Tiger Claw Pendent: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್‌ಗೂ ಹುಲಿ ಉಗುರು ಸಂಕಷ್ಟ, ಅಧಿಕಾರಿಗಳಿಗೆ ಪೆಂಡೆಂಟ್ ಹಸ್ತಾಂತರ
Oct 27, 2023 09:14 PM IST
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್ ಬಳಿ ಇದ್ದ ಹುಲಿ ಉಗುರು ಹೋಲುವ ಪೆಂಡೆಂಟ್ ವಶಪಡಿಸಿಕೊಂಡ ಅರಣ್ಯ ಅಧಿಕಾರಿಗಳು.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನೆಗೆ ಡಿಎಫ್‌ಒ ಸಹಿತ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಹುಲಿ ಉಗುರು ಹೋಲುವ ಪೆಂಡೆಂಟ್ ಕುರಿತು ವಿಚಾರಿಸಿದಾಗ ಅದನ್ನು ಮೃಣಾಲ್ ಅವರು ಅಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಿದರು.
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಅವರಿಗೂ ಹುಲಿ ಉಗುರು ಸಂಕಷ್ಟ ಎದುರಾಗಿದೆ. ಅವರು ಹುಲಿ ಉಗುರು ಹೋಲುವ ಪೆಂಡೆಂಟ್ ಧರಿಸಿರುವ ಫೋಟೋ ವೈರಲ್ ಆದ ಬಳಿಕ, ಅರಣ್ಯ ಇಲಾಖೆ ಅಧಿಕಾರಿಗಳು ಮೃಣಾಲ್ ಅವರ ಮನೆಗೆ ಬಂದು ಅದನ್ನು ವಶಪಡಿಸಿಕೊಂಡರು.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನೆಗೆ ಡಿಎಫ್‌ಒ ಸಹಿತ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಹುಲಿ ಉಗುರು ಹೋಲುವ ಪೆಂಡೆಂಟ್ ಕುರಿತು ವಿಚಾರಿಸಿದಾಗ ಅದನ್ನು ಮೃಣಾಲ್ ಅವರು ಅಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದು ಇಷ್ಟು -
ಮದುವೆ ಸಮಯದಲ್ಲಿ ಯಾರೋ ಗಿಫ್ಟ್ ಕೊಟ್ಟಿದ್ದರು ಅಂತ ಅದನ್ನ ಹಾಕಿದ್ದ. ಮೃಣಾಲ್ ಹಾಕಿದ ಪೆಂಡೆಂಟ್ ಪ್ಲಾಸ್ಟಿಕ್ ನದ್ದು. ಅದು ಒರಿಜಿನಲ್ ಪೆಂಡೆಂಟ್ ಅಲ್ಲ. ನಾನೂ ಸಸ್ಯಾಹಾರಿ ಹುಲಿ ಜಿಂಕೆ ಕೋಳಿ, ಇನ್ಯಾವುದೇ ಬಲಿಯನ್ನು ನಾನು ಇಷ್ಟ ಪಡಲ್ಲ. ಸದ್ಯ ನಮ್ಮ ಸಂಬಂಧಿಕರು ಬಂದಿದ್ದಾರೆ ಅವರನ್ನು ಬೀಳ್ಕೊಟ್ಟು ಬರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಲ್ಲಿಗೆ ಹೋಗಿದ್ದ ಮಾಧ್ಯಮ ಪ್ರತಿನಿಧಿಗಳ ಬಳಿ ಹೇಳಿದ್ದರು.
ಎಫ್‌ಎಸ್‌ಎಲ್‌ಗೆ ಕಳುಹಿಸಿ ಅಸಲಿಯೋ ನಕಲಿಯೋ ಪರಿಶೀಲನೆ
ಮೃಣಾಲ್ ಅವರ ಬಳಿ ದೊರೆತಿರುವ ಪೆಂಡೆಂಟ್ ಒರಿಜಿನಲ್ ಅಥವಾ ಪ್ಲಾಸ್ಟಿಕ್ಕೋ ಎಂದು ಪರಿಶೀಲನೆ ನಡೆಸಿದ ಪಶು ವೈದ್ಯರು ಪೆಂಡೆಂಟ್ ಅನ್ನು ದೃಢೀಕರಿಸಿದ್ದಾರೆ. ಬಳಿಕ ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಅದರ ತೂಕ ಪರಿಶೀಲಿಸಿದರು.
ಈ ಪೆಂಡೆಂಟ್‌ನಲ್ಲಿರುವ ಉಗುರು ಅಸಲಿಯೋ ನಕಲಿಯೋ ಎಂಬುದನ್ನು ದೃಢೀಕರಿಸುವುದಕ್ಕಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುತ್ತದೆ. ಬೆಂಗಳೂರು ಅಥವಾ ಹೈದರಾಬಾದ್‌ಗೆ ಕಳುಹಿಸಿ ಅಲ್ಲಿಂದ ವರದಿ ಬಂದ ಬಳಿಕ ಉಳಿದ ಕ್ರಮ ತೆಗೆದುಕೊಳ್ಳುವುದಾಗಿ ಡಿಎಫ್ಒ ಶಂಕರ್ ಕಲ್ಲೋಳಕರ್ ಹೇಳಿದರು.