logo
ಕನ್ನಡ ಸುದ್ದಿ  /  ಕರ್ನಾಟಕ  /  Rajnath Singh In Belagavi:ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್​ ಶೇ 4ರಷ್ಟು ಮೀಸಲಾತಿ ನೀಡಿತ್ತು;ಬೆಳಗಾವಿಯಲ್ಲಿ ರಾಜನಾಥ್ ಸಿಂಗ್ ವಾಗ್ದಾಳಿ

Rajnath Singh in Belagavi:ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್​ ಶೇ 4ರಷ್ಟು ಮೀಸಲಾತಿ ನೀಡಿತ್ತು;ಬೆಳಗಾವಿಯಲ್ಲಿ ರಾಜನಾಥ್ ಸಿಂಗ್ ವಾಗ್ದಾಳಿ

Meghana B HT Kannada

Apr 26, 2023 10:31 PM IST

google News

ಬೆಳಗಾವಿಯಲ್ಲಿ ರಾಜನಾಥ್ ಸಿಂಗ್

    • Rajnath Singh in Belagavi: ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧಿಕಾರಕ್ಕೆ ಬರಲು 'ಮಜಾಬ್' (ಉರ್ದುವಿನಲ್ಲಿ ಧರ್ಮ ಎಂದರ್ಥ) ಬಳಸಿದೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ರಾಜನಾಥ್ ಸಿಂಗ್
ಬೆಳಗಾವಿಯಲ್ಲಿ ರಾಜನಾಥ್ ಸಿಂಗ್

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣಾ (Karnataka Assembly Elections) ಕಣ ರಂಗೇರಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಬಿಜೆಪಿ ಹರಸಾಹಸ ಪಡುತ್ತಿದೆ. ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಆಗಮಿಸಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಗಾವಿಗೆ (Rajnath Singh in Belagavi)ಆಗಮಿಸಿ ಮತಬೇಟೆ ಆರಂಭಿಸಿದರು.

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧಿಕಾರಕ್ಕೆ ಬರಲು 'ಮಜಾಬ್' (ಉರ್ದುವಿನಲ್ಲಿ ಧರ್ಮ ಎಂದರ್ಥ) ಬಳಸಿದೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ಹಿಂದಿನ ಸರ್ಕಾರ ಧರ್ಮದ ಆಧಾರದ ಮೇಲೆ ಶೇಕಡಾ 4ರಷ್ಟು ಮೀಸಲಾತಿಯನ್ನು ಪರಿಚಯಿಸಿದರು. ಇದನ್ನು ಮುಸ್ಲಿಮರನ್ನು ಸಮಾಧಾನಪಡಿಸಲು ಮಾತ್ರ ಮಾಡಲಾಗಿದೆ ಎಂದು ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದರು.

ಭಾರತದ ಇತಿಹಾಸದಲ್ಲಿ ರಾಜಕೀಯ ಪಕ್ಷವೊಂದು ಅಧಿಕಾರಕ್ಕೆ ಬರಲು 'ಧರ್ಮ' ಅಥವಾ 'ಮಜಾಬ್' ಅನ್ನು ಬಳಸಿದೆ ಎಂದಾದರೆ ಅದು ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ರಾಜಕಾರಣ ಮಾಡುತ್ತದೆ. ಈ ರೀತಿಯ ರಾಜಕೀಯವನ್ನು ಎಂದಿಗೂ ಮಾಡಬಾರದು. ಕೇವಲ ಮುಸ್ಲಿಮರನ್ನು ಓಲೈಸಲು ಧಾರ್ಮಿಕ ನೆಲೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಮೀಸಲಾತಿ ಪ್ರಯೋಜನಗಳನ್ನು ಪಡೆದರೆ ನಾವು ಸ್ವಾಗತಿಸುತ್ತೇವೆ ಆದರೆ ಭಾರತದ ಸಂವಿಧಾನವು ಧರ್ಮ ಆಧಾರಿತ ಮೀಸಲಾತಿಯನ್ನು ಅನುಮತಿಸುವುದಿಲ್ಲ ಎಂದು ಹೇಳಿದರು.

ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ನೀವು ನೋಡಬಹುದು, ಅಂತರ್ಯುದ್ಧದಂತಿದೆ. ಮೋದಿಜೀ, ಸುಡಾನ್‌ನಿಂದ ಭಾರತೀಯರನ್ನು ಏಕೆ ಸ್ಥಳಾಂತರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಆದರೆ ನಮ್ಮ ಸರ್ಕಾರ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ನಮ್ಮದು ದುರ್ಬಲವಲ್ಲ, ಬಲಿಷ್ಠ ಸರ್ಕಾರ. ಭಾರತ ಮಾತೆಯನ್ನು ನಾವು ಎಂದಿಗೂ ತಲೆ ತಗ್ಗಿಸಲು ಬಿಡುವುದಿಲ್ಲ ಎಂದರು ರಾಜನಾಥ್ ಸಿಂಗ್.

ಮಾರ್ಚ್​ 24 ರಂದು ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯ ಸರ್ಕಾರ, ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ಹಾಗೂ ಈ ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2ರಷ್ಟು ಹಂಚಿಕೆ ಮಾಡಲು ನಿರ್ಧರಿಸಿತ್ತು. 2ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ಹಿಂದುಳಿದ ವರ್ಗ(EWS) ಕೋಟಾಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ, 2ಸಿಯಲ್ಲಿರುವ ಒಕ್ಕಲಿಗರಿಗೆ ಶೇ. 4ರಿಂದ ಶೇ. 6ರಷ್ಟು ಹಾಗೂ 2ಡಿಯಲ್ಲಿರುವ ವೀರಶೈವ ಹಾಗೂ ಲಿಂಗಾಯತರಿಗೆ ಶೇ. 5ರಿಂದ ಶೇ. 7ರಷ್ಟು ಮೀಸಲಾತಿ ಹೆಚ್ಚಳವಾಗಲಿದೆ. ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಸುಪ್ರೀಂ ಕೋರ್ಟ್​ಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಮೇ 9ಕ್ಕೆ ಮುಂದೂಡಿದೆ.

"ಕಳೆದ ಕೆಲವು ದಿನಗಳಿಂದ ಸುಡಾನ್‌ನಲ್ಲಿ ಹಕ್ಕಿ ಪಿಕ್ಕಿ ಜನರು ಆಹಾರವಿಲ್ಲದೆ ಕಷ್ಟಪಡುತ್ತಿದ್ದಾರೆ. ಅವರನ್ನು ಮರಳಿ ಕರೆತರಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಕೇಂದ್ರ ಬಿಜೆಪಿ ಸರ್ಕಾರವು ತಕ್ಷಣವೇ ರಾಜತಾಂತ್ರಿಕ ಕ್ರಮಗಳನ್ನು ಆರಂಭಿಸಬೇಕು. ಹಕ್ಕಿ ಪಿಕ್ಕಿ ಟ್ರೈಮ್‌ನ ಜನರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಏಜೆನ್ಸಿಗಳನ್ನು ಸಂಪರ್ಕಿಸಬೇಕು” ಎಂದು ಈ ಹಿಂದೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದರು.

ಸಿದ್ದರಾಮಯ್ಯ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​, “ನಿಮ್ಮ ಟ್ವೀಟ್‌ ನೋಡಿ ಗಾಬರಿಯಾಯಿತು! ಅಪಾಯದಲ್ಲಿ ಜೀವಗಳಿವೆ; ರಾಜಕೀಯ ಮಾಡಬೇಡಿ. ಏಪ್ರಿಲ್ 14 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸುಡಾನ್‌ನಲ್ಲಿರುವ ಭಾರತೀಯ ಪ್ರಜೆಗಳು ಮತ್ತು ಪಿಐಒ ಜತೆ ನಿರಂತರವಾಗಿ ಸಂಪರ್ಕದಲ್ಲಿದೆ ”ಎಂದು ಟ್ವೀಟ್​ ಮಾಡಿದ್ದರು.

ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಪಕ್ಷಗಳ ಪ್ರಚಾರ ಜೋರಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ