logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿಗೂ ತಟ್ಟಿದ ಬಿರು ಬಿಸಿಲು, 40 ಡಿಗ್ರಿ ದಾಟಿದ ಉಷ್ಣಾಂಶ

Bangalore News: ಬೆಂಗಳೂರಿಗೂ ತಟ್ಟಿದ ಬಿರು ಬಿಸಿಲು, 40 ಡಿಗ್ರಿ ದಾಟಿದ ಉಷ್ಣಾಂಶ

Umesha Bhatta P H HT Kannada

May 01, 2024 11:56 PM IST

google News

ಬೆಂಗಳೂರಿನಲ್ಲಿ ಬಿಸಿಲ ವಾತಾವರಣ

    • ಈ ಬಾರಿಯ ಬೇಸಿಗೆ ಬಿಸಿ( Summer) ಬೆಂಗಳೂರು ನಗರಕ್ಕೂ ತಟ್ಟಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಬಿಸಿಲು ಕಂಡು ಬಂದಿದೆ. ಇದನ್ನು ಭಾರತೀಯ ಹವಾಮಾನ ಇಲಾಖೆಯೂ ಉಲ್ಲೇಖಿಸಿದೆ.
ಬೆಂಗಳೂರಿನಲ್ಲಿ ಬಿಸಿಲ ವಾತಾವರಣ
ಬೆಂಗಳೂರಿನಲ್ಲಿ ಬಿಸಿಲ ವಾತಾವರಣ

ಬೆಂಗಳೂರು: ಉದ್ಯಾನಗಳ ನಗರಿ ಎನ್ನುವ ಬಿರುದಾಂಕಿತ ಬೆಂಗಳೂರಿನಲ್ಲಿ ಈ ಬಾರಿ ಬಿಸಿಲಿನ ಪ್ರಮಾಣ ಕೊಂಚ ಹೆಚ್ಚೇ ಇದೆ. ಏಪ್ರಿಲ್‌ ಕೊನೆ ವಾರದಲ್ಲಿ ಏರಿಕೆ ಕಂಡಿದ್ದ ಉಷ್ಣಾಂಶದ ಪ್ರಮಾಣ ಅದೇ ಸ್ಥಿತಿಯಲ್ಲಿಯೇ ಇದೆ. ಕೆಲವು ಪ್ರದೇಶದಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಕೂಡ ದಾಟಿರುವ ಮಾಹಿತಿಯಿದೆ. ಮೇ ತಿಂಗಳು ಕೂಡ ಬೇಸಿಗೆ ಕಾಲವೇ ಆಗಿರುವುದರಿಂದ ಎರಡನೇ ವಾರ ಮುಗಿಯುವವರೆಗೂ ಬಿಸಿಲಿನ ಪ್ರಮಾಣ ಇದೇ ರೀತಿಯಲ್ಲಿ ಇರಲಿದೆ. ಮುಂಗಾರು ಮಳೆ ಆರಂಭಗೊಂಡ ನಂತರ ಬಿಸಿಲಿನ ಪ್ರಮಾಣ ತಗ್ಗಬಹುದು ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಬುಧವಾರ ಕೆಲವು ಪ್ರದೇಶದಲ್ಲಿ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾದರೆ, ಇನ್ನಷ್ಟು ಕಡೆ 40 ಡಿಗ್ರಿ ಆಸುಪಾಸಿನಲ್ಲಿತ್ತು. ಜಿಕೆವಿಕೆ ಭಾಗದಲ್ಲಿ37.4 ಡಿಗ್ರಿ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾಗದಲ್ಲಿ 38 ಡಿಗ್ರಿ, ನಗರದ ಕೆಲವೆಡೆ 37.8 ಡಿಗ್ರಿ ಕಂಡು ಬಂದಿದೆ. ಇದು ಸಾಮಾನ್ಯಕ್ಕಿಂತ ಕೊಂಚ ಅಧಿಕವೇ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ನಿರ್ಮಲವಾದ ಮೋಡಗಳು ಕಂಡು ಬರಲಿವೆ. ಗರಿಷ್ಠ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾಗಿರಲಿದೆ. ಕನಿಷ್ಠ ಉಷ್ಣಾಂಶ ದ ಪ್ರಮಾಣ 24 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರಲಿದೆ ಎಂದು ಮಾಹಿತಿ ನೀಡುತ್ತಾರೆ.

ತಜ್ಞರು ಹೇಳೋದೇನು

ಬೆಂಗಳೂರಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 38.5 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು.ಇದು ಎಂಟು ವರ್ಷ ನಂತರದ ಅತ್ಯಧಿಕ ಉಷ್ಣಾಂಶ 2016 ರಲ್ಲಿ ಉಷ್ಣಾಂಶ ಪ್ರಮಾಣ 39.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಅದನ್ನೇ ಅಧಿಕ ಎಂದುಕೊಳ್ಳಲಾಗಿತ್ತು. ಈಗ ಮೇ ನಲ್ಲಿ ಇದು 40 ಡಿಗ್ರಿ ಸೆಲ್ಸಿಯಸ್‌ ಅನ್ನು ತಲುಪಿದೆ. ಬೆಂಗಳೂರಿನ ಕೆಲವು ಬಡಾವಣೆಯಲ್ಲಿ ಬಿಸಿಲಿನ ಪ್ರಮಾಣ ಅಧಿಕ ದಾಖಲಾಗಿರುವುದು ಕಂಡು ಬಂದಿದೆ.

ಬೆಂಗಳೂರಿನ ಉಷ್ಣಾಂಶದಲ್ಲಿ ಗಣನೀಯ ಏರಿಕೆ ಈ ಬಾರಿ ಕಂಡು ಬಂದಿರುವುದು ನಿಜ. ವಾತಾವರಣದಲ್ಲಿನ ಬದಲಾವಣೆ, ನೀರಿನ ಕೊರತೆ ಸೇರಿದಂತೆ ಹಲವು ಕಾರಣಗಳು ಇದರ ಹಿಂದೆ ಇರಬಹುದು, ಮೇ ಎರಡನೇ ವಾರದವರೆಗೂ ಉಷ್ಣಾಂಶದಲ್ಲಿ ಹೀಗೆಯೇ ಏರಿಕೆ ಕಂಡು ಬರಲಿದೆ. ಮೇ 15ರ ನಂತರ ಮುಂಗಾರಿನ ನಿರೀಕ್ಷೆ ಇರುವುದರಿಂದ ಮಳೆ ಬಂದರೆ ಸಹಜವಾಗಿಯೇ ಉಷ್ಣಾಂಶದಲ್ಲಿ ಇಳಿಕೆ ಕಂಡು ಬರಬಹುದು ಎನ್ನುವುದು ತಜ್ಞರ ಅಭಿಮತ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕರಾಗಿರುವ ಡಾ.ಸಿ.ಎಸ್.ಪಾಟೀಲ್‌ ಅವರ ಪ್ರಕಾರ, ಮೇ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಸಣ್ಣ ಮಳೆ ಬರಬಹುದು. ಆದರೆ ಅದು ಮತ್ತಷ್ಟು ಉಷ್ಣಾಂಶವನ್ನು ಹೆಚ್ಚಿಸಬಹುದಷ್ಟೇ. ಮುಂಗಾರು ಮಳೆ ಶುರುವಾದರೆ ಮಾತ್ರ ಉಷ್ಣಾಂಶದಲ್ಲಿ ಇಳಿಕೆ ಕಾಣಹುದು, ಈ ಬಾರಿ ಮುಂಗಾರು ದಕ್ಷಿಣ ಒಳನಾಡಿನ ಮೂಲಕ ಬೇಗನೇ ಆರಂಭವಾಗುವ ಮುನ್ಸೂಚನೆ ಇರುವುದರಿಂದ ಕೆಲ ದಿನ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ.

ಸಂಜೆ ನಂತರ ಮಳೆ

ಬೆಂಗಳೂರಿನ ಕೆಲವು ಭಾಗಗಳಲ್ಲಿ ಬುಧವಾರ ಸಂಜೆ ಹಾಗೂ ರಾತ್ರಿ ಮಳೆಯಾಗಿದೆ. ಚಿಕ್ಕಬಾಣಾವರ ಸೇರಿದಂತೆ ಹಲವು ಕಡೆ ಮಳೆ ಕೆಲ ಹೊತ್ತು ಬಂದಿತು.

ಬಿಸಿಲಿನ ಪರಿಣಾಮ

ಈ ಬಾರಿ ಬಿಸಿಲಿನ ಜತೆಗೆ ಬೆಂಗಳೂರಿನಲ್ಲಿ ಸುಮಾರು ಎರಡು ತಿಂಗಳು ನೀರಿನ ಸಮಸ್ಯೆಯೂ ಕಂಡು ಬಂದಿತು. ನಿರ್ವಹಣೆ ಕಾರಣದಿಂದ ಈಗ ಸುಧಾರಿಸಿದೆ. ಮಳೆ ಬಂದರೆ ನೀರಿನ ಸಮಸ್ಯೆಯೂ ಕಡಿಮೆಯಾಗಬಹುದು.

ಬೆಂಗಳೂರಿನಲ್ಲಿ ಸುಮಾರು 6,900 ಬೋರ್‌ವೆಲ್‌ ಗಳು ಬತ್ತಿ ಹೋಗಿ ನೀರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಸಮಸ್ಯೆಗೆ ಕಾರಣ. ಮಳೆ ಕೊರತೆ ಜತೆಗೆ ಅಂತರ್ಜಲ ಕುಸಿತವೂ ಇದಕ್ಕೆ ಕಾರಣವಿರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ