logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕಟ್ಟಡ ಕುಸಿತದ ವಿಡಿಯೋ ನೋಡಿದ್ರಾ, ಮೈ ನಡುಕ ಹುಟ್ಟಿಸುವ ದುರಂತದಲ್ಲಿ ಐದು ಸಾವು, 14 ಜನರ ರಕ್ಷಣೆ, ಇನ್ನೂ ಕೆಲವರಿಗಾಗಿ ಶೋಧ

ಬೆಂಗಳೂರು ಕಟ್ಟಡ ಕುಸಿತದ ವಿಡಿಯೋ ನೋಡಿದ್ರಾ, ಮೈ ನಡುಕ ಹುಟ್ಟಿಸುವ ದುರಂತದಲ್ಲಿ ಐದು ಸಾವು, 14 ಜನರ ರಕ್ಷಣೆ, ಇನ್ನೂ ಕೆಲವರಿಗಾಗಿ ಶೋಧ

Umesh Kumar S HT Kannada

Oct 23, 2024 08:30 AM IST

google News

ಬೆಂಗಳೂರು ಕಟ್ಟಡ ಕುಸಿತ; ಮೈ ನಡುಕ ಹುಟ್ಟಿಸುವ ದುರಂತದ ವಿಡಿಯೋದಲ್ಲಿ ಕಂಡ ದೃಶ್ಯ.

  • ಬೆಂಗಳೂರು ಮಳೆಯ ಸಮಸ್ಯೆ ನಡುವೆ, ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದ ವಡ್ಡರಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಐದು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ. ಈ ಮೈ ನಡುಕ ಹುಟ್ಟಿಸುವ ದುರಂತದ ವೈರಲ್ ವಿಡಿಯೋ ಗಮನಸೆಳೆದಿದೆ. ಇನ್ನೂ ಕೆಲವರು ಕಟ್ಟಡದ ಅಡಿಯಲ್ಲಿರುವ ಶಂಕೆ ಇದ್ದು ರಕ್ಷಣಾಕಾರ್ಯಾಚರಣೆ ಮುಂದುವರದಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರು ಕಟ್ಟಡ ಕುಸಿತ; ಮೈ ನಡುಕ ಹುಟ್ಟಿಸುವ ದುರಂತದ ವಿಡಿಯೋದಲ್ಲಿ ಕಂಡ ದೃಶ್ಯ.
ಬೆಂಗಳೂರು ಕಟ್ಟಡ ಕುಸಿತ; ಮೈ ನಡುಕ ಹುಟ್ಟಿಸುವ ದುರಂತದ ವಿಡಿಯೋದಲ್ಲಿ ಕಂಡ ದೃಶ್ಯ.

ಬೆಂಗಳೂರು: ಭಾರಿ ಮಳೆಯ ನಡುವೆ ಬೆಂಗಳೂರು ಕಟ್ಟಡ ಕುಸಿತದ ದೃಶ್ಯವಿರುವ ಮೈನಡುಕ ಹುಟ್ಟಿಸುವ ವಿಡಿಯೋ ವೈರಲ್ ಆಗಿದೆ. ಈ ದುರಂತದಲ್ಲಿ ಮೂವರು ಮೃತಪಟ್ಟಿದ್ದು, 14 ಜನರ ರಕ್ಷಣೆ ಮಾಡಲಾಗಿದೆ. ಇನ್ನೂ ಕೆಲವರು ಕುಸಿದ ಕಟ್ಟಡದ ಅಡಿಯಲ್ಲಿ ಸಿಲುಕಿದ್ದು ಅವರ ರಕ್ಷಣಾ ಕಾರ್ಯ ಮುಂದವರಿದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದ ವಡ್ಡರಪಾಳ್ಯದಲ್ಲಿ ಈ ದುರಂತ ನಡೆದಿದೆ. ಅಪಾರ್ಟ್‌ಮೆಂಟ್‌ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಿಹಾರ ಮೂಲದ 20 ಕಾರ್ಮಿಕರು ಟೈಲ್ಸ್ ಮತ್ತು ಪ್ಲಂಬಿಂಗ್, ಪೇಂಟಿಂಗ್ ಕೆಲಸದಲ್ಲಿದ್ದಾಗಿ ಈ ದುರಂತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ 20 ಕಾರ್ಮಿಕರಿದ್ದರು. ಈ ಪೈಕಿ ಇನ್ನು ಕೆಲವು ಕಾರ್ಮಿಕರು ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ರಕ್ಷಣಾ ಕಾರ್ಯ ಮುಂದುವರಿದಿದೆ.

ಬೆಂಗಳೂರು ಕಟ್ಟಡ ಕುಸಿತ; ಗಮನಸೆಳೆದ ಅಂಶಗಳು

1) ದುರಂತ ಸ್ಥಳ ಎಲ್ಲಿ: ಹೆಣ್ಣೂರು ಸಮೀಪದ ಬಾಬುಸಾಬ್‌ಪಾಳ್ಯದ ವಡ್ಡರ ಪಾಳ್ಯದಲ್ಲಿ ಮುನಿರಾಜು ರೆಡ್ಡಿ ಎಂಬಾತ 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಾಣದಲ್ಲಿ 20 ಕಾರ್ಮಿಕರು ತೊಡಗಿದ್ದರು. ಮಂಗಳವಾರ (ಅಕ್ಟೋಬರ್ 22) ಮಧ್ಯಾಹ್ನ 3.39ರಲ್ಲಿ ಏಕಾಏಕಿ ಕಟ್ಟಡ ನೆಲಮಹಡಿ ಸಮೇತ ಕುಸಿದು ಬಿದ್ದಿದೆ. ಆಗ ಬಿಹಾರ ಮೂಲದ ಈ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಹರ್ಮನ್ (26) ಮೃತಪಟ್ಟರೆ, 14 ಮಂದಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರ ರಕ್ಷಣೆ ಕಾರ್ಯ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾಹಿತಿ ನೀಡಿದ್ದರು. ಇದಾದ ಬಳಿಕ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

2) ಅಪಾರ್ಟ್‌ಮೆಂಟ್ ಯಾರದ್ದು: ಮಲ್ಲೇಶ್ವರ ನಿವಾಸಿಗಳಾದ ಆಂಧ್ರಪ್ರದೇಶ ಮೂಲದ ಮುನಿರಾಜು ರೆಡ್ಡಿ ಮತ್ತು ಪುತ್ರ ಮೋಹನ್ ರೆಡ್ಡಿ, ವಡ್ಡರಪಾಳ್ಯ ದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಕೈಗೊಂಡಿದ್ದರು. ಕಾಮಗಾರಿ ಬಹುತೇಕ ಪೂರ್ಣ ಆಗಿತ್ತು. ಬೇರೆ ಬೇರೆ ತಂಡದಲ್ಲಿ ಟೈಲ್ಸ್ ಮತ್ತು ಪ್ಲಂಬಿಂಗ್, ಪೇಟಿಂಗ್ ಕೆಲಸದಲ್ಲಿ 20 ಕಾರ್ಮಿಕರು ತೊಡಗಿದ್ದರು.

3) ದುರಂತ ನಡೆದ ಸಂದರ್ಭ: ಧಾರಾಕಾರ ಮಳೆ ಸುರಿಯುತ್ತಿದ್ದರೂ ಕಾರ್ಮಿಕರು ತಮ್ಮ ಕೆಲಸ ಮುಂದುವರಿಸಿದ್ದರು. ಮಧ್ಯಾಹ್ನದ ಊಟ ಮುಗಿಸಿ ಮತ್ತೆ ಕೆಲಸ ಶುರು ಮಾಡಿದ್ದರು. ಅಪರಾಹ್ನ 3.30ರ ಸುಮಾರಿಗೆ ಕಟ್ಟಡ ಪಿಲ್ಲರ್ ಸಮೇತ ಕುಸಿದು ಬಿದ್ದಿದೆ. ಒಳಗಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಈ ಪೈಕಿ ಒಬ್ಬಾತ ಭಯಭೀತನಾಗಿ ಚೀರಾಡಿಕೊಂಡು ಹೊರಬಂದಿದ್ದ. ಆತ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದ. ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದುರಂತ ಕ್ಷಣದ ವಿಡಿಯೋ ದಾಖಲಾಗಿದೆ.

ಮೈನಡುಕ ಹುಟ್ಟಿಸುವ ದುರಂತ ಕ್ಷಣ; ವೈರಲ್ ವಿಡಿಯೋ

4 ಮಹಡಿ ಪ್ಲಾನ್‌ ಇಟ್ಟುಕೊಂಡು 6 ಮಹಡಿ ಕಟ್ಟಿಸಿದ್ದ ಮಾಲೀಕರು

ವಡ್ಡರಪಾಳ್ಯದಲ್ಲಿ ಕುಸಿದ ಅಪಾರ್ಟ್‌ಮೆಂಟ್‌ ಕಟ್ಟಡದ ಪ್ಲಾನ್‌ ಇದ್ದದ್ದು 4 ಮಹಡಿಯದ್ದು. ಆದರೆ ಅವರು ಕಟ್ಟಿಸಿರುವುದು 6 ಮಹಡಿಯ ಕಟ್ಟಡ. 4 ಮಹಡಿಗೆ ಬೇಕಾದ ಪಿಲ್ಲರ್ ಹಾಕಿ ಆರು ಮಹಡಿ ಕಟ್ಟಿಸಿದ ಕಾರಣ ಅಷ್ಟು ಭಾರ ಹೊರುವ ಸಾಮರ್ಥ್ಯ ಇಲ್ಲದ ಪಿಲ್ಲರ್ ಮುರಿದು ದುರಂತ ಸಂಭವಿಸಿದೆ. ಕಳಪೆ ಕಾಮಗಾರಿ ಕೂಡ ದುರಂತಕ್ಕೆ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ಆರೋಪಿಸಿದ್ದಾಗಿ ವಿಜಯವಾಣಿ ವರದಿ ಮಾಡಿದೆ.

ಆರು ಅಂತಸ್ತಿನ ಕಟ್ಟಡ ಏಕಾಕಿಯಾಗಿ ಖಾಲಿ ಜಾಗದ ಕಡೆಗೆ ಬಿದ್ದಿದೆ. ಅಕಸ್ಮಾತ್ ಅಕ್ಕ ಪಕ್ಕದಲ್ಲಿದ್ದ ಮನೆ ಮೇಲೆ ಬಿದ್ದಿದ್ದರೆ ಆ ಅಪಾರ್ಟ್‌ಮೆಂಟ್‌ ನಿವಾಸಿಗಳ ಪ್ರಾಣಕ್ಕೂ ಸಂಚಕಾರವಾಗುತ್ತಿತ್ತು. ಅದೃಷ್ಟವಶಾತ್ ದೊಡ್ಡ ಸಂಭಾವ್ಯ ದುರಂತ ತಪ್ಪಿದೆ ಅಗ್ನಿಶಾಮಕ ಅಧಿಕಾರಿ ಮಾಹಿತಿ ನೀಡಿದ್ದಾಗಿ ವರದಿ ವಿವರಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ