ್ಬರ ಪ್ರಚಾರ ಮಾಡಿದ್ದ ಕಾಂಗ್ರೆಸ್‌ಗೆ ನಿರಾಸೆಯಾಗಿದೆ. 2024ರ ಫಲಿತಾಂಶದಲ್ಲಿ ಶೋಭಾ ಕರಂದ್ಲಾಜೆ ಅವರು 9,86,049 ಮತಗಳನ್ನು ಪಡೆದರೆ, ರಾಜೀವ್ ಗೌಡ ಅವರು 7,26,573 ಮತಗಳನ್ನು ಪಡೆಯಲು ಶಕ್ತರಾಗಿದ್ದಾರೆ.
2004 ರಿಂದ ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿಯ ಹಿಡಿತದಲ್ಲಿದ್ದು, ಹಿಂದಿನ ಎರಡು ಚುನಾವಣೆಯಲ್ಲಿ ಸತತವಾಗಿ ಗೆಲುವು ಬಾರಿಸಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರಿಗೆ ಈ ಬಾರಿ ಟಿಕೆಟ್ ನೀಡಿರಲಿಲ್ಲ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿನ ಆಂತರಿಕ ಸಮಸ್ಯೆ ಹಾಗೂ ಗೊಂದಲಗಳ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಇಲ್ಲಿ ಕಣಕ್ಕಿಳಿಸಲಾಗಿತ್ತು. ಕರಂದ್ಲಾಜೆ ಅವರು ಕಾಂಗ್ರೆಸ್‌ನ ಪ್ರೋ ರಾಜೀವ್ ಗೌಡ ಅವರನ್ನು ಮಣಿಸಿ ಗೆಲುವಿನ ಮಾಲೆ ಧರಿಸಿದ್ದಾರೆ.
ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದು ಕೇಸರಿ ನಾಯಕರೇ ಆರೋಪಿಸಿದ್ದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತದಾನ ನಿರ್ಣಾಯಕವಾಗಿದೆ. ಹೀಗಾಗಿ ಕಾಂಗ್ರೆಸ್ ಪ್ರೋ ರಾಜೀವ್ ಗೌಡ ಅವರನ್ನು ಕಣಕ್ಕೆ ಇಳಿಸಿತ್ತು. ಪ್ರತಿಷ್ಠಿತ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ ಅನುಭವ ಇರುವ ಸಜ್ಜನರಾಗಿರುವ ರಾಜೀವ್ ಗೌಡ ಅವರ ಕಳೆದ ವಿಧಾನಸಭೆಯಲ್ಲಿ ಪಕ್ಷ ಸಂಘಟನೆ ಮೂಲಕ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳನ್ನು ತಂದುಕೊಡುವ ಕೆಲಸ ಮಾಡಿದ್ದರು. ಒಕ್ಕಲಿಗ ಸಮುದಾಯದವರೇ ಆದ ಶೋಭಾ ಕರಂದ್ಲಾಜೆ ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.
1951 ರಿಂದಲೂ ಬೆಂಗಳೂರು ಉತ್ತರ ಲೋಕಸಭಾ ಚುನಾವಣೆ ನಡೆಯುತ್ತಿವೆ, ಈವರೆಗಿನ 17 ಚುನಾವಣೆಗಳ ಪೈಕಿ 2004ರ ವರೆಗೆ ಕಾಂಗ್ರೆಸ್ ನವರೇ ಗೆದಿದ್ದಾರೆ. ಆದರೆ ಆ ನಂತರ ಕಾಂಗ್ರೆಸ್ ಇಲ್ಲಿ ಖಾತೆಯನ್ನ ತೆರೆಯಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನಿಂದ ದಿವಂಗತ ಸಿಕೆ ಜಾಫರ್ ಷರೀಫ್ ಇಲ್ಲಿ ಅತಿ ಹೆಚ್ಚು 7 ಬಾರಿ ಜಯಶಾಲಿಯಾಗಿದ್ದಾರೆ. ಈ ಬಾರಿ ಕೂಡ ಮತದಾರರು ಕೇಸರಿ ಅಭ್ಯರ್ಥಿಯನ್ನೇ ಗೆಲ್ಲಿಸಿಕೊಂಡಿದ್ದಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಕೂಡ ಇದಾಗಿದೆ. 2019 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಿವಿ ಸದಾನಂದಗೌಡ ಅವರು ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಅವರನ್ನು 1,47,518 ಮತಗಳ ಅಂತರದಿಂದ ಸೋಲಿಸಿದ್ದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳು, ಮತದಾರರ ಸಂಖ್ಯೆ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇವೆ. ಕೆಆರ್ ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಹಾಗೂ ಪುಲಿಕೇಶಿನಗರ (ಎಸ್‌ಸಿ ಮೀಸಲು) ಕ್ಷೇತ್ರಗಳನ್ನು ಒಳಗೊಂಡಿದೆ. ಎಂಟು ಕ್ಷೇತ್ರಗಳಲ್ಲಿ ಪೈಕಿ 5 ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಉಳಿದ 3 ರಲ್ಲಿ ಕಾಂಗ್ರೆಸ್ ಎಂಎಲ್ಎಗಳಿದ್ದಾರೆ. ಆದರೆ ಬಿಜೆಪಿಯ ಐವರು ಶಾಸಕರ ಪೈಕಿ ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ ಒಳಪೆಟ್ಟು ನೀಡಿರುವ ಸಾಧ್ಯತೆ ಇದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಬೆಂಗಳೂರು ಉತ್ತರ. ಇಲ್ಲಿ 31,74,09 ಮತದಾರರು ಇದ್ದಾರೆ. 16,29,089 ಪುರುಷರು ಹಾಗೂ 15,44,415 ಮಹಿಳಾ ಮತದಾರರು ಇದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)