logo
ಕನ್ನಡ ಸುದ್ದಿ  /  ಕರ್ನಾಟಕ  /  Belagavi News: ಪ್ರವಾಸಿ ತಾಣಗಳಿಗೆ ಹೆಚ್ಚಿದ ಬೇಡಿಕೆ; ಪ್ರೇಕ್ಷಣೀಯ ಸ್ಥಳಗಳ ಭೇಟಿಗೆ ಬೆಳಗಾವಿ ಸಾರಿಗೆ ಘಟಕದಿಂದ 9 ವಿಶೇಷ ಪ್ಯಾಕೇಜ್

Belagavi News: ಪ್ರವಾಸಿ ತಾಣಗಳಿಗೆ ಹೆಚ್ಚಿದ ಬೇಡಿಕೆ; ಪ್ರೇಕ್ಷಣೀಯ ಸ್ಥಳಗಳ ಭೇಟಿಗೆ ಬೆಳಗಾವಿ ಸಾರಿಗೆ ಘಟಕದಿಂದ 9 ವಿಶೇಷ ಪ್ಯಾಕೇಜ್

HT Kannada Desk HT Kannada

Aug 11, 2023 11:01 PM IST

google News

NWKRTC (ಸಾಂದರ್ಭಿಕ ಚಿತ್ರ)

    • Belagavi Tour Plan: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ ಒಟ್ಟು 9 ವಿಶೇಷ ಟೂರ್ ಪ್ಯಾಕೇಜ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ಈ ವಿಶೇಷ ಟೂರ್‌ನಲ್ಲಿ ಜಲಪಾತಗಳು, ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು, ನಗರ ಪ್ರವಾಸ, ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದೆ.
NWKRTC (ಸಾಂದರ್ಭಿಕ ಚಿತ್ರ)
NWKRTC (ಸಾಂದರ್ಭಿಕ ಚಿತ್ರ)

ಬೆಳಗಾವಿ: ಮಳೆಗಾಲ ಆರಂಭಗೊಳ್ಳುತ್ತಿದಂತೆ ಬೆಳಗಾವಿ ಜಿಲ್ಲೆಯ ಸುತ್ತಮುತ್ತಲಿನ ಪ್ರವಾಸಿ ತಾಣಗಳು ಜನರನ್ನು ಆಕರ್ಷಿಸುತ್ತವೆ. ಬದುಕಿನ ಜಂಜಾಟದಲ್ಲಿ ಕೆಲವರಿಗೆ ಸಮಯವೇ ಸಿಗುವುದಿಲ್ಲ. ಒಂದು ಬಿಡುವು ಸಿಕ್ಕರೂ ಎಲ್ಲವೂ ಅಂದೇ ನೋಡಲು ಆಗಲ್ಲ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

ಒಂದು ದಿನದ ಪ್ರವಾಸ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ ಒಟ್ಟು 9 ವಿಶೇಷ ಟೂರ್ ಪ್ಯಾಕೇಜ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ಈ ವಿಶೇಷ ಟೂರ್‌ನಲ್ಲಿ ಜಲಪಾತಗಳು, ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು, ನಗರ ಪ್ರವಾಸ, ಪ್ರೇಕ್ಷಣೀಯ ಸ್ಥಳಗಳು ಒಳಗೊಂಡಿವೆ. ಎಲ್ಲವೂ ಒಂದು ದಿನದ ಪ್ರವಾಸವಾಗಿದ್ದು, ಎಲ್ಲದಕ್ಕೂ ವಿಶೇಷ ದರ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಈ ಟೂರ್ ಪ್ಯಾಕೇಜ್‌ಗೆ ಒಳಪಡುವುದಿಲ್ಲ.

ಹೆಚ್ಚಿದ ಬೇಡಿಕೆ

ಈ ಮೊದಲು ಆರಂಭಿಸಿದ ಒಂದು ದಿನದ ವಿಶೇಷ ಬಸ್‌ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇರೆ ಸ್ಥಳಗಳಿಗೂ ವಿಶೇಷ ಪ್ಯಾಕೇಜ್ ವಿಸ್ತರಿಸುವಂತೆ ಬೇಡಿಕೆ ಬಂದಿತ್ತು. ಹೀಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದಿಂದ ಬೆಳಗಾವಿ ನಗರವನ್ನು ಕೇಂದ್ರವಾಗಿಸಿ ಒಟ್ಟು 9 ವಿಶೇಷ ಟೂರ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ರವಿವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವಜನಿಕ ರಜೆ ದಿನಗಳಂದು ವಿಶೇಷ ಬಸ್ ಸೌಲಭ್ಯ ಲಭ್ಯವಿದೆ.

ಪ್ಯಾಕೇಜ್ ನಂಬರ್-1

ಬೆಳಗಾವಿ ಸಾರಿಗೆ ವಿಭಾಗದಿಂದ ನಿಗದಪಡಿಸಿರುವ ಪ್ಯಾಕೇಜ್ ನಂ-1ರಲ್ಲಿ ಬೆಳಗಾವಿ ಜಿಲ್ಲೆಯ ಜಲಪಾತಗಳನ್ನು ವೀಕ್ಷಿಸಿಸಲು ಅನುಕೂಲ ಮಾಡಲಾಗಿದ್ದು, ಇದರಲ್ಲಿ ಹಿಡಕಲ್ ಡ್ಯಾಂ, ಗೊಡಚಿನಮಲ್ಕಿ ಜಲಪಾತ ಹಾಗೂ ಗೋಕಾಕ್ ಜಲಪಾತ ವೀಕ್ಷಿಸಬಹುದಾಗಿದೆ. ಬೆಳಗಾವಿಯಿಂದ ಬೆಳಗ್ಗೆ 9 ಗಂಟೆಗೆ ಬೀಡುವ ವೇಗದೂತ ಬಸ್ ಸಂಜೆ 6 ಗಂಟೆ ಮರಳಿ ಬೆಳಗಾವಿ ನಗರ ತಲುಪಲಿದೆ. ವಯಸ್ಕರರಿಗೆ 190 ರೂ. ಹಾಗೂ ಮಕ್ಕಳಿಗೆ 100 ರೂ. ನಿಗದಿಪಡಿಸಲಾಗಿದೆ.

ಒಂದು ದಿನದ ಟೂರ್‌ ಪ್ಯಾಕೇಜ್‌ ಪಟ್ಟಿ

ಪ್ಯಾಕೇಜ್ ನಂಬರ್-2

ಬೆಳಗಾವಿ ಜಿಲ್ಲೆಯ ಗಡಿಭಾಗದ ಮಹಾರಾಷ್ಟ್ರ ರಾಜ್ಯದಲ್ಲಿ ನಗರತಾಸ ಹಾಗೂ ಅಂಬೋಲಿ ಜಲಪಾತ ವೀಕ್ಷಣೆಗೆ ಈ ಪ್ಯಾಕೇಜ್ ಅನುಕೂಲ ಕಲ್ಪಿಸಿದೆ. ಬೆಳಗಾವಿಯಿಂದ ಬೆಳಗ್ಗೆ 9 ಗಂಟೆಗೆ ಬೀಡುವ ವೇಗದೂತ ಬಸ್ ಸಂಜೆ 6 ಗಂಟೆ ಮರಳಿ ಬೆಳಗಾವಿ ನಗರ ತಲುಪಲಿದೆ. ವಯಸ್ಕರರಿಗೆ 290 ರೂ. ಹಾಗೂ ಮಕ್ಕಳಿಗೆ 150 ರೂ. ನಿಗದಿಪಡಿಸಲಾಗಿದೆ.

ಪ್ಯಾಕೇಜ್ ನಂಬರ್-3

ಪ್ಯಾಕೇಜ್ ನಂಬರ್ 3ರಲ್ಲಿ ಮಹಾರಾಷ್ಟ್ರದ ಸುಪ್ರಸಿದ್ಧ ಸುಕ್ಷೇತ್ರವಾದ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಹಾಗೂ ಕ್ಷೇತ್ರ ಕನ್ಹೇರಿ ಮಠದ ದರ್ಶನ ಪಡೆಯಬಹುದಾಗಿದೆ. ವೋಲ್ವೋ ಎಸಿ ಬಸ್‌ ಬೆಳಗ್ಗೆ 8ಕ್ಕೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ಮಹಾಲಕ್ಷ್ಮಿದೇವಸ್ಥಾನ ಹಾಗೂ ಕ್ಷೇತ್ರ ಕನ್ಹೇರಿ ಮಠದ ದರ್ಶನ ಪಡೆದ ನಂತರ ಸಂಜೆ 7.30ಕ್ಕೆ ಬೆಳಗಾವಿಗೆ ಹಿಂದಿರುಗುತ್ತದೆ. ವಯಸ್ಕರರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ನಿಗದಿಪಡಿಸಲಾಗಿದೆ.

ಪ್ಯಾಕೇಜ್ ನಂಬರ್-4

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ವೇಗದೂತ ಬಸ್‌ ಬೆಳಗ್ಗೆ 7.30ಕ್ಕೆ ಹೊರಡುತ್ತದೆ. ಕಕ್ಕೇರಿ ಬಿಷ್ಟಾದೇವಿ ದೇವಸ್ಥಾನ, ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಪಾರ್ಕ್, ಕೂಳಗಿ ನೇಚರ್ ಪಾರ್ಕ್ ವೀಕ್ಷಣೆ ಮುಗಿಸಿಕೊಂಡು ಸಂಜೆ 7.45 ಕ್ಕೆ ಬೆಳಗಾವಿಗೆ ಮರಳಲಿದೆ. ವಯಸ್ಕರರಿಗೆ 360 ರೂ. ಹಾಗೂ ಮಕ್ಕಳಿಗೆ 180 ರೂ. ನಿಗದಿಪಡಿಸಲಾಗಿದೆ.

ಪ್ಯಾಕೇಜ್ ನಂಬರ್-5

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ವೇಗದೂತ ಬಸ್‌ ಬೆಳಗ್ಗೆ 7.45ಕ್ಕೆ ಹೊರಡಲಿದೆ. ಈ ನಗರದ ಪ್ರವಾಸದಲ್ಲಿ ರಾಜಹಂಸಗಡ, ಮಿಲಿಟರಿ ಮಹಾದೇವ ದೇವಸ್ಥಾನ, ಮೃಗಾಲಯ, ರೇವಣ ಸಿದ್ದೇಶ್ವರ ಮಂದಿರ, ಹುಂಚೆವಾರಿ ಮಠ, ಅಲೌಖಿಕ ಧ್ಯಾನ ಮಂದಿರ ನೋಡಬಹುದಾಗಿದೆ. ಮರಳಿ ಸಂಜೆ 5.15ಕ್ಕೆಬೆಳಗಾವಿ ತಲುಪಿದೆ. ವಯಸ್ಕರರಿಗೆ 150 ರೂ. ಹಾಗೂ ಮಕ್ಕಳಿಗೆ 90 ರೂ. ನಿಗದಿಪಡಿಸಲಾಗಿದೆ.

ಪ್ಯಾಕೇಜ್ ನಂಬರ್-6

ಈ ವಿಶೇಷ ಪ್ಯಾಕೇಜಿನಲ್ಲಿ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದಾಗಿದೆ. ಬೆಳಗಾವಿ ಕ್ಷೇಂದ್ರ ನಿಲ್ದಾಣದಿಂದ ವೇಗದೂತ ಬಸ್ ಬೆಳಗ್ಗೆ 7.45ಕ್ಕೆ ಹೊರಡುತ್ತದೆ. ಗಂಗಾಂಬಿಕ ಐಕ್ಯ ಸ್ಥಳ, ಎಂಕೆ ಹುಬ್ಬಳ್ಳಿಯ ಅಶ್ವತ್ಥ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ, ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ, ಸೊಗಲ ಸೋಮೇಶ್ವರ ದೇವಸ್ಥಾನ ಹಾಗೂ ಮುನವಳ್ಳಿ ನವಿಲುತೀರ್ಥ ಡ್ಯಾಂ ವೀಕ್ಷಣೆ ಮುಗಿಸಿಕೊಂಡು ಸಂಜೆ 7.15ಕ್ಕೆ ಮರಳಲಿದೆ. ವಯಸ್ಕರರಿಗೆ 350 ರೂ. ಹಾಗೂ ಮಕ್ಕಳಿಗೆ 180 ರೂ. ನಿಗದಿಪಡಿಸಲಾಗಿದೆ.

ಪ್ಯಾಕೇಜ್ ನಂಬರ್-7

ಈ ವಿಶೇಷ ಪ್ಯಾಕೇಜಿನಲ್ಲಿ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ಕೊಡಬಹುದಾಗಿದೆ. ಬೆಳಗಾವಿಯಿಂದ ವೇಗದೂತ ಬಸ್ ಬೆಳಗ್ಗೆ 7.45ಕ್ಕೆ ಹೊರಡುತ್ತದೆ. ಬೆಳಗಾವಿಯ ರಾಜಹಂಸಘಡ, ಬೆಳಗುಂದಿಯ ಸಿದ್ದೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ, ರಕ್ಕಸಕೊಪ್ಪ ಜಲಾಶಯ, ಧಾಮಣಿ ಫಾಲ್ಸ್, ನೇಚರ್ ಕ್ಯಾಂಪ್ ಹಾಗೂ ಮಹಿಪಾಲಘಡದ ವೈಜನಾಥ ದೇವಸ್ಥಾನ ವೀಕ್ಷಣೆ ಬಳಿಕ ಸಂಜೆ 5.30ಕ್ಕೆ ಬೆಳಗಾವಿಗೆ ಮರಳುತ್ತದೆ. ವಯಸ್ಕರರಿಗೆ 200 ರೂ. ಹಾಗೂ ಮಕ್ಕಳಿಗೆ 100 ರೂ. ನಿಗದಿಪಡಿಸಲಾಗಿದೆ.

ಪ್ಯಾಕೇಜ್ ನಂಬರ್-8

ಈ ವಿಶೇಷ ಪ್ಯಾಕೇಜಿನಲ್ಲಿ ಚಾಲುಕ್ಯರ ಕಾಲದ ರಾಜಧಾನಿ ಬದಾಮಿ ವೀಕ್ಷಿಸಬಹದು. ಬೆಳಗಾವಿಯಿಂದ ವೇಗದೂತ ಬಸ್ ಬೆಳಗ್ಗೆ 8ಕ್ಕೆ ಹೊರಡುತ್ತದೆ. ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ಬದಾಮಿಯ ಮೇಣ ಬಸದಿ, ಗುಹಾಂತರ ದೇವಾಲಯಗಳು, ಬನಶಂಕರಿ ದೇವಸ್ಥಾನ ಹಾಗೂ ಶಿವಯೋಗ ಮಂದಿರ ವೀಕ್ಷಣೆ ಮುಗಿಸಿಕೊಂಡು ಸಂಜೆ 5.15ಕ್ಕೆ ಮರಳಿ ಬೆಳಗಾವಿಗೆ ಹಿಂದಿರುಗುತ್ತದೆ. ವಯಸ್ಕರರಿಗೆ 270 ರೂ. ಹಾಗೂ ಮಕ್ಕಳಿಗೆ 140 ರೂ. ನಿಗದಿಪಡಿಸಲಾಗಿದೆ.

ಪ್ಯಾಕೇಜ್ ನಂಬರ್-9

ಈ ಪ್ಯಾಕೇಜಿನಲ್ಲಿ ಧಾರ್ಮಿಕ ಹಾಗೂ ಪ್ರವಾಸಿತಾಣಗಳಿಗೆ ಭೇಟಿ ಕೊಡಬಹುದಾಗಿದೆ. ಬೆಳಗಾವಿಯಿಂದ ಬೆಳಗ್ಗೆ 7.45ಕ್ಕೆ ವೇಗದೂತ ಬಸ್ ಹೊರಡಲಿದೆ. ಬೆಳಗಾವಿಯ ರಾಜಹಂಸಘಡ, ಅಸೋಗಾ ಹೊಳೆದಂಡೆ, ನಂದಗಡ ಸಂಗೊಳ್ಳಿ ರಾಯಣ್ಣನ ಸಮಾಧಿ, ಹಲಸಿ ಭೂ ವರಹಾ ಲಕ್ಷ್ಮಿ ನರಸಿಂಹ ದೇವಸ್ಥಾನ ಹಾಗೂ ಕಕ್ಕೇರಿ ಬಿಷ್ಟಾದೇವಿ ದೇವಸ್ಥಾನ ವೀಕ್ಷಿಸಲಾಗುತ್ತದೆ. ಸಂಜೆ 5.15ಕ್ಕೆ ಮರಳಿ ಬೆಳಗಾವಿ ತಲುಪಲಿದೆ. ವಯಸ್ಕರರಿಗೆ 230 ರೂ. ಹಾಗೂ ಮಕ್ಕಳಿಗೆ 120 ರೂ. ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 7760991631 ಅಥವಾ 9945536685ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವರದಿ: ಪ್ರಹ್ಮಾದ ಗೌಡ, ಹುಬ್ಬಳ್ಳಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ