logo
ಕನ್ನಡ ಸುದ್ದಿ  /  ಕರ್ನಾಟಕ  /  ಬಂಟ್ವಾಳ: ಗರ್ಭಿಣಿ ಪತ್ನಿಯ ಹತ್ಯೆಗೈದು ಪತಿ ಆತ್ಮಹತ್ಯೆ; ನಾವೂರಿನಲ್ಲಿ ನಡೆಯಿತು ದಾರುಣ ಘಟನೆ

ಬಂಟ್ವಾಳ: ಗರ್ಭಿಣಿ ಪತ್ನಿಯ ಹತ್ಯೆಗೈದು ಪತಿ ಆತ್ಮಹತ್ಯೆ; ನಾವೂರಿನಲ್ಲಿ ನಡೆಯಿತು ದಾರುಣ ಘಟನೆ

Umesh Kumar S HT Kannada

Published Jun 19, 2025 03:11 PM IST

google News

ಬಂಟ್ವಾಳ ಸಮೀಪ ನಾವೂರಿನಲ್ಲಿ ಗರ್ಭಿಣಿ ಪತ್ನಿಯ ಹತ್ಯೆಗೈದು ಪತಿ ಆತ್ಮಹತ್ಯೆಗೈದ ದಾರುಣ ಘಟನೆ ನಡೆಯಿತು.

  • ನಾವೂರು ಗ್ರಾಮದ ಬಡಗುಂಡಿ ಸಮೀಪ ಕಿಲ್ತೋಡಿ ಎಂಬಲ್ಲಿ ಮನೆಯೊಂದರಲ್ಲಿ ಸಜೀಪದ ತಿಮ್ಮಪ್ಪ ಮೂಲ್ಯ (52) ಹಾಗೂ ಅವರ ಗರ್ಭಿಣಿ ಪತ್ನಿ ಜಯಂತಿ (45) ಎಂಬಿಬ್ಬರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಬಂಟ್ವಾಳ ಸಮೀಪ ನಾವೂರಿನಲ್ಲಿ ಗರ್ಭಿಣಿ ಪತ್ನಿಯ ಹತ್ಯೆಗೈದು ಪತಿ ಆತ್ಮಹತ್ಯೆಗೈದ ದಾರುಣ ಘಟನೆ ನಡೆಯಿತು.
ಬಂಟ್ವಾಳ ಸಮೀಪ ನಾವೂರಿನಲ್ಲಿ ಗರ್ಭಿಣಿ ಪತ್ನಿಯ ಹತ್ಯೆಗೈದು ಪತಿ ಆತ್ಮಹತ್ಯೆಗೈದ ದಾರುಣ ಘಟನೆ ನಡೆಯಿತು.

ಮಂಗಳೂರು: ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಸಮೀಪ ಕಿಲ್ತೋಡಿ ಎಂಬಲ್ಲಿ ಮನೆಯೊಂದರಲ್ಲಿ ಸಜೀಪದ ತಿಮ್ಮಪ್ಪ ಮೂಲ್ಯ (52) ಹಾಗೂ ಅವರ ಗರ್ಭಿಣಿ ಪತ್ನಿ ಜಯಂತಿ (45) ಎಂಬಿಬ್ಬರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಯಾವುದೋ ವಿಷಯಕ್ಕೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಮೃತರ ಸಂಬಂಧಿಗಳ ದೂರಿನಂತೆ ಪ್ರಕರಣ ದಾಖಲಾಗಿದೆ.

ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಇದ್ದರೆ, ತಿಮ್ಮಪ್ಪ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಸಮೀಪದವರು ಬೆಳಗ್ಗೆಯಾದರೂ ಬಾಗಿಲು ತೆರೆಯಲಿಲ್ಲವೇಕೆ ಎಂದು ಸಂಶಯದಿಂದ ಗಮನಿಸಿದಾಗ ವಿಷಯ ಗೊತ್ತಾಗಿದ್ದು, ಕೂಡಲೇ ಪೊಲೀಸರ ಗಮನಕ್ಕೆ ತಂದರು.

ಸೀಮಂತ ದಿನ ನಿಗದಿಯಾಗಿತ್ತು

ಜಯಂತಿ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದು, ಜುಲೈ 2ರಂದು ಸೀಮಂತ ನಡೆಸುವುದು ಎಂದು ದಿನ ನಿಗದಿಯಾಗಿತ್ತು. ಈ ನಡುವೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಕುಟಂಬ ವರ್ಗವನ್ನು ದುಃಖದ ಮಡುವಿನಲ್ಲಿರುವಂತೆ ಮಾಡಿದೆ. ತಿಮ್ಮಪ್ಪ ಮೂಲ್ಯ ಅವರು ಸಜೀಪದಲ್ಲಿ ಅಂಗಡಿ ನಡೆಸಿಕೊಂಡಿದ್ದರು. ಅವರ ಪತ್ನಿಯ ತವರುಮನೆ ಕಿಲ್ತೋಡಿಯಲ್ಲಿ ಘಟನೆ ನಡೆದಿದೆ. ಕೆಲ ಸಮಯಗಳಿಂದ ಪತಿ, ಪತ್ನಿ ಇದೇ ಮನೆಯಲ್ಲಿ ವಾಸಿಸುತ್ತಿದ್ದರು. ಜಯಂತಿ ಅವರಿಗೆ ತಂಗಿ ಇದ್ದು, ಅವರು ಪರಂಗಿಪೇಟೆಗೆ ವಿವಾಹವಾಗಿದ್ದರು. ಕಿಲ್ತೋಡಿಯ ಸಣ್ಣ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದು, ಅನ್ಯೋನ್ಯವಾಗಿಯೇ ಇದ್ದು, ವಿವಾಹವಾಗಿ ಸುಮಾರು 16 ವರ್ಷಗಳ ಬಳಿಕ ಗರ್ಭಿಣಿಯಾಗಿರುವುದು ಕುಟುಂಬದಲ್ಲಿ ಸಂತಸವನ್ನೂ ತಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಸೀಮಂತ ಕಾರ್ಯಕ್ರಮ ಜುಲೈ 2ರಂದು ನಿಗದಿಯಾಗಿತ್ತು.

ಘಟನೆಗೆ ಕಾರಣ ನಿಗೂಢ

ತಿಮ್ಮಪ್ಪ ಮೂಲ್ಯ ಅವರು ಯಾವ ಕಾರಣಕ್ಕೆ ಈ ಕಠೋರ ಕೃತ್ಯವನ್ನು ಎಸಗಿದ್ದಾರೆ ಎಂಬ ಕಾರಣ ಇನ್ನೂ ನಿಗೂಢವಾಗಿದೆ. ಆರ್ಥಿಕ ಸಂಕಷ್ಟವೇ ಅಥವಾ ಜಗಳವೇನಾದರೂ ಆಗಿತ್ತೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಯಾವುದೋ ಕಾರಣಕ್ಕೆ ಜಗಳ ನಡೆದು, ಕತ್ತು ಹಿಸುಕಿ ಪತ್ನಿಯ ಕೊಲೆಗೈದು ಬಳಿಕ ತಾನೂ ಸಾವನ್ನಪ್ಪಿರುವುವ ಸಂಶಯದ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ವಿಸ್ತ್ಋತ ತನಿಖೆಯಲ್ಲಿ ಇನ್ನಷ್ಟು ಮಾಹಿತಿಗಳು ಹೊರಬರಬೇಕಾಗಿದೆ.

ಪ್ರಕಟಣೆಯಲ್ಲಿ ಏನಿದೆ?

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ವಿವರ ಹೀಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ, ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ, ಜೂನ್ 18ರ ರಾತ್ರಿ 11ರಿಂದ ಜೂನ್ 19ರ ಬೆಳಗ್ಗೆ 8ರ ಮಧ್ಯೆ ಅವಧಿಯಲ್ಲಿ ತಿಮ್ಮಪ್ಪ ರಾಮ ಮೂಲ್ಯ (52) ತನ್ನ ಹೆಂಡತಿ ಜಯಂತಿ (45) ಎಂಬವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಜಗಳ ವಿಕೋಪಕ್ಕೆ ತಿರುಗಿ ಜಯಂತಿ ಅವರಿಗೆ ಹಲ್ಲೆ ಮಾಡಿ, ಕತ್ತು ಹಿಚುಕಿ ಸಾಯಿಸಿರುತ್ತಾನೆ. ನಂತರ ತಿಮ್ಮಪ್ಪ ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಘಟನೆಗೆ ಸಂಬಂಧಿಸಿದಂತೆ, ಮೃತ ಜಯಂತಿ ಅವರ ತಂಗಿ ಸುಜಾತ ಫರಂಗಿಪೇಟೆ ಎಂಬವರ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 72/2025 U/S 103 BNS ಹಾಗೂ ಮೃತ ತಿಮ್ಮಪ್ಪ ಅವರ ಅಣ್ಣ ವಿಶ್ವನಾಥ ಸಜೀಪಮೂಡ, ಬಂಟ್ವಾಳ ಅವರ ದೂರಿನ ಮೇರೆಗೆ UDR No 25/2025 U/S 194 BNSS ರಂತೆ ಪ್ರಕರಣ ದಾಖಲಾಗಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು