logo
ಕನ್ನಡ ಸುದ್ದಿ  /  ಕರ್ನಾಟಕ  /  Belagavi Crime: ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ: 7 ಮಂದಿ ಬಂಧನ

Belagavi Crime: ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ: 7 ಮಂದಿ ಬಂಧನ

HT Kannada Desk HT Kannada

Dec 11, 2023 02:24 PM IST

google News

ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಭಾರೀ ಭದ್ರತೆ ಹಾಕಲಾಗಿದೆ.

    • woman naked in son love case ಬೆಳಗಾವಿ ನಗರದ ಹೊರ ವಲಯದ ವಂಟಮೂರಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಅಮಾನವೀಯವಾಗಿ ವರ್ತಿಸಿದ ಘಟನೆ ನಡೆದಿದೆ. ತನ್ನ ಮಗ ಯುವತಿಯೊಂದಿಗೆ ಪರಾರಿಯಾದ ವಿಷಯದಿಂದ ಆಕ್ರೋಶಗೊಂಡ ಯುವತಿ ಕಡೆಯವರು ಮಹಿಳೆ ಮೇಲೆ ಹೀಗೆ ನಡೆದುಕೊಂಡಿದ್ದಾರೆ.
ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಭಾರೀ ಭದ್ರತೆ ಹಾಕಲಾಗಿದೆ.
ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಭಾರೀ ಭದ್ರತೆ ಹಾಕಲಾಗಿದೆ.

ಬೆಳಗಾವಿ: ತನ್ನ ಮಗನೊಂದಿಗೆ ಯುವತಿ ಓಡಿ ಹೋದಳು ಎನ್ನುವ ನೆಪದೊಂದಿಗೆ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ನಡೆದಿದೆ.

ಬೆಳಗಾವಿ ಹೊರ ವಲಯದ ವಂಟಿ ಮೂರಿ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ 7 ಮಂದಿಯನ್ನು ಬೆಳಗಾವಿ ನಗರದ ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು

ವಂಟಮೂರಿ ಗ್ರಾಮದ ಒಂದೇ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಯುವತಿ ಕೆಲ ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆ ಎರಡೂ ಮನೆಯವರ ಒಪ್ಪಿಗೆ ಇರಲಿಲ್ಲ. ಈ ವಿಚಾರವಾಗಿ ಜಗಳಗಳೂ ಆಗಿದ್ದವು. ವಿರೋಧದ ನಡುವೆ ಯುವಕ ಹಾಗೂ ಯುವತಿ ಮದುವೆಯಾಗಲು ನಿರ್ಧಾರಕ್ಕೆ ಬಂದು ಭಾನುವಾರ ರಾತ್ರಿ ಊರಿನಿಂದ ಓಡಿ ಹೋಗಿದ್ದರು.

ಯುವತಿ ಕಾಣೆಯಾಗುತ್ತಿದ್ದಂತೆ ಆಕ್ರೋಶಗೊಂಡ ಆಕೆಯ ಕಡೆಯವರು ಯುವಕನ ಮನೆಗೆ ಭಾನುವಾರ ಮಧ್ಯರಾತ್ರಿಯೇ ಆಗಮಿಸಿ ಮಾಹಿತಿ ಕೇಳಿದ್ದರು. ಯುವಕನ ತಾಯಿ ಈ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಂತೆ ನಿನ್ನ ಸಹಕಾರದಿಂದ ನಮ್ಮ ಮಗಳನ್ನು ಹೊತ್ತುಕೊಂಡು ಹೋಗಿದ್ದಾನೆ. ನಿನ್ನ ಮಗನ ಮಾಹಿತಿ ನಿನಗೆ ಇದೆ ಎಂದು ಆಕ್ರೋಶ ಹೊರ ಹಾಕಿದ್ದರು.

ಮಧ್ಯರಾತ್ರಿ ಆಕ್ರೋಶ

ಮಾಹಿತಿ ಕೊಡದಿದ್ದರೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಯುವತಿ ಕಡೆಯವರು ಮಹಿಳೆಯರನ್ನು ಹೊರ ಎಳೆದುಕೊಂಡು ಬಂದು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿದ್ದರು. ಅಲ್ಲದೇ ಹಲ್ಲೆ ಕೂಡ ಮಾಡಿದ್ದರು. ಆಕೆ ಅಸ್ವಸ್ಥಳಾಗಿದ್ದಳು. ಗ್ರಾಮಸ್ಥರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಗಿತ್ತು. ಪೊಲೀಸರೂ ಕೂಡ ಬೆಳಗಿನಜಾವವೇ ಗ್ರಾಮಕ್ಕೆ ಆಗಮಿಸಿ ಭಾರೀ ಭದ್ರತೆಯನ್ನು ಹಾಕಿದ್ದರು.

ಘಟನೆ ಹೊರಬರುತ್ತಿದ್ದಂತೆ ಬೆಳಗಾವಿ ನಗರ ಪೊಲೀಸ್ ಕಮಿಷನರ್​​ ಎಸ್‌.ಎನ್‌.ಸಿದ್ದರಾಮಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆಯ ಮಗ ಮತ್ತು ಯುವತಿ ಓಡಿ ಹೋಗಿದ್ದಾರೆ. ಇದೇ ಕಾರಣಕ್ಕೆ ಯುವತಿ ಮನೆಯವರು ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಮಹಿಳೆಯನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎನ್ನುವುದು ತಿಳಿದಿದೆ.. ಮಾಹಿತಿ ಬಂದ ಕೂಡಲೇ ನಮ್ಮ ಸಿಬ್ಬಂದಿ ಬಂದು ತಕ್ಷಣ ಮಹಿಳೆ ರಕ್ಷಣೆ ಮಾಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಸಿಎಂ ಪೋಸ್ಟ್‌

ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ. ಇದರಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಕರಣದ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು ಎಂದು ತಿಳಿಸಿದ್ದಾರೆ.

ಗೃಹ ಸಚಿವರ ಭೇಟಿ

ವಿಷಯ ತಿಳಿದು ಬೆಳಗಾವಿ ಅಧಿವೇಶನದಲ್ಲಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲಿಸಿದ್ದರು.,ಮಹಿಳೆಯ ಜತೆಗೆ ಅಮಾನೀಯವಾಗಿ ನಡೆದುಕೊಂಡಿದ್ದು ಸರಿಯಲ್ಲ. ಅಂತವರ ವಿರುದ್ದ ಕಠಿಣ ಕ್ರಮ ಆಗಲಿದೆ ಎಂದು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ