Foetuses: ಹಳ್ಳದಲ್ಲಿ ತೇಲಿಬಂದ 7 ಭ್ರೂಣಗಳು.. ಬೆಳಗಾವಿ ಜನರು ಶಾಕ್
Jun 24, 2022 06:18 PM IST
ಫೈಲ್ ಫೋಟೋ
- ಆಘಾತಕಾರಿ ಘಟನೆಯೊಂದರಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಏಳು ಭ್ರೂಣಗಳು ಹಳ್ಳದಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.
ಬೆಳಗಾವಿ: ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದರೂ ಕೆಲವೆಡೆ ರಹಸ್ಯವಾಗಿ ಆ ಕೆಲಸ ಮಾಡಲಾಗುತ್ತಿದೆ. ತಮಗೆ ಇಷ್ಟವಾಗದ ಲಿಂಗದ ಮಗು ಆದರೆ ಭ್ರೂಣವನ್ನು ತೆಗೆದು ಬಿಸಾಕುವ ಘಟನೆಗಳೂ ನಮ್ಮ ಸಮಾಜದಲ್ಲಿ ನಡೆಯುತ್ತಿವೆ. ಆಘಾತಕಾರಿ ಘಟನೆಯೊಂದರಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಏಳು ಭ್ರೂಣಗಳು ಹಳ್ಳದಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.
ಪೊಲೀಸರ ಪ್ರಕಾರ, ಭ್ರೂಣಗಳನ್ನು ಐದು ಪೆಟ್ಟಿಗೆಗಳಲ್ಲಿ ತುಂಬಿ ಹರಿಯುವ ಚರಂಡಿಗೆ ಎಸೆಯಲಾಗಿದೆ. ಅವು ಹಳ್ಳದ ಮೂಲಕ ತೇಲಿಕೊಂಡು ಬಂದಿವೆ. ಹಳ್ಳದಲ್ಲಿ ಬಾಕ್ಸ್‌ಗಳು ತೇಲುತ್ತಿರುವುದನ್ನು ದಾರಿಹೋಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಮಹೇಶ್ ಕೋಣಿ ಘಟನೆಯನ್ನು ಖಚಿತಪಡಿಸಿದ್ದಾರೆ. ಪತ್ತೆಯಾದ ಭ್ರೂಣಗಳು ಗರ್ಭಪಾತ ಮಾಡಿ ತೆಗೆದದ್ದಾಗಿವೆ. ಭ್ರೂಣ ಲಿಂಗ ಪತ್ತೆ ಮಾಡಿದ ನಂತರ ಕೃತ್ಯ ಎಸಗಲಾಗಿದೆ. ಎಲ್ಲಾ ಭ್ರೂಣಗಳಿಗೆ ಐದು ತಿಂಗಳಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಮೂಲಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಕೋಣಿ ತಿಳಿಸಿದ್ದಾರೆ.
ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಭ್ರೂಣಗಳನ್ನು ಇಡಲಾಗಿದೆ. ದೂರು ದಾಖಲಾದ ನಂತರ, ಭ್ರೂಣಗಳನ್ನು ಪರೀಕ್ಷೆ ನಡೆಸಲು ಬೆಳಗಾವಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕೊಂಡೊಯ್ಯಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ನಂತರ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂದು ಕೋಣಿ ಹೇಳಿದರು.
40 ದಿನದ ಮಗುವಿನ ಹತ್ಯೆಗೆ ಸಂಚು ರೂಪಿಸಿದ ತಾಯಿ
ಮಹಾನಗರ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮಗುವಿನ ಅಪಹರಣ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಆ ಪ್ರಕರಣದ ಗುಟ್ಟು ರಟ್ಟಾಗಿದೆ. ಅಷ್ಟಕ್ಕೂ ಮಗು ಅಲ್ಲಿ ಅಪಹರಣವಾಗಿರಲಿಲ್ಲ. ತಾಯಿಯೇ ಮಗುವನ್ನು ಹತ್ಯೆ ಮಾಡಲು ಮುಂದಾಗಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಮಾಡಿದ ಈ ಘನಂಧಾರಿ ಕೆಲಸಕ್ಕೆ ಇದೀಗ ಆ ಮಹಾತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಾರೋಗ್ಯ ಕಾರಣದಿಂದ ನನ್ನ ಎರಡು ಮಕ್ಕಳು ಸಾವನ್ನಪ್ಪಿವೆ. ಇದೀಗ ಮೂರನೇ ಮಗು ಸಹ ಮೆದುಳಿನ ಸಮಸ್ಯೆಯಿಂದ ಬಳಲುತ್ತಿದೆ. ಈ ಮಗುವೂ ಬದುಕುಳಿಯುವುದಿಲ್ಲ. ಅದರಲ್ಲೂ ಹೆಣ್ಣು ಮಗು ಸಾಕುವುದು ಕಷ್ಟದ ಕೆಲಸ, ಹಾಗಾಗಿ ಹತ್ಯೆಗೆ ಸಂಚು ರೂಪಿಸಿದ್ದೆ ಎಂದು ಸಲ್ಮಾ ಪೊಲೀಸರ ಮುಂದೆ ಸತ್ಯ ಬಾಯಿಬಿಟ್ಟಿದ್ದಾರೆ.
ವಿಭಾಗ